Siddaramaiah: ಸಿದ್ದುಗೆ ರಾಜ್ಯಸಭೆ ಆಫರ್; ಸಿಎಂ ಸ್ಥಾನಕ್ಕೆ ರಾಜೀನಾಮೆ ಗ್ಯಾರಂಟಿ, ಯತೀಂದ್ರ, ಖರ್ಗೆ ಸೇರಿ ನಾಲ್ವರಿಗೆ ಡಿಸಿಎಂ ಪಟ್ಟ?

Kannadaprabha News   | Kannada Prabha
Published : May 27, 2026, 04:57 AM IST
Siddarammaiah step down as karnataka CM?

ಸಾರಾಂಶ

ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಹೈಕಮಾಂಡ್ ಸಭೆಯಲ್ಲಿ, ರಾಹುಲ್ ಗಾಂಧಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜ್ಯಸಭೆ ಸದಸ್ಯತ್ವದ ಆಹ್ವಾನ ನೀಡಿದ್ದಾರೆ. ಇದನ್ನು ಸಿಎಂ ಹುದ್ದೆಯಿಂದ ನಿರ್ಗಮಿಸುವ ಪರೋಕ್ಷ ಸೂಚನೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಬೆಂಗಳೂರು (ಮೇ.27): ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು ಖುದ್ದು ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಸಭೆ ಸದಸ್ಯರಾಗುವ ಆಹ್ವಾನ ನೀಡಿದ್ದು, ತನ್ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸುವಂತೆ ಪರೋಕ್ಷ ಸೂಚನೆ ನೀಡಿದ್ದಾರೆ.

ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ (ಮೇ 28) ತಮ್ಮ ಸಂಪುಟದ ಎಲ್ಲ ಸಚಿವರಿಗೆ ಉಪಾಹಾರ ಕೂಟಕ್ಕೆ ಆಹ್ವಾನ ನೀಡಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರು ಸಂಪುಟ ಸದಸ್ಯರಿಗೆ ಯಾವ ಸಂದೇಶ ನೀಡುವರು ಹಾಗೂ ಯಾವ ನಿರ್ಧಾರ ಕೈಗೊಳ್ಳುವರು ಎಂಬ ತೀವ್ರ ಕುತೂಹಲ ನಿರ್ಮಾಣವಾಗಿದ್ದು, ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದಂತೆ ಗುರುವಾರ ಮಹತ್ವದ ದಿನವಾಗುವ ಸಂಭವವಿದೆ.

ಕಳೆದು ಆರು ತಿಂಗಳಿನಿಂದ ರಾಜ್ಯ ಕಾಂಗ್ರೆಸ್ಸನ್ನು ಕಾಡುತ್ತಿದ್ದ ಗೊಂದಲಗಳಿಗೆ ಪರಿಹಾರ ಹುಡುಕಲು ದೆಹಲಿಯಲ್ಲಿ ಮಂಗಳವಾರ ವರಿಷ್ಠ ರಾಹುಲ್ ಗಾಂಧಿ ನೇತೃತ್ವದಲ್ಲಿ ಸುಮಾರು ಆರು ತಾಸುಗಳ ಸರಣಿ ಸಭೆ ನಡೆಸಿದ ಕಾಂಗ್ರೆಸ್‌ ಹೈಕಮಾಂಡ್‌ ಈ ರಾಜಕೀಯ ತಿಸ್ರಾ ಪ್ರಯೋಗ ಮಾಡಿದೆ.

