ರಾಹುಲ್ ಗಾಂಧಿ ಅವರ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದು, ವಕ್ಫ್ ಬಿಲ್ ತಿದ್ದುಪಡಿ ವೇಳೆ ರಾಹುಲ್ ಮತ್ತು ಪ್ರಿಯಾಂಕಾ ಸಂಸತ್ತಿಗೆ ಬಾರದ ಬಗ್ಗೆ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಹುಬ್ಬಳ್ಳಿ (ಏ.06): ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ವಕ್ಫ್ ಬಿಲ್ ತಿದ್ದುಪಡಿ ಬೆನ್ನಲ್ಲಿಯೇ ಕ್ರಿಶ್ಚಿಯನ್ನರ ಆಸ್ತಿ ಮೇಲೆ ರಾಷ್ಟ್ರೀಯ ಸ್ವಯಂ ಸೇವಕರ ಸಂಘ (ಆರ್‌ಎಸ್‌ಎಸ್) ಕಣ್ಣಿಟ್ಟಿದೆ ಎಂದು ಆರೋಪಿಸಿದ್ದಾರೆ. ಆದರೆ, ಅವರೊಬ್ಬ ಅಪ್ರಬುದ್ಧ ರಾಜಕಾರಣಿ, ಅವರ ಮಾತುಗಳಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಕ್ರಿಶ್ಚಿಯನ್ನರ ಆಸ್ತಿ ಮೇಲೆ ಆರ್.ಎಸ್.ಎಸ್. ಕಣ್ಣಿಟ್ಟಿದೆ ಎಂಬ ಆರೋಪ ಮಾಡಿದ್ದಾರೆ. ಆದರೆ, ವಕ್ಫ್ ಬಿಲ್ ಮಂಡನೆ ಮಾಡುವ ವೇಳೆ ರಾಹುಲ್ ಮತ್ತು ಪ್ರಿಯಾಂಕಾ ವಾದ್ರಾ ಸಂಸತ್ತಿನ ಒಳಗೆ ಬಂದಿರಲಿಲ್ಲ. ಮುಸ್ಲಿ ಪರವಾಗಿ ಇರೋ ರಾಹುಲ್ ಮತ್ತು ಪ್ರಿಯಾಂಕ ಲೋಕಸಭೆಗೆ ಯಾಕೆ ಬರಲಿಲ್ಲ.? ರಾಹುಲ್ ಗಾಂಧಿಗೆ ಗಂಭೀರತೆಯೇ ಇಲ್ಲ. ಅವರ ಮಾತಿಗೆ ಯಾಕೆ ಪ್ರತಿಕ್ರಿಯೆ ನೀಡಬೇಕು. ಅವರೊಬ್ಬ ಅಪ್ರಬುದ್ಧ ರಾಜಕಾರಣಿ, ಅವರ ಮಾತಿಗೆ ಉತ್ತರಿಸುವ ಅವಶ್ಯಕತೆಯಿಲ್ಲ ಎಂದು ಹೇಳಿದರು.
ಕೇರಳದ ವಯನಾಡಿನಲ್ಲಿ ರಾಹುಲ್ ಮತ್ತು ಪ್ರಿಯಾಂಕ ವಿರುದ್ಧ ಜನ ಹೋರಾಟ ಮಾಡ್ತಿದ್ದಾರೆ. ಹೀಗಾಗಿ, ಅದನ್ನು ಡೈವರ್ಟ್ ಮಾಡೋಕೆ ಈ ರೀತಿ ಮಾತನಾಡುತ್ತಿದ್ದಾರೆ. ಕೇರಳದಲ್ಲಿ ಕೆಲ ಚರ್ಚ್ ಗಳನ್ನೂ ವಕ್ಫ್ ಮಾಡಲು ಹೊರಟಿದ್ದರು. ವಕ್ಫ್ ತಿದ್ದುಪಡಿಯಿಂದಾಗಿ ಕ್ರಿಶ್ಚಿಯನ್ನರೂ ಸಾಕಷ್ಟು ಖುಷಿಯಲ್ಲಿದ್ದಾರೆ. ಓಟ್ ಬ್ಯಾಂಕ್ ಜಾಸ್ತಿ ಇದೆ ಎಂದು ಕ್ರಿಶ್ಚಿಯನ್ನರನ್ನು ಬಿಟ್ಟು ಮುಸ್ಲಿಮರ ಬೆನ್ನುಹತ್ತಿದ್ದರು. ಕಾಂಗ್ರೆಸ್ ನಾಯಕರು ಬರೀ ಓಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ದೇಶದಲ್ಲಿ ವಕ್ಫ್ ಆಸ್ತಿ 18 ಲಕ್ಷದಿಂದ 39 ಲಕ್ಷ ಎಕರೆಗೆ ಏರಿಕೆಯಾಗಿದೆ. ಅದಕ್ಕೆ ಸರಿಯಾದ ರೀತಿಯಲ್ಲಿ ಆದಾಯ ಬಂದರೆ ಮುಸ್ಲಿಮರಿಗೂ ಖುಷಿಯಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಡಿಕೆಶಿ ಅಕ್ರಮದ ಬಗ್ಗೆ ಟನ್‌ಗಟ್ಟಲೇ ಸಾಕ್ಷಿ ನನ್ನ ಬಳಿಯಿವೆ- ಹೆಚ್‌ಡಿಕೆ; ಎಷ್ಟೇ ಟನ್ ದಾಖಲೆ ಇದ್ರೂ ಬಿಡುಗಡೆ ಮಾಡಲಿ -ಡಿಕೆಶಿ!
