ರಿಪೋಟರ್ಸ್ ಡೈರಿ: ಲಟ್ಟಣಿಸಿದ್ದು ಎಂಟ್ಹತ್ತು, ಬೇಯಿಸಿದ್ದು ಒಂದೇ ಚಪಾತಿ!

Published : Apr 14, 2025, 11:34 AM ISTUpdated : Apr 14, 2025, 11:36 AM IST
ರಿಪೋಟರ್ಸ್ ಡೈರಿ: ಲಟ್ಟಣಿಸಿದ್ದು ಎಂಟ್ಹತ್ತು, ಬೇಯಿಸಿದ್ದು ಒಂದೇ ಚಪಾತಿ!

ಸಾರಾಂಶ

ಕಟ್ಟಿಗೆ ಒಲೆ ಹಚ್ಚಿ ರೂಢಿಯೇ ಇಲ್ಲದ ಮಹಿಳಾಮಣಿಗಳಿಗೆ ಒಲೆ ಹಚ್ಚುವುದು ಕಷ್ಟ ಕಷ್ಟ ಎನ್ನುವಂತಾಯಿತು. ಪ್ರತಿ ಬಾರಿ ಹಚ್ಚಿದಾಗಲೂ ಕ್ಷಣಾರ್ಧದಲ್ಲಿ ಬೆಂಕಿ ಮಾಯ. ಕ್ಯಾಮೆರಾ ಕಣ್ಣುಗಳೆಲ್ಲ ತಮ್ಮನ್ನೇ ದಿಟ್ಟಿಸಿವೆ. ಹೀಗಾಗಿ ಚಪಾತಿ ಸುಡದೆ ಬಿಡುವಂತಿಲ್ಲ.  

ಕಟ್ಟಿಗೆ ಒಲೆ ಹಚ್ಚಿ ರೂಢಿಯೇ ಇಲ್ಲದ ಮಹಿಳಾಮಣಿಗಳಿಗೆ ಒಲೆ ಹಚ್ಚುವುದು ಕಷ್ಟ ಕಷ್ಟ ಎನ್ನುವಂತಾಯಿತು. ಪ್ರತಿ ಬಾರಿ ಹಚ್ಚಿದಾಗಲೂ ಕ್ಷಣಾರ್ಧದಲ್ಲಿ ಬೆಂಕಿ ಮಾಯ. ಕ್ಯಾಮೆರಾ ಕಣ್ಣುಗಳೆಲ್ಲ ತಮ್ಮನ್ನೇ ದಿಟ್ಟಿಸಿವೆ. ಹೀಗಾಗಿ ಚಪಾತಿ ಸುಡದೆ ಬಿಡುವಂತಿಲ್ಲ. ಅಂತೂ ಇಂತು ಹರಸಾಹಸ ಪಟ್ಟು ಒಂದು ಚಪಾತಿ ಸುಟ್ಟು ವಿಜಯದ ನಗೆ ಬೀರಿದರು.  ಬೆಲೆ ಏರಿಕೆ ವಿರುದ್ಧ ರಾಜ್ಯದಲ್ಲಿ ಮೂರೂ ಪಕ್ಷ ಪೈಪೋಟಿಗೆ ಬಿದ್ದಂತೆ ಪ್ರತಿಭಟನೆ ಮಾಡುತ್ತಿವೆ. ಹಾಲು, ಮೊಸರು, ವಿದ್ಯುತ್‌ ದರ ಹೆಚ್ಚಿಸಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್‌ನವರು ಪ್ರತಿಭಟಿಸಿದರೆ ಸಿಲಿಂಡರ್‌, ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್‌ನವರು ಬೀದಿಗಿಳಿದಿದ್ದಾರೆ.

