* ಕರ್ನಾಟಕದಲ್ಲಿ ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ
* ಡಿಕೆ ಶಿವಕುಮಾರ್ ಜತೆಗಿನ ದಿವ್ಯಾ ಹಾಗರಗಿ ಫೋಟೋ ವೈರಲ್
* ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ಟಾಕ್ ವಾರ್
* ಪಿಎಸ್‌ಐ ಹುದ್ದೆ ಅಕ್ರಮ ಕೇಸ್‌ನ ಪ್ರಮುಖ ಆರೋಪಿಯಾಗಿರುವ ದಿವ್ಯಾ
ಬೆಂಗಳೂರು, (ಏ.26): ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದ ಕಿಂಗ್ ಪಿನ್ ಎನ್ನಲಾದ ದಿವ್ಯಾ ಹಾಗರಗಿ ನಾಪತ್ತೆಯಾಗಿದ್ದಾರೆ. ಆದ್ರೆ,ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಈಗ ಆಡಳಿತ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಮಧ್ಯೆ ಪರಸ್ಪರ ಕೆಸರೆರಚಾಟದ ಕೇಂದ್ರ ಬಿಂದುವಾಗಿದ್ದಾರೆ.
ಹೌದು...ದಿವ್ಯಾ ಹಾಗರಿಗಿ ಅವರು ಬಿಜೆಪಿಯ ಘಟಾನುಘಟಿ ನಾಯಕರುಗಳ ಜತೆ ಇರುವ ಫೋಟೋಗಳು ವೈರಲ್ ಆಗುತ್ತಿವೆ. ಬಿಎಸ್ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ ಜೊತೆಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿವೆ. ಆದ್ರೆ, ಬಿಜೆಪಿ ಮಾತ್ರ ದಿವ್ಯಾ ಹಾಗರಿಗಿ ನಮ್ಮ ಪಕ್ಷದ ಕಾರ್ಯಕರ್ತೆ ಅಲ್ಲ ಎನ್ನುತ್ತಿದೆ. ಇನ್ನು ಇದಕ್ಕೆ ಕಾಂಗ್ರೆಸ್ ಬಿಜೆಪಿ ನಾಯಕರ ಜೊತೆಗಿನ ಫೋಟೊಗಳನ್ನು ಬಿಟ್ಟು ಇವರ್ಯಾರು ಎಂದು ಪ್ರಶ್ನೆಗಳ ಸುರಿಮಳೆಗೈಯುತ್ತಿದೆ. ಇದೀಗ ದಿವ್ಯಾ ಹಾಗರಾಗಿ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆಗಿನ ಫೋಟೋ ಬಹಿರಂಗವಾಗಿದೆ.
ತಲೆಮರೆಸಿಕೊಂಡು 2 ವಾರವಾದ್ರೂ ದಿವ್ಯಾ ಬಂಧನ ಯಾಕಿಲ್ಲ? ಪ್ರಿಯಾಂಕ್ ಖರ್ಗೆ ಪ್ರಶ್ನೆ
ಡಿಕೆಶಿ ಜತೆ ದಿವ್ಯಾ ಫೋಟೋ ವೈರಲ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆಗೆ ನಿಂತಿರುವ ದಿವ್ಯಾ ಹಾಗರಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಾಂಗ್ರೆಸ್ ಹಾಗೂ ಹಾಗರಗಿ ನಡುವಿರುವ ನಂಟಿನ ಬಗ್ಗೆ ಬಿಸಿ ಚರ್ಚೆಗೆ ಗ್ರಾಸವಾಗಿದೆ.
ಪ್ರಕರಣ ಹೊರಬಂದರಲ್ಲಿ ಹೊಸತರಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಜತೆಗಿರುವ ಹಾಗರಗಿ ಫೋಟೋ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಇದೇ ಫೋಟೋ ಆಧಾರದಲ್ಲಿ ಗೃಹ ಸಚಿವರ ವಿರುದ್ಧವೂ ದಾವೆ ಹೂಡಲು ಕಾಂಗ್ರೆಸ್ ಒತ್ತಾಯಿಸಿತ್ತು. ಇದೀಗ ಡಿಕೆಶಿ ಜತೆಗೆ ಹಾಗರಗಿ ಇರುವ ಫೋಟೋ ಬಯಲಾಗಿದ್ದು, ಇದನ್ನೇ ಬಳಸಿಕೊಂಡು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಡಿಕೆಶಿ ಜತೆ ದಿವ್ಯಾಗೆ ಏನು ಕೆಲಸ? ಏನು ಸಂಬಂಧ? ಅಂತೆಲ್ಲಾ ಕಾಂಗ್ರೆಸ್‌ಗೆ ತಿರುಗೇಟು ನೀಡುತ್ತಿದ್ದಾರೆ.