ದೇಶದಲ್ಲಿ ಕಾಂಗ್ರೆಸ್ ನುಡಿದಂತೆ ನಡೆಯೋಕೆ ಆಗುತ್ತಿಲ್ಲ. ತೆಲೆಂಗಾಣದಲ್ಲಿ ಕೊಟ್ಟ ಗ್ಯಾರಂಟಿಗಳನ್ನು ಜನರಿಗೆ ಕೊಡಲು ಸರ್ಕಾರಕ್ಕೆ ಆಗುತ್ತಿಲ್ಲ. ಕರ್ನಾಟಕದಲ್ಲಿ 3ನೇ ಬಾರಿಗೆ ಹಾಲಿನ ದರ ಏರಿಕೆಯಾಗಿದೆ. ಕೇವಲ 6 ತಿಂಗಳಲ್ಲಿ ಎರಡನೆಯ ಬಾರಿಗೆ ಡೀಸೆಲ್ ದರ ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ಎಷ್ಟು ಆದಾಯ ಬರುತ್ತಿದೆ.? ಆದರೂ ಇವರಿಗೆ ರಾಜ್ಯ ಹಾಗೂ ರಾಜ್ಯದ ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿಗಳನ್ನೂ ಮುಚ್ಚೋಕೆ ಆಗುತ್ತಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಲೂಟಿ ಹೊಡೀತಾ ಇದೆ ಎಂದರು.
ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಎಲ್ಲವೂ ಸರಿದಾರಿಗೆ ಬರುತ್ತದೆ. ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ಮಾಡ್ತೇವೆ. ಅಣ್ಣಾ ಮಲೈ ರಾಜೀನಾಮೆ ಕೊಡುತ್ತಿರುವುದರ ಬಗ್ಗೆ ನನಗೆ ಗೊತ್ತಿಲ್ಲ. ರಾಜೀನಾಮೆ ಕೊಟ್ಟಲ್ಲಿ, ಅವರಿಗೆ ಹೆಚ್ಚಿನ ಜವಾಬ್ದಾರಿ ಕೊಡಬಹುದು. ಅಣ್ಣಾ ಮಲೈ ಅವರಿಗೆ ನಾನು ಭೇಟಿಯಾಗಿಲ್ಲ. ತಮಿಳುನಾಡಿನಲ್ಲಿ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ಬಿಜೆಪಿ ಇಂಡಿಪೆಂಡೆಂಟ್ ಪಕ್ಷ. ಪಕ್ಷ ಸ್ವಂತ ನಿರ್ದಾರ ಕೈಗೊಳ್ಳಲಿದೆ. ಮೈತ್ರಿ ಪಕ್ಷದ ಮಾತು ಕೇಳಿ ಅಣ್ಣಮಲೈ ರಾಜೀನಾಮೆ ಪಡೀತಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಾಕಷ್ಟು ಅನುದಾನ ಕೊಡಲಾಗ್ತಿದೆ. ಆದರೆ ಅದನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ತಿಲ್ಲ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬೀಳುವಂತಾಗಿವೆ ಎಂದು ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಹೇಳಿದರು.
ಇದನ್ನೂ ಓದಿ: Waqf Bill 2025ರ ಬಗ್ಗೆ ಚರ್ಚಿಸದ ರಾಗಾ, ಪ್ರಿಯಾಂಕಾ ವಿರುದ್ಧಕೇರಳ ಮುಸ್ಲಿಂ ಪತ್ರಿಕೆ ಕಿಡಿ!