ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿದ್ದು, ಬಂಡಾಯ ಹಾಗೂ ಪಕ್ಷೇತರರಾಗಿ ಕಣಕ್ಕಿಳಿದಿರುವ ಬಂಡಾಯ ಅಭ್ಯರ್ಥಿಗಳನ್ನ ಮನವೊಲಿಸಲು ತೆರೆಮರೆಯ ತಂತ್ರ ನಡೆದಿದೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ(ಅ.21): ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಕಾಂಗ್ರೆಸ್ ಜೆಡಿಎಸ್, ಆಮ್ ಆದ್ಮಿ ಪಕ್ಷ, ಎಂಐಎಂ ಹಾಗೂ ಪಕ್ಷೇತರರಾಗಿ 235 ನಾಮಪತ್ರಗಳು ಸಲ್ಲಿಕೆಯಾಗಿವೆ. ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿದ್ದು, ಬಂಡಾಯ ಹಾಗೂ ಪಕ್ಷೇತರರಾಗಿ ಕಣಕ್ಕಿಳಿದಿರುವ ಬಂಡಾಯ ಅಭ್ಯರ್ಥಿಗಳನ್ನ ಮನವೊಲಿಸಲು ತೆರೆಮರೆಯ ತಂತ್ರ ನಡೆದಿದೆ.
ಫಿಕ್ಸ್ ಆಯ್ತು ಫೈಟ್, ಬಿಸಿತುಪ್ಪವಾದ ಬಂಡಾಯ
ಮಹಾನಗರ ಪಾಲಿಕೆ ಚುನಾವಣೆಗೆ ಸಲ್ಲಿಕೆಯಾದ 358 ನಾಮಪತ್ರಗಳ ಪೈಕಿ 119 ನಾಮಪತ್ರ ತಿರಸ್ಕೃತಗೊಂಡಿವೆ. 235 ನಾಮಪತ್ರ ಕ್ರಮಬದ್ಧವಾಗಿದ್ದು, ವಾರ್ಡ್ ನಂಬರ್ 29ರಲ್ಲಿ 12 ಜನ ಅಭ್ಯರ್ಥಿಗಳಿದ್ರೆ, ವಾರ್ಡ್ ನಂಬರ್ 27ಕ್ಕೆ 30ಕ್ಕೆ ತಲಾ 3 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಕೊನೆಗೂ ಪೈಟ್ ಪಿಕ್ಸ್ ಆಗಿದ್ದು, ಟಿಕೆಟ್ ಸಿಗದೆ ಬಂಡಾಯವೆದ್ದವರೇ ಈಗ ಆಯಾ ಪಕ್ಷಗಳಿಗೆ ಬಿಸಿತುಪ್ಪವಾಗಿದ್ದಾರೆ.
ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ: ಕತ್ತಿ ಮಸಿಯುತ್ತಿರುವ ಟಿಕೆಟ್ ವಂಚಿತರು..!
ಅಲ್ಲಿ ಟಿಕೆಟ್ ಸಿಗದವರಿಗೆ ಇಲ್ಲಿ ಟಿಕೆಟ್
ಕಾಂಗ್ರೆಸ್ ಮಾಜಿ ಮೇಯರ್ ಶ್ರೀದೇವಿ ಲೋಗಾವಿ ವಾರ್ಡ್ ನಂಬರ್ 17ಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ರು, ಆದ್ರೆ ಟಿಕೆಟ್ ಸಿಗದೇ ಕೊನೆ ಕ್ಷಣದಲ್ಲಿ ಬಿಜೆಪಿಯಿಂದ ಟಿಕೇಟ್ ಪಡೆದು ಅಖಾಡಕ್ಕೆ ಇಳಿದಿದ್ದಾರೆ. ಇನ್ನು ಬಿಜೆಪಿ ಮಾಜಿ ಮೇಯರ್ ಸಂಗೀತಾ ಪೋಳ ವಾರ್ಡ್ ನಂಬರ್ 33ಕ್ಕೆ ಆಕಾಂಕ್ಷಿಯಾಗಿದ್ರು, ಟಿಕೆಟ್ ಸಿಗದೇ ಹಿನ್ನೆಲೆಯಲ್ಲಿ ಜೆಡಿಎಸ್ ಟಿಕೆಟ್ ಪಡೆದು ಕಣಕ್ಕಿಳಿದಿದ್ದಾರೆ. ಇನ್ನು ವಾರ್ಡ್ ನಂಬರ್ 22ರಲ್ಲಿ ರವಿಕಾಂತ್ ಬಗಲಿ ಬಿಜೆಪಿ ಟಿಕೆಟ್ ಸಿಗದೇ ಇರೋದ್ರಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಬಿಜೆಪಿ ಅಭ್ಯರ್ಥಿ ಪ್ರೇಮಾನಂದ ಬಿರಾದಾರ ಅವರಿಗೆ ಬಂಡಾಯ ಬಿಸಿ ತಟ್ಟಿದೆ. ಪಕ್ಷ ತಾವು ಸೇರಿ 11ಜನ ರಾಜಿನಾಮೆ ಸಲ್ಲಿಸಿದ್ದಾರೆ.
