ಸಾಂದರ್ಭಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಬಿಜೆಪಿಗೆ ಆಗಮನ, ಸ್ಥಾನಮಾನ ನಿರೀಕ್ಷಿಸಿ ಆಗಮಿಸಿಲ್ಲ. ನಮ್ಮ ನಾಯಕ ರಮೇಶ್ ಜಾರಕಿಹೊಳಿ ಸೇರಿ ಯಾರೊಬ್ಬರೂ ಬಿಜೆಪಿ ತೊರೆಯುವ ಪ್ರಶ್ನೆಯೇ ಇಲ್ಲ. ಶೇ. 101 ನಾವೆಲ್ಲರೂ ಬಿಜೆಪಿಯಲ್ಲೇ ಇರುತ್ತೇವೆ ಎಂದು ಶಾಸಕ ಮಹೇಶ್ ಕುಮಟಳ್ಳಿ ತಿಳಿಸಿದ್ದಾರೆ.
ಬೆಂಗಳೂರು (ಡಿ.4): ನಮ್ಮ ನಾಯಕರಾದ ರಮೇಶ್ ಜಾರಕಿಹೊಳಿ ಅವರು ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿಯಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲವೆಂದು ಹತಾಶರಾಗಿಲ್ಲ. ಸಾಂದರ್ಭಿಕ ರಾಜಕೀಯ ಪರಿಸ್ಥಿತಿಯಿಂದಾಗಿ ಬಿಜೆಪಿ ಬಂದಿದ್ದೇವೆಯೇ ಹೊರತು ಸ್ಥಾನಮಾನದ ಆಸೆಯಿಂದ ಬಂದಿಲ್ಲ. ನಾವು ಶೇ.101 ರಷ್ಟು ಬಿಜೆಪಿಯಲ್ಲಿ ಇದ್ದುಕೊಂಡೇ 2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಶ್ರಮಿಸುತ್ತೇವೆ ಎಂದು ಶಾಸಕ ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಥಣಿ ಕ್ಷೇತ್ರಕ್ಕೆ ಒಂದು ವಿಧಾನ ಪರಿಷತ್ ಸ್ಥಾನ ಹಾಗೂ ಎಂಎಲ್ಎ ಟಿಕೆಟ್ ಅಂತೂ ಸಿಕ್ಕೇ ಸಿಗುತ್ತದೆ. ಮಾಜಿ ಉಪಮುಖ್ಯಮಂತ್ರಿ ಆಗಿದ್ದ ಲಕ್ಷ್ಮಣ ಸವದಿಯವರು ಪಕ್ಷಕ್ಕಾಗಿ ದುಡಿದಿದ್ದಾರೆ. ಪಕ್ಷದಲ್ಲಿ ಹಿರಿಯರಾಗಿದ್ದು, ಅಥಣಿಗೆ ಒಂದು ಎಂಎಲ್‌ಸಿ, ಒಂದು ಎಂಎಲ್ಎ ಸ್ಥಾನ ಲಭ್ಯವಾಗಲಿದೆ. ಇನ್ನು ನಾನು ಬಿಜೆಪಿ ಪಕ್ಷವನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. 2023ಕ್ಕೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇನೆ. ನಮ್ಮ ನಾಯಕರಾದ ರಮೇಶ್ ಜಾರಕಿಹೊಳಿ ಅವರ ಜೊತೆಯಲ್ಲೇ ಪಕ್ಷ ಅಧಿಕಾರಕ್ಕೆ ತರುವುದಕ್ಕೆ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಜೆಡಿಎಸ್‌ಗೆ ಜಾರಕಿಹೊಳಿಗೆ ಆಹ್ವಾನ : ನೊಂದು ದಳ ಬಿಟ್ಟ ಮುಖಂಡ
ನಾವು ಶೇ. 101 ಬಿಜೆಪಿಯಲ್ಲೇ ಇರ್ತೇವೆ: ಪಕ್ಷದಲ್ಲಿ ಸ್ಥಾನಮಾನ ಸಿಗೋದು, ಬಿಡೋದು ಬೇರೆ ವಿಚಾರವಾಗಿದೆ. ನಾವು ಬಿಜೆಪಿಗೆ ಸ್ಥಾನಮಾನ ಅಪೇಕ್ಷಿಸಿ ಬರಲಿಲ್ಲ. ಸಾಂದರ್ಭಿಕ ರಾಜಕೀಯದ ಪರಿಸ್ಥಿತಿಯಿಂದ ಬಿಜೆಪಿಗೆ ಬಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಬಿಜೆಪಿಗೆ ಬಂದ ಮೇಲೆ ಪಕ್ಷದ ಕೆಲಸವನ್ನು ಮಾಡುತ್ತಿದ್ದೇವೆ. ಅಧಿಕಾರ ಬಯಸಿ ನಾವು ಬಿಜೆಪಿಗೆ ಬರಲಿಲ್ಲ. ಹೀಗಾಗಿ, ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಹತಾಶೆ ನಮಗಿಲ್ಲ. ಇನ್ನು ರಮೇಶ್ ಜಾರಕಿಹೊಳಿ ಒಬ್ಬ ವ್ಯಕ್ತಿ ಅಲ್ಲ, ಅವರೊಬ್ಬ ಶಕ್ತಿಯಾಗಿದ್ದಾರೆ. ಅವರ ಮೇಲೆ ಬಿಜೆಪಿ ವರಿಷ್ಠರು ಅಪಾರ ವಿಶ್ವಾಸ ಇಟ್ಟಿದ್ದಾರೆ. 