
ಸ್ವಾತಂತ್ರ್ಯಾ ನಂತರ ಐದು ದಶಕಗಳವರೆಗೆ ದೇಶವನ್ನು ಆಳಿದ್ದ ಕಾಂಗ್ರೆಸ್, ಕಳೆದೊಂದು ದಶಕದಿಂದ ಹಲವು ರಾಜ್ಯಗಳಲ್ಲಿ ತನ್ನ ಸ್ಥಾನ ಭದ್ರಗೊಳಿಸಲು ವಿಫಲವಾಗಿದೆ. ಸದ್ಯ ಭಾರತದಲ್ಲಿ ಸ್ವತಂತ್ರವಾಗಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವುದು ಕೇವಲ ಮೂರು ರಾಜ್ಯಗಳಲ್ಲಿ. ಕರ್ನಾಟಕ ಬಿಟ್ಟರೆ ಹಿಮಾಚಲ ಪ್ರದೇಶ ಮತ್ತು ತೆಲಂಗಾಣದಲ್ಲಿ. ಉಳಿದ ಕೆಲವು ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರದ ರೂಪದಲ್ಲಿ ಕಾಂಗ್ರೆಸ್ ಉಳಿದುಕೊಂಡಿದೆ. ಕಳೆದ ಚುನಾವಣೆಯಲ್ಲಿಯೂ ಕಾಂಗ್ರೆಸ್ನ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಕೆಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ.
ಆದರೆ, ಇದೀಗ ಹಲವು ದಶಕಗಳವರೆಗೆ ಕಾಂಗ್ರೆಸ್ ಅಧಿಕಾರವನ್ನು ಹಿಡಿದು ಕುಳಿತಿದ್ದ ಅಸ್ಸಾಂನ ಕುತೂಹಲದ ಘಟನೆಯೊಂದು ಮತ್ತೀಗ ವೈರಲ್ ಆಗುತ್ತಿದೆ. ಅಸ್ಸಾಂ ಮುಖ್ಯಮಂತ್ರಿಯಾಗಿರುವ ಬಿಜೆಪಿಯ ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್ ತೊರೆದ ಘಟನೆ ಇದಾಗಿದೆ. ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಂತೆಯೇ ಅಸ್ಸಾಂ ಮರುವರ್ಷವೇ ತನ್ನ 53 ಸೀಟುಗಳನ್ನು ಕಳೆದುಕೊಂಡಿರೋ ಸ್ಟೋರಿ ಇದು. ಇದಕ್ಕೆ ಕಾರಣವಾಗಿದ್ದು ರಾಹುಲ್ ಗಾಂಧಿ ಅವರ ನಾಯಿ (Rahul Gandhi's Dog). ಅದೀಗ ಮತ್ತೊಮ್ಮೆ ಬೆಳಕಿಗೆ ಬರಲು ಕಾರಣ, ಸದನದಲ್ಲಿ ಅಪ್ರಕಟಿತ ಪುಸ್ತಕವನ್ನು ರಾಹುಲ್ ಗಾಂಧಿ ಪ್ರದರ್ಶಿಸಿದ್ದರಿಂದ. ಸಾಲದು ಎನ್ನುವುದಕ್ಕೆ ಕೊನೆಗೆ, ಅವರು ಒಂದು ಟ್ವೀಟ್ ಮಾಡಿ ನಾಯಿಯ ಮೂಗಿನ ಮೇಲೆ ಬಿಸ್ಕಿಟ್ ಇಟ್ಟು ತಿನ್ನಲು ಸನ್ನೆ ಮಾಡುತ್ತಿರುವುದನ್ನು ತೋರಿಸಿದ್ದರು. ಇದನ್ನು ಬಿಜೆಪಿಗೆ ಲೇವಡಿ ಮಾಡಲು ಶೇರ್ ಮಾಡಿಕೊಂಡಿದ್ದರು. ಆದರೆ ಅದೇ ಇವರಿಗೆ ಈಗ ಉಲ್ಟಾ ಹೊಡೆದು ಅಸ್ಸಾಂನಲ್ಲಿ ಪಿಡಿ ನಾಯಿಯಿಂದ ಕಾಂಗ್ರೆಸ್ ತನ್ನ 53 ಸ್ಥಾನಗಳನ್ನು ಕಳೆದುಕೊಂಡ ಬಗ್ಗೆ ರಾಹುಲ್ ಗಾಂಧಿ ಅವರಿಗೆ ತಿರುಗೇಟಾಗಿದೆ.
