Ashok Gehlot vs Sachin Pilot: ರಾಜಸ್ಥಾನ ರಾಜಕೀಯದಲ್ಲಿ ಹೈಕಮಾಂಡ್ ಕೂಡ ಮಧ್ಯಪ್ರವೇಶಿಸಲಾರರು, ನಾನೇ ಅಘೋಷಿತ ನಾಯಕ ಎಂದು ಪರೋಕ್ಷವಾಗಿ ಅಶೋಕ್ ಗೆಹ್ಲೋಟ್ ಸಂದೇಶ ರವಾನಿಸಿದ್ಧಾರೆ. ಗೆಹ್ಲೋಟ್ ಬಣದ 90 ಶಾಸಕರು ಸೋನಿಯಾ ಗಾಂಧಿ ಕಳಿಸಿದ್ದ ಹಿರಿಯ ನಾಯಕರಾದ ಖರ್ಗೆ ಮತ್ತು ಮಾಕನ್ ಅವರ ಜತೆಗಿನ ಭೇಟಿ ನಿರಾಕರಿಸಿದ್ದಾರೆ.
ನವದೆಹಲಿ: ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹೈಕಮಾಂಡ್ ಅಶೋಕ್ ಗೆಹ್ಲೋಟ್ ಮನವೊಲಿಸಿದ ಬೆನ್ನಲ್ಲೇ ಯಾರೂ ಊಹಿಸದಂತ ರಾಜಕೀಯ ಕ್ಷಿಪ್ರ ಬೆಳವಣಿಗೆ ರಾಜಸ್ಥಾನದಲ್ಲಿ ಆರಂಭವಾಗಿದೆ. ಭಾನುವಾರ ಕಾಂಗ್ರೆಸ್‌ನ 90ಕ್ಕೂ ಹೆಚ್ಚು ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಚಿನ್ ಪೈಲಟ್ ಮುಖ್ಯಮಂತ್ರಿಯಾಗುವ ನಿರ್ಧಾರವನ್ನು ವಿರೋಧಿಸಿದ್ಧಾರೆ. ಪಕ್ಷದ ನಿಷ್ಠರಾಗಿರುವ ಯಾರನ್ನಾದರೂ ಗೆಹ್ಲೋಟ್ ಅವರ ಉತ್ತರಾಧಿಕಾರಿಯನ್ನಾಗಿ ಮಾಡಲಿ, ಅಥವಾ ಗೆಹ್ಲೋಟ್ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಸಲಿ, ಆದರೆ ಸಚಿನ್ ಪೈಲಟ್ ಮುಖ್ಯಮಂತ್ರಿಯಾಗುವುದನ್ನು ಒಪ್ಪುವುದಿಲ್ಲ ಎಂದು ಪಕ್ದ ಬಹುತೇಕ ಶಾಸಕರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಭಿನ್ನಮತ ಶಮನಕ್ಕಾಗಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಮತ್ತು ರಾಜಸ್ಥಾನ ಕಾಂಗ್ರೆಸ್ ಉಸ್ತುವಾರಿ ಅಜಯ್ ಮಾಕನ್ ಅವರನ್ನು ಸೋನಿಯಾ ಗಾಂಧಿ ಕಳಿಸಿದ್ದರು. ನಿನ್ನೆ ಮಧ್ಯಾಹ್ನದಿಂದಲೇ ಪಕ್ಷದೊಳಗಿನ ಆಂತರಿಕ ಬೇಗುದಿ ಬಹಿರಂಗವಾಗಿದ್ದರೂ, ಖರ್ಗೆ ಮತ್ತು ಮಾಕನ್ ಸಭೆಯನ್ನು ಸಂಜೆಗೆ ಇಟ್ಟುಕೊಂಡಿದ್ದರು. ಇಷ್ಟರೊಳಗಾಗಿ ಕಾಂಗ್ರೆಸ್ ಶಾಸಕರು ಸ್ಪೀಕರ್ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಮನೆಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಹಲವು ಶಾಸಕರು ಗೆಹ್ಲೋಟ್ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಾದರೆ ನಮಗ್ಯಾವ ಸಮಸ್ಯೆಯೂ ಇಲ್ಲ, ಆದರೆ ಅವರನ್ನೇ ಮುಖ್ಯಮಂತ್ರಿಯಾಗಿಯೂ ಮುಂದುವರೆಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಖರ್ಗೆ, ಮಾಕನ್ ಭೇಟಿಗೆ ನಕಾರ:
ನಿನ್ನೆ ತಡರಾತ್ರಿಯಿಂದಲೇ ಗೆಹ್ಲೋಟ್ ಪಡೆಯ ಶಾಸಕರ ಜೊತೆ ಮಾತನಾಡಲು ಖರ್ಗೆ ಮತ್ತು ಮಾಕನ್ ಯತ್ನಿಸುತ್ತಿದ್ದರೂ ಭೇಟಿ ಮಾಡಲು ಶಾಸಕರು ಸುತಾರಾಂ ಒಪ್ಪುತ್ತಿಲ್ಲ. ಅಶೋಕ್ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರೆಸದಿದ್ಧರೆ ಯಾವುದೇ ಕಾರಣಕ್ಕೂ ಸಂಧಾನ ಸಭೆಯಲ್ಲಿ ಭಾಗಿಯಾಗುವುದಿಲ್ಲ ಎಂದಿದ್ದಾರೆ. ಈ ಬೆಳವಣಿಗೆ ಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವಾಗಿ ಪರಣಮಿಸಿದೆ. ಇತ್ತ ಜಾಣ್ಮೆ ಮೆರೆದಿರುವ ಅಶೋಕ್ ಗೆಹ್ಲೋಟ್ ಪರಿಸ್ಥಿತಿ ನನ್ನ ಕೈಮೀರಿ ಹೋಗಿದೆ. ಯಾರೂ ನನ್ನ ಮಾತನ್ನೂ ಕೇಳುತ್ತಿಲ್ಲ. ಎಲ್ಲರೂ ಪಟ್ಟು ಹಿಡಿದಿದ್ದಾರೆ. ನಾನೇನು ಮಾಡಲೂ ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಜಾಣ ನಡೆ ಇಟ್ಟಿದ್ದಾರೆ. ಕೇರಳದಲ್ಲಿ ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರನ್ನು ಅಶೋಕ್ ಗೆಹ್ಲೋಟ್ ಭೇಟಿಯಾಗಿದ್ದರು. ಭೇಟಿಯ ನಂತರ ಗಾಂಧಿ ಕುಟುಂಬದಿಂದ ಯಾರೂ ರಾಷ್ಟ್ರಾಧ್ಯಕ್ಷ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಜತೆಗೆ ತಾವು ಅಧ್ಯಕ್ಷೀಯ ಚುನಾವಣೆಯಲ್ಲಿ ನಿಲ್ಲುತ್ತಿರುವುದಾಗಿ ತಿಳಿಸಿದ್ದರು.
ಇದನ್ನೂ ಓದಿ: ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿರುಗಾಳಿ, ಗೆಹ್ಲೋಟ್ ಬಣದ 92 ನಾಯಕರು ರಾಜೀನಾಮೆಗೆ ಸಿದ್ಧತೆ!
ಆದರೆ ಕೇರಳದಿಂದ ರಾಜಸ್ಥಾನಕ್ಕೆ ಹೋದ ನಂತರ ಅಶೋಕ್ ಗೆಹ್ಲೋಟ್ ತಮ್ಮ ರಾಜಕೀಯ ನಿಪುಣತೆಯನ್ನು ತೋರಿಸಲು ಆರಂಭಿಸಿದ್ದಾರೆ. ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಈ ಈ ಹಿಂದಿನಿಂದಲೂ ಗುದ್ದಾಟವಿದೆ. ಮತ್ತು ಅದು ಬಹಿರಂಗವಾಗಿ ಆಚೆ ಬರುತ್ತಲೇ ಇದೆ. ಅಶೋಕ್ ಗೆಹ್ಲೋಟ್‌ಗೆ ಸಚಿನ್ ಪೈಲಟ್ ಅವರಿಗೆ ಸ್ಥಾನ ಬಿಟ್ಟುಕೊಡಲು ಮನಸ್ಸಿಲ್ಲ. ಪೈಲಟ್ ಹೊರತು ಯಾರ ಹೆಸರನ್ನು ಸೂಚಿಸಿದರೂ, ಗೆಹ್ಲೋಟ್ ಒಪ್ಪಿಕೊಳ್ಳುವ ಸಾಧ್ಯತೆಯಿತ್ತು. ಇನ್ನೊಂದೆಡೆ ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಹಿಡಿತ ಸಂಪೂರ್ಣ ವಿಫಲವಾಗಿದೆ ಎಂಬುದಕ್ಕೂ ಈ ಘಟನೆ ಸಾಕ್ಷಿಯಾಗಿದೆ. ಈ ಹಿಂದೆಲ್ಲಾ ಕಾಂಗ್ರೆಸ್ ಹೈಕಮಾಂಡ್ ಮಾತನ್ನು ಗ್ರಾಮಪಂಚಾಯ್ತಿ ಸದಸ್ಯನೂ ಮೀರುತ್ತಿರಲಿಲ್ಲ. ಆದರೆ ಈಗ ಸೋನಿಯಾ ಗಾಂಧಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಅಶೋಕ್ ಗೆಹ್ಲೋಟ್ ಥರದವರು ತಿರುಗಿ ಬೀಳುತ್ತಿದ್ದಾರೆ.