 ಈ ಪ್ರತಿಭಟನಾ ಪರ್ವ ಸರ್ವೇ ಸಾಮಾನ್ಯ. ಆದರೆ, ಹುಬ್ಬಳ್ಳಿಯಲ್ಲಿ ಎಲ್‌ಪಿಜಿ ಗ್ಯಾಸ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಲು ಬಂದ ಕೈ ಕಾರ್ಯಕರ್ತರು ‘ಪ್ರತಿಭಟನೆಯಲ್ಲಿ ಇರೋ ಕಷ್ಟ ಗೊತ್ತೇ ಇರಲಿಲ್ಲ’ ಎಂದು ಗೊಣಗುವಂತಾಗಿದ್ದು ವಿಶೇಷ. ಯಾಕೆ ಅಂತೀರಾ? ಎಲ್‌ಪಿಜಿ ದರ ಹೆಚ್ಚಳದ ವಿರುದ್ಧ ವಾಟಾಳ್‌ ನಾಗರಾಜ್‌ ರೇಂಜಿಗೆ ಪ್ರತಿಭಟನೆ ನಡೆಸಬೇಕು ಎಂದು ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆಯರು ಸರ್ವ ಸಿದ್ಧತೆಯಲ್ಲಿ ಬಂದಿದ್ದರು. ರಸ್ತೆಯಲ್ಲೇ ಕಟ್ಟಿಗೆ ಒಲೆ ಮೇಲೆ ಚಪಾತಿ ಬೇಯಿಸಿ ಆಕ್ರೋಶ ವ್ಯಕ್ತಪಡಿಸಲು ಮುಂದಾದರು. ಪಕ್ಕದಲ್ಲಿ ಖಾಲಿ ಸಿಲಿಂಡರ್‌ ಇರಿಸಿ ಕಟ್ಟಿಗೆ ಒಲೆ ಮೇಲೆ ಚಪಾತಿ ಬೇಯಿಸಲು ಎಂಟ್ಹತ್ತು ಚಪಾತಿಯನ್ನೂ ಲಟ್ಟಣಿಸಿ ಇಟ್ಟುಕೊಂಡರು. 

ಒಂದ್ನಿಮಿಷ ಕೂತ್ಕೊಳ್ಳಿ, ಪ್ಲೀಸ್‌... ಪ್ಲೀಸ್‌..!: ದೊಡ್ಡ ರಾಜಕಾರಣಿಯ ಪುಟ್ಟ ಹೆಂಡ್ತಿ ಹೋಗಿದ್ದು ಎಲ್ಲಿಗೆ?

ಆದರೆ ಕಟ್ಟಿಗೆ ಒಲೆ ಹಚ್ಚಿ ರೂಢಿಯೇ ಇಲ್ಲದ ಮಹಿಳಾಮಣಿಗಳಿಗೆ ಒಲೆ ಹಚ್ಚುವುದು ಕಷ್ಟ ಕಷ್ಟ ಎನ್ನುವಂತಾಯಿತು. ಪ್ರತಿ ಬಾರಿ ಹಚ್ಚಿದಾಗಲೂ ಕ್ಷಣಾರ್ಧದಲ್ಲಿ ಬೆಂಕಿ ಮಾಯ. ಕ್ಯಾಮೆರಾ ಕಣ್ಣುಗಳೆಲ್ಲ ತಮ್ಮನ್ನೇ ದಿಟ್ಟಿಸಿವೆ. ಹೀಗಾಗಿ ಚಪಾತಿ ಸುಡದೆ ಬಿಡುವಂತಿಲ್ಲ. ಅಂತೂ ಇಂತು ಹರಸಾಹಸ ಪಟ್ಟು ಒಂದು ಚಪಾತಿ ಸುಟ್ಟು ವಿಜಯದ ನಗೆ ಬೀರಿದರು. ಉಳಿದ ಚಪಾತಿ ಸುಡುವ ಸಾಹಸ ಮಾಡಲಾಗದೆ ಒಂದೇ ಚಪಾತಿಯನ್ನು ವಿಶ್ವಕಪ್‌ನಂತೆ ಮಾಧ್ಯಮಗಳಿಗೆ ತೋರಿಸಿದರು. ಆದರೆ, ಲಟ್ಟಣಿಸಿಟ್ಟಿದ್ದ ಎಂಟ್ಹತ್ತು ಚಪಾತಿಯನ್ನು ಸುಡದೆ ಸೈಲೆಂಟಾಗಿ ಡಬ್ಬದಲ್ಲಿ ತುಂಬಿಕೊಂಡು ಹೊರಟೇಬಿಟ್ಟರು.

