
ಬೆಳಗಾವಿ (ಸೆ.16): ನಾನು ಕಿಂಗ್‌ಪಿನ್ ಅಂದರೆ ಅವರಿಗೆ ಯಾಕೆ ಭಯವಾಗುತ್ತದೆ? ನಾನು ಯಾರ ಹೆಸರನ್ನೂ ಹೇಳಿಲ್ಲ. ಬೆಂಗಳೂರಿನ ಸಾಮ್ರಾಟರು ನಿನ್ನೆ ಕಿಂಗ್‌ಪಿನ್ ಇಂಥವರೇ ಇರಬೇಕು ಅಂತ ಹೇಳಿಕೆ ನೀಡಿದ್ದಾರೆ. ಅವರು ಹಿಂದೆ ಗೃಹ ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅವರು ಕಿಂಗ್‌ಗಳನ್ನು ಇಟ್ಟುಕೊಂಡೇ ರಾಜಕೀಯ ಮಾಡಿದ್ದಾರೆ. ಬಹುಶಃ ನನಗಿಂತ ಹೆಚ್ಚು ಮಾಹಿತಿ ಅವರ ಬಳಿ ಇದೆ...
ಸಮ್ಮಿಶ್ರ ಸರ್ಕಾರ ಉರುಳಿಸಲು ಕಿಂಗ್‌ಪಿನ್‌ಗಳ ಮೂಲಕ ಸಂಚು ನಡೆಸಲಾಗುತ್ತಿದೆ ಎಂಬ ತಮ್ಮ ಆರೋಪಕ್ಕೆ ಬಿಜೆಪಿ ನಾಯಕರು ಹಾಕಿದ ಸವಾಲಿಗೆ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ಪ್ರತಿಕ್ರಿಯೆ ನೀಡಿದ ಪರಿ ಇದು. ‘ಬೆಂಗಳೂರಿನ ಸಾಮ್ರಾಟ’ರು, ಗೃಹ ಸಚಿವರಾಗಿದ್ದರು,
ಉಪಮುಖ್ಯಮಂತ್ರಿಯಾಗಿದ್ದರು ಎನ್ನುವ ಮೂಲಕ ಬಿಜೆಪಿ ನಾಯಕ ಆರ್. ಅಶೋಕ್ ಹೆಸರೆತ್ತದೆ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಬಿಜೆಪಿ ನಾಯಕರು ಸರ್ಕಾರ ಅಸ್ಥಿರಗೊಳಿಸಲು ಹಣ ಸಂಗ್ರಹಿಸುತ್ತಿದ್ದಾರೆ.
ಅವರ ಹಿಂದೆ ಇರುವರರು ಯಾರು ಅಂತ ಅವರಿಗೆ ಗೊತ್ತಿದೆ. ನನ್ನ ಬಳಿ ಹತ್ತಾರು ಅಧಿಕಾರಿಗಳ ವರ್ಗ ಇದೆ. ಇಂಟಲಿಜನ್ಸ್ ಇದೆ. ಕ್ರಮ ತೆಗೆದುಕೊಳ್ಳಲಿಕ್ಕೆ ನಿನ್ನೆಯಿಂದಲೇ ಚಾರ್ಜ್ ಶುರುವಾಗಿದೆ ಎಂದರು. ಇದೇ ವೇಳೆ, ಬಿಜೆಪಿ ನಾಯಕರಿಗೆ ತಾಕತ್ತು ಇದ್ದರೆ ಸರ್ಕಾರವನ್ನು ಉರುಳಿ ತೋರಿಸಲಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿ ಮುಖಂಡ ಈಶ್ವರಪ್ಪ ಅವರಿಗೆ ಸವಾಲು ಹಾಕಿದರು.
ಸುವರ್ಣಸೌಧದಲ್ಲಿ ಜನತಾ ದರ್ಶನ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸರ್ವಕಾಲಕ್ಕೂ ಆಪರೇಷನ್ ಕಮಲ ಮದ್ದಲ್ಲ. ಅದಕ್ಕೆ ಜಯವೂ ದೊರೆಯುವುದಿಲ್ಲ. ಬಿಜೆಪಿಯವರು ಹಿಂಬಾಗಿಲಿನಿಂದ ರಾಜಕೀಯ ಮಾಡುತ್ತಾರೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಅದರಲ್ಲಿ ಯಾವುದೇ ಅನುಮಾನವೇ ಬೇಡ. ಅಷ್ಟು ಸುಲಭವಾಗಿ ಯಾರೂ ಅಭದ್ರಗೊಳಿಸಲು ಸಾಧ್ಯವಿಲ್ಲ ಎಂದರು. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಶಾಸಕರೆಲ್ಲರೂ ಇಂದು ನನ್ನ ಜೊತೆಗಿದ್ದಾರೆ. ಸಚಿವ ರಮೇಶ ಜಾರಕಿಹೊಳಿ ಅವರು ಎಲ್ಲಿಯೂ ಹೋಗಿಲ್ಲ. ನನ್ನ ಜೊತೆಗೆ ಇದ್ದಾರೆ. ನಿಮಗೆ ಯಾವ ಅನುಮಾನವೂ ಬೇಡ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.