ಹಿಂದುಳಿದ ವರ್ಗದ ಮೇರು ನಾಯಕರಾದ ನಿಮ್ಮ ಅಗತ್ಯ ರಾಷ್ಟ್ರ ರಾಜಕಾರಣಕ್ಕೆ ಇದೆ. ಹೀಗಾಗಿ ರಾಜ್ಯಸಭೆ ಸದಸ್ಯರಾಗಿ ಎಂದು ಖುದ್ದು ರಾಹುಲ್‌ ಗಾಂಧಿ ಅವರೇ ಆಫರ್ ನೀಡಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ತಮಗೆ ಆಸಕ್ತಿಯಿಲ್ಲ ಎಂದು ಸಿದ್ದರಾಮಯ್ಯ ನೇರವಾಗಿ ಹೇಳಿದ್ದಾರೆ. ಆದಾಗ್ಯೂ, ಈ ಬಗ್ಗೆ ಮರು ಚಿಂತನೆ ಮಾಡಿ ಎಂದು ಹೈಕಮಾಂಡ್ ಕೋರಿದೆ. ಇದಕ್ಕೆ ಆಪ್ತರೊಂದಿಗೆ ಚರ್ಚಿಸಿ ಎರಡು-ಮೂರು ದಿನದಲ್ಲಿ ತೀರ್ಮಾನ ತಿಳಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಅವರಿಗೆ ರಾಜ್ಯಸಭೆ ಆಫರ್‌ ಎಂಬುದೇ ಮುಖ್ಯಮಂತ್ರಿ ಹುದ್ದೆ ತ್ಯಜಿಸುವಂತೆ ಹೈಕಮಾಂಡ್‌ ನೀಡಿದ ಪರೋಕ್ಷ ಸಂದೇಶ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಈ ಆಫರ್‌ಗೆ ಎರಡು-ಮೂರು ದಿನದಲ್ಲಿ ನಿಲುವು ತಿಳಿಸುವೆ ಎಂದಿರುವ ಸಿದ್ದರಾಮಯ್ಯ ಅವರ ಅಂತಿಮ ಪ್ರತಿಕ್ರಿಯೆ ಏನಾಗಲಿದೆ ಎಂಬ ತೀವ್ರ ಕುತೂಹಲ ಹುಟ್ಟಿಕೊಂಡಿದೆ. ಹೀಗಾಗಿ ಎರಡು-ಮೂರು ದಿನ ಅರ್ಥಾತ್‌ ಮೇ 28ಕ್ಕೆ ಮಹತ್ವದ ಬೆಳವಣಿಗೆಗಳು ನಡೆಯುವ ಸಾಧ್ಯತೆಯಿದೆ.

ಹಲವು ಸುತ್ತಿನ ಸಭೆ:

ಸುಮಾರು ಆರು ತಾಸುಗಳ ಕಾಲ ಹಲವು ಸುತ್ತಿನ ಸಭೆ ನಡೆಸಿದ ನಂತರವೂ ಈ ಸಭೆಗಳ ಮುಖ್ಯ ಉದ್ದೇಶ ರಾಜ್ಯಸಭೆ ಅಭ್ಯರ್ಥಿ ಅಖೈರು ಮಾಡುವುದೇ ಆಗಿತ್ತು. ನಾಯಕತ್ವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಹೇಳಿದರೂ ಅದನ್ನು ನಂಬಲಾಗದಂತಹ ಬೆಳವಣಿಗೆಗಳು ಅನಂತರ ನಡೆದವು.

ಈ ಸಭೆಯಿಂದ ಹೊರ ಬಂದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಂಗಿಕ ಭಾಷೆಯು ಸಭೆಯಲ್ಲಿ ಹೈಕಮಾಂಡ್‌ ನೀಡಿದ ಸೂಚನೆಗಳು ಇಬ್ಬರಿಗೂ ಸಂಪೂರ್ಣ ಸಮಾಧಾನ ಕೊಟ್ಟಿಲ್ಲ ಎಂಬುದನ್ನು ವೇದ್ಯಗೊಳಿಸುವಂತಿತ್ತು.

