ಸಭೆಯಲ್ಲಿ ಯಾವುದೇ ಕಾರಣಕ್ಕೂ ಅರುಣ್ ಕುಮಾರ್ ಪುತ್ತಿಲ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಬಾರದು, ಬೇಕಾದರೆ ಹೊರಗಿನಿಂದ ಮೋದಿ ಬ್ರಿಗೇಡ್ ಮಾದರಿಯಲ್ಲಿ ಬಿಜೆಪಿಗೆ ಬೆಂಬಲ ನೀಡಲಿ ಎಂಬ ಬಲವಾದ ಆಗ್ರಹ ಕೆಲವು ಮುಖಂಡರಿಂದ ವ್ಯಕ್ತಗೊಂಡಿದೆ. ಅಲ್ಲದೆ ಪುತ್ತಿಲ ಪರಿವಾರ ಸಂಘಪರಿವಾರ ಮುಖಂಡರ ವಿರುದ್ಧ ಕೇಸು ದಾಖಲಿಸಿದೆ. ಅದನ್ನು ಬೇಷರತ್ ವಾಪಸ್ ಪಡೆಯುವ ಬಗ್ಗೆ ಮಾತುಕತೆಯೇ ನಡೆದಿಲ್ಲ. ಇಷ್ಟೆಲ್ಲ ಗೊಂದಲ ಬಗೆಹರಿಸದೆ ಏಕಾಏಕಿ ಪುತ್ತಿಲ ಅವರನ್ನು ಬಿಜೆಪಿ ಸೇರ್ಪಡೆಗೊಳಿಸುವುದು ಸರಿಯಲ್ಲ ಎಂದು ಹಿರಿಯರೊಬ್ಬರು ಪಟ್ಟುಹಿಡಿದರು ಎಂದು ಹೇಳಲಾಗಿದೆ.
ಮಂಗಳೂರು(ಮಾ.16): ಬೆಂಗಳೂರಲ್ಲಿ ಬಿಜೆಪಿ ನಾಯಕರ ಭೇಟಿ ಬಳಿಕ ಇತ್ಯರ್ಥಗೊಂಡಿದ್ದ ಪುತ್ತೂರಿನ ಪುತ್ತಿಲ ಪರಿವಾರ ಮುಖಂಡ ಅರುಣ್ ಕುಮಾರ್ ಪುತ್ತಿಲ ಬೇಷರತ್ ಬಿಜೆಪಿ ಸೇರ್ಪಡೆಗೆ ಮತ್ತೆ ವಿಘ್ನ ಎದುರಾಗಿದೆ. ಪುತ್ತೂರಿನ ಬಿಜೆಪಿಗರೇ ಅಪಸ್ವರ ಎತ್ತಿದ ಹಿನ್ನೆಲೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಶುಕ್ರವಾರ ಮಂಗಳೂರಿನಲ್ಲಿ ಅಧಿಕೃತವಾಗಿ ಬಿಜೆಪಿ ಸದಸ್ಯತ್ವ ಪಡೆದುಕೊಳ್ಳುವ ಕಾರ್ಯಕ್ರಮ ಕೊನೆಕ್ಷಣದಲ್ಲಿ ನಡೆಯಲೇ ಇಲ್ಲ. ಈ ನಡುವೆ ಪುತ್ತಿಲ ಬಿಕ್ಕಟ್ಟು ಶಮನಕ್ಕೆ ಮಾ.16ರಂದು ಪುತ್ತೂರಿನಲ್ಲಿ ಸಂಘಪರಿವಾರ ತುರ್ತು ಸಭೆ ನಡೆಸುತ್ತಿದೆ
ಬೆಂಗಳೂರಿನಲ್ಲಿ ಗುರುವಾರ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಸಮ್ಮುಖ ಬೇಷರತ್ತಾಗಿ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಪುಷ್ಚಗುಚ್ಛದ ಸ್ವಾಗತ ಲಭಿಸಿತ್ತು. ಅರುಣ್ ಕುಮಾರ್ ಪುತ್ತಿಲ ಹಾಗೂ ಪುತ್ತಿಲ ಪರಿವಾರ ಬಿಜೆಪಿಯಲ್ಲಿ ವಿಲೀನಗೊಂಡಿದ್ದು, ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ಬಗ್ಗೆ ಇಬ್ಬರೂ ಮಾಧ್ಯಮಕ್ಕೆ ತಿಳಿಸಿದ್ದರು. ಹೀಗಾಗಿ ಮರುದಿನ ಮಂಗಳೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಹಾಗೂ ಪರಿವಾರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಳ್ಳುವ ಪ್ರಕ್ರಿಯೆ ನಡೆಯಬೇಕಿತ್ತು.
