
ಹಾವೇರಿ(ಮಾ.28): ಶಿಗ್ಗಾಂವಿ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಗೆಲ್ಲುವ ಕ್ಷೇತ್ರ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧೆಗೆ ನಾನು ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ. ನಾನು ರಾಜಕಾರಣ ಮಾಡಲೆಂದೇ ಬಂದಿದ್ದೇನೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದರು. ಶಿಗ್ಗಾಂವಿ ಕ್ಷೇತ್ರದಿಂದ ವಿನಯ ಕುಲಕರ್ಣಿ ಸ್ಪರ್ಧೆ ಮಾಡುತ್ತಾರೆನ್ನುವ ಚರ್ಚೆ ಬೆನ್ನಲ್ಲೇ ಸೋಮವಾರ ಸವಣೂರಿನ ದೊಡ್ಡ ಹುಣಸೆಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದು ಸೋಮವಾರ ಮಾತನಾಡಿದರು.
ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೈಕಮಾಂಡ್ ನನ್ನ ಜತೆ ಮಾತನಾಡಿದೆ. ಶಿಗ್ಗಾಂವಿಗೆ ನಾನು ಅರ್ಜಿ ಹಾಕಿಲ್ಲ. ಇಲ್ಲಿ 13-14 ಮಂದಿ ಆಕಾಂಕ್ಷಿಗಳಿದ್ದಾರೆ. ಅವರಿಗೆ ಟಿಕೆಟ್ ಕೊಡಿ ಗೆಲ್ಲುತ್ತಾರೆ. ನನಗೆ ನನ್ನ ಕ್ಷೇತ್ರ ಸ್ಪಷ್ಟವಿದ್ದು ಅಲ್ಲಿ ನನಗೆ ದೊಡ್ಡ ಬಳಗವಿದೆ. ಮುಂದೆ ನೋಡೋಣ ಎಂದು ಹೇಳಿದ್ದು, ನಾನು ಹೈಕಮಾಂಡ್‌ಗೆ ಯಾವುದೇ ಭರವಸೆ ಕೊಟ್ಟಿಲ್ಲ ಎಂದು ಹೇಳಿದರು.
ಮೀಸಲಾತಿ ವಿಚಾರದಲ್ಲಿ ನಾನು ಸ್ವಾಮೀಜಿಗಳಿಗೆ ಒತ್ತಡ ಹಾಕಿಲ್ಲ: ಸಿಎಂ ಬೊಮ್ಮಾಯಿ
ಕಳೆದ ಮೂರು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅಜ್ಜಂಫೀರ್ ಖಾದ್ರಿಯವರ ಮೇಲೆ ಷಡ್ಯಂತ್ರ ನಡೆದಿದೆ. ರಾಜಕಾರಣದಲ್ಲಿ ನೇರಾ ನೇರ ಸ್ಪರ್ಧೆ ಇರಬೇಕು. ಹಿಂದಿನಿಂದ ಷಡ್ಯಂತ್ರ ಮಾಡಿ ಗೆಲ್ಲುವುದು ಗೆಲುವಲ್ಲ, ಅದು ಮೋಸದ ಗೆಲುವು. ನೇರವಾಗಿ ಜನರಿಂದ ನಾವು ಗೆಲ್ಲಬೇಕು. ಯಾರನ್ನೋ ಮೋಸ ಮಾಡಿ ಗೆಲ್ಲುವುದು ದೊಡ್ಡ ಗೆಲುವಲ್ಲ ಎಂದು ಬೊಮ್ಮಾಯಿ ವಿರುದ್ಧ ಕಿಡಿಕಾರಿದರು.
ಧಾರವಾಡಕ್ಕೆ ಹೋಗಲು ನನಗೆ ಸಾಕಷ್ಟುಅಡ್ಡಿಪಡಿಸಿದ್ದಾರೆ. ತಪ್ಪು ಮಾಡದಿದ್ದರೂ ನನ್ನ ಮೇಲೆ ಅನೇಕ ತಪ್ಪು ಹೊರಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ದಮನ ಆಗುವುದನ್ನು ಇಂದು ನೋಡುತ್ತಿದ್ದೇನೆ ಎಂದರು.
ಮೀಸಲಾತಿ ವಿಚಾರದಲ್ಲಿ ಬೊಮ್ಮಾಯಿಯವರು ಜೇನುಗೂಡಿಗೆ ಕೈ ಹಾಕಿಲ್ಲ. ಜೇನು ಎಬ್ಬಿಸಿ ಎಲ್ಲರಿಗೂ ಕಡಿಯಲು ಹಚ್ಚಿದ್ದಾರೆ. ಅವರು ಜೇನುಗೂಡಿಗೆ ಕೈಹಾಕಲ್ಲ, ಬೇರೆಯವರಿಂದ ಕೈ ಹಾಕಿಸುತ್ತಾರೆ. ಇದು ನಿನ್ನೆಯದಲ್ಲ ಐದಾರು ತಿಂಗಳು ಹಿಂದೆಯೇ ಅರವಿಂದ ಬೆಲ್ಲದ ಹೇಳಿದ್ದಾರೆ. ಅವರು ಪ್ರೀ ಪ್ಲ್ಯಾನ್ ಮಾಡಿದ್ದಾರೆ. ನಾನು ಇದನ್ನು ಖಂಡಿಸುತ್ತೇನೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.