
ಮಧುಗಿರಿ/ಮೈಸೂರು(ಜೂ.25): ನಾನು ಮುಂದಿನ ಸಿಎಂ ಎಂದು ಹೇಳಬೇಡಿ. ಸಿಎಂ ಪದವೇ ಡೇಂಜರ್’ ಎಂದು ತಮ್ಮ ಅಭಿಮಾನಿಗಳಲ್ಲಿ ವಿನಂತಿಸಿರುವ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ‘ಆ ಸಮಯ, ಸಂದರ್ಭ ಬರಲಿ ಆಗ ಅದನ್ನು ಹೇಳುತ್ತೇನೆ ಎಂದು ಹೇಳುವ ಮೂಲಕ ತಾನೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ವಿಚಾರಗಳು ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ‘ಮುಂದಿನ ಸಿಎಂ ಪರಮೇಶ್ವರ್’ ಎಂದು ಅವರ ಅಭಿಮಾನಿಗಳು ಘೋಷಣೆಗಳನ್ನು ಕೂಗಿರುವ ಪ್ರತ್ಯೇಕ ಘಟನೆಗಳು ಮಧುಗಿರಿ ಮತ್ತು ಮೈಸೂರಿನ ಸುತ್ತೂರು ಮಠದಲ್ಲಿ ಗುರುವಾರ ನಡೆದಿದೆ.
ಕಾಂಗ್ರೆಸ್‌ಗೆ ಪಕ್ಷದ ಅಧ್ಯಕ್ಷರೇ ಸುಪ್ರೀಂ: ಸಿದ್ದರಾಮಯ್ಯ ಬಣಕ್ಕೆ ಪರಂ ಟಾಂಗ್
ಮಧುಗಿರಿಯಲ್ಲಿ ಪರಮೇಶ್ವರ್ ಅವರು ರಸ್ತೆ ಕಾಮಗಾರಿ ಉದ್ಘಾಟಿಸಿ ಭಾಷಣ ಮಾಡುತ್ತಿದ್ದ ವೇಳೆ ‘ರಾಜ್ಯದ ಮುಂದಿನ ಮುಖ್ಯಮಂತ್ರಿ ನೀವೇ ಆಗಬೇಕು’ ಎಂದು ಅಭಿಮಾನಿಗಳು ಮತ್ತು ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಘೋಷಣೆ ಕೂಗಿದರು. ಈ ವೇಳೆ ಘೋಷಣೆ ಕೂಗುತ್ತಿದ್ದವರನ್ನು ತಡೆದು ‘ನಾನು ಮುಂದಿನ ಸಿಎಂ ಎಂದು ಹೇಳಬೇಡಿ. ಸಿಎಂ ಪದವೇ ಡೇಂಜರ್. ಅದು ನನಗೇ ಮುಳುವಾಗಲಿದೆ. 2023ರ ಆಸೆಂಬ್ಲಿ ಚುನಾವಣೆಗೆ ಇನ್ನೂ 2 ವರ್ಚಗಳಿವೆ. ಈಗಲೇ ಸಿಎಂ ಪದ ಏಕೆ ಬೇಕು? ಅದನ್ನು ನಮ್ಮ ಹೈಕಮಾಂಡ್ ತೀರ್ಮಾನಿಸುತ್ತದೆ’ ಎಂದರು.
ಇದೇ ರೀತಿ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳನ್ನು ಭೇಟಿಯಾದ ಬಳಿಕ ಹೊರಗೆ ಬಂದ ವೇಳೆಯೂ ಅವರ ಅಭಿಮಾನಿಗಳು ಮುಂದಿನ ಸಿಎಂ ಪರಮೇಶ್ವರ್ ಎಂದು ಘೋಷಣೆಗಳನ್ನು ಕೂಗಿದರು. ಈ ವೇಳೆ ಸುದ್ದಿಗಾರರ ನೀವು ಸಿಎಂ ರೇಸ್‌ನಲ್ಲಿ ಇದ್ದೀರಾ ಎಂಬ ಪ್ರಶ್ನೆಗೆ ‘ಆ ಸಮಯ, ಸಂದರ್ಭ ಬರಲಿ ಆಗ ಅದನ್ನು ಹೇಳುತ್ತೇನೆ’ ಎಂದು ಮಾರ್ಮಿಕವಾಗಿ ಉತ್ತರಿಸಿದರು. ಜೊತೆಗೆ ಸಿದ್ದರಾಮಯ್ಯ ಮುಂದಿನ ಸಿಎಂ ಎನ್ನುವ ಕೂಗಿಗೆ ಟಾಂಗ್ ನೀಡಿದ ಪರಮೇಶ್ವರ್, ನಮ್ಮ ಸ್ನೇಹಿತರಲ್ಲಿ, ಹಿರಿಯರಲ್ಲಿ ಮನವಿ ಮಾಡುತ್ತೇನೆ. ಸಿಎಂ ವಿಚಾರದ ಚರ್ಚೆ ಇಲ್ಲಿಗೇ ನಿಲ್ಲಿಸಿ, ಇದನ್ನು ಇನ್ನು ಬೆಳೆಸಬೇಡಿ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.