ಲೋಕಸಭೆಯಲ್ಲಿ ಲೀಡ್‌ ಕೊಡಿಸದ ರಾಜ್ಯದ 17 ಮಂತ್ರಿಗಳಿಗೆ ರಾಹುಲ್‌ ಗಾಂಧಿ ಚಾಟಿ

By Kannadaprabha News  |  First Published Jun 8, 2024, 6:03 AM IST

ಲೋಕಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರದಲ್ಲಿ ಪಕ್ಷಕ್ಕೆ ಲೀಡ್‌ ಕೊಡಿಸುವಲ್ಲಿ ವಿಫಲರಾದ ರಾಜ್ಯದ 17 ಸಚಿವರಿಗೆ ವರಿಷ್ಠ ರಾಹುಲ್‌ ಗಾಂಧಿ ಕೆಂಗಣ್ಣು ಬೀರಿದ್ದು, ಈ ಸಚಿವರು ಪ್ರತಿನಿಧಿಸಿದ್ದ ಕ್ಷೇತ್ರಗಳಲ್ಲಿ ಹಿನ್ನಡೆಗೆ ಕಾರಣವೇನು ಎಂಬ ಬಗ್ಗೆ ಸಮಗ್ರ ವರದಿ ನೀಡುವಂತೆ ರಾಜ್ಯ ನಾಯಕತ್ವಕ್ಕೆ ತಾಕೀತು ಮಾಡಿದ್ದಾರೆ. 


ಬೆಂಗಳೂರು (ಜೂ.08): ಲೋಕಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರದಲ್ಲಿ ಪಕ್ಷಕ್ಕೆ ಲೀಡ್‌ ಕೊಡಿಸುವಲ್ಲಿ ವಿಫಲರಾದ ರಾಜ್ಯದ 17 ಸಚಿವರಿಗೆ ವರಿಷ್ಠ ರಾಹುಲ್‌ ಗಾಂಧಿ ಕೆಂಗಣ್ಣು ಬೀರಿದ್ದು, ಈ ಸಚಿವರು ಪ್ರತಿನಿಧಿಸಿದ್ದ ಕ್ಷೇತ್ರಗಳಲ್ಲಿ ಹಿನ್ನಡೆಗೆ ಕಾರಣವೇನು ಎಂಬ ಬಗ್ಗೆ ಸಮಗ್ರ ವರದಿ ನೀಡುವಂತೆ ರಾಜ್ಯ ನಾಯಕತ್ವಕ್ಕೆ ತಾಕೀತು ಮಾಡಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ರಾಹುಲ್‌ ಗಾಂಧಿ ಅವರು ನಗರದ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ನಾಯಕರು, ಸಚಿವರು, ನೂತನ ಸಂಸದರು ಹಾಗೂ ಪರಾಜಿತ ಅಭ್ಯರ್ಥಿಗಳೊಂದಿಗೆ ನಡೆಸಿದ ಸಭೆ ವೇಳೆ ಈ ನಿರ್ದೇಶನ ನೀಡಿದ್ದಾರೆ.

ಇದರಿಂದ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ತೋರದ ಸಚಿವರ ಸ್ಥಾನಗಳಿಗೆ ಕುತ್ತು ಬರುವುದೇ ಎಂಬ ಚರ್ಚೆ ಕಾಂಗ್ರೆಸ್‌ ವಲಯದಲ್ಲಿ ಆರಂಭವಾಗಿದೆ. ಸಭೆಯಲ್ಲಿ ನಿರೀಕ್ಷಿತ ಸೀಟು ದೊರೆಯದ ಬಗ್ಗೆ ಅಚ್ಚರಿ ಹಾಗೂ ಅಸಮಾಧಾನ ವ್ಯಕ್ತಪಡಿಸಿದ ರಾಹುಲ್‌ ಗಾಂಧಿ, ವಿಧಾನಸಭೆ ಫಲಿತಾಂಶದಲ್ಲಿ ಜನರು ಕೈಹಿಡಿದಿದ್ದ ರೀತಿ, ಗ್ಯಾರಂಟಿಗಳ ಅನುಷ್ಠಾನ, ಬಿಜೆಪಿಯ ಕೇಂದ್ರ ಸರ್ಕಾರವು ರಾಜ್ಯಕ್ಕೆ ಮಾಡಿರುವ ಅನ್ಯಾಯಗಳ ಪರಿಣಾಮ ರಾಜ್ಯದಲ್ಲಿ ಕನಿಷ್ಠ 16-17 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲ್ಲುವ ನಿರೀಕ್ಷೆಯಿತ್ತು. ನಿಮ್ಮ ಆಂತರಿಕ ಸಮೀಕ್ಷೆಯಲ್ಲೂ 12ರಿಂದ 14 ಸ್ಥಾನ ಗೆಲ್ಲುವುದಾಗಿ ಹೈಕಮಾಂಡ್‌ಗೆ ವರದಿ ನೀಡಿದ್ದಿರಿ. 

