ಸದನದಲ್ಲಿ ಶ್ರೀಲಂಕಾ ಮೊಬೈಲ್‌ ಪುರಾಣ: ಸೈಬರ್‌ ಪೊಲೀಸ್‌ಗೆ ಸೈಬರ್‌ ವಂಚಕನ ಗಾಳ ಯತ್ನ

By Kannadaprabha News  |  First Published Jul 29, 2024, 10:51 AM IST

ಇದಕ್ಕೆ ಬಿಜೆಪಿ ಸದಸ್ಯ, ಯೇ... ನನ್ ಮೊಬೈಲ್ ತಗಂಡಿರದು ಕೊಡು ಅಂದರು. ಇಲ್ಲಪ್ಪೋ ನಮ್ ದೇವರಾಣೆಗೂ ನಾನು ತಗಂಡಿಲ್ಲ ಎಂದು ತಲೆಮೇಲೆ ಕೈ ಇಟ್ಟುಕೊಂಡು ಆಣೆ ಪ್ರಮಾಣ ಮಾಡಲು ಶುರು ಮಾಡಿದರು. 


ಎಸ್ಸಿಎಸ್ಪಿ, ಟಿಎಸ್ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡ ವಿಚಾರದಲ್ಲಿ ವಿಧಾನ ಪರಿಷತ್ ಕಲಾಪದಲ್ಲಿ ಗಂಭೀರ ಚರ್ಚೆ ನಡೆದು, ಜೆಡಿಎಸ್, ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದ್ದರು. ಈ ವೇಳೆ ಜೆಡಿಎಸ್ ಸದಸ್ಯರೊಬ್ಬರು ಪತ್ರಕರ್ತರ ಗ್ಯಾಲರಿ ಸಮೀಪ ಬಂದು ನಿಂತು ಸರ್ಕಾರದ ನಿಲುವಿಗೆ ತಾವು ವಿರೋಧ ವ್ಯಕ್ತಪಡಿಸಿ, ಸಭಾತ್ಯಾಗ ಮಾಡಿದೆವು ಎಂಬುದನ್ನು ವರ್ಣಿಸಲಾರಂಭಿಸಿದ್ದರು. ಇದೇ ಸಮಯಕ್ಕೆ ಅವರ ಹಿಂದಿನಿಂದ ಬಂದ ಬಿಜೆಪಿ ಸದಸ್ಯರೊಬ್ಬರು, ಅಂಗಿ ಮತ್ತು ಪ್ಯಾಂಟ್ ಜೇಬುಗಳನ್ನು ಮೇಲಿನಿಂದ ಕೆಳಗಿನವರೆಗೂ ತಡಕಾಡಲು ಆರಂಭಿಸಿದರು. ಇದರಿಂದ ಸ್ವಲ್ಪ ಮುಜುಗರಕ್ಕೊಳಗಾದಂತೆ ಕಂಡ, ಜೆಡಿಎಸ್ ಸದಸ್ಯ, ‘ಹೇ ಯಾಕಣ್ಣ, ಹಿಂಗೆಲ್ಲಾ ಮಾಡ್ತಿದ್ದೀಯಾ? ನೋಡ್ದೋರು ಏನಾರ ಅಂದ್ಕೋಂಡಾರು?’ ಅಂತ ಸ್ವಲ್ಪ ದೂರು ಸರಿದರು.

