ಮಾರ್ಚಲ್ಲಿ ನಡೆವ ದಾವಣಗೆರೆಯ ಬಿಜೆಪಿ ಮಹಾಸಂಗಮಕ್ಕೆ ಪ್ರಧಾನಿ ಮೋದಿ..?

By Kannadaprabha NewsFirst Published Feb 9, 2023, 8:19 AM IST
Highlights

ಈ ತಿಂಗಳಾಂತ್ಯದಿಂದ 4 ದಿಕ್ಕಿನಿಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆರಂಭವಾಗಲಿದ್ದು, ಕೊನೆಯಲ್ಲಿ ಮಾರ್ಚ್‌ 19-22 ನಡುವೆ ಬೃಹತ್‌ ಶಕ್ತಿ ಪ್ರದರ್ಶನ ನಡೆಯಲಿದೆ. 

ಕನ್ನಡಪ್ರಭ ವಾರ್ತೆ ಬೆಂಗಳೂರು (ಫೆಬ್ರವರಿ 9, 2023): ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕ ಸ್ಥಾನ ಪಡೆದುಕೊಳ್ಳಲು ರಣತಂತ್ರ ರೂಪಿಸುತ್ತಿರುವ ಆಡಳಿತಾರೂಢ ಬಿಜೆಪಿ ಈ ತಿಂಗಳ ಅಂತ್ಯದಿಂದ ಮತ್ತೊಂದು ಸುತ್ತಿನ ‘ವಿಜಯ ಸಂಕಲ್ಪ ಯಾತ್ರೆ’ಗೆ ಸಿದ್ಧತೆ ಕೈಗೊಂಡಿದ್ದು, ರಾಜ್ಯದ ನಾಲ್ಕು ದಿಕ್ಕಿನಿಂದ ಯಾತ್ರೆ ಆರಂಭಿಸಿ ದಾವಣಗೆರೆಯಲ್ಲಿ ಸಂಗಮಗೊಳ್ಳಲು ತೀರ್ಮಾನಿಸಿದೆ. ದಾವಣಗೆರೆಯ ಈ ಮಹಾಸಂಗಮ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುವ ಸಾಧ್ಯತೆ ಇದೆ.

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಇರುವ ನಾಡಪ್ರಭು ಕೆಂಪೇಗೌಡ ಪ್ರತಿಮೆ, ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟ, ಬೆಳಗಾವಿಯ ಬೈಲಹೊಂಗಲದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮತ್ತು ಬೀದರ್‌ ಜಿಲ್ಲೆ ಬಸವ ಕಲ್ಯಾಣದ ಅನುಭವ ಮಂಟಪದಿಂದ ರಥಯಾತ್ರೆ ಮಾದರಿಯ ಒಟ್ಟು ನಾಲ್ಕು ಯಾತ್ರೆಗಳನ್ನು ಪ್ರಾರಂಭಿಸಲು ತಯಾರಿ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಫೆಬ್ರವರಿಯಲ್ಲಿ 3 ಬಾರಿ ಪ್ರಧಾನಿ ಮೋದಿ ಕರ್ನಾಟಕ ಪ್ರವಾಸ, ಸೃಷ್ಟಿಯಾಗುತ್ತಾ ಹೊಸ ಇತಿಹಾಸ?

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಯಾತ್ರೆಗೆ ಚಾಲನೆ ನೀಡಲು ಆಗಮಿಸುವ ಚರ್ಚೆ ನಡೆದಿದೆ. ಇದು ಇನ್ನೂ ಅಂತಿಮಗೊಂಡಿಲ್ಲ.

ನಾಲ್ಕು ರಥಯಾತ್ರೆಗಳು ಅಂತಿಮವಾಗಿ ದಾವಣಗೆರೆಯಲ್ಲಿ ಸಂಗಮಗೊಳ್ಳಲಿವೆ. 600 ಎಕರೆ ವಿಸ್ತೀರ್ಣದಲ್ಲಿ ಬೃಹತ್‌ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಬರುವ ಮಾರ್ಚ್ 19-22ರ ಅವಧಿಯಲ್ಲಿ ಸಮಾವೇಶ ನಡೆಸುವ ಉದ್ದೇಶ ಹೊಂದಿದ್ದು, ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆ ಇದೆ.

ಇದನ್ನು ಓದಿ: ಕಲ್ಯಾಣ ಕರ್ನಾಟಕದಲ್ಲಿ ಮೋದಿ ಹವಾ: ಸಂಸ್ಕೃತಿ, ಪರಂಪರೆಯೊಂದಿಗೆ ಸಂಯೋಜನೆಗೊಂಡ ಕಾರ್ಯಕ್ರಮದ ನೋಟ ಹೀಗಿದೆ..

ಯಾತ್ರೆ ಸಾಗುವ ಮಾರ್ಗ:
ಮಲೆಮಹದೇಶ್ವರ ಬೆಟ್ಟದಿಂದ ಆರಂಭವಾಗುವ ಯಾತ್ರೆ ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಕೊಡಗು, ಉಡುಪಿ, ಚಿತ್ರದುರ್ಗ ಮೂಲಕ ದಾವಣಗೆರೆಗೆ ಬಂದು ಸೇರಲಿದೆ. ಕೂಡಲಸಂಗಮದಿಂದ ಆರಂಭವಾಗುವ ಯಾತ್ರೆ ಬಾಗಲಕೋಟೆ, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಚಿತ್ರದುರ್ಗದ ಮೂಲಕ ದಾವಣಗೆರೆಗೆ ಬರಲಿದೆ. ರಾಯಣ್ಣನ ಸಮಾಧಿ ನಂದಗಡದಿಂದ ಆರಂಭವಾಗುವ ಯಾತ್ರೆ ಬೆಳಗಾವಿ, ಗದಗ, ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ ಮೂಲಕ ದಾವಣಗೆರೆಗೆ ಬರಲಿದೆ. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿರುವ ಕೆಂಪೇಗೌಡ ಪ್ರತಿಮೆಯಿಂದ ಆರಂಭವಾಗುವ ಯಾತ್ರೆಯು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿತ್ರದುರ್ಗ ಮೂಲಕ ದಾವಣಗೆರೆಗೆ ಬರಲಿದೆ.

ಎಲ್ಲಿಂದ ಯಾತ್ರೆ?
1. ಬೆಂಗಳೂರು ಏರ್‌ಪೋರ್ಟ್‌ ಬಳಿಯ ಕೆಂಪೇಗೌಡ ಪ್ರತಿಮೆ
2. ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟ
3. ಬೆಳಗಾವಿಯ ನಂದಗಡದ ಸಂಗೊಳ್ಳಿ ರಾಯಣ್ಣ ಪ್ರತಿಮೆ
4. ಬೀದರ್‌ ಜಿಲ್ಲೆ ಬಸವಕಲ್ಯಾಣದ ಅನುಭವ ಮಂಟಪ

ಇದನ್ನೂ ಓದಿ: ಪ್ರಧಾನಿ ಮೋದಿ ಕರ್ನಾಟಕದ ರೈತರಿಗೆ ಟೋಪಿ ಹಾಕಿ ಮೋಸ ಮಾಡಿದ್ದಾರೆ: ಸಿದ್ದರಾಮಯ್ಯ

click me!