ಏಕೆಂದರೆ, ಮೂಲವೊಂದರ ಪ್ರಕಾರ, ತಮಗೆ ರಾಜ್ಯಸಭೆಗೆ ಆಫರ್‌ ನೀಡಿದ ನಂತರ ಮುಂದಿನ ಸಿಎಂ ವಿಚಾರವೇನು ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ. ಆಗ ಹೈಕಮಾಂಡ್‌, ಈ ಬಗ್ಗೆ ತಾವು ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದು, ದಲಿತ ಸಿಎಂನಂತಹ ವಿಚಾರಗಳ ಚರ್ಚೆಗೆ ಆಸ್ಪದ ನೀಡಿಲ್ಲ. ಇದೇ ವೇಳೆ, ಸಿದ್ದರಾಮಯ್ಯ ಅವರು ರಾಜ್ಯಸಭೆಗೆ ತೆರಳಿದ ನಂತರ ಡಿ.ಕೆ. ಶಿವಕುಮಾರ್‌ ಅವರೇ ಸಿಎಂ ಆಗುವರೇ ಎಂಬ ಪ್ರಶ್ನೆಗೂ ನೇರ ಉತ್ತರ ನೀಡಿಲ್ಲ.

ಹೀಗಾಗಿ, ಸಿದ್ದರಾಮಯ್ಯ ಅವರು ರಾಜ್ಯಸಭೆ ಆಫರ್‌ ವಿಚಾರದಲ್ಲಿ ಯಾವ ನಿಲುವು ಪ್ರಕಟಿಸುವರು ಎಂಬದರ ಆಧಾರದ ಮೇಲೆ ಮುಂದಿನ ಬೆಳವಣಿಗೆಗಳು ನಡೆಯಲಿವೆ. ಆ ಹಂತ ದಾಟುವವರೆಗೂ ಮುಂದಿನ ಸಿಎಂ ಇಂತಹವರೇ ಎಂಬುದನ್ನು ಸ್ಪಷ್ಟಪಡಿಸುವ ಇರಾದೆಯನ್ನು ಹೈಕಮಾಂಡ್‌ ಈ ಸಭೆಯಲ್ಲಿ ವ್ಯಕ್ತಪಡಿಸಿಲ್ಲ ಎನ್ನಲಾಗುತ್ತಿದೆ.

ಆದರೆ, ಸಿದ್ದರಾಮಯ್ಯ ಅವರಿಗೆ ರಾಜ್ಯಸಭೆ ಆಫರ್‌, ದಲಿತ ಸಿಎಂ ವಿಚಾರ ಚರ್ಚೆಗೆ ಆಸ್ಪದ ನೀಡದೆ ಇರುವ ಹೈಕಮಾಂಡ್‌ ಧೋರಣೆಯು ಸ್ಪಷ್ಟವಾಗಿ ಡಿ.ಕೆ. ಶಿವಕುಮಾರ್‌ ಅವರ ಒಪ್ಪಂದ ಪಾಲನೆಯಾಗಬೇಕು ಎಂಬ ನಿಲುವಿಗೆ ಪೂರಕವಾಗಿದೆ ಎಂದೇ ಶಿವಕುಮಾರ್‌ ಬಣ ವ್ಯಾಖ್ಯಾನಿಸುತ್ತಿದೆ.

ಇನ್ನು ಸಿದ್ದರಾಮಯ್ಯ ಅವರು ರಾಜ್ಯಸಭೆ ಸದಸ್ಯ ಸ್ಥಾನವನ್ನು ಯಾವ ಕಾರಣಕ್ಕೂ ಒಪ್ಪುವುದಿಲ್ಲ. ಪರೋಕ್ಷ ಸೂಚನೆಯಾಗಿರುವ ಸಿಎಂ ಹುದ್ದೆ ತ್ಯಜಿಸಲು ಮುಂದಾದರೂ ರಾಷ್ಟ್ರ ರಾಜಕಾರಣಕ್ಕೆ ತೆರಳದೆ ಸಕ್ರಿಯ ರಾಜಕಾರಣದಿಂದ ತಟಸ್ಥರಾಗುವ ಸಂದೇಶವನ್ನು ಹೈಕಮಾಂಡ್‌ಗೆ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಹೀಗಾದಲ್ಲಿ ಅದನ್ನು ಹೈಕಮಾಂಡ್‌ ಅರಗಿಸಿಕೊಳ್ಳುವುದು ಕಷ್ಟ. ಏಕೆಂದರೆ, ಸಿದ್ದರಾಮಯ್ಯ ಅವರು ಸಕ್ರಿಯ ರಾಜಕಾರಣದಲ್ಲಿ ಇರುವುದಿಲ್ಲ ಎಂದಾದರೆ ಅದು ಹೈಕಮಾಂಡ್‌ ನಿರ್ಧಾರದ ಬಗೆಗಿನ ಅಸಮಾಧಾನ ಎಂದು ಅಹಿಂದ ವರ್ಗಕ್ಕೆ ಸಂದೇಶ ರವಾನೆಯಾಗುತ್ತದೆ. ಇದರಿಂದ ಕಾಂಗ್ರೆಸ್‌ ಪಕ್ಷಕ್ಕೆ ಹಾನಿಯೇ ಹೆಚ್ಚು.