ಇದಕ್ಕೆ ಬಿಜೆಪಿ ಸದಸ್ಯ, ಯೇ... ನನ್ ಮೊಬೈಲ್ ತಗಂಡಿರದು ಕೊಡು ಅಂದರು. ಇಲ್ಲಪ್ಪೋ ನಮ್ ದೇವರಾಣೆಗೂ ನಾನು ತಗಂಡಿಲ್ಲ ಎಂದು ತಲೆಮೇಲೆ ಕೈ ಇಟ್ಟುಕೊಂಡು ಆಣೆ ಪ್ರಮಾಣ ಮಾಡಲು ಶುರು ಮಾಡಿದರು. ಮತ್ತೆಲ್ಲಿ ಹೋಯ್ತು ನನ್ ಮೊಬೈಲ್ ಅಂತ ಬಿಜೆಪಿ ಸದಸ್ಯ ಹುಡುಕುತ್ತಾ ಮುಂದೆ ಸಾಗಿದರು. ಮತ್ತೆ ಪತ್ರಕರ್ತರತ್ತ ಮುಖ ಮಾಡಿದ ಜೆಡಿಎಸ್ ಸದಸ್ಯ, ಥೂ... ಒಂದ್ಸಲ ಶ್ರೀಲಂಕ ಹೋಗಿದ್ದಾಗ, ಆವಯ್ಯಂದು ಮೊಬೈಲ್ ತಮಾಷೆಗಂತ ತೆಗೆದು ಇಟ್ಟುಕೊಂಡಿದ್ದೆ. ಅವತ್ತಿಂದ ಅವ್ನ ಮೊಬೈಲ್ ಕಾಣ್ಲಿಲ್ಲ ಅಂದ್ರೆ ಮೊದ್ನು ಬಂದು ನನ್ ಹತ್ರಾನೇ ಕೇಳ್ತಾನೆ! ಎಲ್ಲೋ ಇಟ್ಟು ಮರೆತ್ ಬಿಡೋದು, ಬಂದ್ ನಮ್ ಪ್ರಾಣ ತಿನ್ನೊಂದು ಅಂತೇಳಿದರು. ಆದರೆ, ಶ್ರೀಲಂಕಾದಲ್ಲಿ ಮೊಬೈಲ್‌ ತೆಗೆದುಕೊಂಡಿದ್ದಾಗ ಅದರಲ್ಲಿ ಏನೇನು ರಹಸ್ಯ ಕಣ್ಣಿಗೆ ಬಿದ್ದಿತ್ತು ಅನ್ನೋದನ್ನು ಮಾತ್ರ ಹೇಳಲಿಲ್ಲ!

Latest Videos

undefined

ನೀತಿ ಆಯೋಗದ ಸಭೆಗೆ ಸಿಎಂ ಸಿದ್ದರಾಮಯ್ಯ ಹಾಜರಾಗದೇ ರಾಜ್ಯಕ್ಕೆ ಅನ್ಯಾಯ: ಸಂಸದ ಬೊಮ್ಮಾಯಿ

ಕಡ್ಡಾಯ ಶಿಕ್ಷಣದ ಅಸಲಿ ಬಣ್ಣ ಬಯಲು!
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫಲಿತಾಂಶ ದಿಢೀರ್ ಕುಸಿತವಾಗಿರುವ ಕುರಿತು ಫೇಲಾದ ಮಕ್ಕಳಿಂದಲೇ ವಾಸ್ತವ ಅರಿಯಲು ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನರಾಜ್ ಅವರು ಕೊಪ್ಪಳ ಜಿಪಂನಲ್ಲಿ ಸಭೆ ಕರೆದಿದ್ದರು. ಇದಕ್ಕೆ ಡಿಡಿಪಿಐ ಇತರ ಅಧಿಕಾರಿಗಳು ಆಗಮಿಸಿದ್ದರು. ಒಂದೊಂದೇ ಮಕ್ಕಳು ತಮ್ಮ ಅಭಿಪ್ರಾಯ ಹೇಳಿದರು.‌ ಇದಾದ ಮೇಲೆ ಪತ್ರಕರ್ತರಿಗೂ ನೀವು ನಿಮ್ಮ ಅಭಿಪ್ರಾಯ, ಸಲಹೆ ನೀಡಿ ಎಂದರು. ಆಗ ಪತ್ರಕರ್ತರು ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿಯಲು ತಮ್ಮದೇ ಆದ ಸಾಲು ಸಾಲು ಅಭಿಪ್ರಾಯ ಹೇಳಿದರು.