2023ರಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಲಾಗಿದ್ದು, ಯಾವುದೇ ಕಾರಣಕ್ಕೂ ರಮೇಶ್ ಜಾರಕಿಹೊಳಿ ಅವರು ಪಕ್ಷ ಬಿಡುತ್ತಾರೆ ಎನ್ನುವ ವಿಚಾರ ಶುದ್ಧ ಸುಳ್ಳಾಗಿದೆ. ನಾವಾಗಲೀ, ಜಾರಕಿಹೊಳಿ ಅವರಾಗಲೀ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದು, ಬೆಳಗಾವಿಯಲ್ಲಿ ಹೆಚ್ಚಿನ ಸೀಟು ಗೆಲ್ಲಿಸಲು ಜಾರಕಿಹೊಳಿ ನಿರ್ಧರಿಸಿದ್ದಾರೆ ಎಂದರು.
karnataka Assembly Election : ಬೇರೆ ಪಕ್ಷ ಸೇರ್ತಾರ ಜಾರಕಿಹೊಳಿ : ಸ್ಪರ್ಧೆ ಬಗ್ಗೆಯೂ ಸ್ಪಷ್ಟನೆ
ಕುಮಾರಸ್ವಾಮಿ ಸಂಪರ್ಕದಲ್ಲಿರುವುದು ನಿಜ: ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆ ವೇಳೆ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ತೊರೆಯುತ್ತಾರೆ ಎಂಬ ಚರ್ಚೆ ಆರಂಭವಾಗಿತ್ತು. ಇದಕ್ಕೆ ಪೂರಕ ಎಂಬಂತೆ ಜೆಡಿಎಸ್ ನಾಯಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಕೂಡ ಸಾಕ್ಷಿಯಾಗಿತ್ತು. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ರಮೇಶ್ ಜಾರಕಿಹೊಳಿ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಎನ್ನುವುದೇ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ನನ್ನ ಉದ್ದೇಶವಾಗಿದೆ. ನನಗೆ ಸುಳ್ಳು ಹೇಳಿ ಅಭ್ಯಾಸವಿಲ್ಲ. ಕುಮಾರಸ್ವಾಮಿ ನಿತ್ಯವೂ ನನ್ನ ಜೊತೆ ಮೊಬೈಲ್ ಮೂಲಕ ಟಚ್‌ನಲ್ಲಿ ಇದ್ದಾರೆ ಎಂದು ಹೇಳಿದ್ದರು.
ಮುಂದುವರೆದು ಎಚ್‌ಡಿಕೆ ಸಂಪರ್ಕದಲ್ಲಿದ್ದರೂ ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು, ಜೆಡಿಎಸ್‌ಗೆ ಸೇರ್ಪಡೆ ಆಗುವುದಿಲ್ಲ. 2023ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ನಿರ್ಧರಿಸಲಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 10 ಜನ ಪ್ರಮುಖರಲ್ಲಿ ನಾನು ಕೂಡ ಒಬ್ಬನಾಗುತ್ತೇನೆ. ಹತ್ತು ಮಂದಿ ಬಿಜೆಪಿಯ ಪ್ರಮುಖರಲ್ಲಿ ನಾನೇ ಇರುವಾಗ ಬೇರೆಯವರನ್ನು ಮಂತ್ರಿ ಮಾಡುವ ಹಾಗೂ ಬೇರೆಯವರಿಗೆ ಟಿಕೆಟ್ ಕೊಡುವ ಶಕ್ತಿ ಕೊಟ್ಟಾಗ ನಾನೇಕೆ ಬಿಜೆಪಿ ಬಿಡಲಿ ಎಂದು ರಮೇಶ ಜಾರಕಿಹೊಳಿ ಹೇಳಿದ್ದರು.