ಹೀಗಾಗಿ, ರಾಜ್ಯಸಭೆ ಹುದ್ದೆ ಒಪ್ಪುವಂತೆ ಹಾಗೂ ಮುಂದಿನ ಸರ್ಕಾರದಲ್ಲಿ ಅವರ ಮಾತಿಗೆ ಹೆಚ್ಚಿನ ಮನ್ನಣೆ ಸಿಗುವಂತಹ ಫಾರ್ಮುಲಾ ನೀಡಿ ಸಿದ್ದರಾಮಯ್ಯ ಅವರನ್ನು ಮನವೊಲಿಸುವ ಮಾರ್ಗ ಅರಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಮತ್ತೊಂದು ಮೂಲಗಳ ಪ್ರಕಾರ, ರಾಹುಲ್ ಗಾಂಧಿಯೇ ನೇರವಾಗಿ ಈ ಸಂದೇಶ ನೀಡಿರುವ ಕಾರಣ ಹೆಚ್ಚಿನ ಬೆಳವಣಿಗೆಗಳಿಗೆ ಅವಕಾಶ ನೀಡದೇ ಸಿದ್ದರಾಮಯ್ಯ ಅವರು ಹೈಕಮಾಂಡ್‌ ನಿರ್ದೇಶನ ಪಾಲಿಸುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಒಟ್ಟಾರೆ ಮುಂದಿನ ಎರಡು ದಿನಗಳ ಕಾಲ ತೀವ್ರ ರಾಜಕೀಯ ಬೆಳವಣಿಗೆಗಳು ನಡೆಯುವ ಸಂಭವವೇ ಹೆಚ್ಚು.

ಸಭೆಯಲ್ಲಿ ನಡೆದಿದ್ದೇನು?

- ಹಿಂದುಳಿದ ವರ್ಗಗಳ ಮೇರುನಾಯಕರಾಗಿರುವ ನೀವು ರಾಷ್ಟ್ರ ರಾಜಕಾರಣಕ್ಕೆ ಬರಬೇಕು ಎಂದು ರಾಹುಲ್‌ ಸಲಹೆ

- ರಾಜ್ಯಸಭೆ ಸದಸ್ಯರಾಗುವಂತೆ ರಾಹುಲ್‌ ಗಾಂಧಿ ಆಫರ್‌. ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ ಎಂದು ಸಿದ್ದು ಸ್ಪಷ್ಟನೆ

- ಮರುಚಿಂತನೆ ಮಾಡುವಂತೆ ಹೈಕಮಾಂಡ್‌ ನಾಯಕರ ಕೋರಿಕೆ. 2-3 ದಿನದಲ್ಲಿ ಹೇಳುವುದಾಗಿ ಸಿಎಂ ಭರವಸೆ

- ರಾಜ್ಯಸಭೆ ಆಫರ್‌ ಎಂದರೆ ಸಿಎಂ ಹುದ್ದೆ ತ್ಯಜಿಸುವಂತೆ ಸಿದ್ದರಾಮಯ್ಯ ಅವರಿಗೆ ನೀಡಿದ ಸೂಚನೆ ಎಂದು ವ್ಯಾಖ್ಯಾನ

- ಸಿದ್ದರಾಮಯ್ಯ ಮುಂದೇನು ಮಾಡುತ್ತಾರೆ ಎಂಬುದು ಸದ್ಯದ ಕುತೂಹಲ. ಮೇ 28ರಂದು ಮಹತ್ವದ ಬೆಳವಣಿಗೆ ಸಾಧ್ಯತೆ

ಸಿದ್ದು ಮುಂದೇನು?

