
ಬೆಂಗಳೂರು(ಫೆ.20): ಮೇಲ್ನೋಟಕ್ಕೆ ಎಲ್ಲ ಸರಿಯಿದ್ದಂತೆ ಕಂಡರೂ ಹೊಗೆಯಾಡುತ್ತಲೇ ಇರುವ ಕಾಂಗ್ರೆಸ್(Congress) ನಾಯಕರ ಒಳಬೇಗುದಿ ಪರಿಹಾರಕ್ಕೆ ಕಾಂಗ್ರೆಸ್ ಹೈಕಮಾಂಡ್(High Command) ನೇರ ಪ್ರವೇಶ ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಐದು ಮಂದಿ ಕಾರ್ಯಾಧ್ಯಕ್ಷರು ಸೇರಿದಂತೆ 15 ಮಂದಿ ರಾಜ್ಯ ನಾಯಕರಿಗೆ ದೆಹಲಿಗೆ ಬುಲಾವ್ ನೀಡಿದೆ ಎಂದು ತಿಳಿದುಬಂದಿದೆ.
ಹೈಕಮಾಂಡ್ ವರಿಷ್ಠ ರಾಹುಲ್ ಗಾಂಧಿ(Rahul Gandhi) ಅವರು ಖುದ್ದಾಗಿ ಈ ನಾಯಕರೊಂದಿಗೆ ಸಭೆಯೊಂದನ್ನು ನಡೆಸಲು ಉದ್ದೇಶಿಸಿದ್ದು, ಈ ಸಭೆಯ ಮುಖ್ಯ ಅಜೆಂಡಾ ವಿಧಾನಸಭಾ ಚುನಾವಣೆ(Assembly Elections) ಸಿದ್ಧತೆಗೆ ರೂಪರೇಷೆ ಸಿದ್ಧಪಡಿಸುವುದು. ಆದರೆ, ಕೆಪಿಸಿಸಿ(KPCC) ಅಧ್ಯಕ್ಷರು ಹಾಗೂ ಪ್ರತಿಪಕ್ಷ ನಾಯಕರ ಬೆಂಬಲಿಗರ ನಡುವೆ ಹೊಗೆಯಾಡುತ್ತಲೇ ಇರುವ ಭಿನ್ನಾಭಿಪ್ರಾಯ, ಕೆಪಿಸಿಸಿ ಹಾಗೂ ಕಾರ್ಯಾಧ್ಯಕ್ಷರ ನಡುವೆ ಮೂಡದ ಸಮರ್ಪಕ ಹೊಂದಾಣಿಕೆಯಂತಹ ದೂರುಗಳು ದೆಹಲಿಯನ್ನು ಮುಟ್ಟಿವೆ. ಹೀಗಾಗಿ ರಾಜ್ಯದ 15 ಮಂದಿ ಪ್ರಮುಖ ನಾಯಕರಿಗೆ ಹೈಕಮಾಂಡ್ ಬುಲಾವ್ ನೀಡಿದೆ.
ಮೂಲಗಳ ಪ್ರಕಾರ, ಫೆ. 25ಕ್ಕೆ ದೆಹಲಿಗೆ(Delhi) ಆಗಮಿಸುವಂತೆ ರಾಜ್ಯ ನಾಯಕರಿಗೂ ಸೂಚನೆ ನೀಡಲಾಗಿದ್ದು, 25 ಅಥವಾ 26ಕ್ಕೆ ರಾಹುಲ್ ಗಾಂಧಿ ನೇರವಾಗಿ ಸಭೆ ನಡೆಸಬಹುದು. ಈ ಸಭೆಯಲ್ಲಿ ರಾಜ್ಯ ಉಸ್ತುವಾರಿ ಸುರ್ಜೇವಾಲ ಹಾಗೂ ಎಐಸಿಸಿ ಪ್ರಧಾನಕಾರ್ಯದರ್ಶಿ (ಆಡಳಿತ) ಕೆ.ಸಿ. ವೇಣುಗೋಪಾಲ್(KC Venugopal) ಅವರು ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.
