ವಿಧಾನಪರಿಷತ್‌ನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಮೂರು ಸ್ಥಾನಗಳು ಲಭಿಸಿದರೆ, ಮೂರು ಸ್ಥಾನಗಳು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ಪಾಲಾಗಿವೆ.
ಬೆಂಗಳೂರು (ಜೂ.08): ವಿಧಾನಪರಿಷತ್‌ನ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಮೂರು ಸ್ಥಾನಗಳು ಲಭಿಸಿದರೆ, ಮೂರು ಸ್ಥಾನಗಳು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ಪಾಲಾಗಿವೆ. ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಗಳಿಕೆಯನ್ನು ಒಂದು ಸ್ಥಾನದಿಂದ ಮೂರು ಸ್ಥಾನಕ್ಕೆ ಹೆಚ್ಚಿಸಿಕೊಂಡಿದೆ. ಬಿಜೆಪಿ ಮೂರು ಸ್ಥಾನಗಳಲ್ಲಿ ಎರಡು ಸ್ಥಾನ ಕಳೆದುಕೊಂಡಿದ್ದು, ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ ಎರಡು ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಯಥಾವತ್ ಕಾಪಾಡಿಕೊಂಡಿದೆ. ಮೇಲ್ಮನೆ ಬಲಾಬಲ: ಒಟ್ಟು 75. ಕಾಂಗ್ರೆಸ್ - 34, ಬಿಜೆಪಿ - 30, ಜೆಡಿಎಸ್ - 8, ಪಕ್ಷೇತರ - 1, ಖಾಲಿ - 1, ಸಭಾಪತಿ - 1
ಮೇಲ್ಮನೆಯಲ್ಲಿ ಈಗಲೇ ಬಿಜೆಪಿ-ಜೆಡಿಎಸ್ ಮೈತ್ರಿಗೇ ಹೆಚ್ಚು ಬಲ: ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ಮತ್ತು ಪದವೀಧರ-ಶಿಕ್ಷಕ ಕ್ಷೇತ್ರದ ಆರು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನಗಳನ್ನು ಗಳಿಸಿದರೂ ಮೇಲ್ಮನೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಮೇಲುಗೈ ಅಬಾಧಿತವಾಗಿ ಮುಂದುವರೆಯಲಿದೆ. ಈ ಎರಡು ಚುನಾವಣೆಗಳ ಬಳಿಕ ಪರಿಷತ್ತಿನಲ್ಲಿ ಕಾಂಗ್ರೆಸ್ಸಿನ ಬಲ 34 ಇದ್ದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ಬಲ 38. ಹೀಗಾಗಿ ಸಂಖ್ಯಾಬಲ ಕೊರತೆಯಿಂದಾಗಿ ಬಿಜೆಪಿಗೆ ಲಭಿಸಿರುವ ಸಭಾಪತಿ ಸ್ಥಾನಕ್ಕೆ ಯಾವುದೇ ಸಂಕಷ್ಟ ಇಲ್ಲ.
