ರಾಜಕಾರಣದಲ್ಲಿ ಶಾಶ್ವತವಾಗಿ ಯಾರೂ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಹಾಗೂ ಶತ್ರುವಿನ ಶತ್ರು ಮಿತ್ರ ಎಂಬ ಮಾತಿಗೆ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯೇ ಸಾಕ್ಷಿ.
ಎಂ.ಅಫ್ರೋಜ್ ಖಾನ್
ರಾಮನಗರ (ನ.11): ರಾಜಕಾರಣದಲ್ಲಿ ಶಾಶ್ವತವಾಗಿ ಯಾರೂ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಹಾಗೂ ಶತ್ರುವಿನ ಶತ್ರು ಮಿತ್ರ ಎಂಬ ಮಾತಿಗೆ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯೇ ಸಾಕ್ಷಿ. ರಾಜಕೀಯ ಕಡು ವೈರಿಗಳಾಗಿರುವ ದೇವೇಗೌಡ ಕುಟುಂಬ ಮತ್ತು ಡಿ.ಕೆ. ಸೋದರರ ನಡುವಿನ ಜಿದ್ದಾಜಿದ್ದಿ ಕಾಳಗದಿಂದಾಗಿ ಈ ಬಾರಿ ಬೊಂಬೆನಾಡು ಚನ್ನಪಟ್ಟಣ ಹೈವೋಲ್ಟೇಜ್ ಕ್ಷೇತ್ರವಾಗಿ ರಾಜ್ಯದ ಗಮನ ಸೆಳೆಯುತ್ತಿದೆ. ಎಚ್.ಡಿ.ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಕೇಂದ್ರ ಸಚಿವರಾದ ಕಾರಣ ತೆರವಾಗಿರುವ ಚನ್ನಪಟ್ಟಣ ಕ್ಷೇತ್ರಕ್ಕೆ ಇದೀಗ ಉಪಚುನಾವಣೆ ನಡೆಯುತ್ತಿದೆ.
ಕುಮಾರಸ್ವಾಮಿ ಪುತ್ರ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿದ್ದರೆ, ಮೊನ್ನೆ ಮೊನ್ನೆ ಬಿಜೆಪಿಯಲ್ಲಿದ್ದು ನಾಮಪತ್ರ ಸಲ್ಲಿಕೆಯ ಕೊನೇ ದಿನ ಸಮೀಪಿಸುವಾಗ ಕಾಂಗ್ರೆಸ್ ಪಾಳಯ ಸೇರಿದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಹುರಿಯಾಳು. ಈ ಇಬ್ಬರೂ ಅಭ್ಯರ್ಥಿಗಳು ಸ್ಯಾಂಡಲ್‌ವುಡ್ ನಟರು ಎಂಬುದು ಗಮನಾರ್ಹ. ಜಿಲ್ಲೆಯಲ್ಲೇ ರಾಜಕೀಯ ಬದುಕು ಕಟ್ಟಿಕೊಂಡಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಪ್ರಬಲ ಒಕ್ಕಲಿಗ ನಾಯಕರಷ್ಟೇ ಅಲ್ಲದೆ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಈ ಮೂವರೂ ನಾಯಕರು ಆಯಾ ರಾಜಕೀಯ ಸನ್ನಿವೇಶಗಳಲ್ಲಿ ಬದ್ಧ ವೈರಿ, ಆಪ್ತ ಮಿತ್ರ ಹೀಗೆ ಎರಡೂ ರೂಪದಲ್ಲಿ ಕಾಣಿಸಿಕೊಂಡವರು.
