ಸಿದ್ದು, ಡಿಕೆಶಿ ಆಲಿಂಗನ ನೋಡಿ ಖುಷಿ: ಇಬ್ಬರ ಒಗ್ಗಟ್ಟಿನಿಂದ ಮುಂದೆ ಪಕ್ಷ ಅಧಿಕಾರಕ್ಕೆ, ರಾಹುಲ್‌ ಗಾಂಧಿ

By Kannadaprabha News  |  First Published Aug 4, 2022, 3:30 AM IST

ಬಸವಣ್ಣ ತತ್ವಗಳ ವಿರುದ್ಧವಾಗಿರುವ ರಾಜ್ಯ ಸರ್ಕಾರವನ್ನು ಕೆಳಕ್ಕಿಳಿಸಿ ಬಸವ ತತ್ವದ ಆಧಾರದ ಮೇಲೆಯೇ ಕಾಂಗ್ರೆಸ್‌ ಸರ್ಕಾರ ನಡೆಸಲಿದ್ದೇವೆ: ರಾಹುಲ್‌ ಗಾಂಧಿ 


ಜಯಪ್ರಕಾಶ್‌ ಬಿರಾದಾರ್‌

ದಾವಣಗೆರೆ(ಆ.04):  ಸಿದ್ದರಾಮಯ್ಯ ಅವರ ಜನ್ಮದಿನ ಅಮೃತ ಮಹೋತ್ಸವದಲ್ಲಿ ರಾಜ್ಯ ಕಾಂಗ್ರೆಸ್‌ ಒಗ್ಗಟ್ಟಿನ ಜಪ ಮಾಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ರಾಜ್ಯ ಕಾಂಗ್ರೆಸ್‌ ನಾಯಕರು ಒಗ್ಗಟ್ಟಿನಿಂದ ಬಿಜೆಪಿ, ಆರ್‌ಎಸ್‌ಎಸ್‌ ಸರ್ಕಾರವನ್ನು ಕಿತ್ತೊಗೆಯಲಿದ್ದಾರೆ. ಅಲ್ಲದೆ ಬಸವಣ್ಣ ತತ್ವಗಳ ವಿರುದ್ಧವಾಗಿರುವ ರಾಜ್ಯ ಸರ್ಕಾರವನ್ನು ಕೆಳಕ್ಕಿಳಿಸಿ ಬಸವ ತತ್ವದ ಆಧಾರದ ಮೇಲೆಯೇ ಕಾಂಗ್ರೆಸ್‌ ಸರ್ಕಾರ ನಡೆಸಲಿದ್ದೇವೆ ಎಂದು ಆಶ್ವಾಸನೆ ನೀಡಿದರು.
ಚಿತ್ರದುರ್ಗ ಮುರುಘಾ ಮಠದಲ್ಲಿ ಲಿಂಗಧಾರಣೆ ಮಾಡಿಸಿಕೊಂಡು ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ರಾಜ್ಯ ಬಿಜೆಪಿ ಸರ್ಕಾರ ಬಸವಣ್ಣನವರ ಪ್ರತಿಮೆ ಎದುರು ಪ್ರಮಾಣ ವಚನ ಸ್ವೀಕರಿಸಿ ಅಧಿಕಾರಕ್ಕೆ ಬಂದಿದೆ. ಆದರೆ, ಬಸವಣ್ಣನವರ ತತ್ವಗಳಿಗೆ ವಿರುದ್ಧವಾಗಿ ರಾಜ್ಯವನ್ನು ಲೂಟಿ ಮಾಡುತ್ತಿದ್ದು, ಕೋಮು ಸಂಘರ್ಷ ಹುಟ್ಟು ಹಾಕಿ ಜನರನ್ನು ವಿಭಜಿಸುವ ಕೆಲಸ ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

