ಮೋದಿ ಪುಢಾರಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿಗರ ಆಕ್ರೋಶ

Published : Nov 04, 2024, 08:28 AM IST
ಮೋದಿ ಪುಢಾರಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿಗರ ಆಕ್ರೋಶ

ಸಾರಾಂಶ

‘ನಿಮ್ಮ ಕುಟುಂಬವೇ ಭ್ರಷ್ಟಾಚಾರದಲ್ಲಿ ಮುಳುಗಿದೆ, ಅಂದ ಮೇಲೆ ಮೋದಿ ವಿರುದ್ಧ ಮಾತನಾಡುವ ನೈತಿಕತೆ ನಿಮಗೆಲ್ಲಿಂದ ಬರುತ್ತೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಬೆಂಗಳೂರು (ನ.04): ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ರಾಜಕೀಯ ಪುಢಾರಿ’ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ‘ಸಿದ್ದರಾಮಯ್ಯನವರೇ, ನಿಮ್ಮ ನಾಲಿಗೆಯನ್ನು ಹದ್ದುಬಸ್ತಿನಲ್ಲಿಡಿ’ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಎಚ್ಚರಿಕೆ ನೀಡಿದ್ದರೆ, ಈ ದೇಶದ ಪ್ರಧಾನಿಯನ್ನು ಹೇಗೆ ಸಂಬೋಧಿಸಬೇಕು ಎಂಬುದೇ ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಗೊತ್ತಿಲ್ಲದಿರುವುದು ದುರ್ದೈವದ ಸಂಗತಿ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ. ‘ನಿಮ್ಮ ಕುಟುಂಬವೇ ಭ್ರಷ್ಟಾಚಾರದಲ್ಲಿ ಮುಳುಗಿದೆ, ಅಂದ ಮೇಲೆ ಮೋದಿ ವಿರುದ್ಧ ಮಾತನಾಡುವ ನೈತಿಕತೆ ನಿಮಗೆಲ್ಲಿಂದ ಬರುತ್ತೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ ಗ್ಯಾರಂಟಿಗಳನ್ನು ಟೀಕಿಸಿದ್ದ ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜಕೀಯ ಪುಢಾರಿ ರೀತಿ ಮೋದಿಯದು ಸುಳ್ಳು ಆರೋಪ. ಎಲ್ಲವನ್ನೂ ಹಳದಿ ಕನ್ನಡಕದಿಂದ ನೋಡುವುದನ್ನು ಬಿಟ್ಟು ಮುತ್ಸದ್ದಿ ರಾಜಕಾರಣಿಯಾಗಿ ಅರ್ಥ ಮಾಡಿಕೊಳ್ಳಲು ಯತ್ನಿಸಿ ಎಂದಿದ್ದರು. ಇದಕ್ಕೆ ಹುಬ್ಬಳ್ಳಿಯಲ್ಲಿ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ‘ಸಿದ್ದರಾಮಯ್ಯನವರೇ, ನಿಮ್ಮ ನಾಲಿಗೆಯನ್ನು ಹದ್ದುಬಸ್ತಿನಲ್ಲಿಡಿ. ಇಂತಹ ಹೇಳಿಕೆ ಸಿದ್ದರಾಮಯ್ಯನವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಜನ ಇದಕ್ಕೆ ಉತ್ತರ ಕೊಡುತ್ತಾರೆ. ಗ್ಯಾರಂಟಿಯನ್ನು ಪ್ರಧಾನಿಯವರು ವಿಶ್ಲೇಷಣೆ ಮಾಡಿದ್ದಾರೆ, ಈ ಬಗ್ಗೆ ಸೌಜನ್ಯಯುತವಾಗಿ ಉತ್ತರ ಕೊಡಿ’ ಎಂದು ಸಲಹೆ ನೀಡಿದ್ದಾರೆ.

