ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಜಾತಿ ಜನಗಣತಿ ವರದಿ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಚಿವರುಗಳಿಂದ ಅಭಿಪ್ರಾಯ ಮಂಡನೆಯಾಗಲಿದೆ.
ಬೆಂಗಳೂರು (ಏ.14): ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಜಾತಿ ಜನಗಣತಿ ವರದಿ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಚಿವರುಗಳಿಂದ ಅಭಿಪ್ರಾಯ ಮಂಡನೆಯಾಗಲಿದೆ. ಅಷ್ಟರೊಳಗೆ ಪ್ರಮುಖ ಮುಖಂಡರು, ಮಠಾಧೀಶರು, ಸಚಿವ, ಶಾಸಕರ ಸಭೆ ನಡೆಸಿ ಈ ವರದಿ ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯ ಹೊರಹಾಕಲು ವೀರಶೈವ ಲಿಂಗಾಯತ, ಒಕ್ಕಲಿಗ ಸೇರಿ ವಿವಿಧ ಸಮುದಾಯಗಳ ಸಂಘಟನೆಗಳು ಮುಂದಾಗಿವೆ. ಸರ್ಕಾರ ಪ್ರತಿಕೂಲ ನಿರ್ಧಾರ ಕೈಗೊಂಡರೆ ಹೋರಾಟಕ್ಕಿಳಿಯುವ ಸಾಧ್ಯತೆ ಇದೆ.
ಈಗಾಗಲೇ ಜಾತಿ ಜನಗಣತಿ ವರದಿ ವೈಜ್ಞಾನಿಕವಾಗಿ ನಡೆದಿಲ್ಲ ಎಂದು ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ. ಆದರೂ ವರದಿ ಈಗ ಅಧಿಕೃತವಾಗಿ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಸಮುದಾಯದ ಎಲ್ಲ ಪ್ರಮುಖರೊಂದಿಗೆ ಸಭೆ ನಡೆಸಿ ಒಮ್ಮತದ ಸ್ಪಷ್ಟ ನಿಲುವು ತಳೆಯಲು ಶೀಘ್ರ ಪ್ರತ್ಯೇಕ ಸಭೆ ಆಯೋಜಿಸಲು ಚಿಂತನೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ. ತನ್ಮೂಲಕ ಸಮುದಾಯದ ನಿಲುವನ್ನು ತಮ್ಮ ಸಮುದಾಯದ ಸಚಿವರ ಮೂಲಕ ಸರ್ಕಾರಕ್ಕೆ ತಲುಪಿಸುವುದು ಇದರ ಉದ್ದೇಶ. ಅಲ್ಲದೆ, ಸಮುದಾಯದ ನಿಲುವು, ಅಭಿಪ್ರಾಯಕ್ಕೆ ವಿರುದ್ಧವಾಗಿ ಸರ್ಕಾರ ಯಾವುದೇ ನಿರ್ಧಾರಕ್ಕೆ ಬಂದರೆ ಹೋರಾಟಕ್ಕಿಳಿಯುವ ಎಚ್ಚರಿಕೆಯನ್ನೂ ರವಾನಿಸುವ ಪ್ರಯತ್ನವೂ ನಡೆಯಲಿದೆ ಎಂದು ತಿಳಿದು ಬಂದಿದೆ.
ಈ ನಿಟ್ಟಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾವು ಮಂಗಳವಾರ ಅಥವಾ ಬುಧವಾರ ಸಭೆ ನಡೆಸುವ ತಯಾರಿ ನಡೆಸಿದೆ. ಸಭೆಯಲ್ಲಿ ಮಹಾಸಭಾದ ಪದಾಧಿಕಾರಿಗಳ ಜೊತೆಗೆ ಸಮುದಾಯದ ಎಲ್ಲಾ ಪ್ರಮುಖ ಮುಖಂಡರಿಗೆ ಆಹ್ವಾನ ನೀಡಲಿದೆ. ಸದ್ಯದ ಸಭೆಗೆ ಸಮುದಾಯದ ಮಠಗಳ ಮಠಾಧೀಶರಿಗೆ ಆಹ್ವಾನ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ನಂತರದ ದಿನಗಳಲ್ಲಿ ಮಠಾಧೀಶರನ್ನೂ ಒಳಗೊಂಡು ಸಭೆಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ.
ಇದು ಜಾತಿ ಗಣತಿ ಅಲ್ಲವೇ ಅಲ್ಲ, ಸಮೀಕ್ಷೆ ಅಷ್ಟೇ: ಸಚಿವ ಶಿವರಾಜ ತಂಗಡಗಿ
ಮಠಾಧೀಶರ ಸಭೆ: ಇನ್ನು, ರಾಜ್ಯ ಒಕ್ಕಲಿಗರ ಸಂಘ ಕೂಡ ಸಮುದಾಯದ ಮುಖಂಡರು ಹಾಗೂ ಮಠಾಧೀಶರ ಸಭೆ ಆಯೋಜಿಸಲು ಸೋಮವಾರ ಸಮಯ ನಿಗದಿಪಡಿಸುವ ಸಾಧ್ಯತೆ ಇದೆ. ಸೋಮವಾರ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಜೀರ್ಣೋದ್ಧಾರಗೊಂಡಿರುವ ಮೂರು ದೇವಾಲಯಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಮುದಾಯದ ಮಠಾಧಿಪತಿಗಳು, ಮುಖಂಡರು ಪಾಲ್ಗೊಳ್ಳುತ್ತಿರುವುದರಿಂದ ಆ ನಂತರ ಎಲ್ಲರೊಂದಿಗೆ ಚರ್ಚಿಸಿ ಸಮಯ ನಿಗದಿಪಡಿಸಲು ಸಂಘದ ಪದಾಧಿಕಾರಿಗಳು ನಿರ್ಧರಿಸಿದ್ದಾರೆ. ಅದೇ ರೀತಿ ಇನ್ನು ಕೆಲ ಸಮುದಾಯಗಳ ಸಂಘಟನೆಗಳು ಕೂಡ ತಮ್ಮ ತಮ್ಮ ಸಮುದಾಯದ ಮುಖಂಡರು, ಮಠಾಧೀಶರು, ಪ್ರಮುಖರೊಂದಿಗೆ ಮುಂದಿನ ಸಚಿವ ಸಂಪುಟ ಸಭೆ ನಡೆಯುವ ಗುರುವಾರದೊಳಗೆ ಸಭೆ ಆಯೋಜಿಸಿ ಸರ್ಕಾರಕ್ಕೆ ಜಾತಿ ಗಣತಿ ವರದಿ ಕುರಿತು ತಮ್ಮ ಸಮುದಾಯದ ನಿಲುವೇನು ಎನ್ನುವ ಸಂದೇಶವನ್ನು ಸಮುದಾಯದ ಸಚಿವರು, ಮುಖಂಡರ ಮೂಲಕ ತಲುಪಿಸುವ ಲೆಕ್ಕಾಚಾರ ನಡೆಸಿವೆ.