ರಾಜ್ಯ ಕಾಂಗ್ರೆಸ್‌ನಲ್ಲಿ(Karnataka Congress) ಮೇಲುನೋಟಕ್ಕೆ ಎಲ್ಲ ಸರಿಯಿರುವಂತೆ ಕಂಡು ಬರುತ್ತಿದ್ದರೂ ನಾಯಕರ ನಡುವೆ ಆಂತರಿಕವಾಗಿ ಭಿನ್ನಾಭಿಪ್ರಾಯಗಳಿವೆ. ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಪ್ರತಿಪಕ್ಷ ನಾಯಕರ ಬೆಂಬಲಿಗರ ನಡುವಿರುವ ಭಿನ್ನಾಭಿಪ್ರಾಯ ಬಹಿರಂಗವಾಗಿ ಕಾಣುವಂತಿದೆ. ಇನ್ನು ಕಾರ್ಯಾಧ್ಯಕ್ಷರು ಹಾಗೂ ರಾಜ್ಯ ಘಟಕದ ನಡುವೆಯೂ ಸಮರ್ಪಕ ಹೊಂದಾಣಿಕೆ ಮೂಡಿಲ್ಲ ಎಂಬ ದೂರುಗಳಿವೆ. ಹಿರಿಯ ನಾಯಕರೊಬ್ಬರ ಪ್ರಕಾರ, ರಾಜ್ಯದ ಪ್ರಮುಖ ನಾಯಕರು ಪರಸ್ಪರರ ವಿರುದ್ಧ ಹೈಕಮಾಂಡ್‌ಗೆ ಸತತವಾಗಿ ದೂರುಗಳನ್ನು ರವಾನಿಸುತ್ತಿದ್ದಾರೆ. ಇದು ಹೈಕಮಾಂಡ್‌ಗೆ ಅಸಮಾಧಾನ ತಂದಿದೆ.
ಹೀಗಾಗಿ ಹೈಕಮಾಂಡ್ ತನ್ನದೇ ಮೂಲದಿಂದ ವರದಿಗಳನ್ನು ಪಡೆದಿದ್ದು, ಅದರಲ್ಲಿಯೂ ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ ಪ್ರತಿಷ್ಠೆಯ ಪೈಪೋಟಿ ಪಕ್ಷಕ್ಕೆ ಹಾನಿಯುಂಟು ಮಾಡುತ್ತಿದೆ ಎಂಬ ಅಂಶವಿದೆ. ಹೀಗಾಗಿ ಎಲ್ಲ ನಾಯಕರನ್ನು ಕೂರಿಸಿಕೊಂಡು ಒಗ್ಗಟ್ಟಿನ ಮಂತ್ರ ಪಠಿಸುವ ಉದ್ದೇಶದಿಂದ ಹೈಕಮಾಂಡ್ ರಾಜ್ಯ ನಾಯಕರಿಗೆ ಬುಲಾವ್ ನೀಡಿದೆ ಎಂದು ತಿಳಿದು ಬಂದಿದೆ.
ಈ ಸಭೆಗೆ ಅಧ್ಯಕ್ಷರು, ಪ್ರತಿಪಕ್ಷ ನಾಯಕರು, ಕಾರ್ಯಾಧ್ಯಕ್ಷರು ಮಾತ್ರವಲ್ಲದೆ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಕೆ. ರೆಹಮಾನ್ ಖಾನ್, ಬಿ.ಕೆ. ಹರಿಪ್ರಸಾದ್, ಡಾ. ಜಿ. ಪರಮೇಶ್ವರ್, ಎಚ್.ಕೆ. ಪಾಟೀಲ್, ಕೆ.ಎಚ್. ಮುನಿಯಪ್ಪ ಅವರಿಗೂ ಬುಲಾವ್ ಬಂದಿದೆ ಎಂದು ತಿಳಿದುಬಂದಿದೆ.
ಚುನಾವಣೆಗೆ ರೂಪರೇಷೆ:
ವಿಧಾನಸಭೆ ಚುನಾವಣೆಗೆ ಇನ್ನೂ ಬಹುತೇಕ ಒಂದು ವರ್ಷ ಮಾತ್ರ ಬಾಕಿ ಉಳಿದಿರುವ ಕಾರಣ ಅಗತ್ಯ ಸಿದ್ಧತೆ ಹಾಗೂ ರೂಪರೇಷೆ ಸಿದ್ಧಪಡಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಚುನಾವಣೆ ದೃಷ್ಟಿಯಿಂದ ನಾಯಕರಿಗೆ ನಿರ್ದಿಷ್ಟಜವಾಬ್ದಾರಿಗಳನ್ನು ಹೈಕಮಾಂಡ್ ವಹಿಸುವ ಸಾಧ್ಯತೆಯಿದೆ.
ಇದಲ್ಲದೆ, ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಪದಾಧಿಕಾರಿಗಳ ನೇಮಕಕ್ಕೂ ಈ ಸಭೆಯಲ್ಲಿ ನಿರ್ಧಾರವೊಂದು ಹೊರ ಬೀಳುವ ಸಾಧ್ಯತೆಯಿದೆ. ಏಕೆಂದರೆ, ಕೆಪಿಸಿಸಿ ಅಧ್ಯಕ್ಷರು 290 ಮಂದಿಯ ಪದಾಧಿಕಾರಿ ಪಟ್ಟಿಕಳುಹಿಸಿದ್ದರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು 90 ಮಂದಿಯ ಹೆಸರನ್ನು ಶಿಫಾರಸು ಮಾಡಿದ್ದರು. ಇವರಲ್ಲದೆ, ಖರ್ಗೆ, ಹರಿಪ್ರಸಾದ್, ಪರಮೇಶ್ವರ್ ಅವರಂತಹ ಹಿರಿಯರು ಪ್ರತ್ಯೇಕ ಪಟ್ಟಿ ಕಳುಹಿಸಿದ್ದರಿಂದ 500ಕ್ಕೂ ಹೆಚ್ಚು ಮಂದಿಯ ಜಂಬೋ ಪಟ್ಟಿ ಹೈಕಮಾಂಡ್ ಕೈ ಸೇರಿತ್ತು.