1. ರಾಜ್ಯಸಭಾ ಸದಸ್ಯತ್ವವನ್ನು ಒಪ್ಪದೆ ಸಿದ್ದರಾಮಯ್ಯ ತಟಸ್ಥವಾಗಿ ಉಳಿದುಬಿಡಬಹುದು

2. ಅಂತಹ ಸಂದರ್ಭದಲ್ಲಿ ಅವರನ್ನು ಒಪ್ಪಿಸಲು ಹೈಕಮಾಂಡ್‌ ಹೊಸ ಸೂತ್ರ ರಚಿಸಬಹುದು

3. ರಾಹುಲ್‌ ಗಾಂಧಿ ಅವರೇ ಸೂಚಿಸಿರುವ ಕಾರಣ ಹೈಕಮಾಂಡ್‌ ನಿರ್ಧಾರ ಪಾಲಿಸಬಹುದು

ದಿಲ್ಲಿಯಲ್ಲಿ ಆಗಿದ್ದೇನು?

ಬೆಳಗ್ಗೆ 11.05: ದೆಹಲಿಯ ಇಂದಿರಾ ಭವನಕ್ಕೆ ಸಿದ್ದರಾಮಯ್ಯ, ಡಿಕೆಶಿ ಭೇಟಿ. ಪರಸ್ಪರ ಚರ್ಚೆ

ಬೆಳಗ್ಗೆ 11.20: ಮೊದಲು ವೇಣುಗೋಪಾಲ್‌ ಬಳಿಕ ಖರ್ಗೆ, ರಾಹುಲ್‌ ಗಾಂಧಿ ಆಗಮನ

ಬೆಳಗ್ಗೆ 11.30: ಸಭೆ ಆರಂಭ. ಸಿದ್ದರಾಮಯ್ಯ ಜತೆ ಹೈಕಮಾಂಡ್‌ 50 ನಿಮಿಷ ಮಾತುಕತೆ

ಮಧ್ಯಾಹ್ನ 3.30: ಸೋನಿಯಾ ಜತೆ ಸಮಾಲೋಚನೆ ನಡೆಸಲು ರಾಹುಲ್‌ ನಿರ್ಗಮನ

ಸಂಜೆ 4.20: ಇಂದಿರಾ ಭವನಕ್ಕೆ ರಾಹುಲ್‌ ವಾಪಸ್‌. ಖರ್ಗೆ ಜತೆ ಮಾತುಕತೆ

ಸಂಜೆ 5.50: ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಜತೆ ಮಹತ್ವದ ಸಮಾಲೋಚನೆ

ಸಂಜೆ 5.45: ಸಭೆ ಅಂತ್ಯ. ಬಳಿಕ ಇಬ್ಬರೂ ನಾಯಕರ ಜತೆ ಸುದ್ದಿಗಾರರ ಭೇಟಿಯಾದ ವೇಣು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Siddaramaiah Vs DKS: ದೆಹಲಿ ಹೈವೋಲ್ಟೇಜ್‌ ಸಭೆ ಬಳಿಕ ಕಾಂಗ್ರೆಸ್‌ ಪವರ್ ಪಾಲಿಟಿಕ್ಸ್ ರಾಜ್ಯಕ್ಕೆ ಶಿಫ್ಟ್‌, ನಿನ್ನೆ ಏನೇನಾಯ್ತು?
'ದೆಹಲಿಗೆ ಅಲ್ಲ, ಅಮೆರಿಕಕ್ಕೆ ಹೋಗ್ತಾ ಇದ್ದೇನೆ..' ರಾಜಕೀಯ ಗೊಂದಲದ ಮಧ್ಯೆ ರಾಜಣ್ಣ ಹೊಸ ಬಾಂಬ್!