ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲೇ ರಾಮ ಮಂದಿರ ಇತ್ತು: ಸಚಿವ ನಾಗೇಂದ್ರ

By Kannadaprabha News  |  First Published Jan 14, 2024, 8:20 AM IST

ರಾಮ ಮಂದಿರ ಬಿಜೆಪಿಗರ ಸ್ವತ್ತಲ್ಲ. ರಾಮನ ಹೆಸರಿನಲ್ಲಿ ಕೋಮುವಾದ, ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ತಪ್ಪು. ರಾಮ ದೇಶ, ಪ್ರಪಂಚದ ಆಸ್ತಿ, ನಾನು ವಾಲ್ಮೀಕಿ ಸಮಾಜದ ವ್ಯಕ್ತಿ. ಆಗಿನ ಕಾಲದ ರಾಮ ನಮಗೆ ಬೇಕು ಎಂದ ಸಚಿವ ನಾಗೇಂದ್ರ 


ಮಂಗಳೂರು(ಜ.14):  ಶ್ರೀರಾಮ ಎಲ್ಲ ಭಾರತೀಯರ ದೇವರು. ರಾಮ ಮಂದಿರ ನಿರ್ಮಾಣ ನೆಹರೂ ಪ್ರಧಾನಿ ವೇಳೆ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿತ್ತು. ಈಗ ರಾಮನನ್ನು ಬಿಜೆಪಿ ರಾಜಕೀಯಗೊಳಿಸಲು ಹೊರಟಿದೆ ಎಂದು ರಾಜ್ಯ ಯುವ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ನಾಗೇಂದ್ರ ಹೇಳಿದ್ದಾರೆ.

ಮಂಗಳೂರಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕೂಡ ಚಿಕ್ಕಂದಿನಲ್ಲಿ ರಾಮ ಭಜನೆ ಮಾಡುತ್ತಾ ಬೆಳೆದವ. ಆದರೆ ಕಾಂಗ್ರೆಸಿಗರಿಗೆ ಕೋಮು ಭಾವನೆಯ ರಾಮ ಬೇಡ, ರಾಮ, ಸೀತೆ, ಲಕ್ಷ್ಮಣ, ಭರತ, ಅಳಿಲು ಸೇವೆ ಮಾಡಿದ ಜಾಂಬವ ಹೀಗೆ ಎಲ್ಲರೂ ಇದ್ದ ರಾಮ ನಮಗೆ ಬೇಕು. ರಾಮ ಮಂದಿರ ಉದ್ಘಾಟನೆಗೆ ಅವರು ಆಹ್ವಾನ ನೀಡುವುದಿಲ್ಲ ಎಂದಿದ್ದಾರೆ, ಆಹ್ವಾನ ನೀಡಿದರೆ ತೆರಳಿದರೆ ತಪ್ಪೇನಿಲ್ಲ. ರಾಮ ಮಂದಿರ ಬಿಜೆಪಿಗರ ಸ್ವತ್ತಲ್ಲ. ರಾಮನ ಹೆಸರಿನಲ್ಲಿ ಕೋಮುವಾದ, ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ತಪ್ಪು. ರಾಮ ದೇಶ, ಪ್ರಪಂಚದ ಆಸ್ತಿ, ನಾನು ವಾಲ್ಮೀಕಿ ಸಮಾಜದ ವ್ಯಕ್ತಿ. ಆಗಿನ ಕಾಲದ ರಾಮ ನಮಗೆ ಬೇಕು ಎಂದರು.

Tap to resize

Latest Videos

ಅಯೋಧ್ಯೆ-ಭಾರತೀಯರ ಅನೇಕ ವರ್ಷದ ಕನಸು ಸಾಕಾರ: ಡಾ.ವೀರೇಂದ್ರ ಹೆಗ್ಗಡೆ

ಅನಂತ ಕುಮಾರ್‌ ಹೆಗಡೆ ಮಾತಿಗೆ ಕಿಮ್ಮತ್ತಿಲ್ಲ:

ನಾಡಿನ ಪುರಾತನ ಮಸೀದಿಗಳನ್ನು ಒಡೆದು ಅಲ್ಲಿ ದೇವಸ್ಥಾನ ನಿರ್ಮಿಸುತ್ತೇವೆ ಎನ್ನುವ ಕೆನರಾ ಸಂಸದ ಅನಂತ ಕುಮಾರ ಹೆಗಡೆ ಮಾತಿಗೆ ಕಿಮ್ಮತ್ತಿಲ್ಲ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಇಂತಹ ಮಾತುಗಳು ಸಹಜ, ಅದನ್ನು ಪಕ್ಷ ಕೂಡ ಗಂಭೀರ ಪರಿಗಣಿಸಬೇಕಾಗಿಲ್ಲ. ಅವರು ಜಾತಿ, ಧರ್ಮ ಬೇರೆ ಮಾಡಿಯೇ ರಾಜಕಾರಣ ಮಾಡಿದವರು. ಶಾಂತಿ ಕದಡಿ ರಾಜಕೀಯ ಲಾಭ ಪಡೆಯುವ ವ್ಯಕ್ತಿ ಅವರು. ಯಾವುದೇ ಪುಸ್ತಕದಲ್ಲಿ ಮಸೀದಿಗಳು ದೇವಸ್ಥಾನ ಆಗಿತ್ತು ಎಂದು ಉಲ್ಲೇಖ ಇಲ್ಲ. ಅವರಿಗೆ ತಲೆಗೆ ಬಂದಿದ್ದನ್ನು ಹೇಳಿಕೊಂಡು ಹೋಗುತ್ತಾರೆ. ಎಲ್ಲಿಯೂ ಇಲ್ಲದ ವಿಚಾರಗಳನ್ನು ಹೇಳಿಕೊಂಡು ಬರುತ್ತಿದ್ದಾರೆ. ಕಳೆದ ಎರಡ್ಮೂರು ವರ್ಷಗಳಲ್ಲಿ ಎಲ್ಲಿಯೂ ಕಾಣಿಸದ ಅನಂತ ಕುಮಾರ್‌ ಹೆಗಡೆ ಈಗ ಚುನಾವಣೆ ಬರುತ್ತಿದ್ದಂತೆ ಶಾಂತಿ, ಸುವ್ಯವಸ್ಥೆ ಕದಡುವ ಮಾತನ್ನಾಡುತ್ತಿದ್ದಾರೆ. ಸರ್ಕಾರ ಸಮಾಜದ ಶಾಂತಿ ಕದಡಲು ಆಸ್ಪದ ನೀಡುವುದಿಲ್ಲ ಎಂದರು.

