
ಮಂಡ್ಯ (ನ.05): ಕಾಂಗ್ರೆಸ್ ಸರ್ಕಾರ ಬಂದ ಬಳಿಕ ರಾಜ್ಯದಲ್ಲಿ ರೈತರ ಸರಣಿ ಆತ್ಮ*ತ್ಯೆ ಮುಂದುವರೆದಿದೆ. ಕಳೆದ 2 ವರ್ಷದಲ್ಲಿ 2000ಕ್ಕೂ ಹೆಚ್ಚು ರೈತರ ಆತ್ಮ*ತ್ಯೆಯಾಗಿದ್ದು, ಕಾಂಗ್ರೆಸ್ ಸರ್ಕಾರದ ಮೇಲೆ ರೈತರಿಗೆ ವಿಶ್ವಾಸ ಕುಂದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ನಂತರ ಮಾತನಾಡಿದ ಅವರು, ರೈತ ಪರವಾದ ಯಾವುದೇ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ಮಾಡ್ತಿಲ್ಲ. ಮಂಡ್ಯದಲ್ಲಿ ಮಂಜೇಗೌಡ ಎಂಬ ರೈತ ಡಿಸಿ ಕಚೇರಿ ಮುಂದೆ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ರೈತನ ಸಾವಿಗೆ ನೇರ ಕಾರಣ ಕಾಂಗ್ರೆಸ್ ಸರ್ಕಾರ ಇನ್ನೆಷ್ಟು ಸಾವು ನೋಡಲು ಅಧಿಕಾರದಲ್ಲಿ ಕುಳಿತಿರುತ್ತೀರಾ ಎಂದು ಪ್ರಶ್ನಿಸಿದರು.
ರೈತ ಆತ್ಮ*ತ್ಯೆ ಬಹಳ ದುಃಖಕರ ಸಂಗತಿ, ನೋವಿನ ಸಂಗತಿ. 11 ಲಕ್ಷ ಸಾಲ ಮಾಡಿದ್ದರು, ಮನೆಯಲ್ಲಿದ್ದ ಎಲ್ಲಾ ಒಡವೆ 4.5 ಲಕ್ಷಕ್ಕೆ ಅಡವಿಟ್ಟಿದ್ರು. ಬಗರ್ ಹುಕುಂ ಸಾಗುವಳಿಯಲ್ಲಿ 15-16ವರ್ಷದಿಂದ ಉಳುಮೆ ಮಾಡ್ತಿದ್ದಾರೆ. ಅರಣ್ಯ ಇಲಾಖೆಯವರು ಈಗ ತಕರಾರು ಮಾಡಿದ್ದಾರೆ. ಅರ್ಜಿ ಕೊಟ್ಟರು ಯಾವುದೇ ಸ್ಪಂದನೆ ಇಲ್ಲ. ಮನನೊಂದು ಆತ್ಮ*ತ್ಯೆಗೆ ಶರಣಾಗಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಕಬ್ಬು ಬೆಳೆಗಾರರು ಪ್ರತಿಭಟನೆ ಮಾಡ್ತಿದ್ದರು ಸರ್ಕಾರ ಕ್ಯಾರೆ ಎನ್ನುತ್ತಿಲ್ಲ. ಚಾ.ನಗರದಲ್ಲಿ ಕೆರೆಗಳನ್ನು ತುಂಬಿಸಿ ಎರಡು ವರ್ಷಗಳು ಕಳೆದಿದೆ.