ಮತ್ತೆ ಪುತ್ತೂರಲ್ಲಿ ಅಪಸ್ವರ:
ಪುತ್ತೂರಿಗೆ ಬಂದ ಬಳಿಕ ಪರಿಸ್ಥಿತಿ ವ್ಯತಿರಿಕ್ತವಾಗಿದ್ದು, ಪುತ್ತಿಲ ಬಿಜೆಪಿ ಸೇರ್ಪಡೆಗೆ ಸಮ್ಮತಿಸಿದ ಬಗ್ಗೆ ಸ್ಥಳೀಯ ಮುಖಂಡರು ವಿರೋಧ ಎದುರಿಸುವಂತಾಗಿತ್ತು. ಶುಕ್ರವಾರ ಮಂಗಳೂರಿನಲ್ಲಿ ಪುತ್ತಿಲ ಬಿಜೆಪಿ ಸೇರ್ಪಡೆಗೆ ಪುತ್ತೂರು ಬಿಜೆಪಿ ಮುಖಂಡರಿಂದಲೇ ವಿರೋಧ ವ್ಯಕ್ತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಸುದ್ದಿಗೋಷ್ಠಿಗೆ ಹಾಜರಾಗದೆ ಸಂಜೆ ನೇರವಾಗಿ ಪುತ್ತೂರಿಗೆ ದೌಡಾಯಿಸಿದ್ದರು. ಪುತ್ತೂರಿನ ಬಿಜೆಪಿ ಕಚೇರಿಯಲ್ಲಿ ಮುಚ್ಚಿದ ಬಾಗಿಲ ಮಾತುಕತೆ ನಡೆಸಬೇಕಾಯಿತು. ಸಂಜೆ 6ರಿಂದ ರಾತ್ರಿ 8 ಗಂಟೆ ವರೆಗೆ ಪುತ್ತಿಲ ಸೇರ್ಪಡೆ ವಿಚಾರದಲ್ಲಿ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ.
ಸಭೆಯಲ್ಲಿ ಯಾವುದೇ ಕಾರಣಕ್ಕೂ ಅರುಣ್ ಕುಮಾರ್ ಪುತ್ತಿಲ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಬಾರದು, ಬೇಕಾದರೆ ಹೊರಗಿನಿಂದ ಮೋದಿ ಬ್ರಿಗೇಡ್ ಮಾದರಿಯಲ್ಲಿ ಬಿಜೆಪಿಗೆ ಬೆಂಬಲ ನೀಡಲಿ ಎಂಬ ಬಲವಾದ ಆಗ್ರಹ ಕೆಲವು ಮುಖಂಡರಿಂದ ವ್ಯಕ್ತಗೊಂಡಿದೆ. ಅಲ್ಲದೆ ಪುತ್ತಿಲ ಪರಿವಾರ ಸಂಘಪರಿವಾರ ಮುಖಂಡರ ವಿರುದ್ಧ ಕೇಸು ದಾಖಲಿಸಿದೆ. ಅದನ್ನು ಬೇಷರತ್ ವಾಪಸ್ ಪಡೆಯುವ ಬಗ್ಗೆ ಮಾತುಕತೆಯೇ ನಡೆದಿಲ್ಲ. ಇಷ್ಟೆಲ್ಲ ಗೊಂದಲ ಬಗೆಹರಿಸದೆ ಏಕಾಏಕಿ ಪುತ್ತಿಲ ಅವರನ್ನು ಬಿಜೆಪಿ ಸೇರ್ಪಡೆಗೊಳಿಸುವುದು ಸರಿಯಲ್ಲ ಎಂದು ಹಿರಿಯರೊಬ್ಬರು ಪಟ್ಟುಹಿಡಿದರು ಎಂದು ಹೇಳಲಾಗಿದೆ. ಈ ಬಗ್ಗೆ ಜಿಲ್ಲಾಧ್ಯಕ್ಷರನ್ನು ಕೆಲವರು ತರಾಟೆಗೆ ತೆಗೆದುಕೊಂಡಿದ್ದು, ಬಳಿಕ ಪಕ್ಷದ ನಿಲುವು, ಪುತ್ತಿಲ ಬೇಷರತ್ ಸೇರ್ಪಡೆಗೆ ಒಪ್ಪಿರುವುದು, ಪಕ್ಷ ನಾಯಕರ ಸೂಚನೆ ಬಗ್ಗೆ ಮನದಟ್ಟು ಮಾಡಿದಾಗ ಜಿಲ್ಲಾಧ್ಯಕ್ಷರಲ್ಲಿ ಕ್ಷಮೆ ಯಾಚಿಸಿದ ವಿದ್ಯಮಾನವೂ ನಡೆಯಿತು ಎಂದು ಹೇಳಲಾಗಿದೆ.