ನಿಖಿಲ್‌ನ ಗೆಲ್ಲಿಸಿದ್ರೆ ಮೇಕೆದಾಟು ಯೋಜನೆ ಕೇಳ್ಬಹುದು: ಎಚ್.ಡಿ.ದೇವೇಗೌಡ
ಕಳೆದ ಸಂಸತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸಾಧಿಸಲು ಸಿ.ಪಿ.ಯೋಗೇಶ್ವರ್ ಬುನಾದಿ ಹಾಕಿದರು. ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಸಹೋದರ, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಸೋಲಿಗೆ ಹಾಗೂ ಚನ್ನಪಟ್ಟಣ ಕ್ಷೇತ್ರ ಶಾಸಕರಾಗಿದ್ದ ಕುಮಾರಸ್ವಾಮಿ ಮಂಡ್ಯ ಸಂಸತ್ ಕ್ಷೇತ್ರದಲ್ಲಿ ಗೆಲುವಿಗೂ ಕಾರಣರಾದರು. ಈಗ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‌ಡಿಎ ಟಿಕೆಟ್ ತಪ್ಪಿದ ಕಾರಣಕ್ಕೆ ಕುಮಾರಸ್ವಾಮಿ ಜತೆಗೆ ಮುನಿಸಿಕೊಂಡು ಡಿ.ಕೆ. ಸಹೋದರರ ಜತೆಗೆ ಕೈಕುಲುಕಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಮೂಲಕ ಈ ಚುನಾವಣೆ ದೇವೇಗೌಡರ ಕುಟುಂಬ ವರ್ಸಸ್ ಡಿ.ಕೆ.ಶಿವಕುಮಾರ್, ಯೋಗೇಶ್ವರ್ ನಡುವಿನ ಕದನವಾಗಿ ಮಾರ್ಪಟ್ಟಿದೆ.
ಸಿಪಿವೈ-ಎಚ್‌ಡಿಕೆ ಕುಟುಂಬ ನಡುವೆ 5ನೇ ಕದನ: ಯೋಗೇಶ್ವರ್ ಮತ್ತು ಕುಮಾರಸ್ವಾಮಿ ಕುಟುಂಬದ ನಡುವಿನ ಕದನ ಹೊಸದೇನಲ್ಲ. 2009ರ ಲೋಕಸಭಾ ಚುನಾವಣೆ, 2018, 2023ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಎದುರು ಸೋತಿದ್ದ ಯೋಗೇಶ್ವರ್, 2013ರ ವಿಧಾನಸಭಾ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ವಿರುದ್ಧ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈಗ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಈ ಮೂಲಕ ಕುಮಾರಸ್ವಾಮಿ ಕುಟುಂಬ ಮತ್ತು ಯೋಗೇಶ್ವರ್ ನಡುವೆ ಇದು 5ನೇ ಕದನ ಎಂಬಂತಾಗಿದೆ.
ಹ್ಯಾಟ್ರಿಕ್ ಸೋಲು ಯಾರಿಗೆ?: ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಯೋಗೇಶ್ವರ್ 2018 ಮತ್ತು 2023ರ ಚುನಾವಣೆಯಲ್ಲಿ ಹಾಗೂ ನಿಖಿಲ್ 2019ರ ಮಂಡ್ಯ ಲೋಕಸಭಾ ಚುನಾವಣೆ, 2023ರ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡವರು. ಹೀಗಾಗಿ ಈ ಬಾರಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಇಬ್ಬರಲ್ಲಿ ಒಬ್ಬರಿಗಂತೂ ಹ್ಯಾಟ್ರಿಕ್ ಸೋಲಿನ ಪಟ್ಟ ಖಚಿತ. ಇದೇ ಕಾರಣಕ್ಕೆ ಇಬ್ಬರೂ ನಾಯಕರಿಗೆ ಇದು ನಿರ್ಣಾಯಕ ಹೋರಾಟ. ಈಗ ಕ್ಷೇತ್ರದಲ್ಲಿ ಯೋಗೇಶ್ವರ್ ಮತ್ತು ನಿಖಿಲ್ ನಡುವೆ ಸಮಬಲದ ಹೋರಾಟ ನಡೆದಿದೆ. ಪಕ್ಷ ಹಾಗೂ ನಾಯಕರ ವೈಯಕ್ತಿಕ ವರ್ಚಸ್ಸು ಈ ಚುನಾವಣೆ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದೆ.
ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಕುಟುಂಬದ 3ನೇ ತಲೆಮಾರಿನ ನಾಯಕನಾಗಿರುವ ಮೊಮ್ಮಗ ನಿಖಿಲ್‌ನ ರಾಜಕೀಯ ಭವಿಷ್ಯ ಭದ್ರಪಡಿಸಲು ಅನಾರೋಗ್ಯದ ನಡುವೆಯೂ ಪ್ರಯತ್ನ ನಡೆಸುತ್ತಿದ್ದಾರೆ. ಇವರಿಗೆ ಕುಮಾರಸ್ವಾಮಿ ಜೊತೆಗೆ ಬಿಜೆಪಿ ನಾಯಕರು ಸಾಥ್ ನೀಡುತ್ತಿದ್ದಾರೆ. ಒಂದು ಕಾಲದಲ್ಲಿ ಕುಮಾರಸ್ವಾಮಿಯವರ ಜತೆಗಿದ್ದ ಆಪ್ತ ಸ್ನೇಹಿತರೆಲ್ಲ ಈಗ ಡಿ.ಕೆ. ಸಹೋದರರೊಂದಿಗೆ ಕೈ ಜೋಡಿಸಿ ಯೋಗೇಶ್ವರ್ ಗೆಲುವಿಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಇಷ್ಟಕ್ಕೂ ಆ ಮಾಜಿ ಸ್ನೇಹಿತರೆಲ್ಲರೂ ದೇವೇಗೌಡರ ಗರಡಿಯಲ್ಲೇ ರಾಜಕಾರಣದ ಪಾಠ ಕಲಿತವರು. ಈಗ ಗುರುಗಳ ಮೊಮ್ಮಗನ ವಿರುದ್ಧವೇ ರಾಜಕೀಯ ಪಟ್ಟು ತೋರಿಸುತ್ತಿದ್ದಾರೆ.
ಪ್ರತಿಷ್ಠೆಯ ಪ್ರಶ್ನೆ: ಚನ್ನಪಟ್ಟಣ ಕ್ಷೇತ್ರ ಗೆಲ್ಲುವುದು ದೇವೇಗೌಡ ಹಾಗೂ ಡಿ.ಕೆ.ಶಿವಕುಮಾರ್ ಕುಟುಂಬ ಹಾಗೂ ಸಿ.ಪಿ.ಯೋಗೇಶ್ವರ್‌ಗೆ ಪ್ರತಿಷ್ಠೆಯ ಪ್ರಶ್ನೆ. ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವವನ್ನು ಮರು ಸ್ಥಾಪಿಸಲು ದೇವೇಗೌಡರು ಮತ್ತು ಜಿಲ್ಲೆಯನ್ನು ಕ್ಲೀನ್ ಸ್ವೀಪ್ ಮಾಡಲು ಡಿ.ಕೆ.ಶಿವಕುಮಾರ್ ಹಾಗೂ ಸಿ.ಪಿ.ಯೋಗೇಶ್ವರ್ ಪಣ ತೊಟ್ಟಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ಅವರಿಗೆ ಚನ್ನಪಟ್ಟಣದ ಗೆಲುವು ಮತ್ತಷ್ಟು ಶಕ್ತಿ ತಂದು ಕೊಡುವುದು ನಿಶ್ಚಿತ. ಈ ಚುನಾವಣೆಯಲ್ಲಿ ಇಗ್ಗಲೂರು ಬ್ಯಾರೇಜ್ ನಿರ್ಮಾಣ ಸೇರಿ ನೀರಾವರಿ ಯೋಜನೆ ಹಾಗೂ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಎನ್‌ಡಿಎ ನಾಯಕರು ಅಸ್ತ್ರವಾಗಿ ಪ್ರಯೋಗಿಸುತ್ತಿದ್ದಾರೆ.
