
ತುಮಕೂರು (ಆ.10): ಮತಕಳ್ಳತನ ಬಗ್ಗೆ ರಾಹುಲ್ ಗಾಂಧಿ ಅವರು ದೆಹಲಿಯ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತಾರೆ ಎಂದು ಗೃಹ ಸಚಿವ ಡಾ। ಜಿ. ಪರಮೇಶ್ವರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಕೊಡದೇ ಇರುವುದಕ್ಕೆ ಕೆಲ ನಿಯಮಾವಳಿಗಳಿವೆ. ಅವರು ದೂರು ಕೊಡುವುದಕ್ಕೆ ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗವಿದೆ.
ಅವರು ವಿರೋಧ ಪಕ್ಷದ ನಾಯಕರಾಗಿ ಅಲ್ಲಿ ದೂರು ಕೊಟ್ಟರೆ ಹೆಚ್ಚು ಮಹತ್ವ ಬರುತ್ತದೆ ಎಂದರು. ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಕೊಟ್ಟರೆ ಇವರು ಕೇಂದ್ರಕ್ಕೆ ಕಳುಹಿಸಿ ಕೊಡುತ್ತಾರೆ. ಇವರೇನು ಕ್ರಮ ತೆಗೆದುಕೊಳ್ಳುವುದಿಲ್ಲ. ಬಿಜೆಪಿಯವರು ಅದನ್ನೇ ಚರ್ಚೆ ಮಾಡಲಿಕ್ಕೆ ಹೊರಟರೆ ವಿಪರ್ಯಾಸ ಅಷ್ಟೇ ಎಂದು ಹೇಳಿದರು. ರಾಜ್ಯ ಚುನಾವಣಾ ಆಯೋಗದವರು ದಾಖಲೆ ಕೊಡಿ ಅಂತ ಕೇಳಿದ್ದಾರೆ ಅವರಿಗೆ ದಾಖಲೆ, ಪ್ರಮಾಣ ಪತ್ರ ಎಲ್ಲಾ ಕೆಪಿಸಿಸಿಯಿಂದ ಕೊಡುತ್ತಾರೆ.
ಪ್ರಮಾಣ ಪತ್ರಕ್ಕೆ ರಾಹುಲ್ ಗಾಂಧಿ ಸಹಿ ಕೊಡಬೇಕು ಅಂತ ಏನಿದೆ ಎಂದು ಪ್ರಶ್ನಿಸಿದ ಅವರು, ಇದು ನಮ್ಮ ರಾಜ್ಯಕ್ಕೆ ಸಂಬಂಧಿಸಿದ್ದು ಕೆಪಿಸಿಸಿ ಅಧ್ಯಕ್ಷರು ಜವಾಬ್ದಾರಿ ಸ್ಥಾನದಲ್ಲಿರುವವರು ಅವರು ಕೊಡುತ್ತಾರೆ ಎಂದು ತಿಳಿಸಿದರು. ಬಿಹಾರ ಚುನಾವಣೆ ಮುಂದಿಟ್ಟುಕೊಂಡು ಕಾಂಗ್ರೆಸ್ ಈ ರೀತಿ ಮಾಡುತ್ತೀದೆಯಾ ಎಂಬ ಆರೋಪವನ್ನು ತಳ್ಳಿ ಹಾಕಿದ ಪರಮೇಶ್ವರ್, ಬಿಹಾರ ಒಂದೇ ಅಲ್ಲಾ, ಇಡೀ ದೇಶದಲ್ಲಿ ಅನೇಕ ಕಡೆ ಚುನಾವಣೆಯಾಗಲಿದೆ. ಇನ್ನು ಒಂದು ವರ್ಷದಲ್ಲಿ ಐದಾರು ರಾಜ್ಯಗಳಲ್ಲಿ ಚುನಾವಣೆ ಬರುತ್ತದೆ. ಅದಕ್ಕೂ ಮೊದಲೇ ಎಚ್ಚರಿಕೆ ವಹಿಸಬೇಕು ಎಂದರು.
ಖರ್ಗೆ ರಾಜ್ಯಕ್ಕೆ ಮರಳಿದರೆ ತಪ್ಪೇನಿದೆ?: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸ್ಥಾನದ ಕುರಿತು ಆಡಿರುವ ಮಾತು ಇದೀಗ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಕೆಲ ಸಚಿವರು ಹಾಗೂ ಶಾಸಕರು ‘ಅವರು ಸಿಎಂ ಆದ್ರೆ ತಪ್ಪೇನು?’, ‘ಅವರು ಎಲ್ಲಾ ಹುದ್ದೆಗಳಿಗೂ ಅರ್ಹರು’ ಎನ್ನುವ ಮೂಲಕ ‘ಖರ್ಗೆ ಸಿಎಂ’ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಚಿವರಾದ ಡಾ. ಜಿ.ಪರಮೇಶ್ವರ್, ಶಾಸಕ ಅಜಯ್ ಧರ್ಮಸಿಂಗ್ ಅವರು ಖರ್ಗೆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಮರಳುವುದಾದರೆ ಅದರಲ್ಲಿ ತಪ್ಪೇನೂ ಇಲ್ಲ.
ಅವರು ನಮ್ಮ ಪಕ್ಷದಲ್ಲಿ ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಹಾಗಾಗಿ ರಾಜ್ಯ ರಾಜಕಾರಣಕ್ಕೆ ಬರುತ್ತೇನೆಂದರೆ ತಪ್ಪೆಂದು ಯಾರೂ ಅರ್ಥೈಸಬಾರದು ಎಂದು ಹೇಳಿದ್ದಾರೆ. ಅಲ್ಲದೆ, ಸುದೀರ್ಘ 50 ವರ್ಷ ರಾಜಕಾರಣ ಮಾಡಿರುವುದರಿಂದ ಅವರಿಗೆ ಅಪಾರ ಅನುಭವವಿದೆ. ಹೀಗಾಗಿ ಅವರ ಹೇಳಿಕೆಯನ್ನು ತಪ್ಪಾಗಿ ಭಾವಿಸುವುದು ಸರಿಯಲ್ಲ. ಖರ್ಗೆಯವರ ಬಗ್ಗೆ ಈಗ ಯಾರ್‍ಯಾರು ಮಾತಾಡಿದ್ದಾರೋ ಅವರು ಯಾರೂ ಖರ್ಗೆಯವರ ಹಂತಕ್ಕೆ ಬೆಳೆದವರಲ್ಲ. ಖರ್ಗೆಯವರು ಏನಾದರೂ ಹೇಳಿದಾಗ ತಪ್ಪಾಗಿ ಭಾವಿಸುವ ಅಗತ್ಯ ಇಲ್ಲ. ಅವರು ರಾಜ್ಯಕ್ಕೆ ಬರುತ್ತೇನೆಂದು ಹೇಳಿದರೆ ತಪ್ಪೇನೂ ಇಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.