Karnataka Politics ಬಿಜೆಪಿ, ಸಂಘ ಪರಿವಾರದ ದೇಶಭಕ್ತಿ ನಕಲಿ, 1930ರ ದಾಖಲೆ ತೆಗೆದ ಪ್ರಿಯಾಂಕ್ ಖರ್ಗೆ
ಹೀಗಾಗಿಯೇ ಪದಾಧಿಕಾರಿ ಪಟ್ಟಿ ಪ್ರಕಟವನ್ನು ಹೈಕಮಾಂಡ್ ಮುಂದೂಡಿತ್ತು. ಈಗ ಎಲ್ಲ ನಾಯಕರನ್ನು ಸಹಮತ ಮೂಡಿಸಿ ಪಟ್ಟಿ ಅಂತಿಮಗೊಳಿಸಬಹುದು ಎನ್ನಲಾಗುತ್ತಿದೆ.
ಬುಲಾವ್ ಏಕೆ?
- ಮೇಲ್ನೋಟಕ್ಕೆ ಎಲ್ಲ ಸರಿ ಇದ್ದಂತೆ ಕಂಡರೂ ರಾಜ್ಯ ಕಾಂಗ್ರೆಸ್‌ನಲ್ಲಿ ಒಳಬೇಗುದಿ ಇದೆ
- ಕೆಪಿಸಿಸಿ ಅಧ್ಯಕ್ಷರು, ವಿಪಕ್ಷ ನಾಯಕರ ಬೆಂಬಲಿಗರ ಮಧ್ಯೆ ಬಹಿರಂಗ ಭಿನ್ನಾಭಿಪ್ರಾಯವಿದೆ
- ಕಾರ್ಯಾಧ್ಯಕ್ಷರು, ರಾಜ್ಯ ಘಟಕದ ನಡುವೆಯೂ ಸಮರ್ಪಕ ಹೊಂದಾಣಿಕೆ ಕೊರತೆ ದೂರಿದೆ
- ನಾಯಕರ ಪ್ರತಿಷ್ಠೆಯ ಪೈಪೋಟಿಯಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ ಎಂದು ಹೈಕಮಾಂಡ್ ಗ್ರಹಿಸಿದೆ
- ಎಲ್ಲ ನಾಯಕರನ್ನೂ ಕೂರಿಸಿ ಒಗ್ಗಟ್ಟಿನ ಮಂತ್ರ ಪಠಿಸಲು ಫೆ.25ರಂದು ದಿಲ್ಲಿಗೆ ಬರಲು ಬುಲಾವ್ ಕೊಟ್ಟಿದೆ
ಯಾರಾರಯರು ಹೋಗ್ತಾರೆ?
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಐದು ಮಂದಿ ಕಾರ್ಯಾಧ್ಯಕ್ಷರು, ಮಲ್ಲಿಕಾರ್ಜುನ ಖರ್ಗೆ, ಎಂ.ಬಿ.ಪಾಟೀಲ್, ಕೆ.ರೆಹಮಾನ್ ಖಾನ್, ಬಿ.ಕೆ.ಹರಿಪ್ರಸಾದ್, ಡಾ
ಜಿ.ಪರಮೇಶ್ವರ್, ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ ಸೇರಿ 15 ಮಂದಿ
ಚುನಾವಣೆ ಸಿದ್ಧತೆ ಚರ್ಚೆ?
- ಚುನಾವಣೆ ಸಿದ್ಧತೆ, ರೂಪರೇಷೆ ಬಗ್ಗೆಯೂ ಹೈಕಮಾಂಡ್ ಪ್ರಸ್ತಾಪಿಸುವ ಸಾಧ್ಯತೆ ಇದೆ
- ಚುನಾವಣೆ ದೃಷ್ಟಿಯಿಂದ ನಾಯಕರಿಗೆ ನಿರ್ದಿಷ್ಟಜವಾಬ್ದಾರಿ ವಹಿಸುವ ಸಂಭವ ಇದೆ
- ನೆನೆಗುದಿಗೆ ಬಿದ್ದಿರುವ ಪದಾಧಿಕಾರಿಗಳ ನೇಮಕ ಕುರಿತು ನಿರ್ಧಾರ ಪ್ರಕಟ ನಿರೀಕ್ಷೆ ಇದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.