ಮತ್ತೊಂದೆಡೆ ಏತ ನೀರಾವರಿ ಯೋಜನೆ ಮೂಲಕ ಕೆರೆ ತುಂಬಿಸಿದ್ದು, ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಕೈ ಪಾಳಯದ ನಾಯಕರು ಮತ ಬೇಟೆ ನಡೆಸುತ್ತಿದ್ದಾರೆ. ಇಬ್ಬರೂ ಎದುರಾಳಿಗಳ ಪರ ಅನುಕಂಪದ ಅಲೆ ಕೆಲಸ ಮಾಡುತ್ತಿದೆ. ದೇವೇಗೌಡ, ಕುಮಾರಸ್ವಾಮಿ ವರ್ಚಸ್ಸು ನಿಖಿಲ್‌ಗೆ ಹಾಗೂ ಡಿ.ಕೆ. ಸಹೋದರರ ಶಕ್ತಿ ಜೊತೆಗೆ ಸ್ಥಳೀಯ ಎಂಬ ಟ್ರಂಪ್ ಕಾರ್ಡ್, ವೈಯಕ್ತಿಕ ವರ್ಚಸ್ಸು ಯೋಗೇಶ್ವರ್‌ಗಿರುವ ಪ್ಲಸ್ ಪಾಯಿಂಟ್. ದೇವೇಗೌಡರ ಕುಟುಂಬ ಮತ್ತು ಯೋಗೇಶ್ವರ್‌ಗೆ ತಮ್ಮದೇ ಆದ ಸಾಂಪ್ರದಾಯಿಕ ಮತಗಳೂ ಇರುವುದು ಫಲಿತಾಂಶದ ಕುತೂಹಲವನ್ನು ಹೆಚ್ಚಿಸಿದೆ. ಇದರೊಂದಿಗೆ ಕಣ್ಣೀರು, ಭಾವನಾತ್ಮಕ ಮಾತುಗಳು, ಅಭಿವೃದ್ಧಿ ವಿಚಾರಗಳು ಮತದಾರರ ಮೇಲೆ ಸಾಕಷ್ಟು ಪ್ರಭಾವ ಬೀರಿವೆ.
ಒಕ್ಕಲಿಗರ ಶಕ್ತಿ ಕೇಂದ್ರವೂ ಆಗಿರುವ ಬೊಂಬೆನಾಡನ್ನು ಗೆಲ್ಲಲು ಅಹಿಂದ ಮತಗಳ ಬೆಂಬಲವೂ ಬೇಕು. ಯೋಗೇಶ್ವರ್ ಮತ್ತು ನಿಖಿಲ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ದೇವೇಗೌಡರ ಆಗಮನದಿಂದಾಗಿ ಒಕ್ಕಲಿಗರ ಹೆಚ್ಚಿನ ಮತಗಳು ಜೆಡಿಎಸ್ ಕಡೆ ವಾಲಬಹುದು ಎಂಬ ಲೆಕ್ಕಾಚಾರ ಹಾಕಿದರೂ ಬಿಜೆಪಿ ಜತೆಗಿನ ಮೈತ್ರಿ ಕಾರಣಕ್ಕೆ ಅಲ್ಪಸಂಖ್ಯಾತರ ಮತಗಳು ಕೈ ತಪ್ಪಿ ಹೋಗುವ ಭೀತಿ ಕಾಡುತ್ತಿದೆ. ಇನ್ನು ಕಾಂಗ್ರೆಸ್ ಒಕ್ಕಲಿಗರ ಮತಗಳು ನಿರೀಕ್ಷಿಸಿದಷ್ಟು ಲಭಿಸದಿದ್ದರೂ ಅಹಿಂದ ಮತಗಳು ಕೈ ಹಿಡಿಯುವ ಉಮೇದಿನಲ್ಲಿದೆ. ಹೀಗಾಗಿ ಎಲ್ಲ ವರ್ಗ ಸಮುದಾಯಗಳ ಮತಗಳನ್ನು ಓಲೈಸಿಕೊಳ್ಳಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
2023 ರ ಫಲಿತಾಂಶ
ಜೆಡಿಎಸ್ - ಎಚ್.ಡಿ.ಕುಮಾರಸ್ವಾಮಿ- 96,592
ಬಿಜೆಪಿ - ಸಿ.ಪಿ.ಯೋಗೇಶ್ವರ - 80,677
ಕಾಂಗ್ರೆಸ್ - ಗಂಗಾಧರ್ - 15,374
ಗೆಲುವಿನ ಅಂತರ - 15, 915
ಡಿಕೆಶಿ ರೀತಿ ಲೂಟಿ ಮಾಡಿದ್ರೆ ಒಂದೊಂದು ಊರಿಗೆ 10 ಎಕ್ರೆ ಕೊಡ್ತಿದ್ದೆ: ಎಚ್‌ಡಿಕೆ ತಿರುಗೇಟು
ಒಟ್ಟು ಮತದಾರರು - 2,32,836
ಪುರುಷರು - 1,12,271
ಮಹಿಳೆ - 1,20,557
ಇತರೆ - 08