ಮಾನವ ಮೃಗಗಳ ಸಂಘರ್ಷ ನಡೆಯತ್ತಿದೆ. ಅರಣ್ಯ ಅಂಚಿನ ಗ್ರಾಮಗಳಿಗೆ ಸೌಲಭ್ಯಗಳನ್ನು ಕೊಡಬೇಕು. ಅಧಿಕಾರಿಗಳು, ಮಂತ್ರಿಗಳು ಜನರಿಗೆ ಸ್ಪಂದಿಸುತ್ತಿಲ್ಲ. ಸಿಎಂ ಸ್ಥಾನಕ್ಕಾಗಿ ಮ್ಯೂಸಿಕಲ್ ಛೇರ್ ನಡೆಯುತ್ತಿದೆ ಎಂದರು. ರಾಹುಲ್ ಗಾಂಧಿಯಿಂದ ಮೋದಿ ಸರ್ಕಾರದ ವಿರುದ್ಧ ಚುನಾವಣಾ ಅಕ್ರಮ ಆರೋಪ ವಿಚಾರವಾಗಿ, ರಾಹುಲ್ ಗಾಂಧಿಗೆ ಇಡೀ ದೇಶದಲ್ಲಿ ಗೆಲ್ಲಲು ಯೋಗ್ಯತೆ ಇಲ್ಲ.ಕುಣಿಯಲಾರದವನು ನೆಲಡೊಂಕು ಅಂತಿದ್ದಾರೆ. ಎಲೆಕ್ಟ್ರಾನಿಕ್ ಓಟಿಂಗ್ ಮಷಿನ್ ತಂದು ಈಗ ಇವರೇ ಸರಿಯಿಲ್ಲ ಎನ್ನುತ್ತಿದ್ದಾರೆ. ಕರ್ನಾಟಕದಲ್ಲಿ ಓಟ್ ಚೋರಿ ಎನ್ನುತ್ತಾರೆ, ಹಾಗಾದರೆ 136 ಸೀಟ್ ಹೇಗೆ ಬಂತು? ಕಾಂಗ್ರೆಸ್‌ನವರಿಗೆ ಭ್ರಮನಿರಸ ಆಗಿದೆ. ಬಿಹಾರ ಎಲೆಕ್ಷನ್‌ಗೆ ಕಾಂಗ್ರೆಸ್ ಸರ್ಕಾರ ಫಸ್ಟ್ ಕ್ಲಾಸ್ ಫಂಡಿಂಗ್ ಮಾಡಿದೆ ಎಂದರು.
ತುಪ್ಪದ ಬೆಲೆ ಏರಿಕೆ ವಿಚಾರವಾಗಿ ಸಾಲ ಮಾಡಿ ತುಪ್ಪ ತಿನ್ನು ಅಂತಾರೆ. ಆದರೆ ಕಾಂಗ್ರೆಸ್ ಸರ್ಕಾರ ಸಾಲಾ ಮಾಡಿಯೂ ತುಪ್ಪ ತಿನ್ನದ ಹಾಗೇ ಮಾಡಿದೆ. ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿಮೆ ಮಾಡಿ ಬೆಲೆ ಇಳಿಸುತ್ತಿದೆ. ರಾಜ್ಯ ಸರ್ಕಾರ ಲೂಟಿ ಹೊಡೆಯಲು ಬೆಲೆ ಏರಿಕೆ ಮಾಡುತ್ತಿದೆ. ಕಳೆದ ತಿಂಗಳಷ್ಟೇ ಹಾಲು, ತುಪ್ಪದ ಬೆಲೆ ಕಡಿಮೆ ಮಾಡಿ ಈಗ ಧಿಡೀರ್ ಏರಿಕೆ ಮಾಡಿದೆ. ಕಳೆದ ಎರಡೂವರೆ ವರ್ಷದಲ್ಲಿ ಕರ್ನಾಟಕವನ್ನ ಅದೋಗತಿಗೆ ತಳ್ಳಿದೆ ಎಂದರಲ್ಲದೇ ನವೆಂಬರ್ ಕ್ರಾಂತಿ ಪಕ್ಕಾ, ಸಿದ್ದರಾಮಯ್ಯ ಮನೆಗೆ ಹೋಗೋದು ಪಕ್ಕಾ. ಸಿಎಂ ಖುರ್ಚಿ ಫೈಟ್‌ನಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದ್ದು, ನವೆಂಬರ್ ಕ್ರಾಂತಿ, ಕಾಂಗ್ರೆಸ್ ವಾಂತಿ ಪಕ್ಕಾ ಎಂದು ಆರ್.ಅಶೋಕ್ ವ್ಯಂಗ್ಯವಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.