ಕಡ್ಡಾಯ ಶಿಕ್ಷಣ ನೆಪದಲ್ಲಿ ಶಾಲೆಗೆ ಬರದೆ ಇದ್ದರೂ, ಅವರು ಪರೀಕ್ಷೆಗೆ ಹಾಜರಾಗದಿದ್ದರು ಪಾಸ್ ಮಾಡುತ್ತಾರೆ. ಇದಕ್ಕಾಗಿ ಪರೀಕ್ಷೆಯನ್ನು ಶಿಕ್ಷಕರು ತಾವೆ ಬರೆದುಕೊಂಡು, ಉತ್ತರ ಪತ್ರಿಕೆಗಳನ್ನು ದಾಖಲೆಗಾಗಿ ಸಿದ್ಧ ಮಾಡಿಕೊಳ್ಳುತ್ತಾರೆ ಎಂದು ಪತ್ರಕರ್ತರೊಬ್ಬರು ಹೇಳಿದಾಗ ಉಸ್ತುವಾರಿ ಕಾರ್ಯದರ್ಶಿಗಳು ಬೆರಗಾದರು. ಹಿಂಗೆಲ್ಲಾ ಮಾಡ್ತಾರಾ ಎಂದು ಅಚ್ಚರಿಯಿಂದ ಪ್ರಶ್ನೆ ಮಾಡಿದರು. ಅದಕ್ಕೆ ಉತ್ತರಿಸಿದ ಡಿಡಿಪಿಐ ಶ್ರೀಶೈಲ ಬಿರಾದರ ಅವರು, ಇಲ್ಲ ಇಲ್ಲ ಪರೀಕ್ಷೆಗೆ ಬಾರದಿರುವ ಮಕ್ಕಳ ಪರೀಕ್ಷೆಯನ್ನು ಶಿಕ್ಷಕರು ಬರೆಯಲ್ಲ, ಬೇರೆ ಮಕ್ಕಳಿಂದ ಬರೆಸುತ್ತಾರೆ ಎನ್ನುವುದೇ.

ಇದ ಕೇಳಿ ಮತ್ತಷ್ಟು ಬೆಕ್ಕಸಬೆರಗಾದ ಮೋಹನರಾಜ ಅದ್ಯಾಕ್ರಿ ಎಂದು ಪ್ರಶ್ನಿಸಿದರು. ವಿವರಣೆ ಮುಂದುವರೆಸಿದ ಬಿರಾದಾರ, ಇದು ಎಲ್ಲ ಶಾಲೆಯಲ್ಲಿಯೂ ನಡೆಯುತ್ತದೆ. ಶಾಲೆಗೆ ಪ್ರವೇಶ ಪಡೆದ ಅನೇಕ ಮಕ್ಕಳು ಮರಳಿ ಶಾಲೆಯ ಮುಖವನ್ನು ನೋಡಿರುವುದಿಲ್ಲ. ಪಾಲಕರೊಂದಿಗೆ ಬದುಕು ಅರಸಿ ಹೋಗಿರುತ್ತಾರೆ. ಇಂಥ ಮಕ್ಕಳ ಶಾಲೆಯಲ್ಲಿ ಇಲ್ಲದಿದ್ದರೂ ಹಾಜರಿ ಹಾಕಿ, ಪರೀಕ್ಷೆಯಲ್ಲಿ ಪಾಸು ಮಾಡಿ ಮುಂದೆ ತಳ್ಳಲಾಗುತ್ತದೆ ಎಂದು ಅಸಲಿ ಸಂಗತಿ ಹೇಳಿದರು. ಹೀಗೆಲ್ಲಾ ಇರುತ್ತಾ ಎಂದು ಗಾಬರಿಗೊಂಡ ಮೋಹನರಾಜ ಇದನ್ನು ಸರ್ಕಾರಕ್ಕೆ ವರದಿ ಮಾಡ್ಡೀನಿ ಎಂದರು. ಇದೂ ಸರ್ಕಾರಕ್ಕೂ ಗೊತ್ತು ಬಿಡಿ ಎಂದು ಪತ್ರಕರ್ತರು ಹೇಳಿದ್ದು ಮಾತ್ರ ಮೋಹನರಾಜ ಕಿವಿಗೆ ಬೀಳಲಿಲ್ಲ.

ಸೈಬರ್‌ ಪೊಲೀಸ್‌ಗೆ ಗಾಳ!
ಈಗಂತು ನೆತ್ತರು ಚೆಲ್ಲದೆ, ಬೆವರು ಹರಿಸದೆ, ಲಾಂಗು ಮಚ್ಚು ಝುಳಪಿಸದೆ ನೀರು ಕುಡಿದಷ್ಟೇ ಸಲೀಸಾಗಿ ಒಂದೇ ಒಂದು ಫೋನ್ ಕರೆಯಲ್ಲೇ ಕೋಟಿ ಕೋಟಿ ದೋಚುವ ಸೈಬರ್ ಕ್ರೈಂಗಳದ್ದೇ ಸದ್ದು. ಅದರಲ್ಲೂ ಪೊಲೀಸ್‌ ಛದ್ಮವೇಷದ ಸೈಬರ್ ದುರುಳರಿಂದ ಡ್ರಗ್ಸ್ ಕೇಸ್‌ ಹೆಸರಿನಲ್ಲಿ ಬರುವ ಬೆದರಿಕೆ ಕರೆಗೆ ಇನ್ಫೋಸಿಸ್ ನಂಥ ದೊಡ್ಡ ಐಟಿ ಕಂಪನಿ ಹಿರಿಯ ಅಧಿಕಾರಿಯೇ ಏಳು ಕೋಟಿ ಕಳೆದುಕೊಂಡಿದ್ದು ಇದೆ. ಇಂಥ ಪಾತಕಿಗಳನ್ನು ಬೇಟೆಯಾಡುವ ಸಿಐಡಿ ಸೈಬರ್‌ ವಿಭಾಗದ ಎಸ್ಪಿ ಅನೂಪ್ ಶೆಟ್ಟಿ ಅವರಿಗೇ ಗಾಳ ಹಾಕಲು ಯತ್ನಿಸಿ ಸೈಬರ್ ವಂಚಕರು ಬೆಸ್ತು ಬಿದ್ದ ಘಟನೆ ನಡೆದಿದೆ.

