
ಪಾಟ್ನಾ(ಜೂ.22): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಒಂದಾಗಲು ನಿರ್ಧರಿಸಿರುವ ವಿಪಕ್ಷಗಳು ನಾಳೆ ಪಾಟ್ನಾದಲ್ಲಿ ಬೃಹತ್ ಸಮಾವೇಶ ಆಯೋದಿಸಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಹಲವು ಪಕ್ಷಗಳ ಪಾಲ್ಗೊಳ್ಳುತ್ತಿದೆ. ಎನ್‌ಡಿಎ ವಿರೋಧಿ ಕೂಟದ 20ಕ್ಕೂ ಹೆಚ್ಚು ಪಕ್ಷಗಳು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದೆ. ಆದರೆ ಈ ಸಭೆಗೆ ಒಂದು ದಿನ ಮೊದಲು ವಿಪಕ್ಷಗಳ ಮೈತ್ರಿಯಲ್ಲಿ ಸಣ್ಣ ಬಿರುಕು ಮೂಡಿರುವ ಸಾಧ್ಯತೆ ಗೋಚರಿಸುತ್ತಿದೆ. ಇದೀಗ ನಾಳೆ ಪಾಟ್ನಾದಲ್ಲಿ ಆಯೋಜಿಸಿರುವ ಈ ಸಭೆಗೆ ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿ ಅಲಭ್ಯರಾಗಿದ್ದಾರೆ.
ಕುಟುಂಬದ ಕಾರ್ಯಕ್ರಮದ ಕಾರಣ ಮೈತ್ರಿ ಪಕ್ಷದ ಸಭೆಗೆ ಆಗಮಿಸುತ್ತಿಲ್ಲ ಎಂಬ ಕಾರಣವನ್ನು ಜಯಂತ್ ಚೌಧರಿ ನೀಡಿದ್ದಾರೆ. ಈ ಕುರಿತು ನಿತೀಶ್ ಕುಮಾರ್‌ಗೆ ಪತ್ರ ಬರೆದಿದ್ದಾರೆ. ಆದರೆ ಆರ್‌ಎಲ್‌ಡಿ ನಾಯಕ ಸಭೆಯಿಂದ ಗೈರಾದ ಹಿಂದೆ ಒಡಕು ಕಾರಣವೇ ಅನ್ನೋ ಮಾತುಗಳು ಚರ್ಚೆಯಾಗುತ್ತಿದೆ. ಇತ್ತ ಈಗಾಗಲೇ ನ್ಯಾಷನಲ್ ಕಾಂಗ್ರೆಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಈ ಮೈತ್ರಿಕೂಟದಿಂದ ಹೊರಗುಳಿಯುವ ಸೂಚನೆ ನೀಡಿದ್ದರು.
ಸಂಸತ್ ಚುನಾವಣೆ: 450 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ವಿಪಕ್ಷಗಳ ನೇರ ಸ್ಪರ್ಧೆ
‘ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದಾದಾಗ ಎಲ್ಲಾ ವಿಪಕ್ಷಗಳು ಸುಮ್ಮನಿದ್ದವು’ ಎಂದು ಕಿಡಿಕಾರಿರುವ ಒಮರ್, ಈಗ ಅದೇ ಕಾರಣಕ್ಕೆ ಈಗ ವಿಪಕ್ಷಗಳ ಕೂಟವನ್ನು ಬೆಂಬಲಿಸದೇ ಇರುವ ಸುಳಿವು ನೀಡಿದ್ದಾರೆ. ಜೂ.23ರಂದು ಬಿಹಾರದಲ್ಲಿ ವಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಮಹತ್ವದ ಸಭೆ ನಡೆಯಲಿದೆ. ಈ ವೇಳೆಯೇ ಒಮರ್ ಅಪಸ್ವರ ತೆಗೆದಿದ್ದರು.
ಕನಿಷ್ಠ 450 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ವಿಪಕ್ಷಗಳ ಮೈತ್ರಿಕೂಟದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಯೋಜನೆ ರೂಪಿಸಿವೆ.ಲೋಕಸಭಾ ಚುನಾವಣೆಗೂ ಮುನ್ನ ವಿಪಕ್ಷಗಳನ್ನು ಒಗ್ಗೂಡಿಸುವ ಸಲುವಾಗಿ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ ಜೂ.23ರ ಶುಕ್ರವಾರ ಪಟನಾದಲ್ಲಿ ವಿಪಕ್ಷಗಳ ಬೃಹತ್ ಸಭೆ ಹಮ್ಮಿಕೊಂಡಿದ್ದಾರೆ. ಈ ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚಿಸಲು ನಿರ್ಧರಿಸಲಾಗಿದ್ದು, ಈ ಪೈಕಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸುವ ವಿಷಯ ಪ್ರಮುಖ ಚರ್ಚೆಯ ವಿಷಯವಾಗಿರಲಿದೆ ಎಂದು ಮೂಲಗಳು ತಿಳಿಸಿವೆ.
ವಿಪಕ್ಷಗಳ ಒಗ್ಗಟ್ಟು ನೋಡಿ ಬೆಚ್ಚಿಬಿತ್ತಾ ಬಿಜೆಪಿ ?: ಕೇಂದ್ರದ ಬಗ್ಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಅಪಹಾಸ್ಯ
ನೇರಾ ನೇರ ಹಣಾಹಣಿ ಬಗ್ಗೆ ಈಗಾಗಲೇ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಪ್ರಸ್ತಾಪ ಮುಂದಿಟ್ಟಿದ್ದಾರೆ. ಇದು ಸದ್ಯಕ್ಕೆ ವಿಪಕ್ಷಗಳನ್ನು ಒಗ್ಗೂಡಿಸಲು ಇರುವ ಏಕೈಕ ಮಾರ್ಗ. ಪಂಜಾಬ್, ಕೇರಳ, ಬಂಗಾಳ ಹೊರತುಪಡಿಸಿ ಉಳಿದೆಲ್ಲೆಡೆ ಈ ಸೂತ್ರ ವಿಪಕ್ಷಗಳಿಗೆ ಹೊಂದಾಣಿಕೆಯಾಗುತ್ತದೆ. ಇದನ್ನು ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಕೂಡಾ ಒಪ್ಪಿದ್ದಾರೆ. ಆದರೆ ಹಲವು ರಾಜ್ಯಗಳಲ್ಲಿ ಅಧಿಕಾರ ಹೊಂದಿರುವ ಕಾಂಗ್ರೆಸ್ ಜೊತೆಗೆ ಈ ವಿಷಯದಲ್ಲಿ ಒಪ್ಪಂದ ಮಾಡಿಕೊಳ್ಳುವುದು ನಮ್ಮ ಮುಂದಿನ ಸವಾಲು ಎಂದು ಜೆಡಿಯು, ಆರ್‌ಜೆಡಿ ನಾಯಕರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.