
ನವದೆಹಲಿ(ಡಿ.05): ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಸದ್ಯ ರಾಜಸ್ಥಾನದಲ್ಲಿ ಸಂಚರಿಸುತ್ತಿದೆ. ಬಣ ರಾಜಕೀಯದಿಂದ ಸದ್ದು ಮಾಡಿದ್ದ ರಾಜಸ್ಥಾನ ಇದೀಗ ಒಗ್ಗಟ್ಟಾಗಿ ಯಾತ್ರೆಯಲ್ಲಿ ಪಾಲ್ಗೊಂಡಿದೆ. ಆದರೆ ರಾಜಸ್ಥಾನ ಪ್ರವೇಶಕ್ಕೂ ಮುನ್ನ ಯಾತ್ರೆ ಮಧ್ಯಪ್ರದೇಶದಲ್ಲಿ ಸಾಗಿತ್ತು. ಮಲ್ವಾ ಜಿಲ್ಲೆಯಲ್ಲಿ ಯಾತ್ರೆ ಸಾಗುವ ವೇಳೆ ದಾರಿಯ ಎರಡೂ ಬದಿಗಳಲ್ಲಿ ಜನರು ಮೋದಿ ಮೋದಿ ಘೋಷಣೆ ಕೂಗಿದ್ದಾರೆ. ಇತ್ತ ರಾಹುಲ್ ಗಾಂಧಿ ಘೋಷಣೆ ಕೂಗಿದವರಿಗೆ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟೇ ಅಲ್ಲ ರಾಹುಲ್ ಗಾಂಧಿ ಸುತ್ತಮುತ್ತಲಿದ್ದ ನಾಯಕರು ಘೋಷಣೆ ಕೂಗಿದವರನ್ನೂ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದಾರೆ.
ಮಧ್ಯಪ್ರದೇಶದ ಆಗ್ರಮಾಲ್ವ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಒಳಗೊಂಡ ಭಾರತ್ ಜೋಡೋ ಯಾತ್ರೆ ಸಾಗುತ್ತಿತ್ತು. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ನಾಯಕರು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ದಾರಿಯ ಎರಡೂ ಬದಿಗಳಲ್ಲಿ ಜನ ಸೇರಿದ್ದರು. ಕಿಕ್ಕಿರಿದ ತುಂಬಿದ್ದ ಜನ ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಘೋಷಣೆ ಕೂಗಿ ಬಂದತ್ತ ಕೈಬೀಸಿದ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ನೀಡಿ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ್ ಜೋಡೋ ಯಾತ್ರೆ ನಂತರ ಮುಂದೇನು? ಕಾಂಗ್ರೆಸ್‌ನ ಮೆಘಾ ಪ್ಲಾನ್ ಬಹಿರಂಗ!
ರಾಹುಲ್ ಗಾಂಧಿ ಯಾತ್ರೆಯಲ್ಲಿ ಮೋದಿ ಮೋದಿ ಘೋಷಣೆ ಇದೇ ಹೊಸದಲ್ಲ. ನವೆಂಬರ್ 28 ರಂದು ಇಂದೋರ್‌ನಲ್ಲಿ ಯಾತ್ರೆ ಸಾಗುತ್ತಿದ್ದ ವೇಳೆ ಜನರು ಮೋದಿ ಮೋದಿ ಘೋಷಣೆ ಕೂಗಿದ್ದಾರೆ. ಇಷ್ಟೇ ಅಲ್ಲ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ್ದಾರೆ. ಇದೀಗ ಮಧ್ಯಪ್ರದೇಶದಲ್ಲೇ ಮತ್ತೊಂದು ಮೋದಿ ಮೋದಿ ಘಟನೆ ವರದಿಯಾಗಿದೆ.
ಸದ್ಯ ಭಾರತ್ ಜೋಡೋ ಯಾತ್ರೆ ರಾಜಸ್ಥಾನದಲ್ಲಿ ಸಂಚರಿಸುತ್ತಿದೆ. ತೀವ್ರ ಕುತೂಹಲ ಕೆರಳಿಸಿದ ರಾಜಸ್ಥಾನ ಕಾಂಗ್ರೆಸ್ ಯಾತ್ರೆಯಿಂದ ಒಗ್ಗಟ್ಟಾಗಿದೆ. ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ನಾಯಕ ಸಚಿನ್ ಪೈಲೈಟ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
‘ಭಾರತ್ ಜೋಡೋ’ ಬಳಿಕ ಮತ್ತೆ ಕರ್ನಾಟಕಕ್ಕೆ ರಾಹುಲ್ ಗಾಂಧಿ
ನಾವು ಒಗ್ಗಟ್ಟಾಗಿದ್ದೇವೆ, ಒಡಕಿಲ್ಲ: ಸಚಿನ್ ಪೈಲಟ್
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜತೆಗಿನ ಕಚ್ಚಾಟದಿಂದಾಗಿ ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆ ಯಶಸ್ಸಿನ ಬಗ್ಗೆ ಎದ್ದ ಶಂಕೆಗಳನ್ನು ಕಾಂಗ್ರೆಸ್ ನಾಯಕ ಸಚಿವ ಪೈಲಟ್ ದೂರಮಾಡಿದ್ದಾರೆ. ‘ರಾಜ್ಯದಲ್ಲಿ ಕಾಂಗ್ರೆಸ್ ಘಟಕವು ಒಗ್ಗಟ್ಟಾಗಿದ್ದು, ಭಾರತ ಜೋಡೋ ಯಾತ್ರೆಯು ಇನ್ನುಳಿದ ರಾಜ್ಯಗಳಿಗಿಂತಲೂ ನಮ್ಮಲ್ಲಿ ಸಫಲವಾಗಲಿದೆ’ ಎಂದು ಹೇಳಿದ್ದಾರೆ. ‘ಕಾಂಗ್ರೆಸ್‌ನಲ್ಲಿ ಒಡಕು ಮೂಡಿದೆ ಎಂದು ಆರೋಪಿಸುವ ಬಿಜೆಪಿಯಲ್ಲೇ ಒಡಕಿದೆ. ಕಳೆದ 4 ವರ್ಷಗಳಿಂದ ಬಿಜೆಪಿ ರಾಜಸ್ಥಾನದಲ್ಲಿ ಪ್ರಬಲ ವಿರೋಧ ಪಕ್ಷ ಎನಿಸಿಕೊಳ್ಳಲು ಹೆಣಗಾಡುತ್ತಿದೆ’ ಎಂದು ಪೈಲಟ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಕಿಡಿಕಾರಿದ್ದಾರೆ. ‘ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಪಕ್ಷ ಒಗ್ಗಟ್ಟಾಗಿದೆ. ಯಾತ್ರೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ನಾವೆಲ್ಲ ಒಟ್ಟಿಗೆ ಕೆಲಸ ಮಾಡಲಿದ್ದೇವೆ’ ಎಂದು ಪೈಲಟ್ ಹೇಳಿದ್ದಾರೆ.
ಪಾದಯಾತ್ರೆ ವೇಳೆ ಜನರ ನೋವು ಗೊತ್ತಾಗಿದೆ: ರಾಹುಲ್
‘ಭಾರತ ಜೋಡೋ ಯಾತ್ರೆಯಲ್ಲಿ ರೈತರು, ಯುವಕರು ಹಾಗೂ ಬುಡಕಟ್ಟು ಜನಾಂಗದವರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ. ಅವರು ಅನುಭವಿಸಿದ ನೋವುಗಳನ್ನು ನಾನು ಖುದ್ದು ಮನನ ಮಾಡಿಕೊಂಡಿದ್ದೇನೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.