Rajya Sabha Election: ಜೆಡಿಎಸ್ಸಿಂದ ಗೆದ್ದಿದ್ದೇನೆ, ಜೆಡಿಎಸ್‌ಗೇ ವೋಟ್‌ ಹಾಕಿದ್ದೇನೆ: ಶಿವಲಿಂಗೇಗೌಡ

By Govindaraj SFirst Published Jun 11, 2022, 3:15 AM IST
Highlights

ನಾನು ಯಾವ ಅಡ್ಡ ಮತದಾನವನ್ನೂ ಮಾಡಿಲ್ಲ, ಉದ್ದ ಮತದಾನವನ್ನೂ ಮಾಡಿಲ್ಲ. ಜೆಡಿಎಸ್‌ ಬಿ-ಫಾರಂನಲ್ಲಿ ಚುನಾವಣೆ ಗೆದ್ದಿರುವುದರಿಂದ ಕ್ಷೇತ್ರದ ಜನರ ಭಾವನೆಗೆ ಬೆಲೆ ನೀಡಿ ಜೆಡಿಎಸ್‌ ಪಕ್ಷಕ್ಕೆ ಮತ ನೀಡಿದ್ದೇನೆ ಎಂದು ಜೆಡಿಎಸ್‌ನ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ. 

ಬೆಂಗಳೂರು (ಜೂ.11): ನಾನು ಯಾವ ಅಡ್ಡ ಮತದಾನವನ್ನೂ ಮಾಡಿಲ್ಲ, ಉದ್ದ ಮತದಾನವನ್ನೂ ಮಾಡಿಲ್ಲ. ಜೆಡಿಎಸ್‌ ಬಿ-ಫಾರಂನಲ್ಲಿ ಚುನಾವಣೆ ಗೆದ್ದಿರುವುದರಿಂದ ಕ್ಷೇತ್ರದ ಜನರ ಭಾವನೆಗೆ ಬೆಲೆ ನೀಡಿ ಜೆಡಿಎಸ್‌ ಪಕ್ಷಕ್ಕೆ ಮತ ನೀಡಿದ್ದೇನೆ ಎಂದು ಜೆಡಿಎಸ್‌ನ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ‘ಆತ್ಮಸಾಕ್ಷಿ ಎಂದರೆ ಏನು? ಜಾತ್ಯತೀತ ತತ್ವ ಪಾಲಿಸಬೇಕು ಎಂಬುದು. ಎರಡೂ ಪಕ್ಷದ ನಾಯಕರು ಮೊದಲೇ ಮಾತನಾಡಿಕೊಂಡು ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾಗಿತ್ತು. ಶಾಸಕರಿಗೆ ಏಕೆ ಈ ಪೀಕಲಾಟ ತರಬೇಕಿತ್ತು?’ ಎಂದು ಪ್ರಶ್ನಿಸಿದರು. 

ಅಸಮಾಧಾನ ಇರುವುದು ನಿಜ: ಜೆಡಿಎಸ್‌ ನಾಯಕರ ಜತೆ ಅಸಮಾಧಾನ ಇರುವುದು ನಿಜ. ಅದನ್ನು ಅವರ ಬಳಿಯೂ ತೋಡಿಕೊಂಡಿದ್ದೇನೆ. ಹಾಗಂತ ಜನರ ಅಭಿಪ್ರಾಯಕ್ಕೆ ಬೆಲೆ ನೀಡದಿರಲು ಆಗಲ್ಲ. ಪ್ರಸ್ತುತ ಜೆಡಿಎಸ್‌ಗೆ ಮತ ಹಾಕಿದ್ದು, ಮುಂದಿನದ್ದು ಮುಂದೆ ನಿರ್ಧಾರ ಮಾಡಲಾಗುವುದು ಎಂದು ಶಿವಲಿಂಗೇಗೌಡ ಹೇಳಿದರು. ಇದು ಜೆಡಿಎಸ್‌ಗೆ ಕೊನೆಯ ಮತವೇ ಎಂಬ ಪ್ರಶ್ನೆಗೆ, ಹಾಗೇಕೆ ಹೇಳುತ್ತೀರಿ. ನಾನು ಇನ್ನೂ ಏನನ್ನೂ ನಿರ್ಧಾರ ಮಾಡಿಲ್ಲ ಎಂದು ಕೋಪದಿಂದ ಉತ್ತರಿಸಿದರು.

