ಘಟನೆ ಹಿಂದೆ ಶಿವಮೊಗ್ಗ ಸ್ಥಳೀಯ ಕಾಂಗ್ರೆಸ್ ನಾಯಕರ ಕೈವಾಡ, ರಾಜಕೀಯ ಲಾಭಕ್ಕಾಗಿ ಈ ಕೃತ್ಯ: ಬೊಮ್ಮಾಯಿ ಕಿಡಿ, ಪ್ರತಿಭಟನೆ ಮಾಡುವುದಿದ್ದರೆ ನಮ್ಮ ಮನೆ ಮುಂದೆ ಮಾಡಲಿ, ಎಸ್‌ಸಿಯಿಂದ ಬಂಜಾರ ಹೊರಗೆ ಹಾಕದಂತೆ ಕೇಂದ್ರಕ್ಕೆ ಪತ್ರ.
ಬೆಂಗಳೂರು/ಚಿಕ್ಕಬಳ್ಳಾಪುರ(ಮಾ.28): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬ ಬಂಜಾರ ಸಮುದಾಯದ ಮೇಲೆ ಅತಿ ಹೆಚ್ಚು ಪ್ರೀತಿ ಇಟ್ಟುಕೊಂಡಿದೆ. ಆದರೆ ಯಡಿಯೂರಪ್ಪ ಅವರ ಶಿಕಾರಿಪುರದ ನಿವಾಸದ ಮೇಲೆ ಕಲ್ಲು ತೂರಾಟ ನಡೆಸುವಂತೆ ಶಿವಮೊಗ್ಗದ ಸ್ಥಳೀಯ ಕಾಂಗ್ರೆಸ್ ಮುಖಂಡರು ಪಿತೂರಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆಲವರು ರಾಜಕೀಯ ಲಾಭಕ್ಕಾಗಿ ಇಂಥ ಕೃತ್ಯ ಮಾಡುತ್ತಿದ್ದು, ಈ ಕೃತ್ಯ ಕ್ಷಮೆಗೆ ಅರ್ಹವಲ್ಲ. ಈ ಕೃತ್ಯ ಖಂಡನೀಯ. ಸಮಾಜದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸುವ ಕೆಲಸ ಯಾರೂ ಮಾಡಬಾರದು. ಇದನ್ನು ಬಿಟ್ಟು ನಾವು ಮೀಸಲಾತಿ ಹೆಚ್ಚಳ ಮಾಡಿರುವುದನ್ನು ವಿರೋಧಿಸುತ್ತೇವೆ ಎಂದು ಹೇಳಲಿ ಎಂದು ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸವಾಲೆಸದರು.
ಮೀಸಲಾತಿ ವಿಚಾರ; ಸಿಎಂ ಬೊಮ್ಮಾಯಿ ಆಧುನಿಕ ಶಕುನಿ: ಸುರ್ಜೇವಾಲಾ ಕಿಡಿ
ತಾಂಡಾ ಅಭಿವೃದ್ಧಿ ನಿಗಮ ಮಾಡಿದ್ದೇ ಯಡಿಯೂರಪ್ಪ ನವರು. ಯಡಿಯೂರಪ್ಪ ಅವರ ಕುಟುಂಬದವರು ಬಂಜಾರ ಸಮುದಾಯದ ಮೇಲೆ ಹೆಚ್ಚು ಪ್ರೀತಿ ಹೊಂದಿದ್ದಾರೆ. ನಮ್ಮ ಸರ್ಕಾರವೂ ಸಹ ಬಂಜಾರ ಸಮುದಾಯಕ್ಕೆ ಮೊದಲಿನಿಂದಲೂ ಆದ್ಯತೆ ನೀಡಿದ್ದೇವೆ. ಆದರೆ ತಪ್ಪು ತಿಳುವಳಿಕೆಯಿಂದ ಹೀಗೆ ಆಗಿದೆ. ಏನಾದರೂ ಸಮಸ್ಯೆ ಇದ್ದರೆ ಕೂತು ಚರ್ಚೆ ಮಾಡೋಣ. ತಾಂಡಾದ 2 ಲಕ್ಷ ಜನಕ್ಕೆ ನಮ್ಮ ಸರ್ಕಾರ ಹಕ್ಕು ಪತ್ರ ಕೊಟ್ಟಿದೆ ಎಂದರು.
ಈ ರೀತಿ ಆಗುತ್ತದೆ ಎಂದು ನಿಜವಾಗಲೂ ನಾವು ಅಂದುಕೊಂಡಿರಲಿಲ್ಲ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆ. ಕಲ್ಲು ತೂರಾಟ ಅತ್ಯಂತ ಖಂಡನೀಯ. ಬಂಜಾರ ಸಮುದಾಯದವರಿಗೆ ಪರಿಶಿಷ್ಟಜಾತಿಯ ಪಟ್ಟಿಯಿಂದ ಹೊರಗೆ ಹಾಕುವ ಆತಂಕವಿತ್ತು. ಆದರೆ ನಾವು ಕ್ರಮ ಕೈಗೊಳ್ಳದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನೆ ಮಾಡುವುದಿದ್ದರೆ ನಮ್ಮ ಮನೆ ಮುಂದೆ ಮಾಡಲಿ. ಅದನ್ನು ಬಿಟ್ಟು ಯಡಿಯೂರಪ್ಪ ಅವರ ಮನೆ ಮುಂದೆ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.