ಇಂದು ಪುತ್ತೂರಲ್ಲಿ ಬೈಠಕ್: ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಆರ್‌ಎಸ್‌ಎಸ್ ಮುಖಂಡರ ನೇತೃತ್ವದಲ್ಲಿ ಮಾ.16ರಂದು ಪುತ್ತೂರಿನಲ್ಲಿ ಸಂಘಪರಿವಾರದ ತುರ್ತು ಬೈಠಕ್ ನಡೆಯಲಿದೆ. ಈ ಬೈಠಕ್‌ನಲ್ಲಿ ಜಿಲ್ಲಾಧ್ಯಕ್ಷರ ಸಹಿತ ಮಂಡಲ, ನಗರ ಹಾಗೂ ಇತರೆ ಪದಾಧಿಕಾರಿಗಳು ಕೂಡ ಭಾಗವಹಿಸಲಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಪುತ್ತಿಲ ಪರಿವಾರ ಪ್ರತ್ಯೇಕವಾಗಿಯೇ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಲಿ, ಲೋಕಸಭಾ ಚುನಾವಣೆ ಬಳಿಕ ಮುಂದೆ ಪಕ್ಷ ಸೇರ್ಪಡೆ ಬಗ್ಗೆ ಪರಿಶೀಲಿಸಿದರೆ ಒಳಿತು ಎಂಬ ನಿರ್ಧಾರಕ್ಕೆ ಬರುವ ಬಗ್ಗೆ ಸ್ಥಳೀಯ ಮುಖಂಡರು ಅಭಿಪ್ರಾಯಿಸುವ ಸಾಧ್ಯತೆಯನ್ನು ಹೇಳಲಾಗಿದೆ.
ಮಾತುಗಾರರಿಗೆ ಮಣೆ ಹಾಕದ ಬಿಜೆಪಿ : ನಾಲಿಗೆ ಹರಿಬಿಟ್ಟವರಿಗೆ ಟಿಕೆಟ್ ಕಟ್ ಮಾಡಿತಾ ಹೈಕಮಾಂಡ್!
ಪುತ್ತಿಲರನ್ನು ಸೇರ್ಪಡೆಗೊಳಿಸಿದ್ದು ನಾವಲ್ಲ: ಜಿಲ್ಲಾಧ್ಯಕ್ಷ
ಅರುಣ್ ಕುಮಾರ್ ಪುತ್ತಿಲ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿದ್ದು ನಾವಲ್ಲ. ಅದು ಮಾಧ್ಯಮದವರು ಕೊಟ್ಟ ಪ್ರಚಾರ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪುತ್ತೂರಿನಲ್ಲಿ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಪುತ್ತೂರು ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಬಾಗಿಲು ಮುಚ್ಚಿ ನಡೆದ ಪಕ್ಷದ ಪ್ರಮುಖರ ಸಭೆಯ ಬಳಿಕ ಹೊರಗಡೆ ಮಾಧ್ಯಮದವರೊಂದಿಗೆ ಮಾತನಾಡಿದ ಕುಂಪಲ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಹೇಗೆ ಕೆಲಸ ಮಾಡಬೇಕೆಂಬ ಕುರಿತು ಚರ್ಚಿಸಲು ಸಭೆ ಮಾಡಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ದ.ಕ.ಕ್ಷೇತ್ರದಲ್ಲಿ ಮೂರೂವರೆಯಿಂದ ನಾಲ್ಕು ಲಕ್ಷ ಮತಗಳನ್ನು ಪಡೆಯುವಲ್ಲಿ ಎಲ್ಲ ಪರಿವಾರ ಸಂಘಟನೆ ಒಟ್ಟಿಗೆ ಇದ್ದು ಕೆಲಸ ಮಾಡಲಿದ್ದೇವೆ ಎಂದರು.
ಅರುಣ್ ಕುಮಾರ್ ಪುತ್ತಿಲ ಅವರ ಸೇರ್ಪಡೆ ವಿಚಾರದ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ ಉತ್ತರಿಸಿದ ಸತೀಶ್ ಕುಂಪಲ, ಪುತ್ತಿಲರ ಸೇರ್ಪಡೆ ಬಗ್ಗೆ ನಾವು ಮಾಡಿದ್ದಲ್ಲ. ಅದು ಮಾಧ್ಯಮದ ನೀವು ಕೊಟ್ಟ ಪ್ರಚಾರ. ಪುತ್ತಿಲರ ಬಗ್ಗೆಯೂ ಇಲ್ಲಿ ತುಂಬಾ ಚರ್ಚೆ ಮಾಡಿದ್ದೇವೆ. ಒಟ್ಟು ಪರಿವಾರದ ಸಂಘಟನೆ ಮತ್ತು ಬಿಜೆಪಿಯ ಎಲ್ಲರ ಒಮ್ಮತದ ಅಭಿಪ್ರಾಯ ಆಧಾರದ ಮೇಲೆ ಎಲ್ಲ ಕೆಲಸ ಕಾರ್ಯ ಸುಸೂತ್ರವಾಗಿ ನಡೆಯುತ್ತದೆ ಎಂದಷ್ಟೆ ಹೇಳಿದರು.
ಮಾಧ್ಯಮದವರು ಮರು ಪ್ರಶ್ನೆ ಮಾಡುತ್ತಿದ್ದಂತೆ ಅಲ್ಲಿದ್ದ ಪಕ್ಷದ ಪ್ರಮುಖರು, ಕಾರ್ಯಕರ್ತರು ಘೋಷಣೆ ಕೂಗುವ ಮೂಲಕ ಅಧ್ಯಕ್ಷ ಸತೀಶ್ ಕುಂಪಲ ಅವರನ್ನು ಕಾರಿನಲ್ಲಿ ಕುಳ್ಳಿರಿಸಿ ಕಳುಹಿಸಿಕೊಟ್ಟರು.