ಇದನ್ನೂ ಓದಿ: Rajasthan CLP Meet: ತುರ್ತು ಸಭೆ ಕರೆದ ಕಾಂಗ್ರೆಸ್; ಇಂದು ರಾಜಸ್ಥಾನ ನೂತನ ಸಿಎಂ ಆಯ್ಕೆ..?
ಹೈಕಮಾಂಡ್ ಮಾಡಿದ ಯಡವಟ್ಟು:
ಅಶೋಕ್ ಗೆಹ್ಲೋಟ್‌ಗೆ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಡಲು ಇಷ್ಟವಿಲ್ಲ ಎಂಬುದು ತಿಳಿದುರುವ ವಿಚಾರ. ಆದರೆ ಸಚಿನ್ ಪೈಲಟ್‌ರನ್ನು ಮುಂದಿನ ಸಿಎಂ ಎಂದು ಘೋಷಿಸುವ ಮುನ್ನ, ಕನಿಷ್ಟ ಒಮ್ಮೆ ಪಕ್ಷದ ಶಾಸಕರ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ಒಪ್ಪದ ಶಾಸಕರ ಮನವೊಲಿಸಿ ಭಿನ್ನಮತ ಶಮನವಾದ ನಂತರ ಪೈಲಟ್ ಅವರನ್ನು ಮುಂದೆ ತರಬೇಕಿತ್ತು. ಕಾಂಗ್ರೆಸ್ ಒಳಗಿನ ಇಂಟೆಲಿಜೆನ್ಸ್ ಫೇಲ್ಯೂರ್ ಈ ಬೆಳವಣಿಗೆ ಕಾರಣ ಎಂದೂ ದೂರಲಾಗುತ್ತಿದೆ. ಈ ಹಿಂದೆ 2020ರಲ್ಲಿ ಸಚಿನ್ ಪೈಲಟ್ ಬಹಿರಂಗವಾಗಿ ಅಶೋಕ್ ಗೆಹ್ಲೋಟ್ ವಿರುದ್ಧ ದಂಡೆದಿದ್ದರು. ಆದರೆ ಆಗಲೂ ಗೆಹ್ಲೋಟ್ ಪರ ಹೆಚ್ಚಿನ ಶಾಸಕ ಬಲವಿದ್ದ ಕಾರಣ ಅವರ ಯತ್ನ ಸಫಲವಾಗಲಿಲ್ಲ. ಈಗ ಗೆಹ್ಲೋಟ್ ಬಣದ ಶಾಸಕರು ಪೈಲಟ್ ಪಕ್ಷದ ನಂಬಿಕಸ್ಥರಲ್ಲ, ಈ ಹಿಂದೆ ಪಕ್ಷ ಒಡೆಯುವ ಯತ್ನ ಮಾಡಿದ್ದರು, ಅಂತವರನ್ನು ಮುಖ್ಯಮಂತ್ರಿಯಾಗಿ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: ಅಧ್ಯಕ್ಷ ಚುನಾವಣೆಗೆ ಹೊರಟ ಕಾಂಗ್ರೆಸ್‌ಗೆ ಮತ್ತೊಂದು ಸಂಕಷ್ಟ, G23 ಹಿರಿಯ ನಾಯಕರ ವಾರ್ನಿಂಗ್!
ವಸುಂಧರಾ ರಾಜೆಗೆ ಬೇಕಾದ್ರೂ ಸಿಎಂ ಪಟ್ಟ ಬಿಡ್ತಾರೆ, ಪೈಲಟ್ ಒಪ್ಪಲ್ಲ:
ಅಶೋಕ್ ಗೆಹ್ಲೋಟ್‌ರನ್ನು ಹತ್ತಿರದಿಂದ ನೋಡಿದವರ ಪ್ರಕಾರ ಗೆಹ್ಲೋಟ್‌ಗೆ ಪೈಲಟ್ ವಿರುದ್ಧ ಎಷ್ಟು ಕೋಪವಿದೆಯಂದರೆ ಹೈಕಮಾಂಡ್ ನಿರ್ಧಾರವನ್ನು ಹಿಂಪಡೆಯದಿದ್ದರೆ ಬಿಜೆಪಿ ನಾಯಕಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆಯನ್ನು ಬೇಕಾದರೂ ಮುಖ್ಯಮಂತ್ರಿ ಮಾಡಿಬಿಡುತ್ತಾರೆ. ಆದರೆ ಸಚಿನ್ ಪೈಲಟ್ ಮುಖ್ಯಮಂತ್ರಿಯಾಗಲು ಬಿಡುವುದಿಲ್ಲ. ಈ ಮಾತು ರಾಜಸ್ಥಾನದ ಜನಸಾಮಾನ್ಯರಿಗೂ ತಿಳಿದಿದೆ. ಆದರೂ ಹೈಕಮಾಂಡ್ ಈ ಮಾತಿಗೇಕೆ ಮನ್ನಣೆ ನೀಡಲಿಲ್ಲ ಎಂಬ ಪ್ರಶ್ನೆ ಏಳುತ್ತದೆ.
