ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ: ರಮೇಶ್ ಜಾರಕಿಹೊಳಿ ಹೊಸ ಬಾಂಬ್

By Suvarna NewsFirst Published Jun 25, 2021, 3:25 PM IST
Highlights

* ಮೈಸೂರಿನ ಸುತ್ತೂರು ಮಠಕ್ಕೆ  ರಮೇಶ್ ಜಾರಕಿಹೊಳಿ ಭೇಟಿ
* ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದ ಸಾಹುಕಾರ
* ಶಾಸಕ ಸ್ಥಾನಕ್ಕೆ ರಾಜೀನಾಮೆ ಬಗ್ಗೆ ಸ್ಪಷ್ಟನೆ 

ಮೈಸೂರು, (ಜೂನ್.25): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಇಂದು (ಶುಕ್ರವಾರ) ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿದರು. 

ಸುತ್ತೂರು ಶ್ರೀಗಳನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನಿರ್ಧಾರ ಮಾಡಿದ್ದು ಸತ್ಯ ಎಂದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದರು.

 ಸರ್ಕಾರ ಬೀಳಿಸಿ ಸರ್ಕಾರ ರಚಿಸುವ ಶಕ್ತಿಯನ್ನು ದೇವರು ನನಗೆ ಕೊಟ್ಟಿದ್ದಾನೆ. ಇಂತಹ ನಾನು ಸಚಿವನಾಗುವುದಕ್ಕೆ ಲಾಬಿ ಮಾಡುತ್ತೇನಾ? ನನಗೆ ಇನ್ನೂ ಆ ಸ್ಥಿತಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ರಮೇಶ್ ಜಾರಕಿಹೊಳಿ ರಾಜೀನಾಮೆ ಬೆದರಿಕೆ: ಸಿಎಂ ಪ್ರತಿಕ್ರಿಯಿಸಿದ್ದು ಹೀಗೆ

ಸ್ವಾಮೀಜಿ ಅವರ ಬಳಿ ಬಂದು ಸಚಿವ ಸ್ಥಾನಕ್ಕೆ ಒತ್ತಡ ಹಾಕಿಸುವ ಸ್ಥಿತಿಗೆ ನಾನು ಬಂದಿಲ್ಲ. ನಾನು ಸ್ವಾಮೀಜಿ ಬಳಿ ಬಂದದ್ದು ಅವರ ಪೂರ್ವಾಶ್ರಮದ ಮಾತೃಶ್ರೀ ನಿಧನಕ್ಕೆ ಸಂತಾಪ ಸೂಚಿಸಲು. ಇಲ್ಲಿ ಯಾವ ರಾಜಕಾರಣವನ್ನೂ ಚರ್ಚೆ ಮಾಡಿಲ್ಲ. ಇನ್ನೊಬ್ಬರನ್ನು ಸಚಿವನನ್ನಾಗಿ ಮಾಡುವ ಶಕ್ತಿ ನನ್ನಲ್ಲಿದೆ. ನಾನು ಸಚಿವನಾಗೋಕೆ ಲಾಬಿ ಮಾಡುತ್ತೇನಾ?ಇರುವ ಶಾಸಕ ಸ್ಥಾನವನ್ನೇ ಬಿಡುವ ಚಿಂತನೆ‌ ಮಾಡಿದ್ದವನು ನಾನು ಎಂದು ಹೇಳಿದರು.

ಒಂದು ವೇಳೆ ರಾಜೀನಾಮೆ ಕೊಟ್ಟರೂ ನಾನೊಬ್ಬನೇ ಕೊಡುತ್ತೇನೆ. ಆದರೆ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಮುಳುಗುವ ಹಡಗು, ನಾನೇಕೆ ಆ ಪಕ್ಷಕ್ಕೆ ಹೋಗಲಿ. ಬಿಜೆಪಿ ಪಕ್ಷ ನನ್ನನ್ನು ಬಹಳ ಗೌರವಯುತವಾಗಿ ನಡೆಸಿಕೊಂಡಿದೆ. ನಾನು ಬಿಜೆಪಿಗೆ ದ್ರೋಹ ಮಾಡುವ ಕೆಲಸ ಎಂದಿಗೂ ಮಾಡುವುದಿಲ್ಲ ಎಂದರು.

ನಾನು ಮುಂಬೈಗೆ ಹೋಗಿದ್ದು ಸತ್ಯ. ದೇವೇಂದ್ರ ಫಡ್ನವೀಸ್ ಅವರು ನನ್ನ ರಾಜಕೀಯ ಗಾಡ್ ಫಾದರ್. ಅವರ ಬಳಿ ನನ್ನ ಮನಸ್ಸಿನ ನೋವುಗಳನ್ನು ಹೇಳಿಕೊಂಡಿದ್ದೇನೆ ಎಂದು ತಿಳಿಸಿದರು.

click me!