Tap to resize

Latest Videos

ಲಿಂಗಾಯತ ಪ್ರಾಬಲ್ಯವಿರುವ ಮಧ್ಯಕರ್ನಾಟಕದ ಸಮಾವೇಶದಲ್ಲಿ ನಿಂತು ಕಾಂಗ್ರೆಸ್‌ನಿಂದ ಚದುರಿದಂತಿರುವ ಲಿಂಗಾಯತ ಮತಗಳ ಕ್ರೋಢೀಕರಣಕ್ಕೆ ತಮ್ಮ ಭಾಷಣದಲ್ಲಿ ಒತ್ತು ನೀಡಿದರು. ಭಾಷಣ ಆರಂಭಿಸುತ್ತಿದ್ದಂತೆ ಸಿದ್ದರಾಮಯ್ಯ ಅವರ ಗುಣಗಾನ ಮಾಡಿದ ಅವರು, ನಾನು ಸಿದ್ದರಾಮಯ್ಯ ಅವರನ್ನು ಓರ್ವ ವ್ಯಕ್ತಿಯಾಗಿ ಇಷ್ಟಪಡುತ್ತೇನೆ. ಅವರ ವಿಚಾರಗಳಿಗೂ ನನ್ನ ವಿಚಾರಗಳಿಗೂ ಸಾಮ್ಯತೆ ಇದ್ದು, ಬಡವರು ಹಾಗೂ ಶೋಷಿತರ ಬಗ್ಗೆ ಅವರ ಬದ್ಧತೆಗೆ ನನ್ನ ಸಹಮತವಿದೆ.

Chitradurga: ರಾಹುಲ್ ಗಾಂಧಿಗೆ ಸಲಹೆ ನೀಡಿದ ಹಿರಿಯೂರಿನ ಷಡಕ್ಷರಮುನಿ ಸ್ವಾಮೀಜಿ

ಹೀಗಾಗಿಯೇ ಈವರೆಗೆ ಯಾರ ಹುಟ್ಟುಹಬ್ಬದಲ್ಲೂ ಭಾಗವಹಿಸದ ನಾನು ಈ ಅಮೃತೋತ್ಸವದಲ್ಲಿ ಭಾಗವಹಿಸಿದ್ದೇನೆ ಎಂದರು. ಈ ವೇಳೆ ಡಿ.ಕೆ. ಶಿವಕುಮಾರ್‌ ಅವರಿಗೂ ಬೇಜಾರಾಗದಂತೆ, ಪಕ್ಷ ಸಂಘಟನೆಯಲ್ಲಿ ಅಭೂತಪೂರ್ವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಪರಸ್ಪರ ಆಲಿಂಗನ ಮಾಡಿದ್ದು, ನೋಡಿ ಸಂತೋಷವಾಯಿತು. ರಾಜ್ಯ ಕಾಂಗ್ರೆಸ್‌ ಹೆಚ್ಚು ಬಲವಾಗಿದ್ದು, ಈ ಒಗ್ಗಟ್ಟಿನಿಂದ ರಾಜ್ಯದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ದುರಾಡಳಿತವನ್ನು ಹತ್ತಿಕ್ಕಲಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನ ಅಧಿಕಾರಕ್ಕೆ ತರಲಿದೆ ವಿಶ್ವಾಸ ವ್ಯಕ್ತಪಡಿಸಿದರು.

ಬಸವ ತತ್ವ ವಿರೋಧಿ ಸರ್ಕಾರ ಕಿತ್ತೊಗೆಯಿರಿ:

ಬಸವಣ್ಣ ಪ್ರತಿಮೆ ಎದುರು ಪ್ರತಿಜ್ಞೆ ಸ್ವೀಕರಿಸಿದ ರಾಜ್ಯ ಬಿಜೆಪಿ ಸರ್ಕಾರ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದು, ಜನರಲ್ಲಿ ದ್ವೇಷ ತುಂಬುತ್ತಿದೆ. ಭಾರೀ ಭ್ರಷ್ಟಾಚಾರದಲ್ಲಿ ತೊಡಗುವ ಮೂಲಕ ಬಸವಣ್ಣನವರ ಪ್ರಾಮಾಣಿಕತೆ, ಕಾಯಕವೇ ಕೈಲಾಸ ಸಂದೇಶದ ವಿರುದ್ಧ ಸರ್ಕಾರ ನಡೆಸುತ್ತಿದ್ದಾರೆ. ಮುಂದಿನ ಬಾರಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಜಗಜ್ಯೋತಿ ಬಸವೇಶ್ವರ ಅವರ ಸಿದ್ದಾಂತಗಳಿಗೆ ಅನುಗುಣವಾದ ಕಾರ್ಯಕ್ರಮ ಜಾರಿಗೊಸಲಾಗುವುದು ಎಂದು ಭರವಸೆ ನೀಡಿದರು.