ದಿವ್ಯಾ ಹಾಗರಗಿ ತಲಾಶ್‌ಗೆ ಆರು ಸಿಐಡಿ ತಂಡ ರಚನೆ
ಪಿ.ಎಸ್.ಐ ನೇಮಕಾತಿ ಅಕ್ರಮದಲ್ಲಿ ತಲೆ ಮರೆಸಿಕೊಂಡಿರುವ ದಿವ್ಯಾ ಹಾಗರಗಿ ಬಂಧನಕ್ಕೆ ಸಿಐಡಿ ಆರು ತಂಡ ರಚನೆ ಮಾಡಿದ್ದು, ದಿವ್ಯಾ ತಲಾಶ್‌ಗೆ ಸಿಐಡಿಯ ಆರು ತಂಡಗಳು ಹಗಲಿರುಳು ಶ್ರಮಿಸುತ್ತಿದೆ.
ದಿವ್ಯಾ ಹಾಗರಗಿ ಕಲಬುರಗಿಯ ಜ್ಞಾನ ಜ್ಯೋತಿ ಶಾಲೆಯ ಕಾರ್ಯದರ್ಶಿ ಮತ್ತು ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆಯಾಗಿದ್ದು, ಪಿ.ಎಸ್.ಐ ನೇಮಕಾತಿ ಅಕ್ರಮದಿಂದ 15 ದಿನಗಳಿಂದ ತಲೆ ಮರೆಸಿಕೊಂಡಿದ್ದಾರೆ. ದಿವ್ಯಾ ಶಾಲೆಯ ಹೆಚ್.ಎಂ ಹಾಗೂ ಮೂವರು ಶಿಕ್ಷಕರೂ ಸಹ ನಾಪತ್ತೆಯಾಗಿದ್ದು, 15 ದಿನ ಕಳೆದ್ರೂ ದಿವ್ಯಾ & ಟೀಂ ಪತ್ತೆ ಹಚ್ಚುವಲ್ಲಿ ಸಿಐಡಿ ವಿಫಲವಾಗಿದೆ. ತೀವ್ರ ತಲಾಶ ನಡೆಸುತ್ತಿದ್ರೂ ದಿವ್ಯಾ ಲೊಕೇಷನ್ ಸುಳಿವು ಸಿಗದಂತಾಗಿದ್ದು, ದಿವ್ಯಾ ನಾಪತ್ತೆ ಪ್ರಕರಣ ಸಿಐಡಿಗೆ ತಲೆ ನೋವಾಗಿದೆ.
ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ಕಲಬುರಗಿ ಯಲ್ಲೇ ಬೀಡು ಬಿಟ್ಟಿದ್ದು, ಒಂದು ತಂಡ ಆರೋಪಿಗಳ ಬಂಧನ, ತನಿಖೆ ಮಾಡಿದ್ರೆ, ಮತ್ತೊಂದು ತಂಡ, ಈಗಾಗಲೇ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿರೋ ಅಭ್ಯರ್ಥಿಗಳ ಓಎಂಆರ್ ಪರಿಶೀಲನೆ ನಡೆಸುತ್ತಿದ್ದಾರೆ. ಮತ್ತೊಂದು ತಂಡದಿಂದ ತಾಂತ್ರಿಕವಾಗಿ ಮಾಹಿತಿ ಸಂಗ್ರಹ ಮಾಡಲಾಗುತ್ತಿದ್ದು, ಮತ್ತೊಂದು ತಂಡದಿಂದ ಸಾಕ್ಷಿ ಸಂಗ್ರಹಿಸೋ ಕೆಲಸ ನಡೆಸುತ್ತಿದ್ದಾರೆ. ರಾಜ್ಯದ ಬೇರಡೆ ಕೂಡಾ ಅಕ್ರಮ ನಡೆದಿದೆಯಾ ಅನ್ನೋದರ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಆರೋಪಿಗಳು ಪ್ರಕರಣದಿಂದ ತಪ್ಪಿಸಿಕೊಂಡು ಹೋಗದಂತೆ ಸಿಐಡಿ ಅಧಿಕಾರಿಗಳು ಸಾಕ್ಷಿ ಸಂಗ್ರಹ ಮಾಡುತ್ತಿದ್ದಾರೆ.