ಅದೇನೆಂದರೆ, 2015ರ ಸಮಯ. ಆಗ ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್ನಲ್ಲಿ ಇದ್ದರು. 2016ರಲ್ಲಿ ವಿಧಾನ ಸಭೆಯ ಚುನಾವಣೆ ಇತ್ತು. ಅಸ್ಸಾಮಿನ ಕೆಲವೊಂದು ಸಮಸ್ಯೆಗಳನ್ನು ಚರ್ಚಿಸಲು ಅವರು ಕಾಂಗ್ರೆಸ್ನಲ್ಲಿ ಇದ್ದ ಸಮಯದಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು. 2016 ರ ಅಸ್ಸಾಂ ವಿಧಾನಸಭಾ ಚುನಾವಣೆಗೆ ಮುನ್ನ, ಕಾಂಗ್ರೆಸ್ ಪಕ್ಷದಲ್ಲೇ ಇದ್ದ ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂನ ಸಮಸ್ಯೆಗಳ ಕುರಿತು ಚರ್ಚಿಸಲು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು. ಆಗ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ತಮ್ಮ ಪಿಡಿ ನಾಯಿಯ ಜೊತೆ ಆಟವಾಡುತ್ತಿದ್ದರು. ಚುನಾವಣೆ ಕುರಿತು ಮಾತನಾಡಲು ಬಂದ ನಾಯಕರನ್ನು ಕಡೆಗಣಿಸಿದ್ದರು. ಆ ದಿನಗಳನ್ನು ಹಿಮಂತ ಬಿಸ್ವಾ ಶರ್ಮಾ ಮಾಧ್ಯಮಗಳ ಜೊತೆ ನೆನಪಿಸಿಕೊಂಡಿದ್ದಾರೆ.
'ಅಸ್ಸಾಂನ ಮಾಜಿ ಸಿಎಂ ತರುಣ್ ಗೊಗೊಯ್ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ತಿಳಿಸಲು ಹೋಗಿದ್ದೆವು. ಆಗ ನಮಗೆ ಚಹಾ ಮತ್ತು ಬಿಸ್ಕತ್ತು ನೀಡಲಾಯಿತು, ನಾಯಿ ಟೇಬಲ್‌ಗೆ ಹೋಗಿ ಟೇಬಲ್‌ನಿಂದ ಒಂದು ಬಿಸ್ಕತ್ತು ತೆಗೆದುಕೊಂಡಿತು. ರಾಹುಲ್ ನನ್ನನ್ನು ನೋಡಿ ಮುಗುಳ್ನಕ್ಕರು. ಅವರು ಯಾಕೆ ನಗುತ್ತಿದ್ದಾರೆಂದು ನಮಗೆ ವಿಚಿತ್ರ ಎನ್ನಿಸಿತು. ರಾಹುಲ್ ಗಾಂಧಿ ಅವರು, ಕಾಲಿಂಗ್ ಬೆಲ್ ಒತ್ತಿ ಯಾರಿಗಾದರೂ ಪ್ಲೇಟ್ ಬದಲಾಯಿಸಲು ಹೇಳಬೇಕೆಂದು ನಾವು ಕಾಯುತ್ತಿದ್ದೆವು. ಆದರೆ ಅವರು ಹಾಗೆ ಮಾಡಲಿಲ್ಲ. ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯವರಿಗೆ ಎಷ್ಟು ಹೆದರುತ್ತಿದ್ದರು ಎಂದರೆ ನಾಯಿ ಬಿಸ್ಕೆಟ್ ತಿಂದ ಪ್ಲೇಟ್ನಲ್ಲಿ ಇದ್ದ ಬಿಸ್ಕೆಟ್ ಅನ್ನೇ ತಿಂದರು' ಎಂದಿದ್ದಾರೆ.
ಕೊನೆಗೂ ಕಾದು ಕಾದು ಸುಸ್ತಾದರೂ ನಾಯಿಯ ಜೊತೆ ಅವರ ಆಟ ನಿಲ್ಲಲಿಲ್ಲ. ನಮ್ಮಮಾತನ್ನು ಆಲಿಸುವ ವ್ಯವಧಾನ ಅವರಿಗೆ ಇರಲಿಲ್ಲ. ಅದೇ ಕೊನೆ. ಕಾಂಗ್ರೆಸ್ಗೆ ಗುಡ್ಬೈ ಹೇಳಿ, ಬಿಜೆಪಿ ಸೇರಿದೆ ಎಂದಿದ್ದಾರೆ. ನಾನು ರಾಹುಲ್ ಗಾಂಧಿ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಒಂದು ವೇಳೆ ಕಾಂಗ್ರೆಸ್ ಪಕ್ಷದಿಂದ ನಾನು ಹೊರ ಬರದೇ ಇದ್ದರೆ ಅಸ್ಸಾಂನ ಮುಖ್ಯಮಂತ್ರಿಯಾಗುತ್ತಿರಲಿಲ್ಲ ಮತ್ತು ರಾಜ್ಯಕ್ಕೆ ಸೇವೆ ಸಲ್ಲಿಸುತ್ತಿರಲಿಲ್ಲ. ಏಕೆಂದರೆ ಕಾಂಗ್ರೆಸ್ನಲ್ಲಿ ಇದ್ದಾಗಲೂ ಸೋನಿಯಾ ಗಾಂಧಿಯವರು ನನ್ನನ್ನು ಸಿಎಂ ಮಾಡಲು ಹೇಳಿದ್ದರು. ಆಗ ಅಮೆರಿಕದಲ್ಲಿ ಇದ್ದ ರಾಹುಲ್ ಗಾಂಧಿ ಇದಕ್ಕೆ ತಡೆಯೊಡ್ಡಿದ್ದರು ಎಂದಿದ್ದಾರೆ.2011ರ ಚುನಾವಣೆಯಲ್ಲಿ 78 ಸೀಟು ಗೆದ್ದಿದ್ದ ಕಾಂಗ್ರೆಸ್ 2016ರಲ್ಲಿ 25 ಸ್ಥಾನಕ್ಕೆ ಕುಸಿಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.