ಶುರುವಾಗಲಿದೆ ಬಂಡಾಯವೆದ್ದವರ ಅಬ್ಬರ
ಇನ್ನು ವಾರ್ಡ್ ನಂಬರ್ 24ರಲ್ಲಿ ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ ವಿರುದ್ಧ ಬಂಡಾಯವಾಗಿ ವಿಮಲಾ ಖಾಣೆ ಸ್ಪರ್ಧಿಸಿದ್ದು, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿಮಲಾ ಖಾಣೆ ಮನವೊಲಿಸುವ ತಂತ್ರ ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ. ಇನ್ನೂ ಆಮ್ ಆದ್ಮಿ ಪಕ್ಷ ಎಂಐಎಂ ಹಾಗೂ ಪಕ್ಷೇತರರಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆ ಆರಂಭಿಸಿದ್ದು, ಮಹಿಳಾ ಮತ ಸೆಳೆಯುವಲ್ಲಿ ಪಕ್ಷೇತರ ಅಭ್ಯರ್ಥಿಗಳು ಮುಂದಾಗಿದ್ದಾರೆ.
ಮಹಿಳಾ ಮೋರ್ಚಾ ಕಾರ್ಯಕರ್ತೆಯರಿಗಿಲ್ಲ ಟಿಕೆಟ್
ಅಕ್ಟೋಬರ್ 21ರಿಂದ 27ವರೆಗೆ ಮತಯಾಚನೆಗೆ ಅವಕಾಶವಿದ್ದು, ಅಕ್ಟೋಬರ್ 28ರಂದು ಮತದಾನ ನಡೆಯಲಿದೆ. ಈಗಾಗಲೇ ಪ್ರಚಾರ ಕಾವು ಪಡೆದುಕೊಂಡಿದೆ. ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ 5 ಅಭ್ಯರ್ಥಿಗಳಿಗೆ ಮಣೆ ಹಾಕಿದ್ದರೆ. ಬಿಜೆಪಿಯ ಮಹಿಳಾ ಮೋರ್ಚಾದ ಕಾರ್ಯಕರ್ತೆಯರಿಗೆ ಒಂದೂ ಟಿಕೆಟ್ ಸಿಕ್ಕಿಲ್ಲ.
ಬಿಜೆಪಿ ಗೆಲುವಿಗಾಗಿ ರಣತಂತ್ರ
ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಬಿಜೆಪಿ ರಣತಂತ್ರ ರೂಪಿಸುತ್ತಿದ್ದು, ಕಚೇರಿಯಲ್ಲಿ ಅಭ್ಯರ್ಥಿಗಳೊಂದಿಗೆ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ್ ಕೂಚಬಾಳ, ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕರಾದ ಪಿ. ರಾಜೀವ್, ಅಭಯ ಪಾಟೀಲ್ ಹಾಗೂ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಕಾರಜೋಳ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ವಾರ್ಡ್ ವಾರು ಬಿಜೆಪಿ ಶಾಸಕರು ಪ್ರಚಾರ ಕಾರ್ಯ ಕೈಗೊಂಡು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ತೀರ್ಮಾನಿಸಿದ್ದಾರೆ ಎನ್ನುವುದು ತಿಳಿದು ಬಂದಿದೆ.
ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ: ಕಮಲ ಪಾಳಯಕ್ಕೆ ಬಿಗ್ ಶಾಕ್..!
ಶುರುವಾಗಿದೆ ಅಖಾಡದಲ್ಲಿ ಅಬ್ಬರದ ಪ್ರಚಾರ
ಇನ್ನೊಂದೆಡೆ ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ ಹಾಗೂ ಜೆಡಿಎಸ್ ನಿಂದ ಸ್ಪರ್ಧಿಸಿರುವ ಮಾಜಿ ಮೇಯರ್ ಸಂಗೀತಾ ಪೋಳ ತಮ್ಮ ವಾರ್ಡ್ ಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.
ಆಮ್ ಆದ್ಮಿ ಡಿಜೆ ವಾಹನ ವಶಕ್ಕೆ
ಆಮ್ ಆದ್ಮಿ ಪಕ್ಷದ ಕಚೇರಿ ಉದ್ಘಾಟಿಸಿ, ಬಳಿಕ ನಡೆದ ರ್ಯಾಲಿಯಲ್ಲಿ ಅನುಮತಿ ಪಡೆಯದೇ ಡಿಜೆ ಹಚ್ಚಿ ವಾಹನ ಬಳಕೆ ಮಾಡಿರುವುದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ಆಪ್ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದ ಘಟನೆಯೂ ನಡೆದಿದೆ. ಚುನಾವಣೆ ಪ್ರಚಾರಕ್ಕೆ ಅಧಿಕೃತ ದಿನಗಳು ಆರಂಭವಾಗುವ ಮುನ್ನವೇ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಪ್ರಚಾರ ರಂಗೇರುತ್ತಿದೆ.