ಹೊರನಡೆದರು ಸಚಿವ ರಮೇಶ್ ಜಾರಕಿಹೊಳಿ

By Web DeskFirst Published Nov 20, 2018, 9:39 AM IST
Highlights

ಮೊದಲಿಂದಲೂ ಕೂಡ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿರುವ ಸಚಿವ ರಮೇಶ್ ಜಾರಕಿಹೊಳಿ ಇದೀಗ ಅರ್ಧಕ್ಕೆ ಎದ್ದು ನಡೆದಿರುವ ಪ್ರಸಂಗ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಡೆದಿದೆ. 

ಬೆಂಗಳೂರು :  ಬೆಳಗಾವಿ ಕಬ್ಬು ಬೆಳೆಗಾರರ ಪ್ರತಿಭಟನೆ ಬಿಸಿ ಸಚಿವ ಸಂಪುಟ ಸಭೆಗೂ ತಟ್ಟಿದ್ದು, ಬೆಳಗಾವಿ ಉಸ್ತುವಾರಿಯೂ ಆಗಿರುವ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಇದೇ ವಿಷಯವಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ. ಈ ವೇಳೆ ಸಭೆಯಿಂದ ರಮೇಶ್‌ ಜಾರಕಿಹೊಳಿ ಅರ್ಧಕ್ಕೆ ಎದ್ದು ಹೋದರು.

ಸಚಿವ ಸಂಪುಟ ಸಭೆಗೆ ಗೈರಾಗುತ್ತಿದ್ದ ಸಚಿವ ರಮೇಶ್‌ ಜಾರಕಿಹೊಳಿ ಸೋಮವಾರ ನಡೆದ ಸಚಿವ ಸಂಪುಟ ಸಭೆಗೆ ಹಾಜರಾಗಿದ್ದರು. ಸಭೆಯಲ್ಲಿ ನಿಮ್ಮ ಕಾರ್ಖಾನೆಯಿಂದಲೇ ರೈತರಿಗೆ ಸಾಕಷ್ಟುಹಣ ಬಾಕಿ ಇದೆ. ಇದಕ್ಕೆ ಸಂಬಂಧಿಸಿದಂತೆ ನೀವೇ ಮಾತನಾಡುತ್ತಿಲ್ಲ. ನಿಮ್ಮ ಜಿಲ್ಲೆಯಲ್ಲಿ ರೈತ ಮುಖಂಡರ ಜತೆ ಮಾತನಾಡಬೇಕಿತ್ತು.

ಮಾತನಾಡದ ಕಾರಣ ಸಮಸ್ಯೆ ಉಲ್ಬಣಗೊಂಡಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೀವ್ರ ಬೇಸರ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ. ಕುಮಾರಸ್ವಾಮಿ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದ ರಮೇಶ್‌ ಜಾರಕಿಹೊಳಿ ಸಭೆಯ ಅರ್ಧದಲ್ಲಿಯೇ ಹೊರನಡೆದರು.

ಸಚಿವ ಸಂಪುಟ ಸಭೆಗೆ ಗೈರಾಗುತ್ತಿರುವ ಬಗ್ಗೆ ಮುಖ್ಯಕಾರ್ಯದರ್ಶಿಗೆ ಆರ್‌ಟಿಐ ಕಾರ್ಯಕರ್ತರೊಬ್ಬರು ದೂರು ನೀಡಿದ್ದರು. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ನಡೆದ ಸಚಿವ ಸಂಪುಟದಲ್ಲಿ ಭಾಗಿಯಾಗಲು ಆಗಮಿಸಿದ್ದರು ಎಂದು ಹೇಳಲಾಗಿದೆ.

click me!