
ಕಾಂಗ್ರೆಸ್ ಮುಖಂಡ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ತಮ್ಮ54ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಅವರ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ಮೂಲಕ ಶುಭಹಾರೈಸಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು, ಅವರಿಗೆ ಸುದೀರ್ಘ ಹಾಗೂ ಆರೋಗ್ಯಕರ ಜೀವನ ಸಿಗಲಿ ಎಂದು ಪ್ರಧಾನಿ ಮೋದಿ ಶುಭಹಾರೈಸಿದ್ದಾರೆ.
ಹಾಗೆಯೇ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡ ರಾಹುಲ್ ಗಾಂಧಿಯವರಿಗೆ ಶುಭಾಶಯ ಕೋರಿದ್ದಾರೆ. ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು, ಅವರಿಗೆ ಉತ್ತಮ ಆರೋಗ್ಯ ಹಾಗೂ ಧೀರ್ಘಾಯುಷ್ಯ ಸಿಗಲಿ ಎಂದು ರಾಜನಾಥ್ ಸಿಂಗ್ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಾಗೆಯೇ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಕೂಡ ರಾಹುಲ್ ಗಾಂಧಿಯವರಿಗೆ ಶುಭ ಹಾರೈಸಿದ್ದು, ನನ್ನ ಆದರ್ಶಪ್ರಾಯ ಸಹೋದರನಿಗೆ ಹುಟ್ಟುಹಬ್ಬದ ಬೆಚ್ಚಗಿನ ಶುಭಾಶಯಗಳು. ನಮ್ಮಈ ಸೋದರ ಬಾಂಧವ್ಯ ಒಂದೇ ರಕ್ತದಿಂದಲ್ಲ, ಬದಲಾಗಿ ಒಂದೇ ಚಿಂತನೆ ದೃಷ್ಟಿಕೋನ ಹಾಗೂ ಉದ್ದೇಶದಿಂದ. ನೀವು ದೃಢವಾಗಿ ನಿಂತು ಧೈರ್ಯದಿಂದ ಮುನ್ನಡೆಸುವುದನ್ನು ಮುಂದುವರಿಸಿ. ಉಜ್ವಲ ಭಾರತದತ್ತ ನಮ್ಮ ನಡಿಗೆಯಲ್ಲಿ, ಗೆಲುವು ನಮ್ಮದಾಗುತ್ತದೆ ಎಂದು ಬರೆದು ಸ್ಟಾಲಿನ್ ಎಕ್ಸ್‌ನಲ್ಲಿ ರಾಹುಲ್ ಗಾಂಧಿಗೆ ಶುಭ ಹಾರೈಸಿದ್ದಾರೆ.
ಹಾಗೆಯೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ರಾಹುಲ್ ಗಾಂಧಿಯವರಿಗೆ ಶುಭ ಹಾರೈಸಿದ್ದಾರೆ. ಸಂವಿಧಾನದ ಮೌಲ್ಯಗಳಿಗೆ ನಿಮ್ಮ ನಿಸ್ಸಂದಿಗ್ಧವಾದ ಸಮರ್ಪಣೆ ಮತ್ತು ಧ್ವನಿ ಇಲ್ಲದ ಲಕ್ಷಾಂತರ ಜನರಿಗೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯಕ್ಕಾಗಿ ನಿಮ್ಮ ಆಳವಾದ ಸಹಾನುಭೂತಿ ನಿಮ್ಮನ್ನು ವಿಭಿನ್ನವಾಗಿಸುತ್ತದೆ. ನಿಮ್ಮ ಕಾರ್ಯಗಳು ಕಾಂಗ್ರೆಸ್ ಪಕ್ಷದ ವೈವಿಧ್ಯತೆಯಲ್ಲಿ ಏಕತೆ, ಸಾಮರಸ್ಯ ಮತ್ತು ಸಹಾನುಭೂತಿಯ ಸಿದ್ಧಾಂತವನ್ನು ನಿರಂತರವಾಗಿ ಪ್ರತಿಬಿಂಬಿಸುತ್ತವೆ.
ಸತ್ಯವನ್ನು ಅಧಿಕಾರಕ್ಕೆ ತರುವ ಮತ್ತು ಕೊನೆಯ ವ್ಯಕ್ತಿಯನ್ನು ಬೆಂಬಲಿಸುವ ನಿಮ್ಮ ಧ್ಯೇಯವನ್ನು ನೀವು ಮುಂದುವರಿಸುತ್ತಿರುವಾಗ, ನಾನು ನಿಮಗೆ ದೀರ್ಘ, ಆರೋಗ್ಯಕರ ಮತ್ತು ಸಂತೋಷದ ಜೀವನವನ್ನು ಬಯಸುತ್ತೇನೆ ಎಂದು ಖರ್ಗೆ ಟ್ವಿಟ್ ಮಾಡಿದ್ದಾರೆ.
