ಕಾರ್ಯಕ್ರಮ ಸ್ಥಳಕ್ಕೆ ತಲುಪಲಾಗದೆ ಸಾವಿರಾರು ಮಂದಿ ನಡುದಾರಿಯಿಂದಲೇ ವಾಪಸ್
ದಾವಣಗೆರೆ(ಆ.04): ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ರಾಜ್ಯ ವಿವಿಧ ಭಾಗಗಳಿಂದ ನದಿಗಳಂತೆ ಹರಿದು ಬಂದ ಜನ ಸಾಗರ ದಾವಣಗೆರೆ ಸೇರಿತ್ತು. ಕಣ್ಣಾಡಿಸಿದ ಕಡೆಯಲ್ಲಾ ಕಿ.ಮೀಗಟ್ಟಲೆ ಕಾಣುವ ಜನ ಸಮೂಹ. ಈ ಮೂಲಕ ರಾಜ್ಯ ರಾಜಕೀಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಜನ ಸೇರಿದ ಕಾರ್ಯಕ್ರಮ ಎಂಬುದಕ್ಕೆ ಸಿದ್ದರಾಮಯ್ಯ ಅಮೃತೋತ್ಸವ ಅಕ್ಷರಶಃ ಸಾಕ್ಷಿಯಾಗಿತ್ತು.
ಮಂಗಳವಾರ ರಾತ್ರಿ 50 ಸಾವಿರಕ್ಕೂ ಅಧಿಕ ಮಂದಿ, ಬೆಳಿಗ್ಗೆ 7 ಗಂಟೆಗೆ ಮೂರು ಲಕ್ಷಕ್ಕೂ ಅಧಿಕ ಮಂದಿ, ಬೆಳಿಗ್ಗೆ 10 ಗಂಟೆಗೆ ಐದು ಲಕ್ಷಕ್ಕೂ ಅಧಿಕ ಮಂದಿ ಕಾರ್ಯಕ್ರಮ ನಡೆಯುವ ಮೈದಾನ ಸೇರಿದರು. ಆ ಬಳಿಕ ಟ್ರಾಫಿಕ್ ಜಾಮ್ ಆಗಿದ್ದರಿಂದ ಮಧ್ಯಾಹ್ನ 1 ಗಂಟೆವರೆಗೂ ಜನ ಆಗಮಿಸುತ್ತಲೇ ಇದ್ದರು. ಇನ್ನು ಕೆಲವೆಡೆ ಹೆಚ್ಚಿನ ಟ್ರಾಫಿಕ್ ಎಂದು ನೂರಾರು ವಾಹನಗಳಲ್ಲಿ ಹಿಂದಿರುಗಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮಕ್ಕೆ ಒಟ್ಟಾರೆ 10 ಲಕ್ಷ ಮಂದಿ ಆಗಮಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
undefined
Siddaramotsava: ಸೂತಕದ ಮನೆಯಲ್ಲಿ ಸಂಭ್ರಮ ಎಷ್ಟು ಸರಿ: ಸಿ.ಟಿ.ರವಿ ಪ್ರಶ್ನೆ
ಮಂಗಳವಾರ ಸಂಜೆ ರಾಜ್ಯದ ವಿವಿಧ ಊರುಗಳಿಂದ ಹೊರಟಿದ್ದ ಸಿದ್ದರಾಮಯ್ಯ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರ ಪೈಕಿ ಲಕ್ಷಾಂತರ ಮಂದಿ ಮಧ್ಯರಾತ್ರಿ ವೇಳೆಗೆ ದಾವಣಗೆರೆ ತಲುಪಿದ್ದರು. ಆ ವೇಳೆಗೆ ನೇರವಾಗಿ ವೇದಿಕೆ ಇದ್ದ ಶಾಮನೂರು ಪ್ಯಾಲೆಸ್ ಮೈದಾನ ತಲುಪಿ ಅಲ್ಲಿಯೇ ಬೀಡುಬಿಟ್ಟಿದ್ದರು. ಬೆಳಕು ಹರಿಯುತ್ತಿದ್ದಂತೆ ಪುಣೆ ಬೆಂಗಳೂರು ಹೆದ್ದಾರಿ ಒಂದು ದಿಕ್ಕಿನಿಂದ ಉತ್ತರ ಕರ್ನಾಟಕದ ಗದಗ, ವಿಜಯಪುರ, ಹುಬ್ಬಳ್ಳಿ ಧಾರವಾಡ, ಕಲಬುರಗಿ, ಬಳ್ಳಾರಿ, ಬೆಳಗಾವಿ, ಬೀದರ್ ಜಿಲ್ಲೆಗಳಿಂದ, ಮತ್ತೊಂದು ದಿಕ್ಕಿನಿಂದ ದಕ್ಷಿಣ ಕರ್ನಾಟಕದ ಮೈಸೂರು, ಚಾಮರಾಜನಗರ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಂದ ಸಾಗರೋಪದಾದಿಯಲ್ಲಿ ಜನ ಆಗಮಿಸಿದರು.
ಐತಿಹಾಸಿಕ ದಾಖಲೆ:
ಕಾಂಗ್ರೆಸ್ ಹಿರಿಯ ನಾಯಕರಾದ ಎಚ್.ಕೆ.ಪಾಟೀಲ್, ವೀರಪ್ಪ ಮೊಯ್ಲಿ, ರಮೇಶ್ ಕುಮಾರ್, ಬಿ.ಕೆ.ಹರಿಪ್ರಸಾದ್ ಅವರು ಕಾರ್ಯಕ್ರಮದ ಜನಸ್ತೋಮ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಲ್ಲದೆ ತಮ್ಮ ಭಾಷಣಗಳಲ್ಲಿಯೂ ನಮ್ಮ ರಾಜಕೀಯ ಇತಿಹಾಸದಲ್ಲಿ ಇಷ್ಟೊಂದು ಜನ ಸೇರಿದ್ದು ನೋಡಿಲ್ಲ ಎಂದು ಉಲ್ಲೇಖಿಸಿದರು.