ಪಿಯು ವಿದ್ಯಾರ್ಥಿಗಳಿಗೂ ಮುಂದಿನ ವರ್ಷದಿಂದ ಬಿಸಿಯೂಟ: ಸಚಿವ ಮಧು ಬಂಗಾರಪ್ಪ

Published : Nov 15, 2025, 05:59 AM IST
Madhu Bangarappa

ಸಾರಾಂಶ

ಮುಂದಿನ ಶೈಕ್ಷಣಿಕ ವರ್ಷದಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ರಾಜ್ಯದ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಬೆಂಗಳೂರು (ನ.15): ಮುಂದಿನ ಶೈಕ್ಷಣಿಕ ವರ್ಷದಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ರಾಜ್ಯದ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ‘ರಾಜ್ಯಮಟ್ಟದ ಮಕ್ಕಳ ದಿನಾಚರಣೆ ಮತ್ತು ಪೋಷಕರ-ಶಿಕ್ಷಕರ ಮಹಾಸಭೆ’ಯಲ್ಲಿ ನಡೆಸಿದ ಸಂವಾದದಲ್ಲಿ ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಪಿಯು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡುವ ಕುರಿತು ನಿರ್ಧರಿಸಲಾಗಿದೆ. ಈ ಕುರಿತು 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾಗುವುದು. ಅದರೊಂದಿಗೆ ಉಳಿದ ಸರ್ಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಿಗೆ ಬಿಸಿಯೂಟ ವಿಸ್ತರಣೆ ಬಗ್ಗೆಯೂ ಚಿಂತನೆಯಿದ್ದು, ಈ ಬಗ್ಗೆ ಸಿಎಂ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ಉಚಿತ ಸಾರಿಗೆ ವ್ಯವಸ್ಥೆ ಚಿಂತನೆ: ಬಿಸಿಯೂಟ ಹೊರತುಪಡಿಸಿ ಕೆಪಿಎಸ್‌ ಶಾಲೆಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಒದಗಿಸುವ ಬಗ್ಗೆ ಚಿಂತನೆಯಿದೆ. ಈಗ ವಿದ್ಯಾರ್ಥಿಗಳಿಗೆ ರಿಯಾಯ್ತಿ ದರದಲ್ಲಿ ಬಸ್‌ ಪಾಸ್‌ ನೀಡಲಾಗುತ್ತಿದೆ. ಅದನ್ನು ಉಚಿತ ಪ್ರಯಾಣಕ್ಕೆ ಪರಿವರ್ತಿಸಲು ಸರ್ಕಾರದ ಜತೆ ಚರ್ಚಿಸಲಾಗುವುದು ಎಂದು ಹೇಳಿದರು.

ಪಿಯು ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್‌ ತರಬೇತಿ ನೀಡುವ ರೀತಿಯಲ್ಲೇ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೂ ತರಬೇತಿ ನೀಡುವಂತೆ ವಿದ್ಯಾರ್ಥಿನಿಯೊಬ್ಬರ ಮನವಿಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಮುಂದಿನ ಶೈಕ್ಷಣಿಕ ವರ್ಷದಿಂದ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಕೃತಕ ಬುದ್ಧಿಮತ್ತೆ, ಸ್ಪರ್ಧಾತ್ಮಕ ಪರೀಕ್ಷೆ, ಕಾನೂನು ಮತ್ತು ಲೆಕ್ಕ ಪರಿಶೋಧನೆ ಪರೀಕ್ಷೆಗಳಿಗೆ ತರಬೇತಿ ನೀಡುವ ಬಗ್ಗೆ ಚರ್ಚಿಸಲಾಗಿದೆ. ಈ ಕುರಿತು ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

1ನೇ ತರಗತಿಯಿಂದ ಕಂಪ್ಯೂಟರ್‌ ಶಿಕ್ಷಣ

ಆರನೇ ತರಗತಿಯಿಂದಲೇ ಮಕ್ಕಳಿಗೆ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ಕೆಪಿಎಸ್ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಕಂಪ್ಯೂಟರ್‌ ಶಿಕ್ಷಣ ನೀಡಲಾಗುವುದು. ದ್ವಿಭಾಷಾ ಶಾಲೆಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಶಾಲೆಗಳಲ್ಲಿ ವಿಶೇಷ ಶಿಕ್ಷಕರ ನೇಮಕಕ್ಕೆ ಗಮನ ಕೊಡಲಾಗುತ್ತಿದ್ದು, ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತೇವೆ ಎಂದು ವಿವರಿಸಿದರು. ಸಂವಾದ ಕಾರ್ಯಕ್ರಮದಲ್ಲಿ ರಾಜ್ಯದ 58 ಸಾವಿರ ಶಾಲೆ ಮತ್ತು ಪಿಯು ಕಾಲೇಜಿನ ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಪಾಲ್ಗೊಂಡಿದ್ದರು. ಬೆಂಗಳೂರು ನಗರ ಸುತ್ತಲಿನ ಶಾಲೆಗಳ ಮಕ್ಕಳು ನೇರವಾಗಿ ಭಾಗಿಯಾಗಿದ್ದರು. ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌, ಆಯುಕ್ತ ವಿಕಾಸ್‌ ಕಿಶೋರ್‌ ಸುರಳ್ಕರ್‌, ಸಮಗ್ರ ಶಿಕ್ಷಣ ರಾಜ್ಯ ಯೋಜನಾ ನಿರ್ದೇಶಕಿ ವಿದ್ಯಾ ಕುಮಾರಿ, ಪಿಯು ನಿರ್ದೇಶಕ ಎಸ್‌. ಭರತ್‌ ಇತರರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