ಇನ್ನು ಮುಂದೆ ಕಾಂಗ್ರೆಸ್ ಮತ್ತು ಆ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತತೆ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಬೆಂಗಳೂರು (ಜೂ.11): ಇನ್ನು ಮುಂದೆ ಕಾಂಗ್ರೆಸ್ ಮತ್ತು ಆ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತತೆ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ. ಅಲ್ಲದೆ, ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಮ್ ಎಂದು ಕರೆಯುವಂತಿಲ್ಲ. ಬಿಜೆಪಿಯ ಬಿ ಟೀಮ್ ಕಾಂಗ್ರೆಸ್ ಪಕ್ಷ ಎಂದೂ ಅವರು ಆಪಾದಿಸಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ.
ಬಿಜೆಪಿಗಿಂತ ಕಾಂಗ್ರೆಸ್ ಪಕ್ಷದವರೇನು ಕಡಿಮೆ ಇಲ್ಲ. ಇವರಿಗೆ ಸಂವಿಧಾನದ ಮೇಲೆ ನಂಬಿಕೆಯಿಲ್ಲ. ಬಿಜೆಪಿ ನಾಯಕರು ಮಾಡುವ ಕೆಲಸಗಳನ್ನು ಇವರು ಕೂಡ ಮಾಡುತ್ತಿದ್ದಾರೆ. ಹಾಗಾದರೆ ಇವರಿಗೆ ಬಿಜೆಪಿಯನ್ನು ಟೀಕಿಸುವ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನಾಯಕರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಹಠಕ್ಕೆ ಬಿದ್ದಿದ್ದಾರೆ. ಶ್ರೀನಿವಾಸ ಗೌಡರ ಮತದಿಂದ ಕಾಂಗ್ರೆಸ್‌ನವರು ಗೆದ್ದರೆ ಸಂತೋಷ. ಆದರೆ ಇದು ಬಿಜೆಪಿ ಗೆಲ್ಲಿಸುವ ಆಟ. ಬಿಜೆಪಿಯನ್ನು ಗೆಲ್ಲಿಸಿ ಯಾವ ಮುಖ ಇಟ್ಟುಕೊಂಡು ಕ್ಷೇತ್ರಕ್ಕೆ ಹೋಗುತ್ತಾರೆ. ನಿಮ್ಮ ಬೆಂಬಲ ಇಲ್ಲ ಅಂದರೂ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಎದುರಿಸುವ ಶಕ್ತಿ ನಮ್ಮ ಕಾರ್ಯಕರ್ತರಿಗಿದೆ ಎಂದು ಹೇಳಿದರು.
ಸಿದ್ದರಾಮಯ್ಯಗೆ ತಿರಗೇಟು ಕೊಡಲು ಎಚ್‌ಡಿಕೆಗೆ ಸಿಕ್ತು ಅಸ್ತ್ರ!
ಹಿಂದೆ ಫಾರೂಕ್ ಅವರು ರಾಜ್ಯಸಭೆ ಚುನಾವಣೆಗೆ ನಿಂತಾಗ ನಮ್ಮ ಪಕ್ಷದ ಎಂಟು ಶಾಸಕರು ಅಡ್ಡ ಮತದಾನ ಮಾಡಿದ್ದರು. ನಂತರ ಆ ಚುನಾವಣೆಯಲ್ಲಿ ಗೆದ್ದ ಕೆ.ಸಿ.ರಾಮಮೂರ್ತಿ ಅವರು ಬಿಜೆಪಿಗೆ ಹೋದರು. ಆಗ ಅಡ್ಡಮತ ಮಾಡಿಸಿ ಕಾಂಗ್ರೆಸ್ ಗಳಿಸಿದ್ದೇನು? ಎಂದರು. ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರಿಂದ ಅಡ್ಡ ಮತದಾನ ಮಾಡಿಸಿ ಕಾಂಗ್ರೆಸ್ ಪಕ್ಷ ಸಾಧಿಸಿದ್ದೇನು? ಬಿಜೆಪಿ ಅಭ್ಯರ್ಥಿಯನ್ನು ಹಠಕ್ಕೆ ಬಿದ್ದು ಗೆಲ್ಲಿಸಿದ್ದಾರೆ. ಯಾರ ಬೆಂಬಲವಿಲ್ಲದಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್ಸನ್ನು ಎದುರಿಸಲು ನಾವು ಶಕ್ತರಿದ್ದೇವೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಸಿದ್ದರಾಮಯ್ಯ ಹೇಳುತ್ತಿದ್ದ ಆತ್ಮಸಾಕ್ಷಿ ಹಾಗೂ ಪ್ರಜಾಪ್ರಭುತ್ವ, ಜಾತ್ಯತೀತತೆ ಎಂದರೆ ಇದೇನಾ? ಇನ್ನೊಂದು ಪಕ್ಷದಿಂದ ಗೆದ್ದವರನ್ನ ಹೈಜಾಕ್ ಮಾಡಿ ಇಂತಹ ಕೀಳುಮಟ್ಟದ ರಾಜಕಾರಣ ಮಾಡುವುದು ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವವಾ? 2016ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಎಂಟು ಜನ ಶಾಸಕರನ್ನು ಅಪಹರಿಸಿ ಅಡ್ಡಮತದಾನ ಮಾಡಿಸಿದರು. ಈಗಲೂ ಆ ಸಂಸ್ಕೃತಿಯನ್ನು ಮುಂದುವರೆಸಿರುವ ಇವರು ಪ್ರಜಾಪ್ರಭುತ್ವ ಉಳಿಸುತ್ತಾರಾ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಅಡ್ಡಮತದಾನ: ಸ್ವಪಕ್ಷ ಶಾಸಕ ಗುಬ್ಬಿ ಶ್ರೀನಿವಾಸ್‌ಗೆ ಬಿಸಿ ಮುಟ್ಟಿಸಿಲು ಮುಂದಾದ ಜೆಡಿಎಸ್...!
ಈಗ ಎಲ್ಲರೂ ಮತದಾನ ಮಾಡಿದ್ದರೂ ಸಿದ್ದರಾಮಯ್ಯ ಅವರ 10-12 ಶಾಸಕರನ್ನು ಮತದಾನ ಮಾಡಿಸದೆ ಕಾಯಿಸುತ್ತಿದ್ದಾರೆ. ಒಂದು ವೇಳೆ ಜೆಡಿಎಸ್‌ನವರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿಬಿಟ್ಟರೆ ಬಿಜೆಪಿ ಅಭ್ಯರ್ಥಿ ಸೋತು ಬಿಡುತ್ತಾರೆ. ಕೊನೆ ಕ್ಷಣದಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಬೇಕು ಎಂದು ಕೆಲವರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.