ದೀಪವು ನಿನ್ನದೆ, ಗಾಳಿಯೂ ನಿನ್ನದೆ ಭಾವಗೀತೆಗೆ ಸಿಗರೆಟ್‌ ಹಚ್ಚುವ ಬೆಳಕು!
ಕನ್ನಡಿಗರ ಪ್ರೇಮ ಕವಿ ಕೆ.ಎಸ್‌.ನರಸಿಂಹಸ್ವಾಮಿ ಅವರ ಶ್ರೇಷ್ಠ ರಚನೆಗಳಲ್ಲಿ ಒಂದಾದ ‘ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು’ ಭಾವಗೀತೆ ಯಾರಿಗೆ ಗೊತ್ತಿಲ್ಲ ಹೇಳಿ? ಈ ಗೀತೆ ಸಿನಿಮಾದಲ್ಲಿ ಬಳಸುವುದಾಗಲಿ, ಈ ಸಾಲುಗಳಿಗೆ ಕೊರಿಯೋಗ್ರಫಿ ಮಾಡೋದಾಗಲಿ ಸುಲಭದ ಮಾತಲ್ಲ. ಆದರೆ ಕಲಬುರಗಿ ಪ್ರತಿಭೆಗಳು ಇಂತಹ ಸಾಹಸಕ್ಕೆ ಮುಂದಾಗಿ ಹೆಮ್ಮೆಯಿಂದ ಹಂಚಿಕೊಳ್ಳಲು ಮಾಧ್ಯಮದವರ ಮುಂದೆ ಬಂದಿದ್ದರು.

ರಿಪೋಟರ್ಸ್ ಡೈರಿ: ಕಲಬುರಗಿ ಜೈಲು ಸಿಬ್ಬಂದಿಗೆ ಈಗ ಅಗ್ನಿಪರೀಕ್ಷೆ!

ಈ ವಿಡಿಯೋ ಹಾಡಿಗೆ ಸಂಬಂಧಿಸಿದ ಕಲರ್‌ಫುಲ್‌ ಪೋಸ್ಟರ್‌ ಕೂಡ ಬಿಡುಗಡೆ ಮಾಡಿದರು. ಆದರೆ ಪೋಸ್ಟರಲ್ಲಿ ನಾಯಕನ ಬಾಯಲ್ಲಿ ಸಿಗರೆಟು, ನಾಯಕಿ ಕಡ್ಡಿ ಗೀರಿ ಆ ಸಿಗರೆಟಿಗೆ ಬೆಂಕಿ ಹಚ್ಚುತ್ತಿರುವಂತೆ ಬಿಂಬಿಸಲಾಗಿತ್ತು. ‘ದೀಪವು ನಿನ್ನದೆ, ಗಾಳಿಯು ನಿನ್ನದೆ’ ಎಂಬ ಕವಿ ಸಾಲುಗಳಿಗೂ ಈ ಬೆಂಕಿ ಕಡ್ಡಿ, ಸಿಗರೆಟಿಗೂ ಎತ್ತಣಿದೆತ್ತ ಸಂಬಂಧ ಎಂದು ಸುದ್ದಿಗಾರರು ತಲೆ ಚಚ್ಚಿಕೊಳ್ಳುವಂತಾಯಿತು. ‘ಇದ್ಯಾವ ಸೀಮೆ ಪರಿಕಲ್ಪನೆ ರೀ ನಿಮ್ಮದು’ ಎಂದು ತರಾಟೆಗೂ ತೆಗೆದುಕೊಂಡರು. ಇದಕ್ಕೆ ಏನು ಹೇಳಬೇಕು ಎಂದು ಗೊತ್ತಾಗದ ತಂಡ, ‘ಹಂಗಲ್ಲ ಸಾರ್‌, ಇದರಲ್ಲಿ ಅಪಾರ್ಥ ಏನಿಲ್ಲ. ಹಾಡನ್ನೊಮ್ಮೆ ಪೂರ್ಣ ನೋಡಿದಾಗ ಗೊತ್ತಾಗ್ತದೆ’ ಎಂದಷ್ಟೇ ಹೇಳಿ ಅಲ್ಲೊಂದು ಹಕ್ಕಿ, ಇಲ್ಲೊಂದು ಮಗುಳು, ನಿನಗೆ ನಮಸ್ಕಾರ ಎಂಬಂತೆ ಮಾಡಿ ಜಾಗ ಖಾಲಿ ಮಾಡಿದರು.

-ಶಿವಾನಂದ್‌ ಗೊಂಬಿ
-ಶೇಷಮೂರ್ತಿ ಅವಧಾನಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