Karnataka Politics: ತಾಕತ್ತಿದ್ದರೆ ಭ್ರಷ್ಟಾಚಾರ ತನಿಖೆ ಮಾಡಿ: ಸಿಎಂಗೆ ಪ್ರಿಯಾಂಕ್‌ ಖರ್ಗೆ ಸವಾಲ್‌

By Kannadaprabha NewsFirst Published Sep 12, 2022, 2:00 AM IST
Highlights

ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ತಮ್ಮ ಹುದ್ದೆಯ ಘನತೆಯನ್ನೂ ಮರೆತು ಸುಳ್ಳು ಹೇಳಿದ್ದಾರೆ: ಖರ್ಗೆ

ಬೆಂಗಳೂರು(ಸೆ.12):  ಜನಸ್ಪಂದನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಾಲಿ ಕುರ್ಚಿಗಳ ಎದುರು ಸುಳ್ಳಿನ ಸರಮಾಲೆಯನ್ನೇ ಹೆಣೆದಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿದ್ದು ರಾಜಕೀಯಕ್ಕಾಗಿ ಸುಳ್ಳು ಹೇಳುವುದು ಘನತೆಯಲ್ಲ. ನಿಮಗೆ ತಾಕತ್ತಿದ್ದರೆ ಮೊದಲು ನಿಮ್ಮ ಮೇಲಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆಗೆ ವಹಿಸಿ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಅನುರಾಗ್‌ ತಿವಾರಿ ಅವರ ಸಾವಿಗೆ ಕಾಂಗ್ರೆಸ್‌ ಕಾರಣ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಇವರದ್ದೇ ಸರ್ಕಾರದಲ್ಲಿ ಸಿಬಿಐ ಈ ಸಾವು ಆಕ್ಸಿಜನ್‌ ಕೊರತೆಯಿಂದ ಸಂಭವಿಸಿರುವುದಾಗಿ ಸ್ಪಷ್ಟಪಡಿಸಿದೆ. ವಾಟ್ಸಾಪ್‌ ಯೂನಿವರ್ಸಿಟಿ ಬಿಟ್ಟು ಪತ್ರಿಕೆಗಳನ್ನು, ವರದಿಗಳನ್ನು ಓದಬೇಕು. ಇಲ್ಲದಿದ್ದರೆ ನಿಮ್ಮ ಸ್ಥಾನದ ಘನತೆ ಹಾಳಾಗುತ್ತದೆ ಎಂದು ಕಿಡಿಕಾರಿದ್ದಾರೆ.

Karnataka Politics: ಡಬಲ್‌ ಎಂಜಿನ್‌ ಅಲ್ಲ, ಡಬಲ್‌ ದೋಖಾ ಸರ್ಕಾರ: ಪ್ರಿಯಾಂಕ್‌ ಖರ್ಗೆ

ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ತಮ್ಮ ಹುದ್ದೆಯ ಘನತೆಯನ್ನೂ ಮರೆತು ಸುಳ್ಳು ಹೇಳಿದ್ದಾರೆ. ವಿದ್ಯಾನಿಧಿ ಯೋಜನೆ ಅಡಿಯಲ್ಲಿ 20 ಲಕ್ಷ ಫಲಾನುಭವಿಗಳಿದ್ದಾರೆ. ಕಳೆದ ತಿಂಗಳು ಘೋಷಣೆಯಾದ ಈ ಯೋಜನೆಗೆ ಸರ್ಕಾರದ ಮಾಹಿತಿ ಪ್ರಕಾರವೇ 10 ಲಕ್ಷದಷ್ಟೂಜನ ಅರ್ಜಿ ಹಾಕಿಲ್ಲ. 20 ಲಕ್ಷ ಫಲಾನುಭವಿಗಳು ಹೇಗೆ ಇರಲಿ ಸಾಧ್ಯ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರದ 40% ಕಮಿಷನ್‌ ವಿರುದ್ಧ ಹೋರಾಟ: ಕೃಷ್ಣ ಭೈರೇಗೌಡ, ಪ್ರಿಯಾಂಕ್‌ ಎಚ್ಚರಿಕೆ

ಇನ್ನು 159 ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿನಿಲಯ ನಿರ್ಮಾಣ ಮಾಡಿರುವುದಾಗಿ ಹೇಳಿದ್ದಾರೆ. ಅವರು ಹಾಸ್ಟೆಲ್‌ ನಿರ್ಮಾಣಕ್ಕೆ ಅನುದಾನ ಘೋಷಿಸಿರುವುದೇ 259 ಕೋಟಿ ರು. ಇದರಲ್ಲಿ 159 ಹಾಸ್ಟೆಲ್‌ ನಿರ್ಮಾಣ ಸಾಧ್ಯವೇ? ನಮ್ಮ ಅವಧಿಯಲ್ಲಿ ನಿರ್ಮಿಸಿರುವ ಹಾಸ್ಟೆಲ್‌ಗಳನ್ನು ಈಗ ಉದ್ಘಾಟಿಸುತ್ತಿದ್ದಾರೆ. ಅವರು 3 ವರ್ಷದಲ್ಲಿ ಎಷ್ಟುಹೊಸ ಹಾಸ್ಟೆಲ್‌ ನಿರ್ಮಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಅವಧಿಯಲ್ಲಿ ಆಗಿರುವ ಅಕ್ರಮಗಳನ್ನು ಬಯಲು ಮಾಡುತ್ತೇವೆ ಎಂದು ಬ್ಲಾಕ್‌ಮೇಲ್‌ ಮಾಡಲು ಯತ್ನಿಸಿದ್ದಾರೆ. ನಿಮಗೆ ತನಿಖೆ ನಡೆಸಲು ಅಡ್ಡಿಯಾಗಿರುವುದು ಯಾರು? ನಿಮ್ಮನ್ನು ತಡೆಯುತ್ತಿರುವವರು ಯಾರು ಎಂದು ಪ್ರಶ್ನಿಸಿದರು.
 

click me!