ಬಿಜೆಪಿ ರಾಜ್ಯಾಧ್ಯಕ್ಷ ನೀಡುವಂತೆ ನಾನು ಕೇಳಿದ್ದು, ನನಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಅದರ ಮಜಾನೇ ಬೇರೆ’ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಈ ಮೂಲಕ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಆಕಾಂಕ್ಷಿಯಾಗಿದ್ದೇನೆ ಎಂಬ ಸಂದೇಶವನ್ನು ಮತ್ತೊಮ್ಮೆ ರವಾನಿಸಿದ್ದಾರೆ.
ಬೆಂಗಳೂರು(ಆ.13): ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ಸ್ವಯಂಕೃತ ಅಪರಾಧದಿಂದಾಗಿ ಸೋಲನುಭವಿಸಿ ಗೋವಿಂದರಾಜನಗರ ಕ್ಷೇತ್ರದ ಜನತೆಗೆ ಅಪಚಾರ ಮಾಡಿದ್ದು, ನನ್ನ ಕಾಲಿನ ಮೇಲೆ ನಾನೇ ಕಲ್ಲು ಹಾಕಿಕೊಂಡಿದ್ದೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಚುನಾವಣೆಯಲ್ಲಿ ನಮ್ಮವರೇ ನನಗೆ ಮೋಸ ಮಾಡಿದ್ದು, ಎಲ್ಲರಿಗೂ ಗೊತ್ತು. ಪಕ್ಷದ ನಾಯಕರ ಒತ್ತಾಯಕ್ಕೆ ಮಣಿದು ಎರಡು ಕಡೆ ಸ್ಪರ್ಧಿಸಿದ್ದೆ. ಹೈಕಮಾಂಡ್ ನೀಡಿದ ಟಾಸ್ಕ್ ಅನ್ನು ನಾನೊಬ್ಬನೇ ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡಿದೆ. ಇಷ್ಟಾದರೂ ಚುನಾವಣೆಯಲ್ಲಿ ಸೋಲನುಭವಿಸಬೇಕಾಯಿತು. ಒಂದು ಕಡೆ ಮೂರು ಸಾವಿರ ಮತದಿಂದ ಸೋತರೆ, ಮತ್ತೊಂದೆಡೆ 70 ಸಾವಿರ ಮತಗಳನ್ನು ಪಡೆದೆ. ನಾನು ಹೇಗೆ ಸೋಲನುಭವಿಸಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಬೇಸರ ವ್ಯಕ್ತಪಡಿಸಿದರು.
ಕಡಿಮೆ ಬೆಲೆಗೆ ನಿವೇಶನ ಕೊಡಿಸೋದಾಗಿ ವಿ.ಸೋಮಣ್ಣ ಪಿಎ ಹೆಸರಲ್ಲಿ ಕೂಲಿ ಕಾರ್ಮಿಕರಿಗೆ 4.5 ಲಕ್ಷ ರು. ವಂಚನೆ!
ಹಿರಿಯರ ಮಾತು ಕೇಳಿ ತಪ್ಪು ಮಾಡಿದೆ:
‘ಚುನಾವಣೆ ವೇಳೆ ಹಿರಿಯರ ಮಾತು ಕೇಳಿ ತಪ್ಪು ಮಾಡಿದೆ. ನನ್ನ ಗೆಲುವು ಖಚಿತವಾಗಿದ್ದ ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆಗೆ ತೆರಳಿದೆ. ಸೋಲುತ್ತೇನೆ ಎಂದು ಜೀವನದಲ್ಲಿ ನೆನೆಸಿರಲಿಲ್ಲ. ಆದರೆ, ಸೋಲನುಭವಿಸಬೇಕಾಯಿತು. ನನಗೆ ನಮ್ಮ ಪಕ್ಷದವರೇ ತೊಂದರೆ ಕೊಟ್ಟರು. ನನ್ನ ಪಾಡಿಗೆ ನಾನು ಇದ್ದೆ. ಗೋವಿಂದರಾಜ ಕ್ಷೇತ್ರದ ಅಭಿವೃದ್ಧಿಯಲ್ಲಿ ನಾನು ತೊಡಗಿಸಿಕೊಂಡಿದ್ದೆ. ಆದರೆ, ನನ್ನನ್ನು ಅಲ್ಲಿಂದ ತೆರವುಗೊಳಿಸಿ ಬೇರೆ ಎರಡು ಕಡೆ ಚುನಾವಣೆಗೆ ನಿಲ್ಲುವಂತೆ ಸೂಚಿಸಿದರು. ನಾನು ಅವರ ಮಾತು ಕೇಳಿದ್ದೆ ತಪ್ಪಾಯಿತು. ಬಂಗಾರದಂತಹ ಗೋವಿಂದರಾಜನಗರವನ್ನು ನಾನು ಕಳೆದುಕೊಂಡೆ’ ಎಂದು ಚುನಾವಣೆ ವೇಳೆ ಆಗಿರುವಂತಹ ತಪ್ಪುಗಳ ಬಗ್ಗೆ ಮೆಲುಕು ಹಾಕಿದರು.
‘ನಾನು 1983ರಿಂದ ಬೆಂಗಳೂರಲ್ಲಿ ಕೆಲಸ ಮಾಡಿದ್ದೇನೆ. ಸುಮಾರು 40 ವರ್ಷಕ್ಕಿಂತ ಹೆಚ್ಚು ಕಾಲ ದುಡಿದಿದ್ದೇನೆ. ಬಿಬಿಎಂಪಿ ಸದಸ್ಯನಾಗಿ, ವಿಧಾನಪರಿಷತ್ ಸದಸ್ಯನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ’ ಎಂದು ಹಳೆಯ ಮೆಲುಕು ಹಾಕಿದರು.