ಗೋಪಾಷ್ಟಮಿಗೂ ಕಾಂಗ್ರೆಸ್‌ ನಾಯಕರ ಸಾವಿಗೂ ಯಾವುದೇ ಸಂಬಂಧ ಇಲ್ಲ. ಕಾಗೆ ಕೂರೋದು, ಕೊಂಬೆ ಮುರಿಯೋದು ಎನ್ನುವ ಥರ. ಅದೆಲ್ಲ ಕಾಕತಾಳೀಯ. ಈ ಕುರಿತ ಬಿಜೆಪಿ ನಾಯಕರ ಹೇಳಿಕೆಯನ್ನು ನಂಬಲು ಸಾಧ್ಯವಿಲ್ಲ. ಹಿರಿಯರಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಮತ್ತಿತರ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರಿಗೆ ತಂದೆ ಸಮಾನ. ಅನಂತ ಕುಮಾರ್‌ ಮಾತ್ರವಲ್ಲ ಇಡೀ ಬಿಜೆಪಿಯೇ ಹಾಗೆ. ಅದು ಬಿಜೆಪಿಗರ ಸಂಸ್ಕಾರ, ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಸಚಿವ ನಾಗೇಂದ್ರ ವ್ಯಂಗ್ಯವಾಡಿದರು.

ಮಂಗಳೂರು: ಅಯೋಧ್ಯೆಗೆ ತೆರಳುವ ಮುನ್ನ ಮೂಲ ಮಠ ಕಣ್ವತೀರ್ಥಕ್ಕೆ ಪೇಜಾವರ ಶ್ರೀ ಭೇಟಿ

ಕಾಂಗ್ರೆಸ್‌ಗೆ ಬರುವವರಿಗೆ ಸ್ವಾಗತ:

ಕಾಂಗ್ರೆಸ್‌ನ ತತ್ವ ಸಿದ್ಧಾಂತ ಒಪ್ಪಿಕೊಂಡು ಪಕ್ಷಕ್ಕೆ ಬರುವವರಿಗೆ ಸ್ವಾಗತವಿದೆ. ನಾನು ಜೆಡಿಎಸ್‌ ಮುಖಂಡರ ಮನೆಗೆ ಊಟಕ್ಕೆ ತೆರಳಿದ್ದೇ ವಿನಃ ರಾಜಕೀಯ ಚರ್ಚೆಗೆ ಅಲ್ಲ. ಒಂದೊಂದು ಭಾಗದಲ್ಲಿ ಪಕ್ಷದ ಅದರದ್ದೇ ಆದ ರಾಜಕೀಯ ಶಕ್ತಿ ಇದ್ದು, ಶಕ್ತಿ ತುಂಬುವ ಸಲುವಾಗಿ ಪಕ್ಷಕ್ಕೆ ಸೇರುತ್ತಾರೆ ಎಂದರು.

ಮುಂದೆ ಬಹಳ ಮಂದಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ. ಬಳ್ಳಾರಿಯಲ್ಲಿ ಕಾಂಗ್ರೆಸ್‌ ಕಟ್ಟ ಕಡೆಯ ಕಾರ್ಯಕರ್ತನಿಗೆ ಟಿಕೆಟ್‌ ನೀಡಿದರೂ ನಾವು ಗೆಲ್ಲಿಸಿಕೊಂಡು ಬರುತ್ತೇವೆ. ಇದನ್ನು ನಾವು ಘಂಟಾಘೋಷವಾಗಿ ಹೇಳುತ್ತೇವೆ. ನಮ್ಮಲ್ಲೂ ಸಾಕಷ್ಟು ಮಂದಿ ಲೋಕಸಭಾ ಅಭ್ಯರ್ಥಿಗಳಿದ್ದಾರೆ. ನಮ್ಮಲ್ಲಿ ನಾಯಕರ ಕೊರತೆ ಇಲ್ಲ, ಕೊರತೆ ಇದ್ದರೆ ಮಾತ್ರ ಮಂತ್ರಿಗಳನ್ನು ನಿಲ್ಲಿಸಬೇಕು. ಹೈಕಮಾಂಡ್‌ ಈವರೆಗೆ ನನಗೆ ಸ್ಪರ್ಧಿಸುವ ಬಗ್ಗೆ ಹೇಳಿಲ್ಲ. ಹೇಳಿದರೆ ಖಂಡಿತಾ ಸ್ಪರ್ಧಿಸುತ್ತೇನೆ. ನನಗಿಂತ ಬಹಳ ಶಕ್ತಿಶಾಲಿ ನಾಯಕರು ಪಕ್ಷದಲ್ಲಿದ್ದಾರೆ ಎಂದರು.

click me!