ಸಂಸದ ಬೊಮ್ಮಾಯಿ ಪ್ರತಿಕ್ರಿಯಿಸಿ, ದೇಶದ ಪ್ರಧಾನಿಯನ್ನು ಹೇಗೆ ಸಂಬೋಧಿಸಬೇಕು ಎಂಬುದೇ ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಗೊತ್ತಿಲ್ಲ ಎಂಬುದು ದುರ್ದೈವದ ಸಂಗತಿ. ನಾವು ಸಿಎಂಗೆ ಗೌರವ ಕೊಡುವ ರೀತಿಯಲ್ಲೇ ಅವರೂ ಪ್ರಧಾನಿಗೆ ಗೌರವ ಕೊಡಬೇಕು ಎಂದು ಸಲಹೆ ನೀಡಿದರು. ಚಿತ್ರದುರ್ಗದಲ್ಲಿ ಈ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮೋದಿ, ಯಡಿಯೂರಪ್ಪ ವಿರುದ್ಧ ಮಾತನಾಡುವ ಮೊದಲು ಸಿದ್ದರಾಮಯ್ಯಗೆ ಭಾಷೆಯ ಮೇಲೆ ಹಿಡಿತವಿರಲಿ. ಮೋದಿಯವರನ್ನು ರಾಜಕೀಯ ಪುಢಾರಿ ಎನ್ನುತ್ತೀರಿ, ನಿಮ್ಮ ಭಾಷೆ ಏನಾಗಿದೆ? ಮುಡಾ ಹಗರಣದಲ್ಲಿ ಸಿಎಂ ಕುಟುಂಬವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮೋದಿ ವಿರುದ್ಧ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದಿದ್ದಾರೆ.

ರೈತರಿಗೆ ಕೊಟ್ಟ ಎಲ್ಲ ನೋಟಿಸ್ ವಾಪಸ್: ಸಚಿವ ಜಮೀರ್ ಅಹಮ್ಮದ್

ಚಿಕ್ಕಮಗಳೂರಿನಲ್ಲಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ, ಆಕಾಶಕ್ಕೆ ಉಗಿದರೆ ಅದು ಆಕಾಶಕ್ಕೆ ಮುಟ್ಟಲ್ಲ, ಸೂರ್ಯನಿಗೆ ತಟ್ಟಲ್ಲ, ಉಗಿದವರ ಮುಖಕ್ಕೆ ವಾಪಸ್ ಬರುತ್ತೆ. ನೀವು ಮೋದಿಯನ್ನು ಟೀಕೆ ಮಾಡೋದು ಸೂರ್ಯನಿಗೆ ಉಗಿದಂತೆ. ಅದು, ನಿಮ್ಮ ಮುಖಕ್ಕೇ ಮೆತ್ತಿಕೊಳ್ಳೋದು. ನೀವೇ ಮುಖ ತೊಳೆದುಕೊಳ್ಳಬೇಕು ಎಂದು ವ್ಯಂಗ್ಯವಾಡಿದ್ದಾರೆ. ಗದಗದಲ್ಲಿ ಮಾತನಾಡಿದ ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ.ಪಾಟೀಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಿಮಿತ ಕಳೆದುಕೊಂಡಿದ್ದು, ಅದಕ್ಕಾಗಿಯೇ ದೇಶದ ಪ್ರಧಾನಿಗೆ ರಾಜಕೀಯ ಪುಢಾರಿ ಎನ್ನುವ ಶಬ್ದ ಬಳಸುತ್ತಿದ್ದಾರೆ. ಸಿದ್ದರಾಮಯ್ಯ ಈ ರೀತಿ ಮಾತನಾಡುವುದು ಹೊಸದಲ್ಲ, ಆದರೆ, ಈ ಬಾರಿ ಅವರು ತೀರಾ ಹತಾಶರಾದಂತೆ ಕಾಣುತ್ತದೆ ಎಂದು ತಿರುಗೇಟು ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2026ರಲ್ಲೇ ಮಾತನಾಡುತ್ತೇನೆ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಯ ಹಿಂದಿನ ರಹಸ್ಯವೇನು?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