
ಹುಬ್ಬಳ್ಳಿ (ಫೆ.25): ಅಯೋಧ್ಯೆಗೆ ತೆರಳುವ ರೈಲಿಗೆ ಬೆಂಕಿ ಹಚ್ಚುತ್ತೇವೆ ಎಂದಿರುವ ಕಿಡಿಗೇಡಿಗಳನ್ನು ಒದ್ದು ಒಳಗೆ ಹಾಕಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಸಪೇಟೆಯಲ್ಲಿ ಅಯೋಧ್ಯ ಯಾತ್ರಿಗಳಿಗೆ ಬೆದರಿಕೆ ಹಾಕಿದ್ದು ಖಂಡನೀಯ. ಕಾಂಗ್ರೆಸ್ ಪಕ್ಷ ಯಾವ್ಯಾವ ರಾಜ್ಯದಲ್ಲಿ ಅಧಿಕಾರದಲ್ಲಿದೆಯೋ ಅಲ್ಲೆಲ್ಲ ಹೀಗೆ ಆಗುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್, ಮಮತಾ ಬ್ಯಾನರ್ಜಿ ಅಂಥವರು ತುಷ್ಟೀಕರಣಕ್ಕಾಗಿ, ವೋಟ್ ಬ್ಯಾಂಕ್‌ಗಾಗಿ ಉತ್ತೇಜನ ಕೊಡುತ್ತಾರೆ. ಮೆಕ್ಕಾ, ಮದೀನಾಕ್ಕೂ ಹೋಗುತ್ತಾರೆ. ಯಾರಿಗೆ ಎಲ್ಲಿ ಬೇಕು ಅಲ್ಲಿಗೆ ಹೋಗುತ್ತಾರೆ. ಬೆದರಿಕೆ ಹಾಕಿದವರನ್ನು ಒದ್ದು ಒಳಗೆ ಹಾಕಬೇಕು. ಸರ್ಕಾರದ ಲೂಜ್‌ನೆಸ್‌ನಿಂದ ಹೀಗೆ ಆಗುತ್ತಿದೆ. ಕಾಂಗ್ರೆಸ್ ಸರ್ಕಾರ ಇದೆ ಏನು ಮಾಡಿದರೂ ನಡೆಯುತ್ತದೆ ಎನ್ನುವುದು ಅಪರಾಧಿಗಳ ಮನಸ್ಥಿತಿ ಎಂದು ಆರೋಪಿಸಿದರು. ವಿಧಾನ ಮಂಡಲದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ಮಂಡಿಸಿರುವುದು ಅತ್ಯಂತ ದುರ್ದೈವದ ಸಂಗತಿ.
ಕೇಂದ್ರ ಸರ್ಕಾರ ವಿರುದ್ಧದ ನಿರ್ಣಯವನ್ನು ಬಿಜೆಪಿಯೂ ಬೆಂಬಲಿಸಲಿ: ಡಿ.ಕೆ.ಶಿವಕುಮಾರ್
ಸಚಿವ ಎಚ್.ಕೆ. ಪಾಟೀಲರಂಥ ಹಿರಿಯರು ಮುಖ್ಯಮಂತ್ರಿಗಳ ಒತ್ತಡಕಕ್ಕೆ ಮಣಿದು ಹೀಗೆ ಮಾಡಿದ್ದು ಘೋರ ದುರಂತ ಎಂದರು. 15ನೆಯ ಹಣಕಾಸು ಆಯೋಗದ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರವೇ ಇತ್ತು. ಮೊದಲು 60000 ಕೋಟಿ ತೆರಿಗೆ ಹಂಚಿಕೆ ಹಣ ಬರುತ್ತಿತ್ತು. ಈಗ 2.85 ಲಕ್ಷ ಕೋಟಿ ದಾಟಿದೆ. ಇದನ್ನೇಕೆ ಗಣನೆಗೆ ತೆಗೆದುಕೊಳ್ಳುವುದಿಲ್ಲ? ತಮ್ಮ ವಿಫಲತೆಗಾಗಿ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುತ್ತಿದ್ದಾರೆ. ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರ ದಿವಾಳಿ: ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ದುಡ್ಡು ಇಲ್ಲದಕ್ಕೆ ದೇವಾಲಯಗಳ ಮೇಲೆ ಕಣ್ಣು ಹಾಕುತ್ತಿದ್ದಾರೆ. ತಾಕತ್ತಿದ್ದರೆ ಚರ್ಚ್, ಮಸೀದಿಯ ಹತ್ತು ಪರ್ಸೆಂಟ್ ಹಣ ತೆಗೆದುಹಾಕಲಿ. ಹಿಂದೂ ವಿರೋಧಿ ಎನ್ನುವುದನ್ನು ಹೆಜ್ಜೆ ಹೆಜ್ಜೆಗೂ ತೋರಿಸುತ್ತಿದ್ದಾರೆ. ವಕ್ಫ್ ಹೆಸರಲ್ಲಿ ಎಲ್ಲ ಆಸ್ತಿ ಹೊಡೆಯುತ್ತಿದ್ದಾರೆ. ತಾಕತ್ತಿದ್ದರೆ ಇದನ್ನು ತಡೆಯಲಿ ನೋಡೋಣ ಎಂದು ಸವಾಲು ಹಾಕಿದರು. ಬಿಜೆಪಿಯಿಂದ ಸರ್ಕಾರದ ಧೋರಣೆ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.
