
ಬೆಂಗಳೂರು : ರಾಜ್ಯ ಕಾಂಗ್ರೆಸ್ ಶಾಸಕರ ಅಸಮಾಧಾನ ಹಾಗೂ ಅಹವಾಲು ಆಲಿಸುವ ಸಲುವಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಮತ್ತೆ ಬೆಂಗಳೂರಿಗೆ ಆಗಮಿಸಿದ್ದು, ಸೋಮವಾರದಿಂದ ಮೂರು ದಿನಗಳ ಕಾಲ 61 ಮಂದಿ ಶಾಸಕರನ್ನು ಮುಖಾಮುಖಿ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.
ಈ ಅವಧಿಯಲ್ಲಿ ಕಲಬುರಗಿ, ಬೆಳಗಾವಿ, ರಾಯಚೂರು, ಯಾದಗಿರಿ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ, ಉತ್ತರ ಕನ್ನಡ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಸೇರಿ ವಿವಿಧ ಜಿಲ್ಲೆಗಳ 61 ಮಂದಿ ಶಾಸಕರೊಂದಿಗೆ ವೈಯಕ್ತಿಕವಾಗಿ ಸಭೆ ನಡೆಸಲಿದ್ದಾರೆ.
ಮೊದಲ ದಿನವಾದ ಜು.7 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6.20ರ ವರೆಗೆ ಕಲಬುರಗಿ, ಬೆಳಗಾವಿ ಹಾಗೂ ರಾಯಚೂರು ಜಿಲ್ಲೆಯ 22 ಮಂದಿ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ. ಬಳಿಕ ಮಂಗಳವಾರ 22 ಮಂದಿ, ಬುಧವಾರ 17 ಮಂದಿಯೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಈ ವೇಳೆ ಎರಡು ವರ್ಷದಲ್ಲಿ ತಮ್ಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆ, ಭವಿಷ್ಯದ ಯೋಜನೆಗಳು, ಕ್ಷೇತ್ರದಲ್ಲಿ ಕೆಲಸ ಮಾಡಲು ಉಂಟಾಗುತ್ತಿರುವ ಅಡ್ಡಿಗಳು, ಸರ್ಕಾರ ಹಾಗೂ ಉಸ್ತುವಾರಿ ಸಚಿವರ ಸ್ಪಂದನೆ, ಅಧಿಕಾರಿಗಳ ಸಹಕಾರದ ಬಗ್ಗೆ ಸಿದ್ಧ ಪ್ರಶ್ನಾವಳಿ ಮೂಲಕ ಸುರ್ಜೇವಾಲಾ ಅವರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲಿದ್ದಾರೆ.
ಇದೇ ವೇಳೆ ಶಾಸಕರಿಗೆ ಬಹಿರಂಗವಾಗಿ ಮಾತನಾಡದಂತೆ ಸೂಚನೆ ನೀಡುವ ಸಾಧ್ಯತೆಯಿದೆ. ಸರ್ಕಾರದ ಬಗ್ಗೆ ಬಹಿರಂಗವಾಗಿ ಮಾತನಾಡಿ ಬಿಜೆಪಿಗೆ ಅಸ್ತ್ರ ನೀಡಬೇಡಿ. ಸರ್ಕಾರ ಗ್ಯಾರಂಟಿ ಅನುಷ್ಠಾನ ಸೇರಿ ಉತ್ತಮ ಕೆಲಸ ಮಾಡುತ್ತಿದೆ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಬಗೆಹರಿಸಿಕೊಂಡು ಹೋಗೋಣ. ಹೀಗಾಗಿ ಏನೇ ಸಮಸ್ಯೆಯಿದ್ದರೂ ಪಕ್ಷದ ವೇದಿಕೆಯಲ್ಲಿ ಮಾತ್ರ ಚರ್ಚಿಸಿ. ನಕಾರಾತ್ಮಕ ವಿಷಯಗಳು ಚರ್ಚೆಗೆ ಬಂದು ಸರ್ಕಾರದ ಸಾಧನೆಗಳು ನೇಪಥ್ಯಕ್ಕೆ ಸರಿಯುವಂತೆ ಮಾಡಬೇಡಿ ಎಂದು ಕಿವಿ ಮಾತು ಹೇಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಶಾಸಕರಾದ ಬಿ.ಆರ್.ಪಾಟೀಲ್ ಹಾಗೂ ರಾಜು ಕಾಗೆ ಅವರು ಆಡಳಿತ ವೈಫಲ್ಯ ಬಗ್ಗೆ ಬಹಿರಂಗ ಆರೋಪ ಮಾಡಿದ ಬೆನ್ನಲ್ಲೇ ಹಲವು ಶಾಸಕರು ಅನುದಾನ ಕೊರತೆ, ಸಚಿವರ ಅಸಹಕಾರ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದರು.ಈ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ಬೆಂಗಳೂರಿಗೆ ಆಗಮಿಸಿ ಜೂ.30 ರಿಂದ ಜು.2 ರವರೆಗೆ ಮೂರು ದಿನಗಳ ಕಾಲ ಬೆಂಗಳೂರು, ಮೈಸೂರು ವಿಭಾಗದ 42 ಮಂದಿ ಶಾಸಕರೊಂದಿಗೆ ಒನ್ ಟು ಒನ್ ಸಭೆ ನಡೆಸಿದ್ದರು. ಇದೀಗ ಸೋಮವಾರದಿಂದ ಎರಡನೇ ಹಂತದ ಸಭೆ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.