ರಾಜ್ಯದ ರೈತರ ಹಿತ ಕಾಪಾಡಿ: ಕೇಂದ್ರ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಮನವಿ

Published : Oct 06, 2023, 05:43 AM IST
ರಾಜ್ಯದ ರೈತರ ಹಿತ ಕಾಪಾಡಿ: ಕೇಂದ್ರ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಮನವಿ

ಸಾರಾಂಶ

ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರದ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್‌ ಕುಮಾರ್‌ ಸಾಹು ನೇತೃತ್ವದ 10 ಅಧಿಕಾರಿಗಳ ತಂಡವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿಯೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿತು. 

ಬೆಂಗಳೂರು (ಅ.06): ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರದ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್‌ ಕುಮಾರ್‌ ಸಾಹು ನೇತೃತ್ವದ 10 ಅಧಿಕಾರಿಗಳ ತಂಡವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿಯೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿತು. ಗುರುವಾರ ವಿಧಾನಸೌಧದಲ್ಲಿ ಪ್ರತ್ಯೇಕವಾಗಿ ನಡೆದ ಸಭೆಯಲ್ಲಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ಕೇಂದ್ರ ತಂಡ ಮಾಹಿತಿ ಪಡೆದುಕೊಂಡಿತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು ಭೇಟಿಯಾದ ಕೇಂದ್ರದ ಬರ ಅಧ್ಯಯನ ತಂಡವನ್ನು ಉದ್ದೇಶಿಸಿ ರಾಜ್ಯದ ರೈತರ ಹಿತರಕ್ಷಣೆಗೆ ಪೂರಕವಾಗಿ ಕ್ರಮ ಕೈಗೊಳ್ಳುವಂತೆ ಹೇಳಿದರು.

ಕೇಂದ್ರದ ಮಾರ್ಗಸೂಚಿಯನ್ವಯ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಇನ್ನೂ 32 ತಾಲೂಕುಗಳು ನಿಗದಿತ ಮಾನದಂಡಗಳನ್ನು ಪೂರೈಸುತ್ತಿವೆ. ರಾಜ್ಯದಲ್ಲಿ ನೈಋತ್ಯ ಮುಂಗಾರು ವಿಳಂಬದಿಂದ ಹಾಗೂ ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯದಲ್ಲಿ ಶೇ.90ರಷ್ಟು ಬಿತ್ತನೆ ಆಗಿದ್ದು, ಅದರಲ್ಲಿ 42 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ರೈತರ ಜಮೀನಿನಲ್ಲಿ ಹಸಿರು ಕಾಣಿಸಿದರೂ ಬೆಳೆಯಿಲ್ಲದ ಪರಿಸ್ಥಿತಿ ಉಂಟಾಗಿದ್ದು, ರಾಜ್ಯದಲ್ಲಿ ಹಸಿರು ಬರ ತಲೆದೋರಿದೆ ಎಂದು ವಾಸ್ತವ ಪರಿಸ್ಥಿತಿಯನ್ನು ವಿವರಿಸಿದರು.

ವಿಶ್ವಪಾರಂಪರಿಕ ತಾಣ ಹಂಪಿ ಸುತ್ತ ಹೋಮ್‌ ಸ್ಟೇ ಇರಕೂಡದು: ಸಿಎಂ ಸಿದ್ದರಾಮಯ್ಯ ಸೂಚನೆ

ಪ್ರವಾಸದ ಸಂದರ್ಭದಲ್ಲಿ ರಾಜ್ಯದ ವಸ್ತುಸ್ಥಿತಿಯನ್ನು ಅರಿತು ಕೇಂದ್ರಕ್ಕೆ ಮನವರಿಕೆ ಮಾಡಬೇಕು. ಮುಂಗಾರು ವಿಳಂಬ ಹಾಗೂ ಆಗಸ್ಟ್ ತಿಂಗಳಲ್ಲಿ 122 ವರ್ಷಗಳಲ್ಲೇ ಅತಿ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಅಣೆಕಟ್ಟುಗಳು ಬರಿದಾಗಿವೆ. ಸೆಪ್ಟೆಂಬರ್ ತಿಂಗಳಲ್ಲಿ ಕೆಲವೆಡೆ ಚದುರಿದಂತೆ ಮಳೆಯಾಗಿದೆ. ಆದರೆ ಮುಂಗಾರು ಮುಗಿಯುತ್ತಿದ್ದು, ಇದು ಕುಡಿಯುವ ನೀರಿನ ಕೊರತೆ, ವಿದ್ಯುತ್ ಕೊರತೆಯ ಆತಂಕವನ್ನೂ ಸೃಷ್ಟಿಸಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸಣ್ಣ ಮತ್ತು ಮಧ್ಯಮ ರೈತರ ಸಂಖ್ಯೆ ಹೆಚ್ಚಿದ್ದು, ಇವರ ದತ್ತಾಂಶವನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಸಂಗ್ರಹಿಸಲಾಗಿದೆ. ಜೊತೆಗೆ ಬೆಳೆ ಸಮೀಕ್ಷೆಯನ್ನು ಸಹ ಆಧುನಿಕರಣ ಮಾಡಿರುವುದರಿಂದ ನಿಖರ ಮಾಹಿತಿ ದೊರೆಯುತ್ತದೆ. ರೈತರಿಗೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ಬೆಳೆ ನಷ್ಟ ಪರಿಹಾರ ಅತ್ಯಂತ ಕಡಿಮೆಯಿದ್ದು, ಹೆಚ್ಚಿಸುವ ಅಗತ್ಯವಿದೆ. ರಾಜ್ಯದಲ್ಲಿ ಹೆಚ್ಚುವರಿಯಾಗಿ ಬೆಳೆ ನಷ್ಟ ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.

