ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್‌ ಕುಂತೂರು

By Suvarna News  |  First Published Jul 20, 2022, 6:00 AM IST

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಡುವೆ ಸಮನ್ವಯಕಾರರಾಗಿ ಕಾರ್ಯ ನಿರ್ವಹಿಸಲಿರುವ ರಾಜೇಶ್‌ ಕುಂತೂರು 


ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು(ಜು.20):  ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಬಿಜೆಪಿಯ ಅತ್ಯಂತ ಮಹತ್ವದ ಜವಾಬ್ದಾರಿಗೆ ಕರಾವಳಿ ಮೂಲದವರೊಬ್ಬರು ಆಯ್ಕೆಯಾಗಿದ್ದು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಡುವೆ ಸಮನ್ವಯಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ನಿವಾಸಿ ರಾಜೇಶ್ ಕುಂತೂರು ರಾಜ್ಯ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಈ ವರೆಗೆ ಅರುಣ್ ಕುಮಾರ್ ನಿರ್ವಹಿಸಿದ ಜವಾಬ್ದಾರಿ ಇದೀಗ ರಾಜೇಶ್ ಅವರ ಹೆಗಲ ಮೇಲೇರಿದ್ದು, ಅರುಣ್ ಕುಮಾರ್ ಮತ್ತೆ ಮಾತೃಸಂಸ್ಥೆ ಆರ್‌ಎಸ್‌ಎಸ್‌ಗೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ. 

Tap to resize

Latest Videos

ಸಂಘಟನಾ ಕಾರ್ಯದರ್ಶಿ ಹುದ್ದೆ ಬಿಜೆಪಿಯ ಮಟ್ಟಿಗೆ ಅತ್ಯಂತ ಮಹತ್ವದ ಜವಾಬ್ದಾರಿಯಾಗಿದ್ದು, ಇವರು ಪಕ್ಷ ಮತ್ತು ಸಂಘದ ಮಧ್ಯೆ ಸಮನ್ವಯಕಾರರಾಗಿ ಇರಲಿದ್ದಾರೆ. ಈಗಿನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರೋ ಉಡುಪಿ ಮೂಲದ ಬಿ.ಎಲ್.ಸಂತೋಷ್ ಕೂಡ ಹಲವು ವರ್ಷಗಳ ಹಿಂದೆ ರಾಜ್ಯ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿದ್ದು, ಪಕ್ಷದ ಮೇಲೆ ಗಟ್ಟಿ ಹಿಡಿತದ ಜೊತೆಗೆ ಆರ್‌ಎಸ್‌ಎಸ್‌ ಸೂಚನೆ ಮತ್ತು ಸಲಹೆಗಳನ್ನು ಪಕ್ಷದಲ್ಲಿ ಸ್ಪಷ್ಟವಾಗಿ ಜಾರಿಗೆ ತರುವ ಮೂಲಕ ಕಟ್ಟುನಿಟ್ಟಾಗಿದ್ದರು. ಈ ಜವಾಬ್ದಾರಿ ಆರ್‌ಎಸ್‌ಎಸ್‌ ನೇಮಕವಾದ ಕಾರಣ ಬಹುತೇಕ ಪಕ್ಷದ ಪ್ರಮುಖರು ಇವರ ಸಲಹೆ ಸೂಚನೆಗಳನ್ನು ಪಾಲಿಸುವುದು ವಾಡಿಕೆ. ಇದೀಗ ಬಿ‌.ಎಲ್‌.ಸಂತೋಷ್ ಬಳಿಕ ಮತ್ತೊಬ್ಬ ಕರಾವಳಿಗನಿಗೆ ಈ ಜವಾಬ್ದಾರಿ ಹೆಗಲೇರಿದೆ.

ಚಿಂತನ ಸಭೆಯಲ್ಲಿ ಹಿರಿಯ ನಾಯಕರು ಗರಂ: ಭಾರೀ ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಾ ಬಿಜೆಪಿ?

