ಸಚಿನ್‌ ಪೈಲಟ್‌ ಬಣ ಶಾಸಕರು ಬೆಂಗಳೂರಿಗೆ ಶಿಫ್ಟ್‌?

By Kannadaprabha NewsFirst Published Jul 19, 2020, 9:02 AM IST
Highlights

ಸಚಿನ್‌ ಪೈಲಟ್‌ ಬಣ ಶಾಸಕರು ಬೆಂಗಳೂರಿಗೆ ಶಿಫ್ಟ್‌?| ಸರ್ಕಾರ ಉರುಳಿಸುವ ಸಂಚಿನ ವಿಚಾರಣೆ ತಪ್ಪಿಸಿಕೊಳ್ಳಲು ಯತ್ನ| ಕಾಂಗ್ರೆಸ್‌ ಗಂಭೀರ ಆರೋಪ

ನವದೆಹಲಿ(ಜು.19): ರಾಜಸ್ಥಾನದ ಬಂಡಾಯ ಕಾಂಗ್ರೆಸ್‌ ಮುಖಂಡ ಸಚಿನ್‌ ಪೈಲಟ್‌ ಅವರ ಬೆಂಬಲಿಗ ಶಾಸಕರು ಹರ್ಯಾಣದಿಂದ ಬಿಜೆಪಿ ಆಡಳಿತದ ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಪೈಲಟ್‌ ಪದಚ್ಯುತಿಗೂ ಮುನ್ನ ನಡೆದಿತ್ತು ಈ ಬೆಳವಣಿಗೆ!

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ, ‘ಸರ್ಕಾರ ಬೀಳಿಸುವ ಸಂಚಿನ ಸಂಭಾಷಣೆಯುಳ್ಳ ಆಡಿಯೋ ಟೇಪ್‌ ಕುರಿತ ವಿಚಾರಣೆಗೆ ರಾಜಸ್ಥಾನ ಪೊಲೀಸರು, ಪೈಲಟ್‌ ಬಣದ ಶಾಸಕರು ಬೀಡು ಬಿಟ್ಟಿದ್ದ ಹರ್ಯಾಣದ ಮಾನೇಸರ್‌ಗೆ ತೆರಳಿದ್ದರು. ಆದರೆ ಶಾಸಕರು ಪೊಲೀಸರ ಕೈಗೆ ಸಿಗದೇ ಪಲಾಯನಗೈದಿದ್ದಾರೆ’ ಎಂದು ಆರೋಪಿಸಿದರು.

ರಾಜಸ್ಥಾನ ಕಾಂಗ್ರೆಸ್‌ ಅಧ್ಯಕ್ಷ ಗೋವಿಂದ್‌ ಸಿಂಗ್‌ ದೋಸ್ತಾರಾ ಮಾತನಾಡಿ, ‘ಪೊಲೀಸರು ಮಾನೇಸರ್‌ ರೆಸಾರ್ಟ್‌ಗೆ ಹೋದಾಗ ಅವರನ್ನು ಗೇಟ್‌ನಲ್ಲೇ ತಡೆಯಲಾಗಿದೆ. ಶಾಸಕರನ್ನು ಅಲ್ಲಿಂದ ಬೇರೆ ಗೇಟ್‌ನಿಂದ ಕಳಿಸಿಕೊಟ್ಟನಂತರ ಪೊಲೀಸರಿಗೆ ರೆಸಾರ್ಟ್‌ ಪ್ರವೇಶ ನೀಡಲಾಗಿದೆ’ ಎಂದು ಆರೋಪಿಸಿದರು.

ರಾಜಸ್ಥಾನ ರಾಜಕೀಯ ಡ್ರಾಮಾ ಕ್ಲೈಮಾಕ್ಸ್‌ಗೆ ದಿನಾಂಕ ಫಿಕ್ಸ್! ಪೈಲಟ್ ಕಿರುನಗೆ

ಈ ನಡುವೆ, ಬಂಡಾಯ ಶಾಸಕರು ಬೆಂಗಳೂರಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಸಚಿನ್‌ ಪೈಲಟ್‌ ಸೇರಿದಂತೆ ಬಂಡಾಯ ಬಣದಲ್ಲಿ 19 ಶಾಸಕರಿದ್ದಾರೆ. ತಮ್ಮನ್ನು ಮುಖ್ಯಮಂತ್ರಿ ಮಾಡದ ಕಾರಣಕ್ಕೆ ಗೆಹ್ಲೋಟ್‌ ಸರ್ಕಾರದಿಂದ ಪೈಲಟ್‌ ಬಂಡಾಯ ಎದ್ದಿದ್ದು, ಇತ್ತೀಚೆಗಷ್ಟೇ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಹುದ್ದೆಯಿಂದ ವಜಾಗೊಂಡಿದ್ದರು.

click me!