ಸಿದ್ದರಾಮಯ್ಯ ಸರ್ಕಾರ ಮರೆತಿಲ್ಲ:

ಕಳೆದ ಸರ್ಕಾರದಲ್ಲಿ ಸಿದ್ದರಾಮಯ್ಯನವರು ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ಇಂದಿರಾ ಕ್ಯಾಂಟೀನ್‌, ಸಾಲ ಮನ್ನಾದಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು ಅದನ್ನು ಜನ ಇಂದಿಗೂ ಮರೆತಿಲ್ಲ. ರಾಜ್ಯದ ಜನತೆಯು ಸಿದ್ದರಾಮಯ್ಯ ಸರ್ಕಾರ ಹಾಗೂ ಈಗಿನ ಸರ್ಕಾರವನ್ನು ಹೋಲಿಕೆ ಮಾಡಲು ಶುರು ಮಾಡಿದ್ದಾರೆ.

ಸಿದ್ದರಾಮೋತ್ಸವ ಕಾಂಗ್ರೆಸ್‌ಗೇ ತಿರು​ಗು​ಬಾಣ ಆಗ​ಲಿ​ದೆ: ಈಶ್ವರಪ್ಪ ಹೇಳಿ​ಕೆ

ಕಳೆದ ಎಂಟು ವರ್ಷದಲ್ಲಿ ಕೇಂದ್ರ ಸರ್ಕಾರ ಹೇಳಿಕೊಳ್ಳುವ ಯಾವುದೇ ಕಾರ್ಯಕ್ರಮ ಜಾರಿಗೆ ತಂದಿಲ್ಲ. ಬದಲಾಗಿ ನೋಟು ಅಮಾನ್ಯೀಕರಣ ಜಾರಿಗೆ ತಂದರು. ಇದರಿಂದ ಸಾಕಷ್ಟುಸಾಮಾನ್ಯ ಜನ, ಚಿಕ್ಕಪುಟ್ಟವ್ಯಾಪಾರಿಗಳು ಬೀದಿಗೆ ಬಂದರು. ಬಳಿಕ ಜಿಎಸ್‌ಟಿ ಜಾರಿಗೆ ತಂದು ಜನಸಾಮಾನ್ಯರ ಹಣ ಕೆಲವೇ ಶ್ರೀಮಂತರಿಗೆ ವರ್ಗಾವಣೆ ಆಗುವಂತೆ ಮಾಡಿದೆ. ಈ ಎರಡೂ ಯೋಜನೆಗಳು ರಾಷ್ಟ್ರೀಯ ದುರಂತ ಕಾರ್ಯಕ್ರಮಗಳಾಗಿವೆ ಎಂಬುದು ಜನಸಾಮಾನ್ಯರಿಗೂ ಅರಿವಾಗಿದೆ.

ಬಳಿಕ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿ ರೈತರಿಗೂ ಸಮಸ್ಯೆ ಮಾಡಿದರು. ಒಟ್ಟಾರೆಯಾಗಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ವಿವಿಧ ಯೋಜನೆಗಳ ಮೂಲಕ ಸಂಪತ್ತನ್ನು ಜನರಿಗೆ ಹಂಚಿಕೆ ಮಾಡಿತ್ತು. ಆದರೆ, ಬಿಜೆಪಿ ಜನರ ಹಣವನ್ನು ನಾಲ್ಕೈದು ಉದ್ಯಮಿಗಳ ಕೈಗೆ ನೀಡುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಯಾವುದೇ ಉದ್ಯಮ ಯಶಸ್ವಿಗೆ ಆ ಸ್ಥಳದ ಶಾಂತಿ, ಸಾಮರಸ್ಯ ಮುಖ್ಯವಾಗುತ್ತದೆ. ಸದ್ಯ ಕರ್ನಾಟಕದ ಬಗ್ಗೆ ವಿದೇಶಗಳಲ್ಲಿ ಅಭಿಪ್ರಾಯ ಬದಲಾಗುತ್ತಿದ್ದು, ಅತಿ ಹೆಚ್ಚು ಅಹಿಂಸೆಯಿಂದ ತುಂಬಿದೆ ಎನ್ನುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರ ಇದ್ದ ಸಂದರ್ಭದಲ್ಲಿ ಇಂತಹ ವಾತಾವರಣ ಇರಲಿಲ್ಲ, ಎಲ್ಲಾ ಸಮುದಾಯಗಳು ಸಾಮಾರಸ್ಯದಿಂದ ಇದ್ದರು. ಅಂತಹ ಸರ್ಕಾರ ಮತ್ತೆ ತರಬೇಕು ಎಂದು ಕರೆ ನೀಡಿದರು.
 

click me!