ವಿಷಯೇನಪ್ಪ ಅಂದರೆ ವಾರದ ಹಿಂದೆ ಅನೂಪ್ ಶೆಟ್ಟಿ ಅವರು ಅನಾಮಧೇಯ ನಂಬರ್‌ನಿಂದ ಬಂದ ಕರೆಯನ್ನು ಸ್ವೀಕರಿಸಿದ್ದಾರೆ. ಆ ಅಪರಿಚಿತ ನಾನು ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿ. ನಿಮ್ಮ ಮೇಲೆ ಡ್ರಗ್ಸ್ ಕೇಸ್ ಇದ್ದು, ನೋಟಿಸ್ ಕೊಡಲಾಗಿದೆ ಎಂದಿದ್ದಾನೆ. ಇದಕ್ಕೆ ಹೌದಾ, ಸರಿ ನೋಟಿಸ್ ಕೊಡಿ ಬರುತ್ತೇನೆ ಎಂದು ಎಸ್ಪಿ ಉತ್ತರಿಸಿದ್ದಾರೆ. ಆಗ ನೀನು ಅನೂಪ್ ಶೆಟ್ಟಿ ಅಲ್ವಾ. ಯಾರ ಜೊತೆ ಮಾತನಾಡುತ್ತಿರುವೆ ಎಂಬುದು ಗೊತ್ತಿದೆಯೇ ಎಂದು ಎಸ್ಪಿಗೆ ಸೈಬರ್ ವಂಚಕ ಹೇಳಿದ್ದಾನೆ. ಹೌದು ನಾನು ಅನೂಪ್ ಶೆಟ್ಟಿನೇ. ನೋಟಿಸ್ ಕೊಡು ಬರುತ್ತೇನೆ ಎಂದಿದ್ದಾರೆ. ಡ್ರಗ್ಸ್ ಕೇಸ್ ಇದೆ ಎಂದರೂ ಒಂದಿನಿತೂ ಹೆದರದ ವ್ಯಕ್ತಿ ಬಗ್ಗೆ ಯಾಕೋ ಯಡವಟ್ಟಾಗಿದೆ ಎಂದು ಭಾವಿಸಿದ ಸೈಬರ್ ವಂಚಕ, ಕೂಡಲೇ ಗೂಗಲ್‌ನಲ್ಲಿ ಅನೂಪ್ ಶೆಟ್ಟಿ ಹಿನ್ನೆಲೆ ಹುಡುಕಾಡಿ ಮಾಹಿತಿ ಪಡೆದು ಕರೆ ಸ್ಥಗಿತಗೊಳಿಸಿದ್ದಾನೆ. ತಮಗೆ ಬಂದ ಕರೆ ಪರಿಶೀಲಸಿದಾಗ ಇಂಟರ್‌ನೆಟ್ ಕರೆ ಎಂಬುದು ಎಸ್ಪಿ ಅವರಿಗೆ ಗೊತ್ತಾಗಿದೆ.

ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ವಿರೋಧ ಎಡಬಿಡಂಗಿತನದ್ದು: ಡಿ.ಕೆ.ಶಿವಕುಮಾರ್‌

-ಸಂಪತ್ ತರೀಕೆರೆ
-ಸೋಮರಡ್ಡಿ ಅಳವಂಡಿ
-ಗಿರೀಶ್ ಮಾದೇನಹಳ್ಳಿ

click me!