11 ಜಿಲ್ಲೆಗಳಿಗೆ ತಂಡ ಭೇಟಿ: ಇದಕ್ಕೂ ಮೊದಲು ಕೇಂದ್ರ ತಂಡದ ಜತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿ ಚರ್ಚೆ ನಡೆಸಿತು. ಈ ವೇಳೆ ರಾಜ್ಯದಲ್ಲಿನ ಬರ ಪರಿಸ್ಥಿತಿಯ ವಾಸ್ತವಾಂಶದ ಕುರಿತು ವಿವರಿಸಲಾಯಿತು. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಕೇಂದ್ರದ ತಂಡವು ಮೂರು ಉಪತಂಡಗಳಾಗಿ ಶುಕ್ರವಾರದಿಂದ 11 ಜಿಲ್ಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಿದೆ. ಭಾನುವಾರದವರೆಗೆ ಕೇಂದ್ರದ ತಂಡವು ಪರಿಶೀಲನೆ ನಡೆಸಲಿದ್ದು, ಸೋಮವಾರ ಮತ್ತೊಮ್ಮೆ ತಂಡದ ಜತೆ ಸಭೆ ನಡೆಸಲಾಗುವುದು. 

ಈ ವೇಳೆ ಹಸಿರು ಬರದ ಬಗ್ಗೆ ಗಮನ ಹರಿಸುವಂತೆ ತಿಳಿಸಲಾಗಿದೆ. ಮೇಲ್ಮೈ ಭಾಗದಲ್ಲಿ ಗಿಡ ಕಾಣಿಸುತ್ತವೆ. ಆದರೆ ಕೆಳಭಾಗದಲ್ಲಿ ಒಣಗಿರುತ್ತವೆ. ಈ ಬಗ್ಗೆ ಅಳವಾದ ಅಧ್ಯಯನ ಮಾಡಿದರೆ ಮಾತ್ರ ಗೊತ್ತಾಗುತ್ತದೆ. ಹೀಗಾಗಿ ಸಮಗ್ರವಾಗಿ ಪರಿಶೀಲಿಸಿ ಅಧ್ಯಯನ ಮಾಡುವಂತೆ ಹೇಳಲಾಗಿದೆ ಎಂದು ಹೇಳಿದರು. ಬರ ಘೋಷಣೆ ಸಂಬಂಧ ಇರುವ ಮಾನದಂಡವನ್ನು ಬದಲಿಸುವಂತೆ ಒತ್ತಾಯ ಮಾಡಲಾಗಿದೆ. ಸಣ್ಣ - ಅತಿ ಸಣ್ಣ ರೈತರ ಸಂಖ್ಯೆ ಕೇಂದ್ರ ಸರ್ಕಾರದ ಅಂಕಿ-ಅಂಶಕ್ಕಿಂತ ಜಾಸ್ತಿ ಇದೆ. ಭೂಮಿ ವಿಭಜನೆ ಆಗುತ್ತಿರುವುದರಿಂದ ಈ ಪರಿಸ್ಥಿತಿ ಇದೆ. ಈಗಾಗಲೇ 195 ತಾಲೂಕುಗಳನ್ನು ಬರ ಎಂದು ಘೋಷಣೆ ಮಾಡಲಾಗಿದೆ. 

ಸಿದ್ದರಾಮಯ್ಯ ನನ್ನ ಗುರು, ಅವರಿಂದ ಕಲಿಯಬೇಕಾದದ್ದು ಬಹಳಷ್ಟಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ರಾಜ್ಯದಲ್ಲಿ ಇನ್ನು 41 ತಾಲೂಗಳಲ್ಲಿ ಬರ ಪರಿಸ್ಥಿತಿ ಇದೆ. ಇದರಲ್ಲಿ 15 ತಾಲೂಕುಗಳಲ್ಲಿ ಬರ ಘೋಷಣೆ ಮಾಡಲಾಗುವುದು. ಸೋಮವಾರ ಕೇಂದ್ರದ ತಂಡದ ಚರ್ಚಿಸಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದರು. ಮುಂಗಾರು ಅವಧಿಯಲ್ಲಿ ಶೇ.28ರಷ್ಟು ಮಳೆ ಕೊರತೆಯಾಗಿದೆ. ಹಿಂಗಾರು ವಾಡಿಕೆ ಅಥವಾ ವಾಡಿಕೆಗಿಂತ ಕಡಿಮೆ ಮಳೆಯ ಮುನ್ಸೂಚನೆ ಇದೆ. ಅಹಾರೋತ್ಪಾದನೆ ಕುಸಿತವಾಗುವ ಲೆಕ್ಕಾಚಾರ ಇದೆ. ಈಗಾಗಲೇ ಬರ ಪರಿಹಾರವಾಗಿ 4860 ಕೋಟಿ ರು. ನೀಡುವಂತೆ ಕೋರಲಾಗಿದೆ. ವಾಸ್ತವವಾಗಿ 20 - 25 ಸಾವಿರ ಕೋಟಿ ರು. ನಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