ಯತ್ನಾಳ್‌ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್‌: ವಿಜಯೇಂದ್ರ

By Kannadaprabha NewsFirst Published Sep 25, 2022, 9:38 AM IST
Highlights

ಪಂಚಮಸಾಲಿ 2ಎ ಮೀಸಲಿಗೆ ಬಿಎಸ್‌ವೈ ವಿರೋಧ ಇಲ್ಲ: ವಿಜಯೇಂದ್ರ

ಬೆಂಗಳೂರು(ಸೆ.25): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಪದೇ ಪದೇ ಹೇಳಿಕೆ ನೀಡುವ ಮೂಲಕ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಪಕ್ಷಕ್ಕೂ ಡ್ಯಾಮೇಜ್‌ ಮಾಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ಪಂಚಮಸಾಲಿ ಸಮುದಾಯದ ದಿಕ್ಕು ತಪ್ಪಿಸುವ ಯತ್ನ ನಡೆಯುತ್ತಿದೆ. ಸಮಾಜ ಒಡೆಯುವ ಕೆಲಸವನ್ನು ರಾಜಕೀಯ ವಿರೋಧಿಗಳು ಮಾಡುತ್ತಿದ್ದಾರೆ. ಪದೇ ಪದೇ ಆ ರೀತಿ ಹೇಳಿಕೆಗಳನ್ನು ನೀಡುವ ಮೂಲಕ ಯತ್ನಾಳ್‌ ಪಕ್ಷಕ್ಕೂ ಡ್ಯಾಮೇಜ್‌ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಯಡಿಯೂರಪ್ಪರನ್ನು ಮುಗಿಸಲು ಕುತಂತ್ರ: ವಿಜಯೇಂದ್ರ ಕಿಡಿ

ಯತ್ನಾಳ್‌ ಅವರಿಗೆ ವಿಜಯೇಂದ್ರ ಮೇಲೆ ಬಹಳ ಪ್ರೀತಿ ಇದೆ. ಆದರೆ, ಅವರು ಸ್ವಲ್ಪ ಅರ್ಥ ಮಾಡಿಕೊಳ್ಳಬೇಕು. ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಎಲ್ಲ ಮಠ, ಜಾತಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅಂತಹವರು ಇವತ್ತು ವಿರೋಧ ಮಾಡುತ್ತಿದ್ದಾರೆ. ಯಡಿಯೂರಪ್ಪ ಮೇಲೆ ಆರೋಪ ಮಾಡುವ ಮೂಲಕ ರಾಜಕೀಯ ಸಂಚು ಮಾಡಲಾಗಿದೆ. ಮೀಸಲಾತಿಗೆ ಯಾವುದೇ ಕಾರಣಕ್ಕೂ ವಿರೋಧ ಇಲ್ಲ ಎಂದು ಯಡಿಯೂರಪ್ಪ ಸದನದಲ್ಲಿಯೂ ಸ್ಪಷ್ಟಪಡಿಸಿದ್ದಾರೆ. ಆದರೂ ಪಂಚಮಸಾಲಿಗೆ 2ಎ ಮೀಸಲಾತಿ ನೀಡಲು ಯಡಿಯೂರಪ್ಪನವರ ವಿರೋಧ ಇದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ನೆನಪಾಗಿತ್ತು. ಧರ್ಮ ಒಡೆದು ರಾಜಕೀಯ ಲಾಭ ಪಡೆಯಬೇಕು ಎಂಬ ಕಾಂಗ್ರೆಸ್‌ ಪ್ರಯತ್ನ ಯಶಸ್ವಿಯಾಗಲಿಲ್ಲ. ಈಗ ಪಂಚಮಸಾಲಿ ವಿಚಾರದಲ್ಲಿ ಎಲ್ಲರನ್ನೂ ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಈ ಪಿತೂರಿ ಮೊದಲಿನಿಂದಲೂ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.
 

click me!