Latest Videos

ರಾಜ್ಯಸಭೆ ಚುನಾವಣಾ ಫಲಿತಾಂಶ ಪ್ರಕಟ: ಕಾಂಗ್ರೆಸ್-ಜೆಡಿಎಸ್‌ ಹಗ್ಗಜಗ್ಗಾಟ ನಡುವೆ ಬಿಜೆಪಿಗೆ ಲಾಭ

ಸಿದ್ದರಾಮಯ್ಯ ಅವರು ಆತ್ಮಸಾಕ್ಷಿ ಮತ ಕೇಳಿ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಸಿದ್ದರಾಮಯ್ಯ ಅವರ ಪತ್ರವನ್ನು ಓದಿಲ್ಲ. ಅವರು ಆತ್ಮಸಾಕ್ಷಿಗೆ ಮತ ಹಾಕಿ ಎಂದರೆ ಹಾಕಲಾಗುವುದಿಲ್ಲ. ಕ್ಷೇತ್ರದ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಅವರ ಅಭಿಪ್ರಾಯದಂತೆ ಜೆಡಿಎಸ್‌ ಅಭ್ಯರ್ಥಿಗೆ ಮತ ಹಾಕಿದ್ದೇನೆ. ನನ್ನ ಬಳಿ ಕುಪೇಂದ್ರರೆಡ್ಡಿ ಅವರು ಖುದ್ದು ಮನವಿ ಮಾಡಿದ್ದರು. ಕುಮಾರಸ್ವಾಮಿ ಅವರೂ ದೂರವಾಣಿ ಕರೆ ಮಾಡಿ ಮನವಿ ಮಾಡಿದ್ದರು. ಹೀಗಾಗಿ ಜೆಡಿಎಸ್‌ಗೆ ಮತ ಹಾಕಿದ್ದೇನೆ ಎಂದರು.

ರಾಹುಕಾಲ ಬಳಿಕ ಜೆಡಿಎಸ್‌ ಶಾಸಕರ ಮತದಾನ: ಶುಕ್ರವಾರ ಬೆಳಗ್ಗೆ 9 ಗಂಟೆಗೆ ಮತದಾನ ಆರಂಭಗೊಂಡಿದ್ದು, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಬೆಳಗ್ಗೆ ಮತದಾನ ಮಾಡಿದರು. ಜೆಡಿಎಸ್‌ ಸದಸ್ಯರು ಬಸ್‌ನಲ್ಲಿ ವಿಧಾನಸೌಧಕ್ಕೆ ಬಂದಾಗ ರಾಹುಕಾಲ ಸಮೀಪಿಸಿತ್ತು. ಹೀಗಾಗಿ ರೇವಣ್ಣ ಸಲಹೆ ಮೇರೆಗೆ ವಿಧಾನಸೌಧಕ್ಕೆ ಬಂದ ಶಾಸಕರು ಪಕ್ಷದ ಕಚೇರಿಯಲ್ಲಿ ರಾಹುಕಾಲ ಕಳೆಯುವವರೆಗೆ ಕಾಲ ಕಳೆದರು. ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ರಾಹುಕಾಲ ಇದ್ದು, ಅದು ಮುಗಿದ ಬಳಿಕ ಎಲ್ಲರೂ ಒಟ್ಟಾಗಿ ಬಂದು ಮತ ಚಲಾಯಿಸಿದರು.

ಜೆಡಿಎಸ್‌ ಯುವ ಘಟಕ ಬಲಿಷ್ಠಗೊಳಿಸಲು ಪ್ಲಾನ್, ಸುಳಿವು ಕೊಟ್ಟ ನಿಖಿಲ್

ಎಸ್‌.ಆರ್‌.ಶ್ರೀನಿವಾಸ್‌, ಕೆ.ಎಂ.ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ ಮತ್ತು ಜಿ.ಟಿ.ದೇವೇಗೌಡ ಅವರು ನೇರವಾಗಿ ವಿಧಾನಸೌಧಕ್ಕೆ ಪ್ರತ್ಯೇಕವಾಗಿ ಬಂದರು. ಶ್ರೀನಿವಾಸ ಗೌಡ ಅವರು ಪ್ರತ್ಯೇಕವಾಗಿ ಬಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಚೇರಿಗೆ ತೆರಳಿ ಅಲ್ಲಿಂದ ಮತದಾನ ಕೇಂದ್ರಕ್ಕೆ ಹೋಗಿ ಮತ ಚಲಾಯಿಸಿದರು. ನಂತರ ಮತ್ತೆ ಸಿದ್ದರಾಮಯ್ಯ ಕಚೇರಿಗೆ ತೆರಳಿ ಸ್ವಲ್ಪಕಾಲ ಚರ್ಚೆ ನಡೆಸಿ ನಂತರ ಹಿಂತಿರುಗಿದರು. ಗುಬ್ಬಿಯ ಶ್ರೀನಿವಾಸ ಅವರು ವಿಧಾನಸೌಧಕ್ಕೆ ಬಂದು ನೇರವಾಗಿ ಮತದಾನ ಕೇಂದ್ರಕ್ಕೆ ತೆರಳಿ ಬಿಜೆಪಿಗೆ ಮತ ಹಾಕಿ ಹಿಂತಿರುಗಿದರು.

click me!