ಇನ್ನು ಉತ್ತರ ಪ್ರದೇಶದ ಮಾಜಿ ಸಿಎಂ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ರಾಹುಲ್ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ. ರಾಹುಲ್ ಗಾಂಧಿ ಅವರ ಸಮಗ್ರ, ಹೊಂದಾಣಿಕೆಯ ಮತ್ತು ಸಮಗ್ರ ಸಾಮಾಜಿಕ ರಾಜಕೀಯ ಚಟುವಟಿಕೆಗೆ ಶುಭಾಶಯಗಳು ಎಂದು ಅವರು ಶುಭಹಾರೈಸಿದ್ದಾರೆ. ಹಾಗೆಯೇ ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ ಕೂಡ ರಾಹುಲ್ ಗಾಂಧಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂಘಟನಾ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ರಾಹುಲ್ ಗಾಂಧಿಯವರನ್ನು ಶ್ಲಾಘಿಸಿ, ಫ್ಯಾಸಿಸ್ಟರನ್ನು ಭಯವಿಲ್ಲದೆ ಎದುರಿಸುವ ಅವರ ಧೈರ್ಯ, ದ್ವೇಷದ ಮೇಲೆ ಪ್ರೀತಿಯ ಗೆಲುವು ಎಂಬ ಅವರ ಸಂದೇಶ ಮತ್ತು ದೇಶದ ಬಡವರು, ಅಂಚಿನಲ್ಲಿರುವವರು ಮತ್ತು ಹಿಂದುಳಿದವರ ಬಗ್ಗೆ ಅವರ ದೂರದೃಷ್ಟಿಯ ದೃಷ್ಟಿಕೋನವು ಅವರನ್ನು ಈ ಕಷ್ಟದ ಅವಧಿಯಲ್ಲಿ ಭಾರತಕ್ಕೆ ಅಗತ್ಯವಿರುವ ನಾಯಕನನ್ನಾಗಿ ಮಾಡಿದೆ ಎಂದು ಹೇಳಿದ್ದಾರೆ.
ನಮ್ಮ ಪ್ರೀತಿಯ ನಾಯಕ, ರಾಹುಲ್ ಗಾಂಧಿ ಜಿ, ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ನಾನು ಇಡೀ ಕಾಂಗ್ರೆಸ್ ಕುಟುಂಬ ಮತ್ತು ದೇಶಾದ್ಯಂತ ಲಕ್ಷಾಂತರ ಜನರೊಂದಿಗೆ ಸೇರುತ್ತೇನೆ ಎಂದು ವೇಣುಗೋಪಾಲ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಐತಿಹಾಸಿಕ ಭಾರತ್ ಜೋಡೋ ಯಾತ್ರೆ ಮತ್ತು ಭಾರತ್ ಜೋಡೋ ನ್ಯಾಯ ಯಾತ್ರೆಯು ಆರ್ಥಿಕ ಮತ್ತು ಸಾಮಾಜಿಕ ಅನ್ಯಾಯಗಳ ಹೊರೆಯಿಂದ ನಲುಗಿದ್ದ ಲಕ್ಷಾಂತರ ಜನರ ಹೃದಯಗಳಲ್ಲಿ ಭರವಸೆಯನ್ನು ಮೂಡಿಸಿತು ಮತ್ತು ನಿಜವಾದ ಸಾಮಾಜಿಕ ಪರಿವರ್ತನೆಯನ್ನು ತರುವಲ್ಲಿ ನಿಮ್ಮ ಸಮರ್ಪಣೆಯು ನಿಮ್ಮ ವಿರೋಧಿಗಳು ನಡೆಯಲು ಒತ್ತಾಯಿಸಲ್ಪಡುವ ಮಾರ್ಗವಾಗಿದೆ ಎಂದು ಅವರು ಹೇಳಿದರು.
ನಾವೆಲ್ಲರೂ ನಿಮಗೆ ಉತ್ತಮ ಆರೋಗ್ಯವನ್ನು ಬಯಸುತ್ತೇವೆ ಮತ್ತು ನಿಮ್ಮ ಧ್ಯೇಯದ ಭಾಗವಾಗಲು ಎದುರು ನೋಡುತ್ತಿದ್ದೇವೆ ಎಂದು ವೇಣುಗೋಪಾಲ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.