ರಮೇಶ ಜಾರಕಿಹೊಳಿ ಅವರು ದೆಹಲಿಗೆ ತೆರಳಿ, ತಮ್ಮ ನಾಯಕ ಬಿ.ಎಲ್.ಸಂತೋಷ ಅವರಿಗೆ ದೂರು ನೀಡಿದ್ದಾರೆ. ಬೆಳಗಾವಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಬದಲಾವಣೆ ಮಾಡುವುದು, ಪಕ್ಷವನ್ನು ಬಲಪಡಿಸುವ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಆ ಮೂಲಕ ಮತ್ತೆ ರಮೇಶ ಜಾರಕಿಹೊಳಿ ರಾಜಕೀಯದಲ್ಲಿ ಸಕ್ರೀಯರಾಗುತ್ತಿರುವ ಮಾತುಗಳು ಕೇಳಿ ಬರುತ್ತಿವೆ.
ಬೆಳಗಾವಿ(ಆ.13): ತಮ್ಮ ವಿರುದ್ಧ ಬಿಜೆಪಿ ನಾಯಕರ ನಿಯೋಗವೊಂದು ಕೇಂದ್ರ ಸಚಿವರ ಬಳಿ ದೂರು ನೀಡಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರನ್ನು ಭೇಟಿಯಾಗಿದ್ದು, ಪ್ರತಿ ದೂರು ನೀಡಿದ್ದಾರೆ ಎನ್ನಲಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಬೆಂಬಲಿಗರ ಸೋಲಿನ ಹಿನ್ನೆಲೆಯಲ್ಲಿ ಇಷ್ಟು ದಿನ ಪಕ್ಷದ ಸಭೆ, ಸಮಾರಂಭಗಳಿಂದ ರಮೇಶ ಜಾರಕಿಹೊಳಿ ದೂರವೇ ಉಳಿದಿದ್ದರು. ಇತ್ತೀಚೆಗಷ್ಟೇ ಮಾಜಿ ಸಚಿವೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ನೇತೃತ್ವದ ಜಿಲ್ಲಾ ಬಿಜೆಪಿ ನಾಯಕರ ನಿಯೋಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ರಮೇಶ ಜಾರಕಿಹೊಳಿ ವಿರುದ್ಧ ದೂರು ನೀಡಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ಹಿಡಿದು ವಿಧಾನಸಭೆ ಚುನಾವಣೆವರೆಗೆ ಪಕ್ಷದಲ್ಲಿದ್ದುಕೊಂಡೇ ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಸೋಲಿಸಲು ಪ್ರಯತ್ನಿಸಿದ್ದಾರೆ ಎಂಬ ಆರೋಪವನ್ನು ಹೊರಿಸಿತ್ತು ಎನ್ನಲಾಗಿತ್ತು.
ಸವದಿ ವಿರುದ್ಧ ಪ್ರತಿಷ್ಠೆಯ ಗ್ರಾಪಂ ಚುನಾವಣೆ ಗೆದ್ದ ಜಾರಕಿಹೊಳಿ..!
ಇದರ ಬೆನ್ನಲ್ಲೇ ರಮೇಶ ಜಾರಕಿಹೊಳಿ ಅವರು ದೆಹಲಿಗೆ ತೆರಳಿ, ತಮ್ಮ ನಾಯಕ ಬಿ.ಎಲ್.ಸಂತೋಷ ಅವರಿಗೆ ದೂರು ನೀಡಿದ್ದಾರೆ. ಬೆಳಗಾವಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಬದಲಾವಣೆ ಮಾಡುವುದು, ಪಕ್ಷವನ್ನು ಬಲಪಡಿಸುವ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಆ ಮೂಲಕ ಮತ್ತೆ ರಮೇಶ ಜಾರಕಿಹೊಳಿ ರಾಜಕೀಯದಲ್ಲಿ ಸಕ್ರೀಯರಾಗುತ್ತಿರುವ ಮಾತುಗಳು ಕೇಳಿ ಬರುತ್ತಿವೆ.
ಅಭಿನಂದನೆ ಸಲ್ಲಿಸಿದ ಜಾರಕಿಹೊಳಿ:
ಈ ಮಧ್ಯೆ, ಜಾರಕಿಹೊಳಿಯವರು ದೆಹಲಿಯಲ್ಲಿ ಸಂತೋಷ ಅವರನ್ನು ಭೇಟಿ ಮಾಡಿದ ವೇಳೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಮತ್ತೊಮ್ಮೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಗೆ ಪುಷ್ಪಗುಚ್ಛ ನೀಡಿ, ಅಭಿನಂದಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, ಸಂಘಟನಾ ಚತುರರಾದ ಸಂತೋಷ ಅವರು ಬಿಜೆಪಿ ಸಂಘಟನೆಯನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಅವರ ಅವಧಿಯಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಪ್ರೇರಣೆ ಮತ್ತು ಸ್ಫೂರ್ತಿ ಪಡೆಯುತ್ತಿದ್ದಾರೆ. ಬಿಜೆಪಿ ಸಂಘಟನೆ ಬಲಯುತವಾಗಿ ಮುನ್ನಡೆಯುತ್ತಿದೆ ಎಂದರು.
ಇದೇ ವೇಳೆ, ದೇಶದ ಸ್ವಾತಂತ್ರ್ಯೋತ್ಸವದ ‘ಹರ್ ಘರ್ ತಿರಂಗ’ ಹಿನ್ನೆಲೆಯಲ್ಲಿ ಬಿ.ಎಲ್.ಸಂತೋಷ ಅವರು ರಮೇಶ ಜಾರಕಿಹೊಳಿ ಹಾಗೂ ಬಿಜೆಪಿ ನಾಯಕ ಕಿರಣ ಜಾಧವ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು.