
ಕನ್ನಡಪ್ರಭ ವಾರ್ತೆ ಬೆಳಗಾವಿ: ಸಿಡಿ ಕೇಸ್ ಅನ್ನು ಸಿಬಿಐ ತನಿಖೆಗೊಪ್ಪಿಸುವಂತೆ ಕೋರಿ ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಬಂದಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇದೀಗ ಮತ್ತೆ ದೆಹಲಿಯತ್ತ ಮುಖಮಾಡಿದ್ದಾರೆ. ಈ ವೇಳೆ ಸೀಡಿ ವಿಚಾರವಾಗಿ ಮತ್ತೆ ಅಮಿತ್ ಶಾರನ್ನು ಭೇಟಿಯಾಗಿ ಮನವಿ ಸಲ್ಲಿಸಲಿರುವ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ತಮ್ಮ ಆಪ್ತನಿಗೆ ಟಿಕೆಟ್ ನೀಡುವಂತೆ ವರಿಷ್ಠರ ಮನವೊಲಿಸುವ ಪ್ರಯತ್ನವನ್ನೂ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ.
ತಮ್ಮ ಆಪ್ತ ಕಿರಣ್ ಜಾಧವ್ ಹಾಗೂ ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ್ ಮನ್ನೋಳಕರ್‌ರೊಂದಿಗೆ ಬುಧವಾರ ದೆಹಲಿಗೆ ಪ್ರಯಾಣ ಬೆಳೆಸಿರುವ ರಮೇಶ್ ಜಾರಕಿಹೊಳಿ, ಸಾಧ್ಯವಾದರೆ ಗುರುವಾರ ಮತ್ತೆ ಕೇಂದ್ರ ಸಚಿವ ಅಮಿತ್ ಶಾರನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ. ಕಳೆದ ವಾರ ಸಿಡಿ ವಿಚಾರ ಮುಂದಿಟ್ಟುಕೊಂಡು ರಮೇಶ್ ಜಾರಕಿಹೊಳಿ ಅವರು ಅಮಿತ್ ಶಾರನ್ನು ಭೇಟಿಯಾಗಿದ್ದರು. ಆಗ ರಮೇಶ್ ಜಾರಕಿಹೊಳಿ ಅವರನ್ನು ಮತ್ತೊಮ್ಮೆ ಕರೆಸಿ ಮಾತನಾಡುವ ಭರವಸೆಯನ್ನು ಅಮಿತ್ ಶಾ ನೀಡಿದ್ದರು.
ಇದನ್ನು ಓದಿ: India Gate: ಅಮಿತ್ ಶಾಗೆ ರಮೇಶ್ ಸಿಡಿ ತೋರಿಸಿದರೋ ಅಥವಾ ಆಡಿಯೋ ಕೇಳಿಸಿದರೋ?
ಆಪ್ತನ ಕಣಕ್ಕಿಳಿಸಲು ತಯಾರಿ: ರಾಜಕೀಯ ಬದ್ಧವೈರಿ ಲಕ್ಷ್ಮೀ ಹೆಬ್ಬಾಳಕರ್‌ರನ್ನು ಹೇಗಾದರೂ ಮಾಡಿ ಮಣಿಸುವ ಶಪಥ ಮಾಡಿರುವ ರಮೇಶ್ ಜಾರಕಿಹೊಳಿ ಈ ಬಾರಿ ಅವರ ವಿರುದ್ಧ ತಮ್ಮ ಆಪ್ತ ನಾಗೇಶ್ ಮನ್ನೋಳಕರ್‌ರನ್ನು ಕಣಕ್ಕಿಳಿಸಲು ತಯಾರಿ ನಡೆಸಿದ್ದಾರೆ. ಇದೇ ಕಾರಣಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮನ್ನೋಳಕರ್‌ರನ್ನು ದೆಹಲಿಗೆ ಕರೆದೊಯ್ದಿದ್ದಾರೆ. ಹೈಕಮಾಂಡ್ ಅನ್ನು ಭೇಟಿಯಾಗಿ ತಮ್ಮ ಆಪ್ತನಿಗೇ ಟಿಕೆಟ್ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಮರಾಠಿಗರ ಪ್ರಾಬಲ್ಯವಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅದೇ ಸಮುದಾಯಕ್ಕೆ ಸೇರಿದವರಿಗೆ ಟಿಕೆಟ್ ನೀಡಿದರೆ ಒಳಿತು ಎಂಬುದನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಡಲೂ ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ: ಅಮಿತ್ ಶಾಗೆ ಸಿಡಿ ಷಡ್ಯಂತ್ರ ದಾಖಲೆ ನೀಡಿದೆ: ರಮೇಶ್ ಜಾರಕಿಹೊಳಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.