
ಬೆಂಗಳೂರು (ನ.13): ರಾಜ್ಯ ಸರ್ಕಾರ ಕಾಲಹರಣ ಮಾಡದೆ ತಕ್ಷಣ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಾದ್ಯಂತ ಮೆಕ್ಕೆಜೋಳ ಬೆಳೆದ ರೈತರಿಗೆ ಬೆಂಬಲ ಬೆಲೆ ನೀಡಿ ಖರೀದಿಸಲು ರೈತರು ಬೇಡಿಕೆ ಇಟ್ಟಿದ್ದಾರೆ. ಆದರೆ ರೈತ ವಿರೋಧಿ ಸರ್ಕಾರ ಒಂದೇ ಒಂದು ಖರೀದಿ ಕೇಂದ್ರ ತೆರೆದಿಲ್ಲ. ಕಾಲಾಹರಣ ಮಾಡದೆ ಕೂಡಲೇ ಖರೀದಿ ಆರಂಭಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈರುಳ್ಳಿ ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುತ್ತಿರುವ ದರ ಕಳೆ ಕೀಳಿಸಿದ ಕೂಲಿ ಹಣ ಗಿಟ್ಟುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ನೆರವಿಗೆ ಧಾವಿಸಿ ಈರುಳ್ಳಿ ಖರೀದಿಸಲು ಕ್ರಮ ಕೈಗೊಳ್ಳಬೇಕಿದ್ದ ಸರ್ಕಾರ ಮೀನಾ ಮೇಷ ಎಣಿಸುತ್ತಿದೆ. ಮಾತಿಗೊಮ್ಮೆ ತಮ್ಮದು ರೈತ ಪರ ಸರ್ಕಾರ ಎಂದು ಸಿಎಂ ಸಿದ್ದರಾಮಯ್ಯ ಬೆನ್ನು ತಟ್ಟಿಕೊಳ್ಳುತ್ತಾರೆ, ಇದೇನಾ ರೈತರ ಪರವಾದ ಕಾಳಜಿ ಎಂದು ವ್ಯಗ್ಯವಾಡಿದರು.
ಬಿಹಾರ ರಿಸಲ್ಟ್ ಬಳಿಕ ಮತಗಳವು ಆರೋಪ: ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆದ್ದರಿಂದ ಫಲಿತಾಂಶ ಬಂದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತಗಳ್ಳತನ ಆರೋಪ ಮಾಡುವುದು ಖಂಡಿತ ಎಂದು ಇದೇ ವೇಳೆ ಅಶೋಕ್ ಹೇಳಿದರು. ಬಿಹಾರದ ಚುನಾವಣೆ ಪ್ರತಿಷ್ಠಿತ ಚುನಾವಣೆಯಾಗಿದೆ. ಬಿಹಾರದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಿದ್ದರೂ ಈ ಬಾರಿ ಉತ್ತಮವಾಗಿ ಮತದಾನ ನಡೆದಿದೆ. ಅಮಿತ್ ಶಾ ಗೃಹ ಸಚಿವರಾದ ಬಳಿಕ ನಕ್ಸಲ್ ಚಟುವಟಿಕೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. 12ಕ್ಕೂ ಹೆಚ್ಚು ಸಂಸ್ಥೆಗಳು ಸಮೀಕ್ಷೆ ಮಾಡಿದ್ದು, ಎನ್‌ಡಿಎ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್‌ನ ಘಟಬಂಧನಕ್ಕೆ ಬೆಂಬಲ ಇಲ್ಲ ಎಂದು ಹೇಳಲಾಗಿದೆ ಎಂದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಭಯೋತ್ಪಾದಕ ಮೊಬೈಲ್ ಬಳಸಿದ ಪ್ರಕರಣವನ್ನು ಎನ್‌ಐಎ ತನಿಖೆಗೆ ನೀಡಬೇಕು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ದೆಹಲಿಯಲ್ಲಿ ನಡೆದ ಘಟನೆ ಭಯೋತ್ಪಾದನಾ ಕೃತ್ಯ ಎಂಬ ಅನುಮಾನವಿದೆ. ಇದೇ ಸಮಯದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಬ್ಬ ಭಯೋತ್ಪಾದಕ ಮೊಬೈಲ್ ಬಳಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಹೆಚ್ಚು ತನಿಖೆ ಮಾಡಿದರೆ ಹೊಸ ವಿಚಾರಗಳು ಗೊತ್ತಾಗುತ್ತದೆ. ಇದು ದೇಶದ ಭದ್ರತೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಇದನ್ನು ಎನ್‌ಐಎ ತನಿಖೆಗೆ ವಹಿಸಬೇಕು ಎಂದು ಪ್ರತಿಪಾದಿಸಿದರು.
ಡಾಕ್ಟರ್‌ಗಳು ಸೇರಿ ಹೆಚ್ಚು ಶಿಕ್ಷಣ ಪಡೆದ ಮುಸ್ಲಿಮರೇ ಭಯೋತ್ಪಾದಕರಾಗಿ ಬದಲಾಗುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್ ಈ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕಿದೆ. ಅಧಿಕಾರಕ್ಕೆ ಬರಲು ಓಲೈಕೆ ಮಾಡುವುದರಿಂದ ಹೀಗೆಲ್ಲ ಆಗುತ್ತಿದೆ. ಪರಪ್ಪನ ಅಗ್ರಹಾರದಲ್ಲೂ ಕಾಂಗ್ರೆಸ್‌ನ ತಪ್ಪಿನಿಂದಲೇ ಉಗ್ರವಾದಿಗಳು ಮೊಬೈಲ್ ಬಳಸುವಂತಾಗಿದೆ. ಇಂಥ ವೈಫಲ್ಯ ಒಪ್ಪಿಕೊಂಡು ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಇದು ಮನಮೋಹನ್ ಸಿಂಗ್ ಸರ್ಕಾರವಲ್ಲ. ಪ್ರಧಾನಿ ಮೋದಿ ಸರ್ಕಾರದಲ್ಲಿ ಭಯೋತ್ಪಾದಕರಿಗೆ ಯಾವುದೇ ವಿನಾಯ್ತಿ ನೀಡುವುದಿಲ್ಲ ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಈ ಘಟನೆ ವಿರುದ್ಧವೂ ಕೇಂದ್ರ ಸರ್ಕಾರ ಕಠಿಣ ಕ್ರಮ ವಹಿಸಲಿದೆ. ಕಾಂಗ್ರೆಸ್ ಇದ್ದಾಗ ನಕ್ಸಲ್ ಚಟುವಟಿಕೆ ಅಧಿಕವಾಗಿತ್ತು. ಅದನ್ನು ಗೃಹ ಸಚಿವ ಅಮಿತ್ ಶಾ ಬಹುತೇಕ ನಿರ್ಮೂಲನೆ ಮಾಡಿದ್ದಾರೆ. ಅದೇ ರೀತಿ ಭಯೋತ್ಪಾದನೆ ಕೂಡ ನಿರ್ಮೂಲನೆಯಾಗಲಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.