Tap to resize

Latest Videos

ಮಂತ್ರಿಗಿರಿಗಾಗಿ ಬಿಜೆಪಿ ಮೇಲೆ ಒತ್ತಡ ಹೇರಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಹೀಗಿದ್ದರೂ ಎರಡಂಕಿ ಸಾಧನೆಯನ್ನೂ ಮಾಡದಿರಲು ಕಾರಣವೇನು ಎಂದು ರಾಜ್ಯ ನಾಯಕರನ್ನು ಪ್ರಶ್ನಿಸಿದರು ಎಂದು ತಿಳಿದುಬಂದಿದೆ.ಅಲ್ಲದೆ, ನೀವು ಹೇಳಿದವರಿಗೆ ಟಿಕೆಟ್‌ ಕೊಟ್ಟಿದ್ದೇವೆ. ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲೆ ಇತ್ತು. ಆದರೂ ಗೆಲ್ಲಿಸುವಲ್ಲಿ ವಿಫಲವಾಗಿದ್ದೀರಿ. ಫಲಿತಾಂಶಕ್ಕೆ ಸಚಿವರೇ ಹೊಣೆ ಎಂದು ಸೂಚಿಸಿದ್ದರೂ ಸ್ವಕ್ಷೇತ್ರದಲ್ಲೇ ಪಕ್ಷಕ್ಕೆ ಲೀಡ್‌ ಕೊಡಿಸಿಲ್ಲ. ಹಾಗಿದ್ದರೆ ಮುಂದೇನು ಮಾಡಬೇಕು ನೀವೇ ತಿಳಿಸಿ ಎಂದು ಪ್ರಶ್ನಿಸುವ ಮೂಲಕ ಶಿಸ್ತು ಕ್ರಮದ ಎಚ್ಚರಿಕೆಯನ್ನು ಪರೋಕ್ಷವಾಗಿ ನೀಡಿದರು ಎನ್ನಲಾಗಿದೆ.

ಮುನಿಯಪ್ಪ, ದಿನೇಶ್‌ಗೆ ತರಾಟೆ: ಈ ವೇಳೆ ಮೈತ್ರಿ ಕಾರಣದಿಂದ ಬಿಜೆಪಿ, ಜೆಡಿಎಸ್  ಮತಗಳು ಒಟ್ಟಾಗಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ ಎಂದು ಹೇಳಲು ಹೊರಟ ಕೆ.ಎಚ್.ಮುನಿಯಪ್ಪ ಹಾಗೂ ದಿನೇಶ್ ಗುಂಡೂರಾವ್‌ ಅವರಿಗೆ ಮಾತಿನಲ್ಲೇ ಮೊಟಕಿ ಕೂರಿಸಿದ ಅವರು, ‘ನೀವು ಏನೆಲ್ಲಾ ಮಾಡಿದ್ದೀರಿ ಎಂಬ ಬಗ್ಗೆ ವರದಿ ಇದೆ. ಸುಮ್ಮನೆ ಮೈತ್ರಿ ಕತೆ ಹೇಳಬೇಡಿ. ನಿಮ್ಮ ಕ್ಷೇತ್ರಗಳಲ್ಲಿ ಮಾತ್ರವೇ ಬಿಜೆಪಿ-ಜೆಡಿಎಸ್‌ ಮೈತ್ರಿ ಇತ್ತೇ? ಬೇರೆ ಸಚಿವರ ಕ್ಷೇತ್ರಗಳಲ್ಲಿ ಮೈತ್ರಿ ಇರಲಿಲ್ಲವೇ?’ ಎಂದು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ನಾನು ಈಗ 24*7 ರಾಜಕಾರಣಿ, ಸಿನಿಮಾ ಮಾಡೋದನ್ನು ಬಂದ್ ಮಾಡಿದ್ದೇನೆ: ನಿಖಿಲ್ ಕುಮಾರಸ್ವಾಮಿ

ವಿಧಾನಸಭಾವಾರು ವರದಿಗೆ ಸೂಚನೆ: ಗೆಲ್ಲಬಹುದಾಗಿದ್ದ 5-6 ಕ್ಷೇತ್ರಗಳ ಸೋಲಿಗೆ ಕಾರಣವೇನು ಎಂಬುದನ್ನು ತಿಳಿಸಬೇಕು. ಜತೆಗೆ ಫಲಿತಾಂಶದ ಕುರಿತು ಆತ್ಮಾವಲೋಕನ ನಡೆಸಿ, ಈಗಿನಿಂದಲೇ ಪಕ್ಷ ಸಂಘಟನೆ ಬಲಗೊಳಿಸಲು ಕಾರ್ಯಸೂಚಿ ಸಿದ್ಧಪಡಿಸಿ. ರಾಜ್ಯದಲ್ಲಿ ಪಂಚ ಗ್ಯಾರಂಟಿ ನೀಡಿದರೂ ಸೋಲಿಗೆ ಕಾರಣವೇನು? ಎಲ್ಲಿ ತಪ್ಪಾಗಿದೆ ಎಂಬ ಕುರಿತು ಸೋಲಿನ‌ ಬಗ್ಗೆ ವಿಧಾನಸಭಾವಾರು ವರದಿ ಕೊಡಿ ಎಂದು ರಾಹುಲ್ ಗಾಂಧಿ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ ದೇಶಾದ್ಯಂತ ಇಂಡಿಯಾ ಒಕ್ಕೂಟ ಉತ್ತಮ ಸಾಧನೆ ಮಾಡಿದೆ. ಮೋದಿ ಅವರ ಗೆಲುವಿನ ಓಟಕ್ಕೆ ತಡೆ ಹಾಕಿದ್ದೇವೆ. ಸಂವಿಧಾನದ ರಕ್ಷಣೆ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವ ಅಗತ್ಯ ಇದೆ. ಹಾಗಾಗಿ ಸೋಲಿನಿಂದ ಧೃತಿಗೆಡಬೇಡಿ. ಉತ್ತಮವಾಗಿ ಕಾರ್ಯ ನಿರ್ವಹಿಸಿ. ಈ ನಿಟ್ಟಿನಲ್ಲಿ ಕಾರ್ಯಸೂಚಿ ಸಿದ್ಧಪಡಿಸಿ ಎಂದು ಸಮಾಧಾನದ ಮಾತನ್ನೂ ಆಡಿದರು ಎಂದು ತಿಳಿದುಬಂದಿದೆ.

click me!