ಅಶೋಕ್ ಗೆಹ್ಲೋಟ್ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಾಗಿದ್ದು, ಈ ಹಿನ್ನೆಲೆ ರಾಜಸ್ಥಾನ ಮುಖ್ಯಮಂತ್ರಿ ಸ್ಥಾನವನ್ನು ಅವರು ಬಿಟ್ಟುಕೊಡುತ್ತಾರಾ, ರಾಜೀನಾಮೆ ನೀಡಿದರೂ ತಮ್ಮ ಆಪ್ತರನ್ನೇ ಸಿಎಂ ಸ್ಥಾನಕ್ಕೆ ಕೂರಿಸುತ್ತಾರಾ ಎಂದೂ ಹೇಳಲಾಗುತ್ತಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ (Congress President) ಸ್ಥಾನಕ್ಕೆ ಸ್ಪರ್ಧಿಸಲಿರುವ ಕಾರಣ ಹೊಸ ಮುಖ್ಯಮಂತ್ರಿಯ ಆಯ್ಕೆ ಭಾನುವಾರ ನಡೆಯುವ ನಿರೀಕ್ಷೆಯಿದೆ. ಭಾನುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ (Congress Legislative Party Meeting) ನಡೆಯಲಿದ್ದು, ಎಐಸಿಸಿ ಉಸ್ತುವಾರಿಗಳಾಗಿ ಅಜಯ್ ಮಾಕನ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಆಗಮಿಸುತ್ತಿದ್ದಾರೆ. ಸಭೆಯ ನಿರ್ಣಯವನ್ನು ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಿಳಿಸಲಾಗುತ್ತದೆ. ಬಳಿಕ ಅವರು ಹೊಸ ಮುಖ್ಯಮಂತ್ರಿಯನ್ನು ಘೋಷಿಸಬಹುದು ಎಂದು ಮೂಲಗಳು ಹೇಳಿವೆ. ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಸ್ಪರ್ಧಿಸುತ್ತಿದ್ದು, ಅವರ ಜಯದ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಹೀಗಾಗಿ ಹೊಸ ಸಿಎಂ ಆಯ್ಕೆ ನಡೆಯುತ್ತಿದೆ. ಇನ್ನು, ಸಚಿನ್ ಪೈಲಟ್ ರಾಜಸ್ಥಾನದ ನೂತನ ಸಿಎಂ ಆಗುವ ಅಭ್ಯರ್ಥಿಗಳ ಪೈಕಿ ಮುಂಚೂಣಿಯಲ್ಲಿದ್ದಾರೆ.
ತಡರಾತ್ರಿಯ ಬೆಳವಣಿಗೆಯಲ್ಲಿ, ಕಾಂಗ್ರೆಸ್ ತನ್ನ ಶಾಸಕಾಂಗ ಪಕ್ಷದ ಸಭೆಯನ್ನು ಭಾನುವಾರ ರಾಜಸ್ಥಾನದಲ್ಲಿ ಕರೆದಿದೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಂತರಿಕ ಚುನಾವಣೆ ನಡೆಯುವ ಸಾಧ್ಯತೆ ಹಿನ್ನೆಲೆ ಈ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಹೆಚ್ಚು ಎನಿಸಿಕೊಂಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಕಸರತ್ತು ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: 2 ದಶಕದ ಬಳಿಕ Congress ಚುಕ್ಕಾಣಿ ಗಾಂಧಿಯೇತರಿಗೆ..? ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗೆ ಗೆಹ್ಲೋಟ್ ಷರತ್ತು..!
ಗಾಂಧಿ ಕುಟುಂಬದ ಕೆಲವು ಸದಸ್ಯರ ಬೆಂಬಲವನ್ನು ಹೊಂದಿರುವ ಅಶೋಕ್ ಗೆಹ್ಲೋಟ್ ಪ್ರತಿಸ್ಪರ್ಧಿ ಎನ್ನಲಾದ ಸಚಿನ್ ಪೈಲಟ್ ಅವರನ್ನು ಉತ್ತರಾಧಿಕಾರಿ ಎಂದು ಹೆಸರಿಸಲಾಗುವುದೋ ಅಥವಾ ಈ ಪ್ರಸ್ತುತ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇದನ್ನು ನಿರ್ಧರಿಸುತ್ತಾರೋ ಎಂಬುದು ಉತ್ತರಾಧಿಕಾರದ ಕದನದ ಕುತೂಹಲಕಾರಿ ಅಂಶವಾಗಿದೆ. ಗಾಂಧಿ ಕುಟುಂಬದ ಅಭ್ಯರ್ಥಿಯಾಗಿ ಮತ್ತು ಕಾಂಗ್ರೆಸ್ ಮುಂದಿನ ಅಧ್ಯಕ್ಷ ಎಂದೇ ಬಿಂಬಿತರಾಗಿರುವ ಅಶೋಕ್ ಗೆಹ್ಲೋಟ್, ರಾಜಸ್ಥಾನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದರೆ, ತಮ್ಮ ಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ತಮ್ಮ ನಿಷ್ಠಾವಂತರನ್ನು ಹಾಕಲು ಬಯಸುತ್ತಾರೆ ಎಂದು ಹೇಳಲಾಗುತ್ತಿದೆ.
ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷರಾದರೂ ಸಹ ರಾಜಸ್ಥಾನ ಸಿಎಂ ಆಗಿ ಮುಂದುವರಿಯಲು ಅವಕಾಶ ನೀಡಬೇಕು ಎಂದು ಅಶೋಕ್ ಗೆಹ್ಲೋಟ್ ನಿಷ್ಠಾವಂತರು ಶನಿವಾರ ಆಗ್ರಹಿಸಿದ್ದಾರೆ. ಇನ್ನೊಂದೆಡೆ, ಸಚಿನ್ ಪೈಲಟ್ ರಾಜಸ್ಥಾನ ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ ಮತ್ತು ಶಾಸಕಾಂಗ ಪಕ್ಷದ ಸಭೆಯ ಮೊದಲು ಈ ವಿಷಯವು ಸ್ಪಷ್ಟವಾಗಬಹುದು ಎಂದು ಸಚಿನ್ ಪೈಲಟ್ ಬೆಂಬಲಿಗರು ಹೇಳುತ್ತಿದ್ದಾರೆ. ನೂತನ ಮುಖ್ಯಮಂತ್ರಿಯನ್ನು ನಾಮನಿರ್ದೇಶನ (Nominate) ಮಾಡಲು ಕಾಂಗ್ರೆಸ್ ಅಧ್ಯಕ್ಷರಿಗೆ ಅಧಿಕಾರ ನೀಡಲು ಶಾಸಕಾಂಗ ಪಕ್ಷವು ನಿರ್ಣಯವನ್ನು ಅಂಗೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಆದರೂ, ತುರ್ತು ಸಭೆ ಕರೆದಿರುವುದರಿಂದ ಈ ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತಾರೋ ಎಂಬುದು ಕುತೂಹಲ ಕೆರಳಿಸುತ್ತಿದೆ.
ಇದನ್ನೂ ಓದಿ: Congress ಅಧ್ಯಕ್ಷ ಸ್ಥಾನಕ್ಕೆ ಮೂವರ ಸ್ಪರ್ಧೆ..? ಶಶಿ ತರೂರ್ ಸ್ಪರ್ಧೆಗೆ ಸೋನಿಯಾ ಸಮ್ಮತಿ..!
ಸಚಿನ್ ಪೈಲಟ್ ಬೆಂಬಲಿಗರು ಮತ್ತು ಅಶೋಕ್ ಗೆಹ್ಲೋಟ್ ಶಿಬಿರದ ನಡುವಿನ ಧ್ರುವೀಕರಣವು ಕಳೆದ ಕೆಲವು ದಿನಗಳಲ್ಲಿ ಗಾಢವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಸೆಪ್ಟೆಂಬರ್ 25 ರಂದು ಸಂಜೆ 7 ಗಂಟೆಗೆ ರಾಜಸ್ಥಾನದಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜಸ್ಥಾನ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ (AICC General Secretary) ಅಜಯ್ ಮಾಕನ್ ಅವರನ್ನು ವೀಕ್ಷಕರನ್ನಾಗಿ (Observers) ನೇಮಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ. ಮುಂಬರುವ ಆಂತರಿಕ ಚುನಾವಣೆಯ ಹಿನ್ನೆಲೆಯಲ್ಲಿ ಮತ್ತು ಅಶೋಕ್ ಗೆಹ್ಲೋಟ್ ಪಕ್ಷದ ಅಧ್ಯಕ್ಷರಾಗುವ ಸಾಧ್ಯತೆಯ ಸಂದರ್ಭದಲ್ಲಿ "ಒಬ್ಬ ವ್ಯಕ್ತಿ ಒಂದು ಹುದ್ದೆ" (One Man One Post) ತತ್ವವನ್ನು ಅನುಸರಿಸಬೇಕು ಎಂಬ ಕಾಂಗ್ರೆಸ್ ನಿರ್ಧಾರದ ಹಿನ್ನೆಲೆಯಲ್ಲಿ ಈ ತುರ್ತು ಸಭೆ ಪ್ರಾಮುಖ್ಯತೆ ಪಡೆದುಕೊಂಡಿದೆ.