
ತೀರ್ಥಹಳ್ಳಿ(ಮೇ.02): ಕಾಂಗ್ರೆಸ್ ಪಕ್ಷದ ಸಭೆಗಳಲ್ಲಿ ಯಾವುದೇ ಕೋಪ, ನಿಷ್ಟುರ ಮತ್ತು ಅಸಹನೆ ಯಾವುದೂ ಇರುವುದಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಯಾವುದೇ ಬೇದಭಾವವಿಲ್ಲದೇ, ಎಲ್ಲರಿಗೂ ಗೌರವ, ಪ್ರೀತಿ, ವಿಶ್ವಾಸದಿಂದ ಒಟ್ಟಿಗೆ, ಒಗ್ಗಟ್ಟಾಗಿ ಬಾಳೋಣ ಎಂಬ ನಮ್ಮ ಕಾಂಗ್ರೆಸ್ ಕಾರ್ಯಕರ್ತರ ನಡೆ ಮತ್ತು ಆಶಯ ನಿಜಕ್ಕೂ ಅನುಕರಣೀಯ. ನಾನು ಇಲ್ಲಿಗೆ ಬಂದ ಕೂಡಲೇ ನಮ್ಮ ಪಕ್ಷದ ಹಿರಿಯ ನಾಯಕರು ಮತ್ತು ಪಕ್ಷದ ನಾಯಕರ ಹೆಸರನ್ನು ನಾನು ನನ್ನ ಮನದಲ್ಲಿ ಮನದಟ್ಟು ಮಾಡುತ್ತೇನೆ ಮತ್ತು ನಾನು ಭಾಷಣದ ಆರಂಭದಲ್ಲಿ ನಮ್ಮ ಪಕ್ಷದ ಹಿರಿಯ ನಾಯಕರ ಹೆಸರನ್ನು ಉಲ್ಲೇಖ ಮಾಡುತ್ತೇನೆ ಅಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇಂದು(ಮಂಗಳವಾರ) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಯಾವುದೇ ಅವರ ಪಕ್ಷದ ಹಿರಿಯ ನಾಯಕರ ಹೆಸರನ್ನು ಹೇಳಲ್ಲ. ಕರ್ನಾಟಕದ ಯಾವುದೇ ಬಿಜೆಪಿಯ ಹಿರಿಯ ನಾಯಕರ ಹೆಸರನ್ನು ಹೇಳಲ್ಲ. ಯಡಿಯೂರಪ್ಪ, ಬೊಮ್ಮಾಯಿ ಅವರ ಹೆಸರನ್ನೇ ಹೇಳಲ್ಲ. ಕರ್ನಾಟಕದ ಜನ ಕೇಳ್ತಾ ಇದ್ದಾರೆ ಯಾಕಾಗಿ ನೀವು ರಾಜ್ಯದ ಬಿಜೆಪಿಯ ಹಿರಿಯ ನಾಯಕರ ಹೆಸರನ್ನು ಹೇಳಲ್ಲ?. ಆದರೆ ನಾವು ಸಿದ್ದರಾಮಯ್ಯ, ಖರ್ಗೆ ಮತ್ತು ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ನಾವು ಹೇಳುತ್ತೇವೆ ಅಂತ ತಿಳಿಸಿದ್ದಾರೆ.
