ಕೇಂದ್ರ ಹಾಗೂ ರೈತರ ನಡುವೆ 11 ನೇ ಸುತ್ತಿನ ಮಾತುಕತೆ ನಡೆದಿದೆ. ಆದರೆ ಯಾವುದೇ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ರೈತರು ಇನ್ನೂ ಕನ್ವಿನ್ಸ್ ಆದ ಹಾಗೆ ಕಾಣಿಸುತ್ತಿಲ್ಲ.
ನವದೆಹಲಿ (ಫೆ. 19): 11 ಸುತ್ತಿನ ಮಾತುಕತೆಯನ್ನು ರೈತರ ಜೊತೆ ನಡೆಸಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕಾಗಿ ಅಸ್ಸಾಂಗೆ ಹೋಗಿದ್ದು, ಸದ್ಯಕ್ಕೆ ಮಾತುಕತೆ ನಿಂತಿದೆ. ರೈತರೇನೋ ದಿಲ್ಲಿ ಗಡಿಯಲ್ಲಿ ಕುಳಿತಿದ್ದಾರೆ.
ಆದರೆ ರೈತ ನಾಯಕರು ಪಂಜಾಬ್, ಹರಾರಯಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಹಳ್ಳಿಹಳ್ಳಿ ಓಡಾಡುತ್ತಿದ್ದಾರೆ. ಪಂಜಾಬಿನ ಜಾಟ್ ಸಿಖ್ಖರು ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇನ್ನು ಹರಾರಯಣದ ಜಾಟ್‌ರನ್ನು ತಿರುಗಿಸಲು ಕಾಂಗ್ರೆಸ್‌ನ ಭೂಪಿಂದರ್ ಹೂಡಾ ಓಡಾಡುತ್ತಿದ್ದರೆ, ಪಶ್ಚಿಮ ಉತ್ತರ ಪ್ರದೇಶದ ಜಾಟರನ್ನು ತಿರುಗಿಸಲು ಅಜಿತ್ ಸಿಂಗ್ ಪುತ್ರ ಜಯಂತ್ ಚೌಧರಿ ಓಡಾಡುತ್ತಿದ್ದಾರೆ.
ಅಂದಹಾಗೆ 1979ರಲ್ಲಿ ಇದೇ ಜಯಂತ್ ಚೌಧರಿ ಹುಟ್ಟಿದಾಗ ಅಜ್ಜ ಚೌಧರಿ ಚರಣ್ ಸಿಂಗ್‌ರನ್ನು ಅಭಿನಂದಿಸಲು ಇಂದಿರಾ ಗಾಂಧಿ ಹೋಗಿದ್ದರು. ನಂತರ ಸ್ವಲ್ಪ ದಿನದಲ್ಲೇ ಮೊರಾರ್ಜಿ ದೇಸಾಯಿ ಸರ್ಕಾರ ಉರುಳಿತು. ಇದು ಇತಿಹಾಸ ಬಿಡಿ. ಈಗ ಇಂದಿರಾ ಮತ್ತು ಚರಣ್ ಸಿಂಗ್ ಮೊಮ್ಮಕ್ಕಳು ಅಷ್ಟೊಂದು ಪ್ರಭಾವಿಗಳೂ ಅಲ್ಲ, ರಾಜಕೀಯ ಚತುರತೆಯೂ ಇದ್ದಂತಿಲ್ಲ.
ಲಡಾಖ್‌ನಿಂದ ಚೀನಾ ಸೇನೆ ಹಿಂದೆ ಹೋಗಿದ್ದರ ಗುಟ್ಟೇನು?
ಬಿಜೆಪಿ ಗೇಮ್…ಪ್ಲಾನ್ ಏನು?
ಜಾಟರು ಪ್ರತಿಭಟನೆಯ ಮುಂಚೂಣಿಯಲ್ಲಿರುವುದರಿಂದ ಚಿಂತಿತ ಬಿಜೆಪಿ ಲವ್ ಜಿಹಾದ್ ಕಾರ್ಡ್ ಪ್ಲೇ ಮಾಡಿದೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಜಾಟರ ಹುಡುಗಿಯರನ್ನು ಮುಸ್ಲಿಂ ಹುಡುಗರು ಓಡಿಸಿಕೊಂಡು ಹೋಗಿ ಮದುವೆ ಆಗುವುದು ಧರ್ಮ ಸೂಕ್ಷ್ಮ ವಿಷಯ. ಹೀಗಾಗಿ ಯೋಗಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಇದನ್ನು ಬಳಸಿಕೊಳ್ಳುತ್ತಿದೆ.ಪಂಜಾಬ್ ಬಿಡಿ, ಅಲ್ಲಿ ಬಿಜೆಪಿ ಕಳೆದುಕೊಳ್ಳೋದು ಏನು ಇಲ್ಲ. ಆದರೆ ಹರಾರಯಣದಲ್ಲಿ ಮಾಡೋದೇನು? ಬಿಜೆಪಿ ಇನ್ನೂ ನಿರ್ಧರಿಸಿಲ್ಲ.
ಅಲ್ಲಿ ಚುನಾವಣೆ ಇನ್ನೂ 4 ವರ್ಷ ದೂರ ಇದೆ. ಸದ್ಯಕ್ಕೆ ಸರ್ಕಾರ ಉಳಿದರೆ ಸಾಕು. ಆದರೆ ಮುಂದಿನ ವರ್ಷ ಯುಪಿಯಲ್ಲಿ ಪುನರಪಿ ಗೆಲ್ಲಬೇಕಾದರೆ ಜಾಟರು ಜೊತೆಗೆ ನಿಲ್ಲಲೇಬೇಕು. ಇದಕ್ಕಾಗಿ ಅವರನ್ನು ಓಲೈಸಲು ಕಬ್ಬಿನ ಬೆಲೆ ಜಾಸ್ತಿ ನಿಗದಿ ಆದರೂ ಆಶ್ಚರ್ಯವಿಲ್ಲ. ಅಂದ ಹಾಗೆ ಮೊನ್ನೆ ರಾತ್ರಿಯಷ್ಟೇ ಅಮಿತ್ ಶಾ, ನಡ್ಡಾ ಮತ್ತು ಬಿ.ಎಲ….ಸಂತೋಷ್ ಈ ಎಲ್ಲ ರಾಜ್ಯಗಳ ಜಾಟ್ ನಾಯಕರನ್ನು ಕರೆದು 4 ಗಂಟೆ ಮೀಟಿಂಗ್ ಮಾಡಿದ್ದಾರೆ. ಮೋದಿ ಮತ್ತು ಶಾಗೆ ಎಲ್ಲವೂ ಓಕೆ. ಆದರೆ ಚುನಾವಣಾ ನಷ್ಟನಾಟ್ ಓಕೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