Rajya Sabha Election ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಆಸ್ತಿ 817 ಕೋಟಿ!

By Kannadaprabha News  |  First Published Jun 1, 2022, 2:06 AM IST

- ರಾಜ್ಯಸಭೆ: ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ನಾಮಪತ್ರ
- ರಾಜ್ಯಸಭೆ ಅಭ್ಯರ್ಥಿ ಬಳಿ ಕೃಷಿ ಭೂಮಿ ಇಲ್ಲ
- ಬೇರೆ ಪಕ್ಷಗಳಿಂದ ಹೆಚ್ಚುವರಿ ಮತ ದೊರಕಿದರಷ್ಟೇ ಗೆಲುವು ಸಾಧ್ಯತೆ


ಬೆಂಗಳೂರು(ಜೂ.01): ವಿಧಾನಸಭೆಯಿಂದ ರಾಜ್ಯಸಭೆ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕುಪೇಂದ್ರ ರೆಡ್ಡಿ ಅವರು 817.02 ಕೋಟಿ ರು. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಮಂಗಳವಾರ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.

ಕುಪೇಂದ್ರ ರೆಡ್ಡಿ ಅವರ ಹೆಸರಲ್ಲಿ 353.42 ಕೋಟಿ ರು. ಚರಾಸ್ತಿ ಮತ್ತು 222.47 ಕೋಟಿ ರು. ಸ್ಥಿರಾಸ್ತಿ ಇದೆ. ಪತ್ನಿ ಆರ್‌.ಪುಷ್ಪಾವತಿ ಹೆಸರಲ್ಲಿ ಚರಾಸ್ತಿ 63.04 ಕೋಟಿ ರು. ಮತ್ತು 177.44 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. 1.74 ಕೋಟಿ ರು. ಮೌಲ್ಯದ ಚಿನ್ನಾಭರಣವು ಕುಪೇಂದ್ರ ರೆಡ್ಡಿ ಬಳಿ ಇದ್ದರೆ, 3.51 ಕೋಟಿ ರು. ಮೌಲ್ಯದ ಚಿನ್ನಾಭರಣ ಪತ್ನಿ ಬಳಿ ಇದೆ. ಕುಪೇಂದ್ರ ರೆಡ್ಡಿ 67.29 ಕೋಟಿ ರು. ಸಾಲ ಹೊಂದಿದ್ದು, ಪತ್ನಿ ಹೆಸರಲ್ಲಿ 41.96 ಕೋಟಿ ರು. ಸಾಲ ಇದೆ. ನಗದು ಕುಪೇಂದ್ರ ರೆಡ್ಡಿ ಅವರ ಬಳಿ 21,12,381 ರು. ಇದ್ದರೆ, ಪತ್ನಿ ಹತ್ತಿರ 43,41,108 ರು. ಇದೆ. ಅವಿಭಜಿತ ಕುಟುಂಬ ಚರಾಸ್ತಿಯು 70,81,158 ರು. ಇದೆ ಎಂದು ಅಸ್ತಿ ವಿವರದಲ್ಲಿ ಉಲ್ಲೇಖಿಸಲಾಗಿದೆ.

Tap to resize

Latest Videos

ರಾಜ್ಯಸಭಾ ಎಲೆಕ್ಷನ್: ಜೆಡಿಎಸ್‌ ವಿರುದ್ಧ ಅಲ್ಪಸಂಖ್ಯಾತ ಕಾರ್ಡ್‌ ಪ್ಲೇ ಮಾಡಿದ ಸಿದ್ದರಾಮಯ್ಯ

ಯಾವುದೇ ಕೃಷಿ ಭೂಮಿಯನ್ನು ಹೊಂದಿರದ ಕುಪೇಂದ್ರ ರೆಡ್ಡಿ ಅವರು, 20.19 ಕೋಟಿ ರು. ಮೌಲ್ಯದ ಕೃಷಿಯೇತರ ಭೂಮಿಯನ್ನು ಹೊಂದಿದ್ದಾರೆ. ವಿವಿಧೆಡೆ 92 ಕೋಟಿ ರು. ಮೌಲ್ಯದ ವಾಣಿಜ್ಯ ಕಟ್ಟಡಗಳಿವೆ. ಪತ್ನಿ ಹೆಸರಲ್ಲಿ 25.71 ಕೋಟಿ ರು. ಮೌಲ್ಯದ ಕೃಷಿ ಭೂಮಿ ಮತ್ತು 113 ಕೋಟಿ ರು. ಮೌಲ್ಯದ ಕೃಷಿಯೇತರ ಜಮೀನು ಇದೆ. 5.32 ಕೋಟಿ ರು. ಮೌಲ್ಯದ ವಾಣಿಜ್ಯ ಕಟ್ಟಡಗಳಿವೆ ಎಂದು ನಮೂದಿಸಲಾಗಿದೆ.