38ಕ್ಕೂ ಹೆಚ್ಚಿನ ಸ್ಥಾನಗಳು ಕಾಂಗ್ರೆಸ್‌ಗೆ ಲಭಿಸಿದರೆ ಮಾತ್ರ ಬಹುಮತ ಪಡೆದುಕೊಳ್ಳಲಿದೆ. ಸಭಾಪತಿ ಸ್ಥಾನ ತ್ಯಾಗ ಮಾಡುವ ಆತಂಕಕ್ಕೊಳಗಾಗಿದ್ದ ಬಿಜೆಪಿ ಸದ್ಯಕ್ಕೆ ನಿರಾಳವಾಗಿದೆ. ಚುನಾವಣೆಗೂ ಮುನ್ನ ಪರಿಷತ್‌ನ ಬಲಾಬಲವು ಕಾಂಗ್ರೆಸ್ 29, ಬಿಜೆಪಿ 32, ಜೆಡಿಎಸ್ 7, ಪಕ್ಷೇತರ 1, ಸಭಾಪತಿ 1 ಮತ್ತು ಐದು ಖಾಲಿ ಸ್ಥಾನಗಳಿದ್ದವು. ಎರಡು ಚುನಾವಣೆ ಬಳಿಕ ಕಾಂಗ್ರೆಸ್ 34, ಬಿಜೆಪಿ 30, ಮತ್ತು ಜೆಡಿಎಸ್ 8 ಸ್ಥಾನಗಳನ್ನು ಹೊಂದಿವೆ. ಲೋಕಸಭೆಗೆ ಆಯ್ಕೆಯಾಗಿರುವ ಜಗದೀಶ್ ಶೆಟ್ಟರ್ ರಾಜೀನಾಮೆಯಿಂದಾಗಿ ಖಾಲಿ ಇರುವ ಸ್ಥಾನಕ್ಕೆ ಮತ್ತು ಲೋಕಸಭೆಗೆ ಪ್ರವೇಶಿಸುತ್ತಿರುವ ಕೋಟ ಶ್ರೀನಿವಾಸ ಪೂಜಾರಿ ತೆರವಿನಿಂದ ಖಾಲಿಯಾಗುವ ಸ್ಥಾನಕ್ಕೆ ಅಧಿಸೂಚನೆ ಪ್ರಕಟಿಸಬೇಕಾಗಿದೆ. ಈ ಎರಡು ಸ್ಥಾನಗಳು ಕಾಂಗ್ರೆಸ್‌ಗೆ ಲಭಿಸುವ ಸಾಧ್ಯತೆ ಇದೆ.
ನಾನು ಈಗ 24*7 ರಾಜಕಾರಣಿ, ಸಿನಿಮಾ ಮಾಡೋದನ್ನು ಬಂದ್ ಮಾಡಿದ್ದೇನೆ: ನಿಖಿಲ್ ಕುಮಾರಸ್ವಾಮಿ
ಪಕ್ಷೇತರ ಇರುವ ಒಂದು ಸ್ಥಾನವು ಕಾಂಗ್ರೆಸ್‌ಗೆ ಬೆಂಬಲ ಸಿಗಲಿದೆ. ಅಲ್ಲದೇ, ಅಕ್ಟೋಬರ್ ತಿಂಗಳಲ್ಲಿ ಎರಡು ಸ್ಥಾನ ಖಾಲಿಯಾಗಲಿದ್ದು, ಬಳಿಕವಷ್ಟೇ ಕಾಂಗ್ರೆಸ್ ಬಹುಮತ ಪಡೆದುಕೊಳ್ಳಲಿದೆ. ಅಲ್ಲಿಯವರೆಗೆ ಸಭಾಪತಿ ಸ್ಥಾನಕ್ಕೆ ಯಾವುದೇ ಕುತ್ತು ಇಲ್ಲ. ವಿಧಾನಪರಿಷತ್‌ನಲ್ಲಿ ಸಂಖ್ಯಾಬಲದ ಕೊರತೆಯು ಆಡಳಿತ ಪಕ್ಷ ಕಾಂಗ್ರೆಸ್‌ಗೆ ಸಾಕಷ್ಟು ಇರಿಸು-ಮುರುಸು ಉಂಟುಮಾಡಿದೆ. ಕಾಂಗ್ರೆಸ್ ಸರ್ಕಾರ ರಚನೆಯಾದಾಗಿನಿಂದ ಕೆಲವು ವಿಧೇಯಕಗಳಿಗೆ ವಿಧಾನಪರಿಷತ್‌ನಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ. ಬಹುಮತ ಇಲ್ಲದ ಕಾರಣ ವಿಧೇಯಕಗಳಿಗೆ ಅಂಗೀಕಾರ ಸಿಗುವುದು ಕಷ್ಟಕರವಾಗುತ್ತಿದೆ. ಅಕ್ಟೋಬರ್ ಬಳಿಕವಷ್ಟೇ ಕಾಂಗ್ರೆಸ್ ಕೆಲವು ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳಲು ಸುಲಭವಾಗಲಿದೆ ಎಂದು ಹೇಳಲಾಗಿದೆ.