ಗ್ಯಾರಂಟಿ ಕಾರ್ಡ್ ಬೇಕಿಲ್ಲ, ಸಾಧನೆಯೇ ನಮಗೆ ರಿಪೋರ್ಟ್ ಕಾರ್ಡ್: ಬಿ.ಎಲ್.ಸಂತೋಷ್
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಗೃಹ ಸಚಿವರು ಈ ಚುನಾವಣೆಯನ್ನು ಎದುರಿಸುತ್ತಾ ಇದ್ದಾರೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಪ್ರಧಾನಿ ಮೋದಿ ಅವರು ಈ ಭ್ರಷ್ಟ ಗೃಹ ಸಚಿವರ ಹೆಸರನ್ನು ಎಲ್ಲೂ ಹೇಳಲ್ಲ. ಇದಕ್ಕೆ ಎರಡು ಕಾರಣಗಳಿವೆ. ಒಂದು, ನರೇಂದ್ರ ಮೋದಿ ಅವರು ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುತ್ತಾರೆ. ಕರ್ನಾಟಕ ರಾಜ್ಯದ ವಿಕಾಸದ ಬಗ್ಗೆ ಮತ್ತು ಭ್ರಷ್ಠಾಚಾರದ ಬಗ್ಗೆ ಉತ್ತರ ಕೊಡಿ ಎಂತ ಹೇಳಿದ್ರೆ ಅವರು ಕೇವಲ ಪ್ರಧಾನಿಯ ಬಗ್ಗೆಯೇ ಮಾತನಾಡುತ್ತಾರೆ. ಕಳೆದ 3 ವರ್ಷಗಳಲ್ಲಿ ಇಲ್ಲಿ ಕಳ್ಳಹಾದಿಯಲ್ಲಿ ಹಿಡಿದ ಸರ್ಕಾರದ ಬಗ್ಗೆ ಯಾಕೆ ಮೋದಿ ಚಕಾರವೆತ್ತುತ್ತಿಲ್ಲ. ಕೊನೆ ಪಕ್ಷ ಈ ಭ್ರಷ್ಟಾಚಾರದ ಕುರಿತು ಮಾತನಾಡಿಲ್ಲ. ನೀವು ಭ್ರಷ್ಟಾಚಾರವನ್ನು ಕೊನೆಗಾನಿಸಲು ನೀವು ಯಾವ ಹೆಜ್ಜೆಯನ್ನು ಅನುಕರಿಸಿದ್ದೀರಾ ಎಂದು ಪ್ರಶ್ನಿಸಿದ ಅವರು, ರಾಜ್ಯದ ಬಿಜೆಪಿ ಸರ್ಕಾರ ವಿರುದ್ಧ 40% ಕಮಿಷನ್ ಆರೋಪದ ಕುರಿತು ನಿಮಗೆ ಗುತ್ತಿಗೆದಾರರು ನಿಮಗೆ ಪತ್ರ ಬರೆದಿದ್ದಾರೆ. ನೀವು ಇನ್ನೂ ಉತ್ತರ ಕೊಟ್ಟಿಲ್ಲ ಅಂತ ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ.
ಗೋವಾ, ಮಹಾರಾಷ್ಟ್ರ, ಕರ್ನಾಟಕದ ನೀರು ಹಂಚಿಕೆಯ ಬಗ್ಗೆ ಕನಿಷ್ಟ ನಿಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿ ಪ್ರಧಾನಿಯನ್ನು ಆಗ್ರಹಿಸಿದ ಅವರು, ರಾಜ್ಯದಲ್ಲಿ ಪ್ರವಾಹ ಬಂದಾಗಲು ನೀವು ಕರ್ನಾಟಕಕ್ಕೆ ಯಾಕಾಗಿ ಭೇಟಿ ನೀಡಿಲ್ಲ. ನೀವು ಕರ್ನಾಟಕದಿಂದ ತೆರಿಗೆಯ ಹೆಚ್ಚಿನ ಪಾಲನ್ನು ತೆಗೆಯುತ್ತಿದ್ದೀರಾ ಆದರೆ ಕಡಿಮೆ ಹಣವನ್ನು ಕರ್ನಾಟಕಕ್ಕೆ ಕೊಡ್ತಾ ಇದ್ದೀರಾ. ರಾಜ್ಯದ ರೈತರ ಬೆಲೆಯ ಬಗ್ಗೆ ಮಾತನಾಡಿ, ಅವರಿಗೆ ಏನು ಕೊಡುಗೆ ನೀಡಿದ್ದೀರಾ? ಈ ಶಿವಮೊಗ್ಗ ಜಿಲ್ಲೆಯ ಭಧ್ರಾವತಿಯ ಉಕ್ಕಿನ ಕಾರ್ಖಾನೆ ಉಳಿಸಲು ಏನು ಮಾಡಿದ್ದೀರಿ ಅಂತ ಜನತೆಗೆ ತಿಳಿಸಿ ಅಂತ ಒತ್ತಾಯಿಸಿದ್ದಾರೆ.