ಯಾರು ಈ ರಾಜೇಶ್ ಕುಂತೂರು?

ಅಂದ ಹಾಗೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಜವಾಬ್ದಾರಿ ಪಡೆಯುವವರಿಗೆ ಯಾವುದೇ ರಾಜಕೀಯ ಹಿನ್ನೆಲೆ ಇರುವುದಿಲ್ಲ. ಆದರೆ ಆರ್‌ಎಸ್‌ಎಸ್‌ ಜೊತೆ ನಿಕಟ ನಂಟಿರುವ ಮತ್ತು ಪೂರ್ಣಾವಧಿ ಜವಾಬ್ದಾರಿ ಇರುವವರನ್ನು ಈ ಹುದ್ದೆಗೆ ನೇಮಿಸಲಾಗುತ್ತದೆ. ಸದ್ಯ ಜವಾಬ್ದಾರಿ ಹೊತ್ತಿರುವ ರಾಜೇಶ್ ಕುಂತೂರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಪ್ರಚಾರಕರಾಗಿದ್ದರು. 

32 ವರ್ಷ ಪ್ರಾಯದ ರಾಜೇಶ್ ಕಡಬ ತಾಲೂಕಿನ ಕುಂತೂರು ಗ್ರಾಮದ ನೂಜಿಲದ ವೀರಪ್ಪ ಹಾಗೂ ದಿ‌‌.ಚೆನ್ನಮ್ಮರ ಪುತ್ರ. ರಾಜೇಶ್ ಅವರ ತಂದೆ ಕೂಲಿ ಕಾರ್ಮಿಕರಾಗಿದ್ದು, ಇವರು ಬಾಲ್ಯದಲ್ಲೇ ಸಂಘದ ನಂಟಿಗೆ ಬಂದಿದ್ದಾರೆ. ಪುತ್ತೂರಿನ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಪದವಿ ಮುಗಿಸಿದ ರಾಜೇಶ್, ಆ ಹೊತ್ತಿಗೂ ಸಂಘದ ಜೊತೆ ನಂಟು ಹೊಂದಿದ್ದರು. ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ತಾಲೂಕಿನ ಅರಿಯಡ್ಕ ಮಂಡಲದ ಕಾರ್ಯವಾಹರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಆ ಬಳಿಕ ಪದವಿ ಮುಗಿಸಿ ಸಂಘದ ಪೂರ್ಣಾವಧಿ ಪ್ರಚಾರಕರಾಗಿ ಸಾಗಿದ್ದಾರೆ. 

ದ.ಕ ಜಿಲ್ಲೆಯ ಮೂಡಬಿದ್ರೆ ತಾಲೂಕು ಪ್ರಚಾರಕರಾಗಿ, ಸಾಗರ ಜಿಲ್ಲಾ ಪ್ರಚಾರಕರಾಗಿ, ಶಿವಮೊಗ್ಗ ಜಿಲ್ಲಾ ಪ್ರಚಾರಕರಾಗಿ, ಮೈಸೂರು ವಿಭಾಗ ಪ್ರಚಾರಕರಾಗಿ ಜವಾಬ್ದಾರಿ ಹೊತ್ತಿದ್ದರು. ಸದ್ಯ ತುಮಕೂರು ವಿಭಾಗ ಪ್ರಚಾರಕರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ‌. ಆರ್‌ಎಸ್‌ಎಸ್‌ ಉತ್ತರ ಮತ್ತು ದಕ್ಷಿಣ ಪ್ರಾಂತಗಳ ಸಮನ್ವಯ ಬೈಠಕ್ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‍ನಲ್ಲಿ ಮಂಗಳವಾರ ನಡೆಯಿತು. ಅಲ್ಲಿ ಒಟ್ಟು ಐವರು ಪ್ರಚಾರಕರ ಜವಾಬ್ದಾರಿಗಳಲ್ಲಿ ಬದಲಾವಣೆ ಮಾಡಲಾಗಿದೆ.
 

click me!