ಮಂಗಳವಾರ ವಿಧಾನಸೌಧದಲ್ಲಿ ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಶಾಸಕರಾದ ಎ.ಟಿ.ರಾಮಸ್ವಾಮಿ, ತಿಪ್ಪೇಸ್ವಾಮಿ ಇತರರು ಉಪಸ್ಥಿತರಿದ್ದರು. ಕುಪೇಂದ್ರರೆಡ್ಡಿ ಅವರಿಗೆ 10 ಶಾಸಕರು ಸೂಚಕರಾಗಿ ಸಹಿ ಮಾಡಿದ್ದು, ಎಚ್‌.ಡಿ.ರೇವಣ್ಣ, ಎಂ.ವಿ.ವೀರಭದ್ರಯ್ಯ, ನಾಗನಗೌಡ ಕುಂದಕೂರ, ವೆಂಕಟರಾವ್‌ ನಾಡಗೌಡ, ಎ.ಟಿ.ರಾಮಸ್ವಾಮಿ, ಎಚ್‌.ಕೆ.ಕುಮಾರಸ್ವಾಮಿ, ಕೆ.ಎಸ್‌.ಲಿಂಗೇಶ್‌, ಬಂಡೆಪ್ಪ ಕಾಶೆಂಪೂರ, ಎಂ.ಶ್ರೀನಿವಾಸ, ರಾಜಾ ವೆಂಕಟಪ್ಪ ನಾಯಕ್‌ ಅವರು ಸೂಚಕರಾಗಿ ಸಹಿ ಮಾಡಿದ್ದಾರೆ. ಕುಪೇಂದ್ರ ರೆಡ್ಡಿ ಅವರು ಎರಡನೇ ಬಾರಿಗೆ ರಾಜ್ಯಸಭೆ ಪ್ರವೇಶಿಸುವುದಕ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ಆದರೆ ಅಗತ್ಯ ಮತಗಳ ಕೊರತೆ ಅಡ್ಡಿಯಾಗಿದೆ. ಕಾಂಗ್ರೆಸ್‌ ಪಕ್ಷವು ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಆ ಪಕ್ಷವು ಸಹಕಾರ ನೀಡುವ ಆಶ್ವಾಸನೆಯೂ ಇಲ್ಲದಂತಾಗಿದೆ. ಶುಕ್ರವಾರ ನಾಮಪತ್ರಗಳನ್ನು ವಾಪಸ್‌ ಪಡೆಯಲು ಕೊನೆಯ ದಿನವಾಗಿದ್ದು, ಶುಕ್ರವಾರದವರೆಗೆ ರಾಜಕೀಯ ತಂತ್ರಗಾರಿಕೆಯಲ್ಲಿ ಸಫಲತೆ ಕಂಡುಬಂದರೆ ಮಾತ್ರ ಕುಪೇಂದ್ರ ರೆಡ್ಡಿ ರಾಜ್ಯಸಭೆ ಪ್ರವೇಶಿಸುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ಕಷ್ಟಕರವಾಗಲಿದೆ ಎನ್ನಲಾಗಿದೆ.

ರಾಜ್ಯಸಭಾ ಚುನಾವಣಾ ಕಣಕ್ಕೆ 6 ಅಭ್ಯರ್ಥಿಗಳು; ಲೆಕ್ಕಾಚಾರ ಉಲ್ಟಾ ಮಾಡಿದ ಸಿದ್ದರಾಮಯ್ಯ!

ಈ ಮೊದಲು ಸಹ ರಾಜ್ಯಸಭೆ ಸದಸ್ಯರಾಗಿ ಕೆಲಸ ಮಾಡಿದ ಅನುಭವ ಇದೆ. ಇತ್ತೀಚೆಗೆ ನಡೆದ ವಿಧಾನಪರಿಷತ್‌ ಚುನಾವಣೆಗೂ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಮೇಲ್ಮನೆಗೆ ಹೋಗಲು ಕುಪೇಂದ್ರರೆಡ್ಡಿ ಅವರು ಬಯಸಿದ್ದರು. ಆದರೆ, ಜೆಡಿಎಸ್‌ನಲ್ಲಿ ತೀವ್ರ ಪೈಪೋಟಿ ಇದ್ದ ಕಾರಣ ವಿಧಾನಪರಿಷತ್‌ಗೆ ಸ್ಪರ್ಧಿಸಲು ಟಿಕೆಟ್‌ ಸಿಗಲಿಲ್ಲ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಸೇರಿದಂತೆ ಇತರರು ಮನವೊಲಿಸಿ ರಾಜ್ಯಸಭೆ ಚುನಾವಣೆಗೆ ಕಣಕ್ಕಿಳಿಸುವ ಕುರಿತು ಭರವಸೆ ನೀಡಿದ್ದರು. ಅಂತೆಯೇ ಈಗ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ನೀಡಿದ್ದರಿಂದ ನಾಮಪತ್ರ ಸಲ್ಲಿಸಿದ್ದಾರೆ.

click me!