ಈ ಚುನಾವಣೆ ನರೇಂದ್ರ ಮೋದಿಯ ಅವರ ಬಗ್ಗೆ ಅಲ್ಲ. ಈ ಚುನಾವಣೆ ನಮ್ಮ ಮಕ್ಕಳ, ಮಹಿಳೆಯರ ಮತ್ತು ರೈತರ, ಕಾರ್ಮಿಕರ ಚುನಾವಣೆ ಆಗಿದೆ ಹೊರತು ಇದು ನರೇಂದ್ರ ಮೋದಿಯ ಕುರಿತಲ್ಲ. ಈ ಚುನಾವಣೆಯ ಪ್ರಮುಖ ವಿಷಯವೇನೆಂದರೆ, ಭ್ರಷ್ಟಾಚಾರ, ಬೆಲೆಯೇರಿಕೆ, ನಿರುದ್ಯೋಗ ಇದರ ಬಗ್ಗೆ ಚುನಾವಣೆ ನಡೆಯುತ್ತಿದೆ. ಕಳೆದ 3 ವರ್ಷಗಳ ಈ ರಾಜ್ಯದ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಪ್ರಪಂಚದಲ್ಲಿಯೇ ಅತೀ ಭ್ರಷ್ಟ ಸರ್ಕಾರ 40% ಕಮಿಷನ್ ಸರ್ಕಾರಿ ಎಂದು ದಾಖಲಾಗಿದೆ ಅಂತ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ನೋಟು ಅಮಾನ್ಯೀಕರಣ, ಜಿಎಸ್ ಟಿ ಜಾರಿಯಿಂದಾಗಿ ಸಣ್ಣ ವ್ಯಾಪರಸ್ಥರನ್ನು ನೆಲಸಮ ಮಾಡಿದ್ದಾರೆ ಮೋದಿ ಸರ್ಕಾರ, ದೇಶದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ರೈತರಿಗೆ ತೆರಿಗೆ ಕೊಡುವಂತಹ ಕಾರ್ಯಕ್ರಮವನ್ನು ಈ ಬಿಜೆಪಿ ಸರ್ಕಾರ ಮಾಡಿದೆ. ರೈತರು ಬಳಕೆ ಮಾಡುವ ಸಲಕರಣೆಗಳ ಶೆ. 5 ರಷ್ಟು, ರಸಗೊಬ್ಬರಗಳಿಗೆ 18ರಷ್ಟು, ರೈತರು ಬಳಸುವ ಟ್ರ್ಯಾಕ್ಟರ್ ಗಳಿಗೆ 12% ರಷ್ಟು ತೆರಿಗೆ ಹಾಕುತ್ತಿದ್ದಾರೆ. ನಮ್ಮ ಯುಪಿಎ ಸರ್ಕಾರವಿದ್ದಾಗ ಡಿಸೇಲ್ ಬೆಲೆ 56 ರೂ. ಇತ್ತು ಇದೀಗ ಮೋದಿ ಸರ್ಕಾರದಲ್ಲಿ 90 ರೂ. ಆಗಿದೆ. ಸಿಲಿಂಡರ್ ಬೆಲೆ 450 ರೂ. ಇತ್ತು ಇಂದು 1100 ರೂ. ಆಗಿದೆ. ಅಡುಗೆ ಎಣ್ಣೆ 60 ರೂ. ಆದರೆ ಇದೀಗ 200 ರೂ ತಲುಪಿದೆ. ಸುಮಾರು 1 ಕೋಟಿ ಜನ ನಿರುದ್ಯೋಗಿಗಳಾಗಿದ್ದಾರೆ. 40 ಕೋಟಿ ಜನ ಬಡತನ ರೇಖೆಗಿಂತ ಕೆಳಗೆ ಬಂದಿದ್ದಾರೆ. ಶೇ. 