ರಾಜ್ಯದಲ್ಲೇ ಗೆಹ್ಲೋಟ್, ದೆಹಲಿಗೆ ಪೈಲಟ್?:
ಇನ್ನೊಂದು ಮೂಲಗಳ ಪ್ರಕಾರ ಹೈಕಮಾಂಡ್ ಪರಿಸ್ಥಿತಿಯ ಅವಲೋಕನ ಮಾಡಿದ್ದು, ಪೈಲಟ್ ಅವರ ಬೆಂಬಲಕ್ಕೆ ನಿಂತರೆ ಇನ್ನೊಂದು ರಾಜ್ಯದಲ್ಲೂ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ. ಇದೇ ಕಾರಣಕ್ಕೆ ಸಚಿನ್ ಪೈಲಟ್ ಅವರನ್ನೇ ರಾಷ್ಟ್ರಾಧ್ಯಕ್ಷ ಪದವಿಗೆ ಒಪ್ಪಿಸುವ ಸಾಧ್ಯತೆಯೂ ಇದೆ. ಶಾಸಕರ ಬೆಂಬಲ ಗಳಿಸದೇ ಪೈಲಟ್ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಜತೆಗೆ ಗಾಂಧಿಯೇತರ ರಾಷ್ಟ್ರಾಧ್ಯಕ್ಷರ ನೇಮಕವಾಗಬೇಕು ಎಂದರೆ ಸಚಿನ್ ಪೈಲಟ್ ಕೂಡ ಬಲಶಾಲಿ ಸ್ಪರ್ಧಿಯೇ. ರಾಜಸ್ಥಾನದ ಶಾಸಕರು ಸಂಪೂರ್ಣವಾಗಿ ಗೆಹ್ಲೋಟ್ ಜೊತೆ ಇರಬಹುದು. ಆದರೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಬೇಸ್ ಇಲ್ಲದಿರುವ ಪ್ರದೇಶಗಳಲ್ಲಿ ಸಚಿನ್ ಪೈಲಟ್ ಮಾತ್ರ ಬದಲಾವಣೆ ತರಬಲ್ಲ ತಾಕತ್ತು ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಪೈಲಟ್ ಅವರನ್ನು ಕೈಬಿಡಲು ಸಾಧ್ಯವಿಲ್ಲ.
ಇದನ್ನೂ ಓದಿ: ಗಾಂಧಿ ಕುಟುಂಬದಿಂದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲ್ಲ: ಗೆಹ್ಲೋಟ್‌ಗೆ ರಾಗಾ ಸ್ಪಷ್ಟನೆ
ಒಂದು ಕಡೆ ರಾಹುಲ್ ಗಾಂಧಿ ಭಾರತ್ ಜೋಡಿ ಯಾತ್ರೆಯಲ್ಲಿದ್ದರೆ ಕಾಂಗ್ರೆಸ್ ಪಕ್ಷ ಒಡೆದ ಕನ್ನಡಿಯಾದಂತಾಗಿದೆ. ಸ್ವತಂತ್ರ ಭಾರತದ ಬಹುದೊಡ್ಡ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ಅಧ್ಯಕ್ಷರನ್ನು ನೇಮಿಸಲು ಕಷ್ಟವಾಗುವ ಸ್ಥಿತಿ ಬಂದಿರುವುದು ನೋಡುತ್ತಿದ್ದರೆ, ಗಾಂಧಿ ಕುಟುಂಬ ಪಕ್ಷದೊಳಗೆ ಸಂಪೂರ್ಣವಾಗಿ ವರ್ಚಸ್ಸು ಕಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ. ಮತ್ತು ಪಕ್ಷ ಸಂಘಟನೆಯಲ್ಲಿರುವ ನ್ಯೂನ್ಯತೆಯನ್ನು ಎತ್ತಿ ಹಿಡಿಯುತ್ತಿದೆ.