ಇಂಡಿಯಾ ಒಕ್ಕೂಟ ಛಿದ್ರವಾಗುತ್ತಿರುವಲ್ಲಿ ಬಿಜೆಪಿ ಷಡ್ಯಂತ್ರ ಏನಿಲ್ಲ. ರಾಹುಲ್ ಗಾಂಧಿ ಅಪ್ರಬುದ್ಧತೆಗೆ ಬೇಸತ್ತು ಅವರವರೇ ಬಿಟ್ಟು ಬರುತ್ತಿದ್ದಾರೆ ಅಷ್ಟೇ ಎಂದರು. ರಾಹುಲ್ ಗಾಂಧಿ ನಂಬಿ ಯಾರೂ ಆ ಒಕ್ಕೂಟದಲ್ಲಿ ಇರಲು, ಸೇರಲು ಹೋಗುತ್ತಿಲ್ಲ ಎಂದು ಹೇಳಿದರು. ಇಂಡಿಯಾ ಒಕ್ಕೂಟ ಒಂದು ಅವಕಾಶವಾದಿಗಳ ಕೂಟ ಎಂದು ಆರಂಭದಲ್ಲೇ ಹೇಳಿದ್ದೇವೆ. ಅದರಿಂದ ಈ ವರೆಗೂ ಏನೂ ಆಗಿಲ್ಲ. ಮುಂದೆಯೂ ಏನೂ ಆಗುವುದಿಲ್ಲ ಎಂದರು. ಮಮತಾ ಬ್ಯಾನರ್ಜಿ ಇಂಡಿಯಾ ಒಕ್ಕೂಟ ಬಿಟ್ಟು ಹೊರಬರಲು ನಾವೇಕೆ ಷಡ್ಯಂತ್ರ ಮಾಡೋಣ? ಮಮತಾ ನಮ್ಮ ಮಾತು ಕೇಳುತ್ತಾರಾ? ಮಮತಾ ಬ್ಯಾನರ್ಜಿಗೂ ಕಾಂಗ್ರೆಸ್ ಏನು ಜಗಳವಾಗಿದೆ ಗೊತ್ತಿಲ್ಲ ಎಂದರು. ಮಮತಾ ಬ್ಯಾನರ್ಜಿಯಿಂದ ನಿಜವಾಗಿಯೂ ತೊಂದರೆ ಅನುಭವಿಸುತ್ತಿರುವುದು ನಾವು. ಅವರ ಅನಾಚರದಿಂದ ಬಿಜೆಪಿ ಕಾರ್ಯಕರ್ತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.
ನಮ್ಮ ನಿಷ್ಠೆ ಎದೆ ಬಗೆದು ತೋರಿಸಲು ಆಗೋದಿಲ್ಲ: ಸಿ.ಟಿ.ರವಿ
ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿದ್ದಾರೆ. ಆದರೆ, ಯಾವುದೇ ಟಿಕೆಟ್ ಹಂಚಿಕೆ ಬಗ್ಗೆ ತೀರ್ಮಾನ ಆಗಿಲ್ಲ. ಬಿಜೆಪಿ ಮತ್ತು ಜೆಡಿಎಸ್ ರಾಜ್ಯ ಘಟಕಗಳೊಂದಿಗೆ ಇಷ್ಟರಲ್ಲೇ ಹೈಕಮಾಂಡ್ ಮಾತುಕತೆ ನಡೆಸಲಿದೆ. ಬಳಿಕವೇ ಟಿಕೆಟ್ ಹಂಚಿಕೆಯಾಗಲಿದೆ. ಸೀಟು ಹಂಚಿಕೆ ಸರಿಯಾಗಿಯೇ ಆಗುತ್ತದೆ. ತಮಗೆ ಆ ವಿಶ್ವಾಸವಿದೆ. ಸುಮಲತಾ ಬಿಜೆಪಿಯಲ್ಲೇ ಇರುತ್ತಾರೆ.
-ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.