40ರಷ್ಟು ನಮ್ಮ ದೇಶದ ಜನರ ಆದಾಯ ಕೇವಲ ಶೆ.1ರಷ್ಟು ಜನರ ಹತ್ತಿರ ಇದೆ. ಇದು ದೇಶದ ಸತ್ಯ ಎಂದಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ, ಕರ್ನಾಟಕದ ಜನತೆಯೊಂದಿಗೆ ನಮ್ಮ ತಂಡ ಒಂದು ಸಮೀಕ್ಷೆ ನಡೆಸಿತ್ತು. ಅದರಲ್ಲಿ ಜನರ ಅಪೇಕ್ಷೆ, ಅನಿವಾರ್ಯತೆ ಮತ್ತು ಅವಶ್ಯಕತೆಯನ್ನು ನಾವು ಮನಗಂಡಿದ್ದೇವೆ. ಅದಕ್ಕಾಗಿ ನಾವು 5 ಗ್ಯಾರಂಟಿಗಳನ್ನು ನಾವು ಘೋಷಣೆ ಮಾಡಿದ್ದೇವೆ. ಗೃಹಲಕ್ಷ್ಮಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಅಕ್ಕಿ, ಮನೆ ಯಜಮಾನಿಗೆ 2 ಸಾವಿರ ರೂಪಾಯಿ, ನಿರುದ್ಯೋಗ ಯುವಕರಿಗೆ ನೆರವು, ಪದವೀಧರರಿಗೆ 3 ಸಾವಿರ ರೂಪಾಯಿ, ಡಿಪ್ಲೊಮಾ ಪದವೀಧರರಿಗೆ 1,500 ಯುವನಿಧೀ ಮೂಲಕ 2 ವರ್ಷಗಳ ಕಾಲ ಆರ್ಥಿಕ ನೆರವು ಈ 5 ಗ್ಯಾರಂಟಿಗಳನ್ನು ನಾವು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೊದಲ ದಿನದ ಮೊದಲ ಸಂಪುಟ ಸಭೆಯಲ್ಲೇ ನಾವು ಅದನ್ನು ಜಾರಿಗೆ ತರಲಿದ್ದೇವೆ ಅಂತ ಭರವಸೆ ನೀಡಿದ್ದಾರೆ.
ನನ್ನ ರೈತ ಮಿತ್ರರಿಗೆ ಕೃಷಿನಿಧಿ ಮುಂದಿನ 5 ವರ್ಷದಲ್ಲಿ 1.50 ಲಕ್ಷ ಕೋಟಿಯನ್ನ ಅಂದರೆ ವರ್ಷಕ್ಕೆ 30,000 ಕೋಟಿ ರೂ ಹಣವನ್ನು ರೈತರಿಗೆ ನಾವು ಮೀಸಲಿಟ್ಟಿದ್ದೇವೆ. ಹಾಲು ಉತ್ಪಾದಕರಿಗೆ ನಾವು 7. ರೂ ಪ್ರೋತ್ಸಾಹ ಧನ ನೀಡಲಿದ್ದೇವೆ. ತೆಂಗು ಬೆಳೆಗಾರರು, ಅಡಿಕೆ ಬೆಳೆಗಾರರಿಗೆ ಇವರಿಗೆ ಕನಿಷ್ಠ ಬೆಂಬಲ ನೀಡಲಿದ್ದೇವೆ ಅಂತ ಹೇಳಿದ್ದಾರೆ.
ಪ್ರತಿಸಲ ಕಾಂಗ್ರೆಸ್ ಅವರು ಇದುವರೆಗೂ ನನ್ನನ್ನು 91 ಬಾರಿ ಬೈದಿದ್ದಾರೆ ಎಂದು ಪ್ರಧಾನಿ ಮೋದಿ ಅವರು ಬಂದು ಇಲ್ಲಿ ಹೇಳ್ತಾರೆ. ಇದು ಪ್ರಧಾನಮಂತ್ರಿ ಅವರ ಪ್ರಶ್ನೆ ಅಲ್ಲ. ಇದು ಕರ್ನಾಟಕ ಜನತೆಯ ಪ್ರಶ್ನೆ. ಆದರೆ ಪ್ರಧಾನಿ ಇಲ್ಲಿಗೆ ಬಂದಾಗ ಇಲ್ಲಿನ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಲ್ಲ, ಇಲ್ಲಿನ ಸರ್ಕಾರದ ದುರಾಡಳಿತದ ಬಗ್ಗೆ ಮಾತನಾಡಲ್ಲ. ಆದರೆ ಕನಿಷ್ಟ ನಿಮ್ಮ ಸರ್ಕಾರ ಬಂದರೆ ಮುಂದಿನ ಐದು ವರ್ಷದಲ್ಲಿ ರಾಜ್ಯದ ಜನತೆಗೆ ಏನು ಮಾಡುತ್ತೀರಾ ಎಂಬುದನ್ನಾದರೂ ಹೇಳಿ ಅಂತ ತಿಳಿಸಿದ್ದಾರೆ.
ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಬಂಗಾರಪ್ಪರ ಕಣ್ಣುಗಳಿದ್ದಂತೆ: ಮಧು ಬಂಗಾರಪ್ಪ
ಕಳೆದ ಮೂರು ವರ್ಷಗಳಲ್ಲಿ ನಿಮ್ಮ 40 ರಷ್ಟು ಕಮಿಷನನ್ನು ನಿಮ್ಮ ಸರ್ಕಾರ ತೆಗದುಕೊಂಡಿಡಿರುವುದರ ಬಗ್ಗೆ ಮಾತನಾಡಿ, ಒಂದು ವೇಳೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ 40 ರಷ್ಟು ಇದ್ದ ಕಮಿಷನ್ ಇನ್ನೂ 50 ರಷ್ಟು ಮಾಡ್ತೀರಾ? ಏನಾದರೂ ಕರ್ನಾಟಕದ ಬಗ್ಗೆ ಮಾತನಾಡಿ, ಕೂಲಿ ಕಾರ್ಮಿಕರು, ಬೀದಿ ವ್ಯಾಪರಿಗಳ, ರೈತರು ಬಗ್ಗೆ ಮತನಾಡಿ, ಬರೇ ನಿಮ್ಮ ಬಗ್ಗೆ ಮಾತನಾಡಿ. 70ರಷ್ಟು ನೀವು ನಿಮ್ಮ ಬಗ್ಗೆಯೇ ಮಾತನಾಡಿ, ಕೊನೆಯ 30ರಷ್ಟು ನೀವು ರಾಜ್ಯದ ಜನತೆಗೆ ರೈತರಿಗೆ, ಕೂಲಿ ಕಾರ್ಮಿಕರಿಗೆ ಕಾರ್ಮಿಕರಿಗೆ ಏನು ಮಾಡಿದ್ದೀರೆಂದು ನೀವು ಹೇಳಬಹುದಲ್ಲವೇ? ನಿಮಗೆ ಗೊತ್ತಿದೆ ಕಳೆದ ನಿಮ್ಮ ಸರ್ಕಾರ ಕಳ್ಳತನದ ಸರ್ಕಾರ, ಆಸೆ ಆಮಿಷವೊಡ್ಡಿ ನೀವು ವಾಮ ಮಾರ್ಗದ ಮೂಲಕ ನಮ್ಮ ಕಾಂಗ್ರೆಸ್ ಶಾಸಕರನ್ನು ಖರೀದಿಸಿ ಈ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಅಂತ ತಿಳಿಸಿದ್ದಾರೆ.
ಇವರಿಗೆ 40 ಸಂಖ್ಯೆ ಅಂದರೆ ಬಹಳ ಇಷ್ಟ. ಪೊಲೀಸ್ ಠಾಣೆ ಹೋದರೂ 40%, ಸರ್ಕಾರಿ ಕಚೇರಿಯಲ್ಲೂ 40ರಷ್ಟು ಭ್ರಷ್ಟಾಚಾರ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ 40 ಕ್ಷೇತ್ರಗಳನ್ನು ಮಾತ್ರ ನೀಡಿ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪರಿವಾರ ಮತ್ತು ಕುಟುಂಬದವರು ಇಲ್ಲಿ ನಮ್ಮೊಂದಿಗೆ ಇದ್ದಾರೆ. ಬಂಗಾರಪ್ಪನವರು ಬಡ, ಶೋಷಿತ ವರ್ಗ ಮತ್ತು ಹಿಂದುಳಿದ ವರ್ಗಗಳ ನೇತಾರರಾಗಿದ್ದವರು. ಅವರು ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದವರು ನಾವು ಅವರನ್ನು ಎಂದಿಗೂ ನೆನಪಿಸುತ್ತೇವೆ ಅಂತ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.