
ಬೆಂಗಳೂರು (ಆ.24): ಧರ್ಮಸ್ಥಳ ಗ್ರಾಮ ಪ್ರಕರಣದಲ್ಲಿ ಮುಸುಕುಧಾರಿಯ ಬಂಧನವಾಗಿದ್ದು, ಪೊಲೀಸ್ ವಿಚಾರಣೆ ನಡೆಯುತ್ತಿದೆ. ಆತನ ಹಿಂದೆ ಯಾರೆಲ್ಲಾ ಇದ್ದಾರೆ ಎಂಬುದು ಬಹಿರಂಗವಾಗಿ ಅವರಿಗೂ ಶಿಕ್ಷೆಯಾಗುತ್ತದೆ. ಧರ್ಮಸ್ಥಳದ ಬಗ್ಗೆ ಇನ್ನು ಮುಂದೆ ಯಾರಿಗೂ ಮಾತನಾಡಲು ಅವಕಾಶವಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ ಕೆಲವರು ಪ್ರತಿ ದಿನ, ದಿನಕ್ಕೆ ನಾಲ್ಕೈದು ಬಾರಿ ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳದ ಬಗ್ಗೆ ಪದೇ ಪದೆ ಹೇಳಿಕೆ ನೀಡುತ್ತಿದ್ದರು. ಈಗ ಸ್ಪಷ್ಟತೆ ಸಿಕ್ಕಿದ್ದು ಮುಸುಕುಧಾರಿಯ ಬಂಧನವಾಗಿದೆ.
ಪೊಲೀಸರು ಮಾಸ್ಕ್‌ಮ್ಯಾನ್ ವಿಚಾರಣೆ ನಡೆಸುತ್ತಿದ್ದಾರೆ. ಇವರ ಹಿಂದೆ ಯಾರ್ಯಾರಿದ್ದಾರೆ ಎಂಬುದು ತಿಳಿಯುತ್ತದೆ. ಅವರಿಗೂ ಶಿಕ್ಷೆಯಾಗುತ್ತದೆ ಎಂದರು. ದಕ್ಷಿಣ ಕನ್ನಡದಲ್ಲಿ ಅನೇಕ ಕೊಲೆಗಳಾಗಿವೆ, ಅತ್ಯಾ8ರಗಳಾಗಿವೆ ಎಂದು ಹನ್ನೆರಡು-ಹದಿಮೂರು ವರ್ಷದಿಂದ ಮಾಧ್ಯಮಗಳಲ್ಲಿ, ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿತ್ತು. ನಂತರ ಸೌಜನ್ಯ ಕೊಲೆಯಾದ ಬಳಿಕ ರಾಜ್ಯ ಪೊಲೀಸರು ತನಿಖೆ ನಡೆಸುವುದು ಬೇಡ ಎಂದು ಸಿಬಿಐ ತನಿಖೆಗೆ ವಹಿಸಲಾಯಿತು. ಸಿಬಿಐನಲ್ಲೂ ಏನೂ ದಾಖಲೆ ಸಿಗಲಿಲ್ಲ ಎಂದು ವಿವರಿಸಿದರು.
ಇತ್ತೀಚೆಗೆ ಮುಸುಕುಧಾರಿಯೊಬ್ಬ ಬಂದು ಧರ್ಮಸ್ಥಳದಲ್ಲಿ ಅನೇಕ ಅತ್ಯಾ8ರ, ಕೊಲೆಗಳಾಗಿವೆ. ನಾನೇ ಶವಗಳನ್ನು ಹೂತಿದ್ದೇನೆ ಎಂದು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದಾಗ ನ್ಯಾಯಾಧೀಶರು ತನಿಖೆಗೆ ಆದೇಶಿದರು. ಬಳಿಕ ಸರ್ಕಾರ ಎಸ್‌ಐಟಿ ರಚಿಸಿತು. 13 ಕಡೆ ಹೆಣ ಹೂತಿದ್ದೆ ಎಂದು ಹೇಳಿದವನು ಬಳಿಕ 15 ಕಡೆ ಎಂದು ಹೇಳಿದ. ಒಂದು ಕಡೆ ಮಾತ್ರ ಮೂಳೆ ಸಿಕ್ಕಿತು. ವಿಧಾನ ಮಂಡಲ ಅಧಿವೇಶನದಲ್ಲೂ ಇದು ಪ್ರಸ್ತಾಪವಾಯಿತು. ಸ್ಪಷ್ಟತೆ ಬರಬೇಕು ಎಂದು ತನಿಖೆ ನಡೆಸಲಾಯಿತು ಎಂದು ಹೇಳಿದರು.
ಧರ್ಮಸ್ಥಳಕ್ಕೆ ಹೋಗ್ತಾರೆ: ಧರ್ಮಸ್ಥಳದ ಮಂಜುನಾಥನಿಗೆ ರಾಜ್ಯವಲ್ಲದೇ ಹೊರ ರಾಜ್ಯದಲ್ಲೂ ಭಕ್ತರಿದ್ದಾರೆ. ಬಿಜೆಪಿಗಿಂತ ಹೆಚ್ಚು ಕಾಂಗ್ರೆಸ್‌ನವರು ಧರ್ಮಸ್ಥಳಕ್ಕೆ ಹೋಗ್ತಾರೆ. ಆರೋಪದ ವಾಸ್ತವಾಂಶ ಹೊರಬರಲಿ ಎಂದು ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಧರ್ಮಸ್ಥಳ ಬುರುಡೆ ಕೇಸ್ ವಿಚಾರವಾಗಿ ಪ್ರತಿಕ್ರಿಯಿಸಿ, ಹಿಂದೂಗಳೇ ಕೆಲವರು ಧರ್ಮಸ್ಥಳದ ವಿರುದ್ಧ ಮಾತನಾಡುತ್ತಿದ್ದರು. ಈಗ ಒಬ್ಬ ಮುಸುಕುಧಾರಿ ಹೆಣಗಳನ್ನು ಹೂತಿಟ್ಟಿದ್ದೇನೆ ಅಂತ ಬಂದಿದ್ದಾನೆ. ಈ ಹಿನ್ನೆಲೆಯಲ್ಲಿ ಇದಕ್ಕೊಂದು ಸ್ಪಷ್ಟ ಚಿತ್ರಣ ಬರಲಿ ಅಂತ ನಮ್ಮ ಸರ್ಕಾರ ಎಸ್ಐಟಿ ತನಿಖೆ ಮಾಡುತ್ತಿದೆ. ಈ ಅಪಪ್ರಚಾರಗಳಿಗೆ ಅಂತ್ಯ ಹಾಡೋದಕ್ಕೆ ತನಿಖೆ ಆಗುತ್ತಿದೆ ಎಂದರು. ನಮಗೂ ಮಂಜುನಾಥನ ಮೇಲೆ ಭಕ್ತಿ ಇದೆ. ಏನೂ ಸಿಗಲಿಲ್ಲ ಅಂದರೆ ಅನಾಮಿಕ ವ್ಯಕ್ತಿ ಮೇಲೂ ಕೇಸ್ ಮಾಡುತ್ತೀವಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.